
ಬೆಂಗಳೂರು (ಅ.07): ಶಿಕ್ಷಣ ಕ್ಷೇತ್ರದಲ್ಲಿ ಉನ್ನತ ಹುದ್ದೆಗಳನ್ನು ಎದುರುನೋಡುತ್ತಿರುವ ಅನುಭವಿ ಅಭ್ಯರ್ಥಿಗಳಿಗೆ ಸುವರ್ಣಾವಕಾಶ ಒದಗಿಬಂದಿದೆ. ಕರ್ನಾಟಕ ಪರೀಕ್ಷಾ ಪ್ರಾಧಿಕಾರವು (KEA) ರಾಜ್ಯಾದ್ಯಂತ ಖಾಲಿ ಇರುವ ಪ್ರಾಂಶುಪಾಲರ (Principal) ಹುದ್ದೆಗಳ ಭರ್ತಿಗೆ ಅಧಿಕೃತ ಅಧಿಸೂಚನೆ ಹೊರಡಿಸಿದ್ದು, ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳಿಂದ ಆನ್‌ಲೈನ್ ಮೂಲಕ ಅರ್ಜಿ ಆಹ್ವಾನಿಸಿದೆ. ಒಟ್ಟು 247 ಹುದ್ದೆಗಳಿಗೆ ಈ ನೇಮಕಾತಿ ನಡೆಯಲಿದೆ.
ಒಟ್ಟು 247 ಹುದ್ದೆಗಳ ಪೈಕಿ ಉಳಿಕೆ ಮೂಲ ವೃಂದಕ್ಕೆ (RPC) 216 ಹಾಗೂ ಕಲ್ಯಾಣ ಕರ್ನಾಟಕ (KK) ಭಾಗಕ್ಕೆ 31 ಹುದ್ದೆಗಳನ್ನು ಮೀಸಲಿರಿಸಲಾಗಿದೆ. ಆಯ್ಕೆಯಾಗುವ ಅಭ್ಯರ್ಥಿಗಳಿಗೆ ಮಾಸಿಕ ₹90,200 ರಿಂದ ₹1,59,200 ರವರೆಗೆ ಅತ್ಯುತ್ತಮ ವೇತನ ಶ್ರೇಣಿ ಸಿಗಲಿದೆ.
ಅಭ್ಯರ್ಥಿಗಳು ಮಾನ್ಯತೆ ಪಡೆದ ಬೋರ್ಡ್ ಅಥವಾ ವಿಶ್ವವಿದ್ಯಾಲಯದಿಂದ ನಿಗದಿತ ವಿದ್ಯಾರ್ಹತೆಯ ಜೊತೆಗೆ, ಬೋಧನಾ ಕ್ಷೇತ್ರದಲ್ಲಿ ಕನಿಷ್ಠ 10 ವರ್ಷಗಳ ಸೇವಾನುಭವ ಹೊಂದಿರಬೇಕು. ಅರ್ಹ ಅಭ್ಯರ್ಥಿಗಳನ್ನು ಕಂಪ್ಯೂಟರ್ ಆಧಾರಿತ ಪರೀಕ್ಷೆ (CBT) ಅಥವಾ ಆಫ್‌ಲೈನ್ ಓಎಂಆರ್ (OMR) ಮಾದರಿಯ ಲಿಖಿತ ಪರೀಕ್ಷೆಯ ಮೂಲಕ ಶಾರ್ಟ್‌ಲಿಸ್ಟ್ ಮಾಡಿ ಆಯ್ಕೆ ಮಾಡಲಾಗುತ್ತದೆ.
ಸಾಮಾನ್ಯ ಹಾಗೂ ಒಬಿಸಿ (2A, 2B, 3A, 3B) ವರ್ಗದ ಅಭ್ಯರ್ಥಿಗಳಿಗೆ ₹1,500, ಎಸ್‌ಸಿ/ಎಸ್‌ಟಿ ಅಭ್ಯರ್ಥಿಗಳಿಗೆ ₹1,000 ಹಾಗೂ ವಿಕಲಚೇತನ (PWD) ಅಭ್ಯರ್ಥಿಗಳಿಗೆ ₹500 ಅರ್ಜಿ ಶುಲ್ಕ ನಿಗದಿಪಡಿಸಲಾಗಿದೆ. ಆನ್‌ಲೈನ್ ಪಾವತಿ ಮೂಲಕ ಶುಲ್ಕ ಭರಿಸಬೇಕು. ಆಸಕ್ತರು ಕೆಇಎ ಅಧಿಕೃತ ಪೋರ್ಟಲ್‌ಗೆ ಭೇಟಿ ನೀಡಿ, ಅಧಿಸೂಚನೆಯನ್ನು ಕೂಲಂಕಷವಾಗಿ ಪರಿಶೀಲಿಸಿದ ಬಳಿಕ ಅಗತ್ಯ ಶೈಕ್ಷಣಿಕ ದಾಖಲೆಗಳು ಹಾಗೂ ಇತ್ತೀಚಿನ ಭಾವಚಿತ್ರವನ್ನು ಅಪ್‌ಲೋಡ್ ಮಾಡಿ ಅರ್ಜಿ ಸಲ್ಲಿಸಬಹುದು.
ಆನ್‌ಲೈನ್ ಅರ್ಜಿ ಸಲ್ಲಿಕೆ ಪ್ರಕ್ರಿಯೆಯು ಸೆಪ್ಟೆಂಬರ್ 07 ರಿಂದ ಆರಂಭವಾಗಲಿದ್ದು, ಅರ್ಜಿ ಸಲ್ಲಿಸಲು ಅಕ್ಟೋಬರ್ 25 ಕೊನೆಯ ದಿನವಾಗಿರುತ್ತದೆ. ಅರ್ಹತೆ ಹೊಂದಿರುವ ಅಭ್ಯರ್ಥಿಗಳು ನಿಗದಿತ ದಿನಾಂಕದೊಳಗೆ ಅರ್ಜಿ ಸಲ್ಲಿಸಿ ಈ ಸದವಕಾಶವನ್ನು ಬಳಸಿಕೊಳ್ಳಬಹುದು.