ಮಹಾರಾಷ್ಟ್ರದಲ್ಲಿ ಜಾರಿಯಿರುವ ಅರ್ಹತಾ ಮಾನದಂಡವನ್ನೇ ಪರಿಗಣಿಸಿ ಕರ್ನಾಟಕದಲ್ಲಿ ಸರ್ಕಾರಿ ವೈದ್ಯಾಧಿಕಾರಿ ಹುದ್ದೆಗೆ ತಮ್ಮನ್ನು ಪರಿಗಣಿಸಬೇಕು ಎಂದು ಕೋರಿ ಚೀನಾದ ವಿಶ್ವವಿದ್ಯಾಲಯವೊಂದರಿಂದ ಎಂಬಿಬಿಎಸ್ ಪದವಿ ಪಡೆದ ಬೀದರ್ ಮಹಿಳೆಯ ಮನವಿಯನ್ನು ಹೈಕೋರ್ಟ್ ತಿರಸ್ಕರಿಸಿದೆ.
ಬೆಂಗಳೂರು (ಜ.27): ಮಹಾರಾಷ್ಟ್ರದಲ್ಲಿ ಜಾರಿಯಿರುವ ಅರ್ಹತಾ ಮಾನದಂಡವನ್ನೇ ಪರಿಗಣಿಸಿ ಕರ್ನಾಟಕದಲ್ಲಿ ಸರ್ಕಾರಿ ವೈದ್ಯಾಧಿಕಾರಿ ಹುದ್ದೆಗೆ ತಮ್ಮನ್ನು ಪರಿಗಣಿಸಬೇಕು ಎಂದು ಕೋರಿ ಚೀನಾದ ವಿಶ್ವವಿದ್ಯಾಲಯವೊಂದರಿಂದ ಎಂಬಿಬಿಎಸ್ ಪದವಿ ಪಡೆದ ಬೀದರ್ ಮಹಿಳೆಯ ಮನವಿಯನ್ನು ಹೈಕೋರ್ಟ್ ತಿರಸ್ಕರಿಸಿದೆ. ವೈದ್ಯಾಧಿಕಾರಿ ನೇಮಕಾತಿಗೆ ತಾವು ಸಲ್ಲಿಸಿದ್ದ ಅರ್ಜಿಯನ್ನು ತಿರಸ್ಕರಿಸಿದ್ದ ರಾಜ್ಯ ಸರ್ಕಾರದ ಕ್ರಮ ಪ್ರಶ್ನಿಸಿ ಬೀದರ್ ಜಿಲ್ಲೆಯ ಬಸವಕಲ್ಯಾಣ ನಿವಾಸಿ ಡಾ.ಸತ್ಯಕ್ಕ ಹೈಕೋರ್ಟ್ ಗೆ ತಕರಾರು ಅರ್ಜಿ ಸಲ್ಲಿಸಿದ್ದರು.
ಅದರ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎ.ಆರ್. ಹೆಗ್ಡೆ ಅವರ ನ್ಯಾಯಪೀಠ, ವೈದ್ಯಾಧಿಕಾರಿ ಹುದ್ದೆಗೆ ಭಾರತದ ವಿಶ್ವವಿದ್ಯಾಲಯದಿಂದ ಪದವಿ ಪಡೆದಿರಬೇಕು ಎಂಬುದಾಗಿ ಅರ್ಹತಾ ಮಾನದಂಡದಲ್ಲಿ ಸ್ಪಷ್ಟವಾಗಿ ಹೇಳಲಾಗಿದೆ. ಹಾಗಾಗಿ, ವಿದೇಶಿ ವಿವಿಯ ಪದವಿಯನ್ನು ನೆರೆಯ ಮಹಾರಾಷ್ಟ್ರ ರಾಜ್ಯವು ಪರಿಗಣಿಸಿರುವ ಮಾತ್ರಕ್ಕೆ ಚೀನಾ ದೇಶದ ವಿವಿಯಿಂದ ವೈದ್ಯಕೀಯ ಪದವಿ ಪಡೆದಿರುವ ಅರ್ಜಿದಾರೆಯನ್ನು ಕರ್ನಾಟಕದಲ್ಲಿನ ವೈದ್ಯಾಧಿಕಾರಿ ಹುದ್ದೆಗೆ ಗಣನೆಗೆ ತೆಗೆದುಕೊಳ್ಳದ ರಾಜ್ಯ ಸರ್ಕಾರದ ಕ್ರಮ ತಪ್ಪು ಎಂದು ಹೇಳಲಾಗದು ಎಂದು ಅಭಿಪ್ರಾಯಪಟ್ಟು ಅರ್ಜಿ ವಜಾಗೊಳಿಸಿದೆ.
ಪ್ರಕರಣವೇನು?: ವೈದ್ಯಾಧಿಕಾರಿ ಹುದ್ದೆಗೆ ಅರ್ಜಿ ಆಹ್ವಾನಿಸಿ ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೇವೆಗಳ ಇಲಾಖೆ 2020ರ ಸೆ.10ರಂದು ಅಧಿಸೂಚನೆ ಹೊರಡಿಸಿತ್ತು. ಭಾರತದ ಯಾವುದೇ ವಿವಿಯಲ್ಲಿ ಎಂಬಿಬಿಎಸ್ ಪದವಿ ಪಡೆದವರು ಹುದ್ದೆ ನೇಮಕಾತಿಗೆ ಅರ್ಜಿ ಸಲ್ಲಿಸಲು ಅರ್ಹರಾಗಿರುತ್ತಾರೆ ಎಂದು ಮಾನದಂಡ ನಿಗದಿಪಡಿಸಲಾಗಿತ್ತು. ಡಾ.ಸತ್ಯಕ್ಕ ಸಹ ಅರ್ಜಿ ಸಲ್ಲಿಸಿದ್ದರು. ಆದರೆ, ಅವರು ಚೀನಾ ವಿವಿಯಿಂದ ವೈದ್ಯಕೀಯ ಪದವಿ ಪಡೆದಿರುವುದರಿಂದ ಆಕೆಯ ಅರ್ಜಿ ತಿರಸ್ಕರಿಸಿ ಆರೋಗ್ಯ ಇಲಾಖೆಯು 2021ರ ಸೆ.1ರಂದು ಹಿಂಬರಹ ನೀಡಿತ್ತು. ಅದನ್ನು ರದ್ದುಪಡಿಸುವಂತೆ ಕೋರಿ ಹೈಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದ ಸತ್ಯಕ್ಕ, ವೈದ್ಯಾಧಿಕಾರಿ ಹುದ್ದೆಗೆ ತಮ್ಮನ್ನು ಪರಿಗಣಿಸುವಂತೆ ಸರ್ಕಾರಕ್ಕೆ ನಿರ್ದೇಶಿಸಬೇಕು ಎಂದು ಮನವಿ ಮಾಡಿದ್ದರು.
ಅರ್ಜಿದಾರರ ಪರ ವಕೀಲರು, ಡಾ.ಸತ್ಯಕ್ಕ ಅವರು ಬೀದರ್ ಜಿಲ್ಲೆಯ ಹರಕೂಡದಲ್ಲಿ ವೈದ್ಯರಾಗಿ ಕೆಲಸ ಮಾಡುತ್ತಿದ್ದಾರೆ. ವೈದ್ಯಾಧಿಕಾರಿ ಹುದ್ದೆಗೆ ಅರ್ಜಿದಾರರು ಅರ್ಹರಿದ್ದಾರೆ. ಮಹಾರಾಷ್ಟ್ರ ಸರ್ಕಾರವು ವೈದ್ಯಾಧಿಕಾರಿ ಹುದ್ದೆ ನೇಮಕಾತಿಗೆ ವಿದೇಶದ ವಿವಿಯಿಂದ ಪಡೆದ ವೈದ್ಯಕೀಯ ಪದವಿಯನ್ನು ಪರಿಗಣಿಸುತ್ತಿದೆ. ಹಾಗಾಗಿ, ಸತ್ಯಕ್ಕ ಅವರ ಅರ್ಜಿ ತಿರಸ್ಕರಿಸಿರುವ ರಾಜ್ಯ ಸರ್ಕಾರದ ಕ್ರಮ ಸರಿಯಿಲ್ಲ ಎಂದು ಪ್ರತಿಪಾದಿಸಿದ್ದರು.
ಅದನ್ನು ಆಕ್ಷೇಪಿಸಿದ್ದ ಸರ್ಕಾರದ ಪರ ವಕೀಲರು, ವೈದ್ಯಾಧಿಕಾರಿ ಹುದ್ದೆ ನೇಮಕಾತಿಗೆ ಭಾರತದ ವಿವಿಯಿಂದ ವೈದ್ಯಕೀಯ ಪದವಿ ಪಡೆದಿರಬೇಕು ಎಂಬುದಾಗಿ ರಾಜ್ಯ ಸರ್ಕಾರ ಮಾನದಂಡ ನಿಗದಿಪಡಿಸಿದೆ. ಸರ್ಕಾರಿ ವೈದ್ಯಾಧಿಕಾರಿ ಹುದ್ದೆಗೆ ಅಗತ್ಯ ಅರ್ಹತಾ ಮಾನದಂಡ ರೂಪಿಸಲು ಸರ್ಕಾರಕ್ಕೆ ಅಧಿಕಾರವಿದೆ. ಮಹಾರಾಷ್ಟ್ರ ಸರ್ಕಾರ ನಿಗದಿಪಡಿಸಿರುವ ಅರ್ಹತಾ ಮಾನದಂಡ ಪಾಲಿಸುವ ಬಾಧ್ಯತೆ ಕರ್ನಾಟಕ ಸರ್ಕಾರಕ್ಕೆ ಇಲ್ಲ ಎಂದು ಸ್ಪಷ್ಟಪಡಿಸಿದರು.
ಕೆಳಹಂತದ ಅಧಿಕಾರಿಗಳಿಗೆ ಅವಾಚ್ಯ ನಿಂದನೆ; ಯಾದಗಿರಿ ಆಡಳಿತ ವೈದ್ಯಾಧಿಕಾರಿ ವಿರುದ್ಧ ದೂರು
ಅಲ್ಲದೆ, ಅರ್ಜಿದಾರರು ಸ್ಕ್ರೀನಿಂಗ್ ಟೆಸ್ಟ್ (ದೇಶದಲ್ಲಿ ವೈದ್ಯಕೀಯ ವೃತ್ತಿ ನಡೆಸಲು ಉತ್ತೀರ್ಣ ಮಾಡಬೇಕಾದ ಅರ್ಹತಾ ಪರೀಕ್ಷೆ) ಉತ್ತೀರ್ಣ ಮಾಡಿರುವುದರಿಂದ ಭಾರತದಲ್ಲಿ ವೈದ್ಯರಾಗಿ ವೃತ್ತಿ ನಿರ್ವಹಿಸಲು ಅವಕಾಶ ಕಲ್ಪಿಸಬಹುದು. ಆದರೆ, ಚೀನಾ ವಿವಿಯಿಂದ ಪಡೆದಿರುವ ವೈದ್ಯಕೀಯ ಪದವಿ ಪರಿಗಣಿಸಿ ವೈದ್ಯಾಧಿಕಾರಿ ಹುದ್ದೆ ನೇಮಕಾತಿಗೆ ತಮ್ಮನ್ನು ಪರಿಗಣಿಸುವಂತೆ ಅರ್ಜಿದಾರರು ಕರ್ನಾಟಕ ಸರ್ಕಾರವನ್ನು ಒತ್ತಾಯಿಸುವಂತಿಲ್ಲ ಎಂದು ನ್ಯಾಯಪೀಠದ ಗಮನಕ್ಕೆ ತಂದರು.
ಕೋಲಾರದಲ್ಲಿ ವೈದ್ಯಕೀಯ ಕಾಲೇಜು ಸ್ಥಾಪನೆ : ಮುನಿರತ್ನ ಭರವಸೆ
ಸರ್ಕಾರಿ ವಕೀಲರ ವಾದ ಪುರಸ್ಕರಿಸಿದ ಹೈಕೋರ್ಟ್ , ಕರ್ನಾಟಕ ಸರ್ಕಾರ ತನ್ನ ಅಧಿಕಾರ ವ್ಯಾಪ್ತಿಯಲ್ಲಿ ವೈದ್ಯಾಧಿಕಾರಿ ಹುದ್ದೆಗೆ ಅರ್ಹತೆ ನಿಗದಿಪಡಿಸಿದೆ. ಆದ್ದರಿಂದ ಅರ್ಜಿದಾರರ ಮನವಿ ಪರಿಗಣಿಸಲಾಗದು ಎಂದು ತಿಳಿಸಿ ಅರ್ಜಿ ವಜಾಗೊಳಿಸಿದೆ.