
ಒಂದು ಸಣ್ಣ ಹಳ್ಳಿಯಿಂದ ಹೊರಬಂದ ಒಂದು ಕಥೆ, ಅದು ಕೇವಲ ಸ್ಫೂರ್ತಿ ನೀಡುವುದಲ್ಲದೆ, ಉತ್ಸಾಹ, ಶ್ರಮ ಮತ್ತು ಒಟ್ಟಿಗೆ ನಡೆಯುವ ಭಾವನೆ ಯಾವುದೇ ಗುರಿಯನ್ನು ಸಾಧಿಸಬಹುದು ಎಂದು ಸಾಬೀತುಪಡಿಸುತ್ತದೆ. ಅಪ್ಪ-ಮಗ ಇಬ್ಬರೂ ಒಟ್ಟಿಗೆ ಓದಿ, ಒಟ್ಟಿಗೆ ವ್ಯಾಯಾಮ ಮತ್ತು ಕಸರತ್ತು ಮಾಡಿಮ ಒಟ್ಟಿಗೆ ಪರೀಕ್ದೆ ಬರೆದಿದ್ದರು. ಇದೀಗ ಒಬ್ಬರೂ ಉತ್ತಮ ಫಲಿತಾಂಶ ಪಡೆದಿದ್ದು, ಇಬ್ಬರಿಗೂ ಒಟ್ಟಿಗೆ ಪೊಲೀಸ್ ಇಲಾಖೆ ನೇಮಕಾತಿ ಆಗಿರುವ ಜಾಯ್ನಿಂಗ್ ಆರ್ಡರ್ ಕಾಪಿ ಬಂದಿದೆ.
ಈ ಘಟನೆ ಉತ್ತರ ಪ್ರದೇಶ ರಾಜ್ಯದ ಹಾಪುರ ಜಿಲ್ಲೆಯ ಧೌಲಾನ ಪ್ರದೇಶದ ಉದಯಪುರ ನಂಗ್ಲಾ ಗ್ರಾಮದಲ್ಲಿ ನಡೆದಿದೆ. ತಂದೆ ಮತ್ತು ಮಗನ ಜೋಡಿ ಉತ್ತರ ಪ್ರದೇಶ ಪೊಲೀಸ್ ನೇಮಕಾತಿಯಲ್ಲಿ ಒಟ್ಟಿಗೆ ಆಯ್ಕೆಯಾಗಿ ಇತಿಹಾಸ ನಿರ್ಮಿಸಿದ್ದಾರೆ. 40 ವರ್ಷದ ಯಶಪಾಲ್ ನಾಗರ್ 2003 ರಲ್ಲಿ ಭಾರತೀಯ ಸೇನೆಯಲ್ಲಿ ಸೈನಿಕರಾಗಿ ನೇಮಕಗೊಂಡು 16 ವರ್ಷಗಳ ಕಾಲ ದೇಶ ಸೇವೆ ಮಾಡಿದರು. 2019 ರಲ್ಲಿ ನಿವೃತ್ತರಾದ ನಂತರ ಅವರು ತಮ್ಮ ಮಗ ಶೇಖರ್ ನಾಗರ್ ಜೊತೆ ಯುಪಿ ಪೊಲೀಸರ ತಯಾರಿ ಆರಂಭಿಸಿದರು. ದೇಶ ಸೇವೆಯ ಹಾದಿ ಎಂದಿಗೂ ಮುಗಿಯುವುದಿಲ್ಲ, ಕೇವಲ ಸಮವಸ್ತ್ರ ಬದಲಾಗುತ್ತದೆ ಎಂದು ಅವರ ನಂಬಿಕೆಯಾಗಿತ್ತು.
ಕೇವಲ 18 ವರ್ಷದವರಾಗಿದ್ದ ಶೇಖರ್ ನಾಗರ್, ತಂದೆಯಿಂದ ಸ್ಫೂರ್ತಿ ಪಡೆದು ಪೊಲೀಸ್ ನೇಮಕಾತಿಗೆ ತಯಾರಿ ನಡೆಸಿದರು. ಇಬ್ಬರೂ ಒಟ್ಟಿಗೆ ಓದುತ್ತಿದ್ದರು, ಬೆಳಗಿನ ಓಟ, ವ್ಯಾಯಾಮ ಮತ್ತು ಶಿಸ್ತಿನಲ್ಲೂ ಪರಸ್ಪರ ಬೆಂಬಲ ನೀಡುತ್ತಿದ್ದರು. ಈ ಜಂಟಿ ಪ್ರಯತ್ನವೇ ಅವರನ್ನು ಯಶಸ್ಸಿನ ಮೆಟ್ಟಿಲಿಗೆ ಒಟ್ಟಿಗೆ ಕರೆದೊಯ್ದಿತು. 2023ರ ಯುಪಿ ಪೊಲೀಸ್ ನೇಮಕಾತಿ ಪರೀಕ್ಷೆಯಲ್ಲಿ ಇಬ್ಬರೂ ಯಶಸ್ವಿಯಾದರು. ಇತ್ತೀಚೆಗೆ ಲಕ್ನೋದಲ್ಲಿ ನಡೆದ ಕಾರ್ಯಕ್ರಮದಲ್ಲಿ ಅವರಿಗೆ ನೇಮಕಾತಿ ಪತ್ರ ನೀಡಲಾಯಿತು. ತಂದೆ ಯಶಪಾಲ್ ನಾಗರ್ ಮತ್ತು ಮಗ ಶೇಖರ್ ನಾಗರ್ ಒಟ್ಟಿಗೆ ಸಮವಸ್ತ್ರದಲ್ಲಿ ಕಾಣಿಸಿಕೊಂಡಾಗ, ಅವರ ಕುಟುಂಬ ಮಾತ್ರವಲ್ಲದೆ ಇಡೀ ಹಳ್ಳಿಯಲ್ಲಿ ಹೆಮ್ಮೆ ಮತ್ತು ಸಂತೋಷದ ವಾತಾವರಣ ನಿರ್ಮಾಣವಾಯಿತು.
ಉದಯಪುರ ನಂಗ್ಲಾ ಗ್ರಾಮದಲ್ಲಿ ತಂದೆ ಮತ್ತು ಮಗ ಒಟ್ಟಿಗೆ ಪೊಲೀಸ್ ಇಲಾಖೆಯಲ್ಲಿ ನೇಮಕಗೊಂಡಿದ್ದು ಇದೇ ಮೊದಲು. ಗ್ರಾಮಸ್ಥರು ಸಹ ಈ ಸಾಧನೆಯನ್ನು ಶ್ಲಾಘಿಸಿದರು ಮತ್ತು ಇದನ್ನು ಹೊಸ ಪೀಳಿಗೆಗೆ ಸ್ಫೂರ್ತಿ ಎಂದು ಬಣ್ಣಿಸಿದರು. ಯಶಪಾಲ್ ನಾಗರ್ ಮಾತನಾಡಿ, 'ಮನಸ್ಸು ಗಟ್ಟಿಯಾಗಿದ್ದರೆ ವಯಸ್ಸು ಯಾವುದೇ ಅಡ್ಡಿಯಾಗುವುದಿಲ್ಲ. ನಾನು ಮಗನಿಗೆ ಪ್ರೇರಣೆ ನೀಡಿದೆ, ಆದರೆ ನಾನು ಹಿಂದೆ ಸರಿಯಲಿಲ್ಲ ಎಂದು ಹೇಳಿದರು. ಅಪ್ಪ-ಮಗನ ಈ ವಿಶಿಷ್ಟ ಯಶಸ್ಸು ಶ್ರಮ ಮತ್ತು ಸಮರ್ಪಣೆಗೆ ಪರ್ಯಾಯವಿಲ್ಲ ಎಂದು ಸಾಬೀತುಪಡಿಸಿದೆ. ಹಾಪುರದ ಈ ಕಥೆ ಕೇವಲ ನೇಮಕಾತಿಯದ್ದಲ್ಲ, ಜೀವನದ ಯಶಸ್ಸಿನ ಸೂತ್ರವೂ ಆಗಿದೆ.