2 ಸಾವಿರ ಹುದ್ದೆಗಳ ನೇಮಕಕ್ಕೆ ಅನುಮತಿ ಕೋರಿ ಆರ್ಥಿಕ ಇಲಾಖೆಗೆ ಪ್ರಸ್ತಾವನೆ ಕಳುಹಿಸಲಾಗಿದೆ. ಅದಕ್ಕೆ ಒಪ್ಪಿಗೆ ದೊರೆತರೆ ಮೊದಲ ಹಂತದಲ್ಲಿ 1 ಸಾವಿರ ಎಎಒ ನೇಮಕಕ್ಕೆ ಕ್ರಮ ಕೈಗೊಳ್ಳಲಾಗುವುದು. ಈ ನೇಮಕಾತಿಯಿಂದ ಗ್ರಾಮೀಣ ಮಟ್ಟದಲ್ಲಿ ಕೃಷಿ ಇಲಾಖೆ ಕಾರ್ಯ ಮಾಡಲು ಸಾಧ್ಯವಾಗಲಿದೆ ಎಂದು ತಿಳಿಸಿದ ಸಚಿವ ಚೆಲುವರಾಯಸ್ವಾಮಿ
ಬೆಂಗಳೂರು(ಅ.13): ಗ್ರಾಮೀಣ ಮಟ್ಟದಲ್ಲಿ ಕೃಷಿ ಇಲಾಖೆ ಕಾರ್ಯನಿರ್ವಹಣೆಗೆ ಇರುವ ಸಿಬ್ಬಂದಿ ಕೊರತೆ ನೀಗಿಸುವ ಸಲುವಾಗಿ ಖಾಲಿ ಇರುವ ಹುದ್ದೆಗಳ ಪೈಕಿ 2 ಸಾವಿರ ಸಹಾಯಕ ಕೃಷಿ ಅಧಿಕಾರಿ (ಎಎಒ)ಗಳ ನೇಮಕಕ್ಕೆ ಆರ್ಥಿಕ ಇಲಾಖೆಗೆ ಕೃಷಿ ಇಲಾಖೆ ಪ್ರಸ್ತಾವನೆ ಸಲ್ಲಿಸಿದೆ. ಈ ಪ್ರಸ್ತಾವನೆಗೆ ಒಪ್ಪಿದರೆ ಮೊದಲ ಹಂತದಲ್ಲಿ 1 ಸಾವಿರ ಎಎಒಗಳ ನೇಮಕ ಮಾಡಿಕೊಳ್ಳಲು ನಿರ್ಧರಿಸಲಾಗಿದೆ ಎಂದು ಕೃಷಿ ಸಚಿವ ಎನ್. ಚೆಲುವರಾಯಸ್ವಾಮಿ ತಿಳಿಸಿದರು.
ಗುರುವಾರ ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಅವರು, ಕೃಷಿ ಇಲಾಖೆಗೆ ಮಂಜೂರಾಗಿರುವ ಹುದ್ದೆಗಳ ಪೈಕಿ ಶೇ. 57ರಷ್ಟು ಹುದ್ದೆಗಳು ಖಾಲಿಯಿವೆ. ಅದರಲ್ಲೂ ಗ್ರಾಮ ಪಂಚಾಯತಿ, ಹೋಬಳಿ, ತಾಲೂಕು ಮಟ್ಟದಲ್ಲಿ ಕಾರ್ಯನಿರ್ವಹಿಸುವ ಅಧಿಕಾರಿಗಳೇ ಇಲ್ಲದಂತಾಗಿದೆ. ಹೀಗಾಗಿ 2 ಸಾವಿರ ಹುದ್ದೆಗಳ ನೇಮಕಕ್ಕೆ ಅನುಮತಿ ಕೋರಿ ಆರ್ಥಿಕ ಇಲಾಖೆಗೆ ಪ್ರಸ್ತಾವನೆ ಕಳುಹಿಸಲಾಗಿದೆ. ಅದಕ್ಕೆ ಒಪ್ಪಿಗೆ ದೊರೆತರೆ ಮೊದಲ ಹಂತದಲ್ಲಿ 1 ಸಾವಿರ ಎಎಒ ನೇಮಕಕ್ಕೆ ಕ್ರಮ ಕೈಗೊಳ್ಳಲಾಗುವುದು. ಈ ನೇಮಕಾತಿಯಿಂದ ಗ್ರಾಮೀಣ ಮಟ್ಟದಲ್ಲಿ ಕೃಷಿ ಇಲಾಖೆ ಕಾರ್ಯ ಮಾಡಲು ಸಾಧ್ಯವಾಗಲಿದೆ ಎಂದು ತಿಳಿಸಿದರು.
undefined
ಭಾರತ್ ಎಲೆಕ್ಟ್ರಾನಿಕ್ಸ್ ಲಿಮಿಟೆಡ್‌ನಲ್ಲಿ ಎಂಜಿನಿಯರ್ ಹುದ್ದೆಗೆ ನೇಮಕಾತಿ, ಇಲ್ಲಿದೆ ಸಂಪೂರ್ಣ ವಿವರ
ಕೃಷಿ ಇಲಾಖೆಯಲ್ಲಿ ಹಿರಿಯ ಸಿಬ್ಬಂದಿ, ಅಧಿಕಾರಿಗಳು ಹಲವು ವರ್ಷಗಳಿಂದ ಬಡ್ತಿ ದೊರೆಯದೆ ಕರ್ತವ್ಯ ನಿರ್ವಹಿಸುತ್ತಿದ್ದರು. ಅವರುಗಳು ಮುಂಬಡ್ತಿಗಾಗಿ ಮನವಿ ಸಲ್ಲಿಸಿದ್ದು, ಅದನ್ನು ಈಡೇರಿಸಲಾಗಿದೆ. ಒಟ್ಟು 265 ಎಎಒಗಳಿಗೆ ಕೃಷಿ ಅಧಿಕಾರಿಗಳಾಗಿ ಬಡ್ತಿ ನೀಡಲಾಗಿದೆ. ಅದರ ಜತೆಗೆ ಹೊಸದಾಗಿ 35 ನೌಕರರನ್ನು ನೇಮಕ ಮಾಡಿಕೊಳ್ಳಲೂ ಕ್ರಮ ಕೈಗೊಳ್ಳಲಾಗುತ್ತಿದೆ. ಹಾಗೆಯೇ ರಾಜ್ಯ ಬೀಜ ನಿಗಮಕ್ಕೆ ಕಿರಿಯ ಸಹಾಯಕ, ಸಹಾಯಕ ವ್ಯವಸ್ಥಾಪಕ, ಬೀಜ ಸಹಾಯಕ ಸೇರಿದಂತೆ 32 ಅಧಿಕಾರಿಗಳನ್ನು ನೇಮಕ ಮಾಡಿಕೊಳ್ಳಲಾಗುತ್ತಿದೆ. ಅದರಲ್ಲಿ ಗುರುವಾರ 24 ಮಂದಿಗೆ ನೇಮಕಾತಿ ಪತ್ರವನ್ನೂ ನೀಡಲಾಗಿದ್ದು, ಉಳಿದವರಿಗೆ ದಾಖಲೆ ಕೊರತೆ ಕಾರಣ ನೇಮಕಾತಿ ಪತ್ರ ನೀಡಿಲ್ಲ. ಶೀಘ್ರದಲ್ಲಿ ಅವರಿಗೂ ನೇಮಕಾತಿ ಪತ್ರ ವಿತರಿಸಲಾಗುವುದು ಎಂದರು.
ಕೃಷಿ ಇಲಾಖೆ ಕಾರ್ಯದರ್ಶಿ ಅನ್ಬುಕುಮಾರ್, ಆಯುಕ್ತ ವೈ.ಎಸ್. ಪಾಟೀಲ್, ನಿರ್ದೇಶಕ ಡಾ. ಜಿ.ಟಿ.ಪುತ್ರ ಇತರರಿದ್ದರು.
6 ತಿಂಗಳಲ್ಲಿ ಎಲ್ಲಾ ಬ್ಯಾಕ್‌ಲಾಗ್ ಹುದ್ದೆ ಭರ್ತಿ ಮಾಡಿ: ಸರ್ಕಾರಕ್ಕೆ ಹೈಕೋರ್ಟ್ ತರಾಟೆ
ಅಕ್ರಮ ತಡೆಗೆ ನಿರಂತರ ದಾಳಿ:
ನಕಲಿ ರಸಗೊಬ್ಬರ, ಬಿತ್ತನೆ ಬೀಜ ಹಾಗೂ ಕೀಟನಾಶಕಗಳ ಮಾರಾಟ ತಡೆಗೆ ಕೃಷಿ ಇಲಾಖೆ ಜಾಗೃತ ಕೋಶ ನಿರಂತರ ತಪಾಸಣೆಗಳನ್ನು ನಡೆಸುತ್ತಿದೆ. ಅದರ ಭಾಗವಾಗಿ ಪ್ರಸಕ್ತ ಸಾಲಿನಲ್ಲಿ 148 ಪ್ರಕರಣಗಳನ್ನು ದಾಖಲಿಸಿ 5 ಕೋಟಿ ರು. ಮೌಲ್ಯದ ವಸ್ತುಗಳನ್ನು ವಶಕ್ಕೆ ಪಡೆಯಲಾಗಿದೆ. ಅಲ್ಲದೆ, 15 ಪರವಾನಗಿ ರದ್ದು ಮಾಡಿ, 11 ಲಕ್ಷ ರು. ದಂಡ ವಸೂಲಿ ಮಾಡಲಾಗಿದೆ ಎಂದು ಚೆಲುವರಾಯಸ್ವಾಮಿ ವಿವರಿಸಿದರು.
100 ದಿನಗಳಲ್ಲಿ ಹಲವು ಕಾರ್ಯಕ್ರಮ:
ಕೃಷಿ ಸಚಿವನಾಗಿ ಅಧಿಕಾರ ಸ್ವೀಕರಿಸಿದ ನಂತರ ಇಲಾಖೆಯಲ್ಲಿ ಬದಲಾವಣೆ ತರಲು ಪ್ರಯತ್ನಿಸುತ್ತಿದ್ದೇನೆ. ರಾಜ್ಯದಲ್ಲಿ ಸಿರಿಧಾನ್ಯ ಕೃಷಿಗೆ ಉತ್ತೇಜನ ನೀಡಲು ಪ್ರತಿ ಹೆಕ್ಟೆರ್‌ಗೆ 10 ಸಾವಿರ ರು. ಸಹಾಯಧನ ನೀಡಲಾಗುತ್ತಿದೆ. ರೈತರ ಅನುಕೂಲಕ್ಕಾಗಿ ಏಕೀಕೃತ ರೈತ ಕರೆ ಕೇಂದ್ರ ಸ್ಥಾಪನೆ ಮಾಡಲಾಗಿದೆ. ಕಳೆದ ವರ್ಷ ತೊಗರಿ ಬೆಳೆ ನೆಟೆ ರೋಗಕ್ಕೆ ತುತ್ತಾಗಿದ್ದರಿಂದ ಉಂಟಾದ ನಷ್ಟ ಪರಿಹಾರ ನೀಡಲು 224 ಕೋಟಿ ರು. ಮಂಜೂರು ಮಾಡಲಾಗಿದ್ದು, ಈಗಾಗಲೆ 148 ಕೋಟಿ ರು.ಗಳನ್ನು ರೈತರ ಖಾತೆಗೆ ಜಮೆ ಮಾಡಲಾಗಿದೆ. ರಾಜ್ಯದಲ್ಲಿ ಬೆಳೆ ಸಮೀಕ್ಷೆ ಶೇ. 96ರಷ್ಟು ಪೂರ್ಣಗೊಳಿಸಲಾಗಿದ್ದು, ಮುಂದಿನ 3 ದಿನಗಳಲ್ಲಿ ಶೇ. 100ರಷ್ಟು ಮುಗಿಯಲಿದೆ ಎಂದು ಚೆಲುವರಾಯಸ್ವಾಮಿ ಹೇಳಿದರು.