Praveen Nettaru Wife Job: ಜನಾಕ್ರೋಶ ವ್ಯಕ್ತವಾದ ಬೆನ್ನಲ್ಲೆ ಪ್ರವೀಣ್ ನೆಟ್ಟಾರು ಪತ್ನಿ ಮರು ನೇಮಕಕ್ಕೆ ಆದೇಶ

By Gowthami KFirst Published May 27, 2023, 9:26 PM IST
Highlights

ಕಾಂಗ್ರೆಸ್ ಸರಕಾರ ಮಾನವೀಯತೆ ಆಧಾರದಲ್ಲಿ ಪ್ರವೀಣ್ ನೆಟ್ಟಾರು ಪತ್ನಿ ನೂತನ ಕುಮಾರಿ ಅವರ ಮರು ನೇಮಕ ಮಾಡಲಾಗುವುದು  ಎಂದು ಸ್ಪಷ್ಟಪಡಿಸಿದೆ.

ಬೆಂಗಳೂರು (ಮೇ.27): ಅನುಕಂಪದ ಆಧಾರದಲ್ಲಿ ಮುಖ್ಯಮಂತ್ರಿಗಳ ವಿಶೇಷ ಅಧಿಕಾರದಲ್ಲಿ ಸರ್ಕಾರಿ ಉದ್ಯೋಗಕ್ಕೆ ನೇಮಕಗೊಂಡಿದ್ದ ದ.ಕ. ಬಿಜೆಪಿ ಮುಖಂಡ ದಿ.ಪ್ರವೀಣ್‌ ನೆಟ್ಟಾರ್‌ ಅವರ ಪತ್ನಿ ನೂತನ ಕುಮಾರಿ ಅವರ ಕೆಲಸಕ್ಕೆ ಕುತ್ತುಬಂದಿತ್ತು. ಇದೀಗ ಕಾಂಗ್ರೆಸ್ ಸರಕಾರ ಮಾನವೀಯತೆ ಆಧಾರದಲ್ಲಿ ನೂತನ ಕುಮಾರಿ ಅವರ ಮರು ನೇಮಕ ಮಾಡಲಾಗುವುದು  ಎಂದು ಸ್ಪಷ್ಟಪಡಿಸಿದೆ. ಈ ಬಗ್ಗೆ ಮುಖ್ಯಮಂತ್ರಿಗಳ ಅಧಿಕೃತ ಖಾತೆಯಿಂದ ಟ್ವೀಟ್ ಮಾಡಲಾಗಿದ್ದು, ಹೊಸ ಸರ್ಕಾರ ಬಂದ ನಂತರ ಹಿಂದಿನ ಸರ್ಕಾರ ನೇಮಕ ಮಾಡಿಕೊಂಡಿದ್ದ ತಾತ್ಕಾಲಿಕ ನೌಕರರನ್ನು ಸರ್ಕಾರಿ ಸೇವೆಯಿಂದ ವಜಾ ಮಾಡುವುದು ಒಂದು ಸಹಜ ಪ್ರಕ್ರಿಯೆ. ಪ್ರವೀಣ್ ನೆಟ್ಟಾರು ಅವರ ಪತ್ನಿ ಮಾತ್ರವಲ್ಲ ಸುಮಾರು 150ಕ್ಕೂ ಹೆಚ್ಚು ಗುತ್ತಿಗೆ ನೌಕರರನ್ನು ಈಗಾಗಲೇ ಸೇವೆಯಿಂದ ವಜಾ ಮಾಡಲಾಗಿದೆ. ಇದರಲ್ಲಿ ಸರ್ಕಾರದ ಯಾವುದೇ ಹಸ್ತಕ್ಷೇಪವಿಲ್ಲ. ಇದನ್ನು ವಿಶೇಷ ಪ್ರಕರಣವೆಂದು ಪರಿಗಣಿಸಿ ಮಾನವೀಯತೆ ಆಧಾರದಲ್ಲಿ ನೂತನ ಕುಮಾರಿ ಅವರ ಮರು ನೇಮಕ ಮಾಡಲಾಗುವುದು ಎಂದು ಟ್ವೀಟ್ ಮಾಡಲಾಗಿದೆ.

ರಾಜ್ಯದಲ್ಲಿ ಕಾಂಗ್ರೆಸ್‌ ನೇತೃತ್ವದ ಸರ್ಕಾರ ಅಸ್ತಿತ್ವಕ್ಕೆ ಬಂದಿದ್ದು, ಈ ಹಿಂದಿನ ಸರ್ಕಾರ ಮಾಡಿದ ಎಲ್ಲ ರೀತಿಯ ತಾತ್ಕಾಲಿಕ ನೆಲೆಯ ನೇಮಕಾತಿಗಳನ್ನು ರದ್ದುಪಡಿಸುವುದು ವಾಡಿಕೆ. ಅದರಂತೆ ನೂತನ ಕುಮಾರಿ ಅವರ ಉದ್ಯೋಗಕ್ಕೂ ಕತ್ತರಿ ಪ್ರಯೋಗ ಮಾಡಲಾಗಿತ್ತು. ಅವರನ್ನು ಕೂಡ ತಕ್ಷಣದಿಂದಲೇ ಕರ್ತವ್ಯದಿಂದ ತೆಗೆದುಹಾಕಿ ಆದೇಶ ಹೊರಡಿಸಲಾಗಿತ್ತು. ಇದರಂತೆ ಮಂಗಳೂರಿನ ಜಿಲ್ಲಾಧಿಕಾರಿ ಕಚೇರಿಯಲ್ಲಿ ಪ್ರಾಕೃತಿಕ ವಿಕೋಪ ವಿಭಾಗದಲ್ಲಿ ನಿರ್ವಹಿಸುತ್ತಿದ್ದ ಕರ್ತವ್ಯದಿಂದ ನೂತನ ಕುಮಾರಿ ಶುಕ್ರವಾರ ಹೊರಹೋಗುವಂತಾಗಿತ್ತು. ಇದರ ಬಗ್ಗೆ ವ್ಯಾಪಕ ವಿರೋಧ ವ್ಯಕ್ತವಾಗಿತ್ತು.

ಘಟನೆ ಹಿನ್ನೆಲೆ: ಬಿಜೆಪಿ ಮುಖಂಡ ಪ್ರವೀಣ್‌ ನೆಟ್ಟಾರು ಅವರನ್ನು ದುಷ್ಕರ್ಮಿಗಳು ಹತ್ಯೆ ನಡೆಸಿದ ಘಟನೆ ಬಳಿಕ ಕಾರ್ಯಕರ್ತರ ಆಕ್ರೋಶ ಬಿಜೆಪಿ ಮುಖಂಡರ ಕಡೆಗೆ ತಿರುಗಿತ್ತು. ಈ ವೇಳೆ ಘಟನೆಯ ಸಮಗ್ರ ತನಿಖೆಯನ್ನು ಅಂದಿನ ಬಿಜೆಪಿ ಸರ್ಕಾರ ರಾಷ್ಟ್ರೀಯ ತನಿಖಾ ಏಜೆನ್ಸಿಗೆ (National Investigative Agency) ವಹಿಸಿತ್ತು. ಅಲ್ಲದೆ ಪ್ರವೀಣ್‌ ನೆಟ್ಟಾರು ಕುಟುಂಬಕ್ಕೆ ಬಿಜೆಪಿ ವತಿಯಿಂದ ಕನಸಿನ ಮನೆ ನಿರ್ಮಾಣ ಹಾಗೂ ಪ್ರವೀಣ್‌ ಪತ್ನಿಗೆ ಮಾನವೀಯ ನೆಲೆಯಲ್ಲಿ ಸಿಎಂ ಅವರ ವಿಶೇಷಾಧಿಕಾರ ಬಳಸಿ ಸರ್ಕಾರಿ ಕೆಲಸ ಕೊಡಿಸುವುದಾಗಿ ಸಂಸದ, ರಾಜ್ಯ ಬಿಜೆಪಿ ಅಧ್ಯಕ್ಷ ನಳಿನ್‌ ಕುಮಾರ್‌ ಕಟೀಲ್‌ ಭರವಸೆ ನೀಡಿದ್ದರು. ಅದರಂತೆ ಅಂದಿನ ಮುಖ್ಯಮಂತ್ರಿಗಳ ಜತೆ ಮಾತುಕತೆ ನಡೆಸಿದ್ದರು.

ಸರ್ಕಾರ ಬದಲು ಬೆನ್ನಲ್ಲೇ ಪ್ರವೀಣ್‌ ನೆಟ್ಟಾರು ಪತ್ನಿಯ ನೌಕರಿ ಖೋತಾ!

ಇದನ್ನು ವಿಶೇಷ ಪ್ರಕರಣ ಎಂದು ಪರಿಗಣಿಸಿ ಮುಖ್ಯಮಂತ್ರಿ ಕಚೇರಿಯಲ್ಲೇ ವಿಶೇಷ ನೇಮಕಾತಿ ನಡೆಸಿ 2022ರ ಸೆ.22ರಂದು ಅಂದಿನ ಸಿಎಂ ಬಸವರಾಜ ಬೊಮ್ಮಾಯಿ ಆದೇಶ ಹೊರಡಿಸಿದ್ದರು. ಈ ಆದೇಶದಲ್ಲಿ ಗುತ್ತಿಗೆ ಆಧಾರದಲ್ಲಿ ಹಿರಿಯ ಸಹಾಯಕ ಗ್ರೂಪ್‌ ಸಿ ಹುದ್ದೆಗೆ ನೇಮಕ ಮಾಡಲಾಗಿತ್ತು. ಈ ಹುದ್ದೆ ಮುಖ್ಯಮಂತ್ರಿ ಅಧಿಕಾರ ಇರುವ ತನಕ ಇಲ್ಲವೇ ಮುಂದಿನ ಆದೇಶ ವರೆಗೆ ಎಂದು ನಮೂದಿಸಲಾಗಿತ್ತು.

ನೆಟ್ಟಾರು ಪತ್ನಿ ನೌಕರಿ ಖೋತಾ: ಸಿದ್ದು ಸರ್ಕಾರ ಪಿಎಫ್‌ಐ ಕೈಗೊಂಬೆ ಎಂದ ಬಿಜೆಪಿ!

ಆ ಆದೇಶದಲ್ಲಿ ಬೆಂಗಳೂರಿನ ಮುಖ್ಯಮಂತ್ರಿ ಕಚೇರಿಯಲ್ಲಿ ಎಂದಿದ್ದರೂ ನೂತನ ಕುಮಾರಿ ಅವರ ಅಪೇಕ್ಷೆ ಮೇರೆಗೆ ಅವರನ್ನು ಮಂಗಳೂರಿನ ಜಿಲ್ಲಾಧಿಕಾರಿ ಕಚೇರಿಯಲ್ಲಿ ನಿಯೋಜನೆ ಮೇರೆಗೆ ಕರ್ತವ್ಯ ನಿರ್ವಹಿಸಲು ಅವಕಾಶ ಕಲ್ಪಿಸಲಾಗಿತ್ತು. ಅ.14ರಂದು ನೂತನ ಕುಮಾರಿ ಜಿಲ್ಲಾಧಿಕಾರಿ ಕಚೇರಿಯಲ್ಲಿ ಕರ್ತವ್ಯಕ್ಕೆ ಹಾಜರಾಗಿದ್ದರು. ಈಗ ಸರ್ಕಾರ ಬದಲಾದ್ದರಿಂದ ಕೇವಲ ಏಳು ತಿಂಗಳಲ್ಲೇ ನೂತನ ಕುಮಾರಿ ಅವರು ಕರ್ತವ್ಯವನ್ನು ತ್ಯಜಿಸಬೇಕಾಗಿ ಬಂದಿದೆ.

 

click me!