Coffee Growers Union: ಸರ್ಕಾರದ ಮುಂದೆ ಮಹತ್ವದ ಬೇಡಿಕೆ ಇಟ್ಟ ಕಾಫಿ ಬೆಳೆಗಾರರ ಒಕ್ಕೂಟ

By Suvarna News  |  First Published Dec 16, 2021, 5:05 PM IST

* ಕಂದಾಯ, ತೋಟಗಾರಿಕೆ ಸಚಿವರನ್ನು ಭೇಟಿಯಾದ ಕಾಫಿ ಬೆಳೆಗಾರರ ಒಕ್ಕೂಟ 
* ವಿವಿಧ ಬೇಡಿಕೆ ಇಟ್ಟ ಕಾಫಿ ಬೆಳೆಗಾರರ ಒಕ್ಕೂಟ
* ಒತ್ತುವರಿ ಜಮೀನನ್ನು ಭೋಗ್ಯಕ್ಕೆ ಕೊಡಲು ಕಾಫಿ ಬೆಳೆಗಾರರ ಮನವಿ


ಬೆಳಗಾವಿ, (ಡಿ.16): ಹಾಸನ, ಚಿಕ್ಕಮಗಳೂರು ಮತ್ತು ಕೊಡಗು ಜಿಲ್ಲೆಗಳಲ್ಲಿ ಕಾಫಿ ಬೆಳೆಗಾರರು (Coffee Growers) ಒತ್ತುವರಿ ಮಾಡಿಕೊಂಡಿರುವ ಜಮೀನನ್ನು ನಿಗದಿತ ಶುಲ್ಕ ವಿಧಿಸಿ ಭೋಗ್ಯಕ್ಕೆ ನೀಡುವ ಯೋಜನೆಯನ್ನು ಜಾರಿಗೆ ತರಬೇಕೆಂಬ ಬೇಡಿಕೆಯೊಂದಿಗೆ `ಕರ್ನಾಟಕ ಬೆಳೆಗಾರರ ಒಕ್ಕೂಟ’ದ ಪ್ರತಿನಿಧಿಗಳು ಕಂದಾಯ ಸಚಿವ ಆರ್.ಅಶೋಕ್(R Ashok), ತೋಟಗಾರಿಕೆ ಸಚಿವ ಮುನಿರತ್ನ ಅವರನ್ನು ಗುರುವಾರ ಇಲ್ಲಿ ಭೇಟಿ ಮಾಡಿದ್ದರು. 

ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್. ಅಶ್ವತ್ಥನಾರಾಯಣ(Dr CN Ashwath Narayan) ಅವರು ಏರ್ಪಡಿಸಿದ್ದ ಈ ಭೇಟಿಯಲ್ಲಿ ಬೆಳೆಗಾರರ ಒಕ್ಕೂಟವು ಕಾಡಾನೆ ಹಾವಳಿಗೆ ಪರಿಹಾರ, 10 ಎಚ್.ಪಿ.ವರೆಗಿನ ಪಂಪ್ ಸೆಟ್ ಬಳಸುವ ಕಾಫಿ ಬೆಳಗಾರರಿಗೆ ಉಚಿತ ವಿದ್ಯುತ್ ಸೌಲಭ್ಯ ಮತ್ತು ಪ್ರಾಥಮಿಕ ಸಹಕಾರಿ ಕೃಷಿ ಹಾಗೂ ಗ್ರಾಮೀಣಾಭಿವೃದ್ಧಿ ಬ್ಯಾಂಕುಗಳಲ್ಲಿ ತೆಗೆದುಕೊಂಡಿರುವ ಸಾಲದ ಮೇಲಿನ ಬಡ್ಡಿ ಮನ್ನಾವನ್ನು 2022ಕ್ಕೂ ವಿಸ್ತರಿಸಬೇಕು ಎಂಬ ಬೇಡಿಕೆಗಳನ್ನೂ ಸಲ್ಲಿಸಿತು. 

Tap to resize

Latest Videos

undefined

Chikkamagaluru : ಮಲೆನಾಡಿನಲ್ಲಿ ಮುಗಿದಿಲ್ಲ ಮಳೆಗಾಲ, ಅಡಿಕೆ ಒಣಗಿಸಲು ಇದೆಂಥಾ ಐಡಿಯಾ ನೋಡಿ..!

ಒಕ್ಕೂಟದ ಪರವಾಗಿ ಮಾತನಾಡಿದ ಸಂಘಟನೆಯ ಅಧ್ಯಕ್ಷ ಡಾ.ಎಚ್.ಟಿ. ಮೋಹನ್ ಕುಮಾರ್, 10 ಎಕರೆ ಕಾಫಿ ತೋಟವಿರುವ ಬೆಳೆಗಾರರಿಗೆ ಇಷ್ಟೇ ವಿಸ್ತೀರ್ಣದ ಒತ್ತುವರಿ ಭೂಮಿಯನ್ನು ಭೋಗ್ಯದ ಆಧಾರದ ಮೇಲೆ ನೀಡಲಾಗುವುದು ಎಂದು ಈ ಹಿಂದೆ ರೂಪಿಸಿದ ಗುತ್ತಿಗೆ ನಿಯಮಗಳಲ್ಲಿ ಹೇಳಲಾಗಿತ್ತು. ಆದರೆ ಈ ಯೋಜನೆ ಜಾರಿಗೆ ಬಂದಿಲ್ಲ. ಇದನ್ನು ಜಾರಿಗೊಳಿಸಿದರೆ ಸಂಕಷ್ಟದಲ್ಲಿರುವ ಕಾಫಿ ಬೆಳೆಗಾರರಿಗೆ ಅನುಕೂಲವಾಗುತ್ತದೆ ಎಂದರು. 

ಕಂದಾಯ ಸಚಿವರು ಇದಕ್ಕೆ ಸಕಾರಾತ್ಮಕವಾಗಿ ಸ್ಪಂದಿಸಿ, ಆದಷ್ಟು ಬೇಗ ಸೂಕ್ತ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು. 

ಇದಲ್ಲದೆ, ಒತ್ತುವರಿ ಜಮೀನಿಗೆ ಈಗ ವಿಧಿಸಿರುವ ನೋಂದಣಿ ಶುಲ್ಕದ ಶೇ.10ರಷ್ಟು ವಾರ್ಷಿಕ ಮೌಲ್ಯವು ಅಧಿಕವಾಗಿದೆ. ಇದನ್ನು ಶೇ.5ಕ್ಕೆ ಇಳಿಸಿ, 35 ವರ್ಷಗಳ ಅವಧಿಗೆ ಭೋಗ್ಯಕ್ಕೆ ಕೊಟ್ಟರೆ ಇದರಿಂದ ಸರಕಾರದ ಬೊಕ್ಕಸಕ್ಕೆ 765 ಕೋಟಿ ರೂ. ವರಮಾನ ಬರಲಿದೆ ಎಂದು ಬೆಳೆಗಾರರ ಒಕ್ಕೂಟದ ನಿಯೋಗವು ಸಚಿವರ ಗಮನಕ್ಕೆ ತಂದಿತು. 

ಜೊತೆಗೆ ಸರಕಾರಿ ಭೂ ಕಬಳಿಕೆ ಕಾಯ್ದೆಯ 192ಎ ಪರಿಚ್ಛೇದದ ಅಡಿಯಲ್ಲಿ, ಒತ್ತುವರಿ ಮಾಡಿಕೊಂಡಿರುವ ಸಣ್ಣ ರೈತರು ನ್ಯಾಯಾಲಯದಲ್ಲಿ ವಿಚಾರಣೆ ಎದುರಿಸುತ್ತಿದ್ದು, ಬಂಧನದ ಭೀತಿಯಲ್ಲಿದ್ದಾರೆ. ಆದ್ದರಿಂದ ಈ ಕಠಿಣ ನಿಯಮಗಳಿಗೆ ಸೂಕ್ತ ತಿದ್ದುಪಡಿ ತಂದು, ಗ್ರಾಮೀಣ ಭಾಗದ ಕೃಷಿ ಜಮೀನಿಗೆ ವಿನಾಯಿತಿ ನೀಡಬೇಕು ಎಂದು ಒಕ್ಕೂಟದ ಪ್ರತಿನಿಧಿಗಳು ಕೋರಿದರು. ಇವುಗಳ ಬಗ್ಗೆ ಸೂಕ್ತ ಪರಿಶೀಲನೆ ನಡೆಸುವುದಾಗಿ ಸಚಿವರು ಭರವಸೆ ನೀಡಿದರು. 

*ಕಾಡಾನೆ ಹಾವಳಿಗೆ ಪರಿಹಾರ ಕೋರಿಕೆ 
ಕಾಫಿ ತೋಟಗಳಲ್ಲಿ ಕಾಡಾನೆ ಹಾವಳಿಗಳು ವಿಪರೀತವಾಗಿದ್ದು ಬೆಳೆ ಮತ್ತು ಪ್ರಾಣಹಾನಿ ಸಂಭವಿಸುತ್ತಿದೆ. ಇದನ್ನು ತಡೆಗಟ್ಟಲು ಸೌರಬೇಲಿ ಅಗತ್ಯವಾಗಿದ್ದು ಇದಕ್ಕೆ ಶೇ.90ರಷ್ಟು ಸಬ್ಸಿಡಿ ಕೊಡಬೇಕು. ಅಲ್ಲದೆ, ಕಾಫಿ ಬೆಳೆ ಪ್ರದೇಶದಲ್ಲಿ ಬೀಡು ಬಿಟ್ಟಿರುವ 230ಕ್ಕೂ ಹೆಚ್ಚು ಕಾಡಾನೆಗಳನ್ನು ಸ್ಥಳಾಂತರಿಸಬೇಕು. ರೈಲ್ವೆ ಕಂಬಿ ಬಳಸಿ ತಡೆಗೋಡೆ ನಿರ್ಮಿಸಿ, ಮೂರು ಜಿಲ್ಲೆಗಳಲ್ಲೂ ಟೆಂಟಿಕಲ್ ಫೆನ್ಸಿಂಗ್ ವ್ಯವಸ್ಥೆಯನ್ನು ವಿಸ್ತರಿಸಬೇಕು. ಕಾಡಾನೆ ದಾಳಿಯಿಂದ ಪ್ರಾಣ ಕಳೆದುಕೊಳ್ಳುವವರ ಕುಟುಂಬಗಳಿಗೆ ತಲಾ 25 ಲಕ್ಷ ರೂ. ಪರಿಹಾರ ಕೊಡಬೇಕು ಎಂದು ನಿಯೋಗವು ಮನವಿ ಮಾಡಿಕೊಂಡಿತು. 

ಶಾಸಕರಾದ ಕೆ.ಜಿ.ಬೋಪಯ್ಯ, ಎಸ್. ಕೆ. ಕುಮಾರಸ್ವಾಮಿ, ಕರ್ನಾಟಕ ಬೆಳೆಗಾರರ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಬಿ.ಕೃಷ್ಣಪ್ಪ ಇದ್ದರು. ಕಂದಾಯ ಇಲಾಖೆ ಪ್ರಧಾನ ಕಾರ್ಯದರ್ಶಿ ತುಷಾರ್ ಗಿರಿನಾಥ ಇದ್ದರು.

click me!