Government Jobs: 15,000 ಶಿಕ್ಷಕರ ನೇಮಕಕ್ಕೆ ಇಂದಿನಿಂದ ಅರ್ಜಿ

By Girish Goudar  |  First Published Mar 23, 2022, 6:43 AM IST

*  6 ರಿಂದ 8ನೇ ತರಗತಿಗೆ ನೇಮಕ
*  ಶಿಕ್ಷಣ ಇಲಾಖೆಯಿಂದ ಅಧಿಸೂಚನೆ
*  ಮೇ 21, 22ಕ್ಕೆ ಸಿಇಟಿ
 


ಬೆಂಗಳೂರು(ಮಾ.23): ರಾಜ್ಯ ಸರ್ಕಾರಿ ಶಾಲೆಗಳಲ್ಲಿನ(Government Schools) 6ರಿಂದ 8ನೇ ತರಗತಿಗಳಿಗೆ 15 ಸಾವಿರ ಪದವೀಧರ ಶಿಕ್ಷಕರ ನೇಮಕಾತಿಗೆ(Recruitment) ಅಧಿಕೃತ ಅಧಿಸೂಚನೆ ಪ್ರಕಟಿಸಲಾಗಿದ್ದು, ಅರ್ಹ ಅಭ್ಯರ್ಥಿಗಳು ಮಾ.23ರಿಂದ ಏ.22ರವರೆಗೆ ಅರ್ಜಿ ಸಲ್ಲಿಸಲು ಅವಕಾಶ ನೀಡಲಾಗಿದೆ.

ಅರ್ಹ ಅಭ್ಯರ್ಥಿಗಳು ಆನ್‌ಲೈನ್‌ನಲ್ಲಿ https://www.schooleducation.kar.nic.in ಮಾತ್ರ ಅರ್ಜಿ ಸಲ್ಲಿಸಬಹುದು. ಸಾಮಾನ್ಯ ವರ್ಗದವರಿಗೆ ಪ್ರತಿ ಹುದ್ದೆಗೆ 1250 ರು., ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರಿಗೆ 625 ರು. ಅರ್ಜಿ ಶುಲ್ಕ ನಿಗದಿಪಡಿಸಲಾಗಿದೆ. ಕರ್ನಾಟಕ ಶಿಕ್ಷಕರ ಅರ್ಹತಾ ಪರೀಕ್ಷೆಯಲ್ಲಿ(KARTET) ಅರ್ಹತಾ ಅಂಕ ಗಳಿಸಿರುವ ಅಭ್ಯರ್ಥಿಗಳು ನೇಮಕಾತಿಗೆ ಅರ್ಜಿ ಸಲ್ಲಿಸಬಹುದು. ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳಿಗೆ ಮೇ 21 ಮತ್ತು 22ರಂದು ಸಾಮಾನ್ಯ ಪ್ರವೇಶ ಪರೀಕ್ಷೆ (CET) ನಡೆಯಲಿದೆ ಎಂದು ಶಿಕ್ಷಣ ಇಲಾಖೆ(Department of Education) ಅಧಿಸೂಚನೆಯಲ್ಲಿ ಪ್ರಕಟಿಸಿದೆ.

Latest Videos

undefined

Mysore Paints Recruitment 2022: ಖಾಲಿ ಇರುವ ವಿವಿಧ ಮ್ಯಾನೇಜರ್ ಹುದ್ದೆಗಳಿಗೆ ನೇಮಕಾತಿ

15 ಸಾವಿರ ಹುದ್ದೆಗಳಲ್ಲಿ 6,500 ಗಣಿತ ಶಿಕ್ಷಕರು, 5000 ಸಮಾಜ ವಿಜ್ಞಾನ ವಿಷಯ ಶಿಕ್ಷಕರು, 2000 ಜೀವ ವಿಜ್ಞಾನ ವಿಷಯ ಶಿಕ್ಷಕರು ಹಾಗೂ 1500 ಆಂಗ್ಲ ಭಾಷಾ ವಿಷಯ ಶಿಕ್ಷಕರನ್ನು ನೇಮಕ ಮಾಡಿಕೊಳ್ಳಲಾಗುತ್ತಿದೆ. ಸಾಮಾನ್ಯ ಜ್ಞಾನ, ವಿಷಯ ಸಾಮರ್ಥ್ಯ, ಭಾಷಾ ಸಾಮರ್ಥ್ಯ ಎಂಬ ಮೂರು ಪ್ರಶ್ನೆ ಪತ್ರಿಕೆಗಳಿದ್ದು, 1 ಮತ್ತು 2ನೇ ಪತ್ರಿಕೆಗೆ ತಲಾ 150 ಅಂಕ ಹಾಗೂ 3ನೇ ಪತ್ರಿಕೆಗೆ 100 ಅಂಕ ಸೇರಿದಂತೆ ಒಟ್ಟಾರೆ 400 ಅಂಕಗಳಿಗೆ ಅಭ್ಯರ್ಥಿಗಳು ಪರೀಕ್ಷೆ ಬರೆಯಬೇಕು. ಪತ್ರಿಕೆ-1ರಲ್ಲಿ ಕನಿಷ್ಠ ಅಂಕಗಳನ್ನು ಗಳಿಸಬೇಕೆಂಬ ಮಾನದಂಡ ವಿಧಿಸಿಲ್ಲ. ಆದರೆ, ಮೆರಿಟ್‌ಗೆ ಪರಿಗಣಿಸಲಾಗುತ್ತದೆ. 2ನೇ ಪತ್ರಿಕೆಯಲ್ಲಿ ಕನಿಷ್ಠ ಶೇ.45, 3ನೇ ಪತ್ರಿಕೆಯಲ್ಲಿ ಶೇ.50ರಷ್ಟು ಅಂಕಗಳಿಸುವುದು ಕಡ್ಡಾಯ. ಈ ಎರಡೂ ಪತ್ರಿಕೆಗಳಲ್ಲಿ ಹಿಂದಿನ ವರ್ಷಗಳಿಗೆ ಹೋಲಿಸಿದರೆ ಕನಿಷ್ಠ ಅರ್ಹತಾ ಅಂಕಗಳನ್ನು ಶೇ.5ರಷ್ಟುಇಳಿಸಲಾಗಿದೆ. ತೃತೀಯ ಲಿಂಗಿಗಳಿಗೆ ಪ್ರತಿ ಪ್ರವರ್ಗದಲ್ಲಿ ಶೇ.1 ಹುದ್ದೆಗಳ ಮೀಸಲಾತಿಯನ್ನು ನೀಡಲಾಗಿದೆ ಎಂದು ಹೇಳಿದರು.

ಮೆರಿಟ್‌ ಪಟ್ಟಿ ಸಿದ್ಧಪಡಿಸುವಾಗ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ(Competitive Exam) ಪಡೆದ ಅಂಕಗಳಲ್ಲಿ ಶೇ.0.50, ಟಿಇಟಿ ಶೇ.0.20, ಪದವಿ ಅಂಕ ಶೇ.0.20 ಶಿಕ್ಷಕರ ಶಿಕ್ಷಣದ ಕೋರ್ಸ್‌ನಲ್ಲಿ ಪಡೆದ ಶೇ.0.10 ಅಂಕಗಳನ್ನು ಪರಿಗಣಿಸಲಾಗುತ್ತದೆ.

ಕರ್ನಾಟಕದಲ್ಲಿ 2,52,902 ಸರ್ಕಾರಿ ಹುದ್ದೆ ಖಾಲಿ: ಬೊಮ್ಮಾಯಿ

ಬೆಂಗಳೂರು: ರಾಜ್ಯದಲ್ಲಿ(Karnataka) ಇರುವ 38 ಇಲಾಖೆಗಳಿಗೆ 7,68,975 ಹುದ್ದೆಗಳು ಮಂಜೂರಾಗಿದ್ದು, ಈ ಪೈಕಿ 5,16,073 ಹುದ್ದೆಗಳನ್ನು ಭರ್ತಿ ಮಾಡಲಾಗಿದೆ, 2,52,902 ಹುದ್ದೆಗಳು ಖಾಲಿ ಇವೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ(Basavaraj Bommai) ತಿಳಿಸಿದ್ದರು. 

KEA Recruitment 2022: ಕರ್ನಾಟಕ ಪರೀಕ್ಷಾ ಪ್ರಾಧಿಕಾರದಲ್ಲಿ ಇಂಜಿನಿಯರ್ ಹುದ್ದೆಗಳಿಗೆ ನೇಮಕಾತಿ

ಜೆಡಿಎಸ್‌(JDS) ಸದಸ್ಯ ಕೆ.ಟಿ. ಶ್ರೀಕಂಠೇಗೌಡ ಅವರ ಪ್ರಶ್ನೆಗೆ ಉತ್ತರಿಸಿದ ಅವರು, ಕೋವಿಡ್‌(Covid-19) ಕಾರಣದಿಂದ ನೇಮಕಾತಿಗೆ(Recruitment) ನಿರ್ಬಂಧಗಳಿದ್ದರೂ ಸಹ ಶಿಕ್ಷಣ, ಪೊಲೀಸ್‌ ಸೇರಿದಂತೆ ವಿವಿಧ ಇಲಾಖೆಗಳ ನೇಮಕಾತಿಗೆ ಯಾವುದೇ ನಿರ್ಬಂಧ ವಿಧಿಸಿಲ್ಲ. 15 ಸಾವಿರ ಶಿಕ್ಷಕರ ನೇಮಕಾತಿಗೆ ಅನುಮತಿ ನೀಡಲಾಗಿದೆ. ಖಾಸಗಿ ಅನುದಾನಿತ ಶಿಕ್ಷಣ ಸಂಸ್ಥೆಗಳಲ್ಲಿ ಖಾಲಿ ಇರುವ ಹುದ್ದೆಗಳ ನೇಮಕಾತಿಯನ್ನು ಆರ್ಥಿಕ ಸ್ಥಿತಿಗತಿಯ ಆಧಾರದ ಮೇಲೆ ಅನುಮತಿ ನೀಡಲಾಗುವುದು ಎಂದು ಭರವಸೆ ನೀಡಿದ್ದರು. 

ಹೆಚ್ಚು ಹುದ್ದೆಗಳು ಖಾಲಿ ಇರುವುದರಿಂದ ಹಾಲಿ ನೌಕರರ ಮೇಲೆ ಒತ್ತಡ ಹೆಚ್ಚಾಗಿರುವುದು ನಿಜ, ಸದ್ಯ 91 ಸಾವಿರ ನೌಕರರು ಗುತ್ತಿಗೆ ಮೇಲೆ ಕೆಲಸ ಮಾಡುತ್ತಿದ್ದಾರೆ. ಈ ಪೈಕಿ 57 ಸಾವಿರ ಕೌಶಲ್ಯರಹಿತ ಸಿಬ್ಬಂದಿಗಳಿದ್ದಾರೆ, ಖಾಲಿ ಇರುವ ಹುದ್ದೆಗಳು ಭರ್ತಿಯಾಗುವವರೆಗೂ ತಾತ್ಕಾಲಿಕವಾಗಿ ಅಧಿಕ ಪ್ರಭಾರ ವ್ಯವಸ್ಥೆ ಮಾಡಲಾಗುತ್ತಿದೆ. ಜೊತೆಗೆ ಮುಂಬಡ್ತಿ, ನಿಯೋಜನೆ, ಅನ್ಯಸೇವೆ, ಗುತ್ತಿಗೆ, ಹೊರಗುತ್ತಿಗೆ ಮೂಲಕ ಸಿಬ್ಬಂದಿ ಕೊರತೆಯನ್ನು ಪರಿಹರಿಸಲು ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಹೇಳಿದರು.

click me!