ಬೆಂಗಳೂರಿನ ಬೌರಿಂಗ್ ಆಸ್ಪತ್ರೆಯಲ್ಲಿ ಎಸ್‌ಎಸ್‌ಎಲ್‌ಸಿ ಪಾಸಾದ ವ್ಯಕ್ತಿಯೊಬ್ಬನಿಗೆ ಅಕ್ರಮವಾಗಿ ಗೆಜೆಟೆಡ್ ಅಧಿಕಾರಿ ಹುದ್ದೆಯನ್ನು ನೀಡಿ ಸರ್ಕಾರ ಆದೇಶ ಹೊರಡಿಸಿದೆ.
ಬೆಂಗಳೂರು (ನ.08): ರಾಜ್ಯ ಸರ್ಕಾರವು ಸರ್ಕಾರಿ ಹುದ್ದೆಗಳ ನೇಮಕಾತಿ, ವರ್ಗಾವಣೆ ಹಾಗೂ ಮುಂಬಡ್ತಿ ವಿಚಾರದಲ್ಲಿ ಒಂದಲ್ಲಾ ಒಂದು ತಪ್ಪನ್ನೆಸಗಿ ಜನಸಾಮಾನ್ಯರಿಗೆ ಅನ್ಯಾಯ ಮಾಡುತ್ತಲೇ ಬರುತ್ತಿದೆ ಎನ್ನುವುದಕ್ಕೆ ಮತ್ತೊಂದು ಸಾಕ್ಷಿ ಸಿಕ್ಕಿದೆ. ಎಸ್‌ಎಸ್‌ಎಲ್‌ಸಿ ಓದಿ ಸರ್ಕಾರಿ ಕೆಲಸ ಗಿಟ್ಟಿಸಿಕೊಂಡಿದ್ದ ವ್ಯಕ್ತಿ ಕೋವಿಡ್ ಅವಧಿಯಲ್ಲಿ ಜೀವ ಭಯದಿಂದ ಸ್ವಯಂ ನಿವೃತ್ತಿ ಪಡೆದಿದ್ದನು. ಆದರೆ, ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬರುತ್ತಿದ್ದಂತೆ ಸ್ವಯಂ ನಿವೃತ್ತಿ ರದ್ದುಗೊಳಿಸಿ ಏಕಾಏಕಿ ಬೌರಿಂಗ್ ಆಸ್ಪತ್ರೆಯ ಗೆಜೆಟೆಡ್ ಹುದ್ದೆ ಸಮನ್ವಯಾಧಿಕಾರಿ ಹುದ್ದೆಗೆ ಮರು ನೇಮಕ ಆಗಿದ್ದಾರೆ.
ರಾಜ್ಯ ಸರ್ಕಾರವು ನೌಕರರ ನೇಮಕಾತಿ ಹಾಗೂ ಮುಂಬಡ್ತಿ ವಿಚಾರದಲ್ಲಿ ಮತ್ತೊಂದು ಎಡವಟ್ಟು ಮಾಡಿಕೊಂಡಿದೆ. ಅನರ್ಹನೊಬ್ಬನನ್ನು ಮರುನೇಮಕ ಮಾಡಿ ಆದೇಶ ಹೊರಡಿಸಲಾಗಿದೆ. ಕೇವಲ 10ನೇ ತರಗತಿ ಪಾಸಾದ ಅನರ್ಹ ವ್ಯಕ್ತಿಯೊಬ್ಬನನ್ನು ಗೆಜೆಟೆಡ್ (ಪದವಿಧರರು) ಹುದ್ದೆಯಾದ ಸಮನ್ವಯಾಧಿಕಾರಿ ಹುದ್ದೆಗೆ ನೇಮಕ ಮಾಡಲಾಗಿದೆ. ಅಂದರೆ, ಈತ ರಾಜಕೀಯ ನಾಯಕರ ಪ್ರಭಾವವನ್ನು ಬಳಸಿಕೊಂಡು ಅಟಲ್ ಬಿಹಾರಿ ವಾಜಪೇಯಿ ವೈದ್ಯಕೀಯ ಕಾಲೇಜು ಮತ್ತು ಸಂಶೋಧನಾ ಸಂಸ್ಥೆಗೆ (ಬೌರಿಂಗ್ ಆಸ್ಪತ್ರೆ) ಸಮನ್ವಯಾಧಿಕಾರಿಯಾಗಿ ನೇಮವಾಗಿದ್ದಾನೆ. ಇದಕ್ಕೆ ಬೌರಿಂಗ್ ಆಸ್ಪತ್ರೆಯ ವೈದ್ಯರು, ವೈದ್ಯ ವಿದ್ಯಾರ್ಥಿಗಳು ಹಾಗೂ ಸಿಬ್ಬಂದಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
undefined
ಗ್ಯಾರಂಟಿ ಯೋಜನೆಗಳಿಗಾಗಿ ಕೂಲಿ ಕಾರ್ಮಿಕರ ಮಕ್ಕಳ ಶೈಕ್ಷಣಿಕ ಸಹಾಯಧನಕ್ಕೆ ಕತ್ತರಿ ಹಾಕಿದ ಸರ್ಕಾರ!
ಹೀಗೆ ಅನರ್ಹನಾಗಿದ್ದರೂ ಉನ್ನತ ಹುದ್ದೆ ಅಲಂಕರಿಸಿದ ವ್ಯಕ್ತಿ ಖಾಜಾ ಮೊಹಿದ್ದೀನ್ ಆಗಿದ್ದಾನೆ. ಈ ವ್ಯಕ್ತಿ ಹಿಂದೆ ಇದೇ ಸಂಸ್ಥೆಯಲ್ಲಿ ಎಕ್ಸ್‌ರೇ ಟೆಕ್ನಿಷಿಯನ್ ಆಗಿದ್ದನು. ಆದರೆ, ಕೋವಿಡ್ ಸಂದರ್ಭದಲ್ಲಿ ಯಾವುದೇ ಆರೋಗ್ಯ ಸಿಬ್ಬಂದಿ ರಜೆ ಹಾಗೂ ಸ್ವಯಂ ನಿವೃತ್ತಿ ಪಡೆಯುವಂತಿಲ್ಲ ಎಂಬ ಆದೇಶವನ್ನು ಹೊರಡಿಸಿದ್ದರೂ, ಜೀವ ಭಯದಿಂದಾಗಿ ರಾಜಕೀಯ ಪ್ರಭಾವ ಬಳಸಿ ಸ್ವಯಂನಿವೃತ್ತಿ ಪಡೆದಿದ್ದನು. ಜೊತೆಗೆ, ತನಗೆ ಶೇ.60 ದೈಹಿಕ ಅಂಗವಿಕಲತೆಯಿದೆ ಎಂದು ಸುಳ್ಳು ಪ್ರಮಾಣಪತ್ರ ನೀಡಿ ನಿವೃತ್ತಿ ಹೊಂದುವವರೆಗೂ ಅಂಗವಿಕಲ ಭತ್ಯೆಯನ್ನೂ ಪಡೆದಿದ್ದನು.
ಆಸ್ಪತ್ರೆಯಲ್ಲಿ ಕೆಲಸ ಮಾಡುವಾಗ ಹಣ ವಸೂಲಿ ಮಾಡಿದ ಹಾಗೂ ಇತರೆ ಭ್ರಷ್ಟಾಚಾರ ಪ್ರಕರಣದಲ್ಲಿ ಭಾಗಿಯಾದ ಆರೋಪದಡಿ ಖಾಜಾ ಮೊಹಿದ್ದೀನ್ ವಿರುದ್ಧ ಲೋಕಾಯುಕ್ತ ಸೇರಿ ಹಲವೆಡೆ ದೂರುಗಳು ಸಹ ದಾಖಲಾಗಿವೆ. ಇಷ್ಟೆಲ್ಲ ಆರೋಪ ಹೊಂದಿರುವ ಹಾಗೂ ಅಕ್ರಮ ಎಸಗಿರುವ ವ್ಯಕ್ತಿಯನ್ನು ಪುನಃ ಸಂಸ್ಥೆಯಲ್ಲಿ ಉನ್ನತ ಅಧಿಕಾರಿ ಹುದ್ದೆಗೆ ಮರುನೇಮಕ ಮಾಡಿಕೊಳ್ಳಲಾಗಿದೆ. ಇವರ ವಿದ್ಯಾರ್ಹತೆ ಎಸ್‌ಎಸ್‌ಎಲ್‌ಸಿ ಆಗಿದ್ದು, ಗೆಜೆಟೆಡ್ ಅಧಿಕಾರಿ ಅರ್ಹತೆ ಹೊಂದಿರುವ ಸ್ಥಾನಕ್ಕೆ ನೇಮಿಸಲಾಗಿದೆ. ಸದ್ಯಕ್ಕೆ ಹಿರಿಯ ರೇಡಿಯಾಲಜಿಕಲ್ ಅಧಿಕಾರಿಯಾಗಿ ಜತೆಗೆ ಸಾರ್ವಜನಿಕ ಸಂಪರ್ಕಾಧಿಕಾರಿ ಮತ್ತು ಸಮನ್ವಯಾಧಿಕಾರಿಯಾಗಿ ನೇಮಿಸಲಾಗಿದ್ದು, ಸಂಸ್ಥೆಯ ಸಿಬ್ಬಂದಿಯಿಂದ ವಿರೋಧ ವ್ಯಕ್ತವಾಗಿದೆ.
ಧರ್ಮಸ್ಥಳ ಸೌಜನ್ಯಾ ಪ್ರಕರಣ ಆದೇಶದ ವಿರುದ್ಧ ಹೈಕೋರ್ಟ್ ಮೆಟ್ಟಿಲೇರಿದ ಸಿಬಿಐ: ಸಂತೋಷ್‌ರಾವ್‌ನೇ ಅತ್ಯಾಚಾರಿಯಂತೆ!
ರಾಜ್ಯಪಾಲರಿಗೆ ದೂರು ನೀಡಿದರೂ, ಲೆಕ್ಕಿಸದೇ ಅನರ್ಹನ ನೇಮಕ: ಮುಖ್ಯವಾಗಿ ಬೌರಿಂಗ್ ಆಸ್ಪತ್ರೆಯಲ್ಲಿ ಖಾಜಾ ಒಹಿದ್ದೀನ್ ಅವರನ್ನು ನೇಮಕ ಮಾಡಲಾದ ಹುದ್ದೆಯೇ ಇರುವುದಿಲ್ಲ. ಆದಾಗಿಯೂ ರಾಜಕೀಯ ಮತ್ತು ಅಧಿಕಾರ ಪ್ರಭಾವ ಬಳಸಿ ಈ ಸ್ಥಾನ ಪಡೆದುಕೊಂಡಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಈಗಾಗಲೇ ಸಂಸ್ಥೆಯ ಸಿಬ್ಬಂದಿ ಮತ್ತು ವೈದ್ಯ ವಿದ್ಯಾರ್ಥಿಗಳು ಸಂಬಂಧಪಟ್ಟ ಸಚಿವರಿಗೆ ದೂರು ಸಲ್ಲಿಸಿದ್ದಾರೆ. ಈ ವಿಚಾರ ರಾಜಭವನದ ಮೆಟ್ಟಿಲು ಏರಿತ್ತು. ಆದರೆ, ಸರ್ಕಾರ ಇದನ್ನು ಲೆಕ್ಕಿಸದೆ ಅನರ್ಹ ಹಾಗೂ ಅಕ್ರಮ ಎಸಗಿರುವ ವ್ಯಕ್ತಿಯನ್ನು ಮರುನೇಮಕ ಮಾಡಿದೆ. ಶಿವಾಜಿನಗರ ವಿಧಾನಸಭಾ ಕ್ಷೇತ್ರದ ಶಾಸಕ ರಿಜ್ವಾನ್ ಆರ್ಷದ್ ಅವರ ಶಿಫಾರಸ್ಸಿನ ಮೇರೆಗೆ ವೈದ್ಯಕೀಯ ಶಿಕ್ಷಣ ಸಚಿವ ಶರಣು ಪ್ರಕಾಶ್ ಪಾಟೀಲ್ ನೇಮಕಾತಿ ಮಾಡಿ ಆದೇಶ ಹೊರಡಿಸಿದ್ದಾರೆ.