ಅನುದಾನ ಕೊರತೆ: ಶೇ. 64ರಷ್ಟು ಅತಿಥಿ ಶಿಕ್ಷಕರ ನೇಮಕ..!

By Kannadaprabha NewsFirst Published Oct 14, 2021, 1:13 PM IST
Highlights

*  ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಳವಾಗಿರುವಾಗ ಶಿಕ್ಷಕರ ಕೊರತೆ
*  ಬೇಡಿಕೆಯಷ್ಟು ಶಿಕ್ಷಕರನ್ನು ನೇಮಿಸಿಕೊಳ್ಳಲು ಹಿಂದೇಟು
*  5078 ಪ್ರೌಢ ಶಾಲಾ ಶಿಕ್ಷಕರ ಕೊರತೆ
 

ಸೋಮರಡ್ಡಿ ಅಳವಂಡಿ

ಕೊಪ್ಪಳ(ಅ.14):  ರಾಜ್ಯಾದ್ಯಂತ(Karnataka) ಸರ್ಕಾರಿ ಪ್ರೌಢ ಶಾಲೆಗಳಲ್ಲಿ(Government Schools) ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಳವಾಗುತ್ತಿರುವಾಗ ಖಾಲಿ ಇರುವ ಶಿಕ್ಷಕರ(Teachers) ಹುದ್ದೆಗೆ ನೇಮಕಾತಿ ಮಾಡಿಕೊಳ್ಳಲು ರಾಜ್ಯ ಸರ್ಕಾರ ಮುಂದಾಗುತ್ತಿಲ್ಲ. ಹೋಗಲಿ ಅತಿಥಿ ಶಿಕ್ಷಕರನ್ನು ಸಹ ಪೂರ್ಣ ಪ್ರಮಾಣದಲ್ಲಿ ಭರ್ತಿ ಮಾಡಿಕೊಳ್ಳದಿರುವುದು ಸರ್ಕಾರಿ ಪ್ರೌಢ ಶಾಲೆಯಲ್ಲಿನ ವಿದ್ಯಾರ್ಥಿಗಳಿಗೆ(Students) ಸಮಸ್ಯೆಯಾಗಲಿದೆ.

ಖಾಲಿ ಇರುವ ಶಿಕ್ಷಕರನ್ನು ಕೂಡಲೇ ನೇಮಕಾತಿ(Recruitment) ಮಾಡಿಕೊಂಡು ಶಾಲೆಯಲ್ಲಿನ ಶಿಕ್ಷಕರ ಕೊರತೆ ನೀಗಿಸುವ ಕುರಿತು ಸದನದಲ್ಲಿ ಗಂಭೀರವಾಗಿ ಚರ್ಚೆಯಾಗಿದೆ. ಆದರೆ, ಸರ್ಕಾರ ಇನ್ನೂ ನೇಮಕಕ್ಕೆ ಮುಂದಾಗುತ್ತಿಲ್ಲ. ಈಗ ಶಾಲೆ ಪ್ರಾರಂಭವಾಗಿ 2 ತಿಂಗಳಾಗುತ್ತಾ ಬಂದಿದ್ದರೂ ಅತಿಥಿ ಶಿಕ್ಷಕರನ್ನು(Guest Teachers) ಪೂರ್ಣ ಪ್ರಮಾಣದಲ್ಲಿ ನೇಮಕಾತಿ ಮಾಡಿಕೊಳ್ಳದೆ ಕೇವಲ ಶೇ. 64 ರಷ್ಟು ಶಿಕ್ಷಕರ ನೇಮಕ ಮಾಡಿಕೊಳ್ಳಲು ಮುಂದಾಗಿದೆ.
ರಾಜ್ಯ ಸರ್ಕಾರ ಈ ಕುರಿತು ಸುತ್ತೋಲೆ ಹೊರಡಿಸಿ, ರಾಜ್ಯಾಧ್ಯಂತ ಪ್ರೌಢ ಶಾಲೆಯಲ್ಲಿ ಖಾಲಿ ಇರುವ ಶಿಕ್ಷಕರ ಹುದ್ದೆಗಳಿಗೆ ಶೇ. 64 ರಷ್ಟು ಮಾತ್ರವೇ ಭರ್ತಿ ಮಾಡಿಕೊಳ್ಳುವಂತೆ ಕಟ್ಟುನಿಟ್ಟಾಗಿ ಆದೇಶ ಮಾಡಿಲಾಗಿದೆ. ಹೀಗಾಗಿ, ಪ್ರೌಢ ಶಾಲೆಯಲ್ಲಿ ಖಾಲಿ ಇರುವ ಹುದ್ದೆಗಳಲ್ಲಿ ಯಾವ ವಿಷಯಕ್ಕೆ ಆದ್ಯತೆಯ ಮೇಲೆ ಭರ್ತಿ ಮಾಡಿಕೊಳ್ಳಬೇಕು ಎನ್ನುವ ಇಕ್ಕಟ್ಟು ಆಯಾ ಸಾರ್ವಜನಿಕ ಶಿಕ್ಷಣ ಇಲಾಖೆಯ ಅಧಿಕಾರಿಗಳದ್ದಾಗಿದೆ.

ಪ್ರಸಕ್ತ ಸಾಲಿನಲ್ಲಿ ಆಯಾ ಸರ್ಕಾರಿ ಪ್ರೌಢಶಾಲೆಯ ಮುಖ್ಯೋಪಾಧ್ಯಾಯರ(Headmaster) ವರದಿಯನ್ನಾಧರಿಸಿ ಬೇಡಿಕೆಯ ಯಾದಿಯನ್ನು ಸಲ್ಲಿಸಲಾಗಿದೆ. ಈ ಬೇಡಿಕೆಯ ಪ್ರಕಾರ 5078 ಅತಿಥಿ ಶಿಕ್ಷಕರ ಅಗತ್ಯವಿದೆ. ಆದರೆ, ರಾಜ್ಯ ಸರ್ಕಾರ ಈಗ ಕೇವಲ ಶೇ. 64 ರಷ್ಟುಮಾತ್ರ ಭರ್ತಿ ಮಾಡಿಕೊಳ್ಳುವಂತೆ ಆದೇಶ ಮಾಡಿ, ಕೇವಲ 3253 ಅತಿಥಿ ಶಿಕ್ಷಕರನ್ನು ನೇಮಕ ಮಾಡಿಕೊಳ್ಳವಂತೆ ಆಯಾ ತಾಲೂಕು ವ್ಯಾಪ್ತಿಯ ಹುದ್ದೆಗಳ ಅನುಸಾರ ಮಂಜೂರಾತಿ ನೀಡಿ ಆದೇಶ ಮಾಡಿದೆ.

ಅತಿಥಿ ಉಪನ್ಯಾಸಕರಿಗೆ ಬಿಗ್ ಶಾಕ್ ಕೊಟ್ಟ ಸಚಿವ ಅಶ್ವಥನಾರಾಯಣ

ಈ ಕುರಿತು ರಾಜ್ಯ ಸರ್ಕಾರ ಹೊರಡಿಸಿರುವ ಆದೇಶದ ಪ್ರತಿ ಕನ್ನಡಪ್ರಭಕ್ಕೆ(Kannada Prabha) ಲಭ್ಯವಾಗಿದ್ದು, ಅದರಲ್ಲಿ ಸ್ಪಷ್ಟವಾಗಿ ಹೇಳಿದ್ದು, ಬೇಡಿಕೆಯ ಯಾದಿಯಲ್ಲಿ ಶೇ. 64 ರಷ್ಟು ಮಾತ್ರ ಭರ್ತಿ ಮಾಡಿಕೊಳ್ಳುವಂತೆ ಹೇಳಲಾಗಿದೆ.

ಅನುದಾನದ ಕೊರತೆ:

ಅನುದಾನದ(Grants) ಕೊರತೆ ಇರುವುದರಿಂದಲೇ ಈ ರೀತಿಯಾಗಿ ಅತಿಥಿ ಶಿಕ್ಷಕರನ್ನು ಕಡಿತಗೊಳಿಸಿ ಆದೇಶ ಮಾಡಲಾಗಿದೆ ಎಂದು ಹೇಳಲಾಗುತ್ತದೆ. ಮೊದಲೇ ಶಾಲೆಗಳು ತಡವಾಗಿ ಪ್ರಾರಂಭವಾಗಿವೆ. ಈಗ ಅಲ್ಲಿ ಪಾಠ ಮಾಡುವುದಕ್ಕೂ ಶಿಕ್ಷಕರ ಕೊರತೆ ಇದೆ. ಈಗ ಅತಿಥಿ ಶಿಕ್ಷಕರ ನೇಮಕಾತಿಯಲ್ಲಿಯೂ ಅನುದಾನ ಕೊರತೆಯಿಂದಾಗಿ ಕಡಿಮೆ ಮಾಡಿಕೊಂಡಿ ರುವುದರಿಂದ ಸರ್ಕಾರಿ ಪ್ರೌಢ ಶಾಲೆಯಲ್ಲಿ ಶಿಕ್ಷಣದ(Education) ಗುಣಮಟ್ಟಕುಸಿಯಲು ಕಾರಣವಾಗಲಿದೆ.

ಅತಿಥಿ ಶಿಕ್ಷಕರನ್ನು ನೇಮಕ ಮಾಡಿಕೊಳ್ಳುವುದಕ್ಕೂ ಮಿತಿ ಹೇರಿರುವುದು ಸಮಸ್ಯೆಗೆ ಕಾರಣವಾಗಿದೆ. ಕಡಿತಗೊಂಡಿರುವ ಯಾದಿಯ ಪ್ರಕಾರ ಹೇಗೆ ನೇಮಕ ಮಾಡಿಕೊಳ್ಳಬೇಕು ಎನ್ನುವುದೇ ದೊಡ್ಡ ಸವಾಲಾಗಿದೆ ಅಂತ  ಹೆಸರು ಹೇಳದ ಅಧಿಕಾರಿ ತಿಳಿಸಿದ್ದಾರೆ. 
 

click me!