2.53 ಲಕ್ಷ ಸರ್ಕಾರಿ ಹುದ್ದೆ ಖಾಲಿ, 1 ಲಕ್ಷ ಶೀಘ್ರ ಭರ್ತಿ: ಸಿಎಂ ಬೊಮ್ಮಾಯಿ

By Kannadaprabha NewsFirst Published Dec 23, 2022, 1:00 AM IST
Highlights

ಖಾಲಿ ಇರುವ ಹುದ್ದೆಗಳ ಪೈಕಿ ತಕ್ಷಣದಲ್ಲಿ ಭರ್ತಿ ಮಾಡುವ ಹುದ್ದೆಗಳನ್ನು ಗುರುತಿಸುವಂತೆ ಸಂಬಂಧಪಟ್ಟವರಿಗೆ ಈಗಾಗಲೇ ಸೂಚನೆ ನೀಡಲಾಗಿದೆ ಎಂದ ಮುಖ್ಯಮಂತ್ರಿ ಬೊಮ್ಮಾಯಿ 

ವಿಧಾನ ಪರಿಷತ್‌(ಡಿ.23): ಸರ್ಕಾರದ ವಿವಿಧ ಇಲಾಖೆಯಲ್ಲಿ ಖಾಲಿ ಇರುವ 2.53 ಲಕ್ಷ ಹುದ್ದೆಗಳ ಪೈಕಿ ಒಂದು ಲಕ್ಷಕ್ಕಿಂತ ಹೆಚ್ಚು ಹುದ್ದೆಗಳನ್ನು ಭರ್ತಿ ಮಾಡಿಕೊಳ್ಳಲು ಉದ್ದೇಶಿಸಲಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.

ಜೆಡಿಎಸ್‌ ಸದಸ್ಯ ಸಿ.ಎಸ್‌. ಮಂಜೇಗೌಡ ಅವರ ಪ್ರಶ್ನೆಗೆ ಉತ್ತರಿಸಿದ ಅವರು, 7.60 ಲಕ್ಷ ಹುದ್ದೆ ಮಂಜೂರಾಗಿದ್ದು, 5.11 ಲಕ್ಷ ಹುದ್ದೆ ಭರ್ತಿಯಾಗಿದೆ. ಖಾಲಿ ಉಳಿದಿರುವ ಹುದ್ದೆಗಳಲ್ಲಿ ಸಿ ಮತ್ತು ಡಿ ವೃಂದದ ಹುದ್ದೆಗಳನ್ನು ಹೊರಗುತ್ತಿಗೆ ಆಧಾರದ ಮೇಲೆ ಭರ್ತಿ ಮಾಡಲಾಗಿದೆ. ಸುಮಾರು 82700 ಹುದ್ದೆಗಳನ್ನು ಭರ್ತಿ ಮಾಡಿಕೊಳ್ಳಲು ಅನುಮತಿ ನೀಡಲಾಗಿದೆ. ಉಳಿದಂತೆ ಎ ಮತ್ತು ಬಿ ವೃಂದದ ಹುದ್ದೆಗಳಿಗೆ ಹೆಚ್ಚುವರಿ ಹೊಣೆ ನೀಡುವ ಮೂಲಕ ಸರ್ಕಾರದ ಕೆಲಸ ಸುಗಮವಾಗಿ ಮುಂದುವರೆಯುವಂತೆ ನೋಡಿಕೊಳ್ಳಲಾಗುತ್ತಿದೆ ಎಂದರು.

18 ತಿಂಗಳಲ್ಲಿ 10 ಲಕ್ಷ ಉದ್ಯೋಗ ನೇಮಕಾತಿ, ಸಂಚಲನ ಸೃಷ್ಟಿಸಿದ ಪ್ರಧಾನಿ ಮೋದಿ ಘೋಷಣೆ!

ಖಾಲಿ ಇರುವ ಹುದ್ದೆಗಳ ಪೈಕಿ ತಕ್ಷಣದಲ್ಲಿ ಭರ್ತಿ ಮಾಡುವ ಹುದ್ದೆಗಳನ್ನು ಗುರುತಿಸುವಂತೆ ಸಂಬಂಧಪಟ್ಟವರಿಗೆ ಈಗಾಗಲೇ ಸೂಚನೆ ನೀಡಲಾಗಿದೆ ಎಂದರು,

ಮೊದಲ ಬಾರಿಗೆ 11 ಸಾವಿರ ಪೌರ ಕಾರ್ಮಿಕರ ನೇಮಕಾತಿಗೆ ನಿರ್ಧರಿಸಿದ್ದು, ಈ ನೇಮಕಾತಿ ಪ್ರಕ್ರಿಯೆ ಮುಗಿದ ನಂತರ ಮತ್ತೆ 12 ಸಾವಿರ ಪೌರ ಕಾರ್ಮಿಕರ ನೇಮಕಾತಿ ಪ್ರಕ್ರಿಯೆ ಆರಂಭಿಸಲಾಗುವುದು ಎಂದು ಮುಖ್ಯಮಂತ್ರಿ ಬೊಮ್ಮಾಯಿ ಹೇಳಿದರು.

click me!