ಅಕ್ರಮ ಸಂಬಂಧದಿಂದ ಜನಿಸಿದ ಮಗುವೂ ಪರಿಹಾರಕ್ಕೆ ಅರ್ಹ: ಹೈಕೋರ್ಟ್‌

By Govindaraj S  |  First Published Dec 22, 2022, 7:08 AM IST

ಅಕ್ರಮ ಸಂಬಂಧದಿಂದ ಜನಿಸಿದ ಮಗು ಮೃತನ ಕಾನೂನಾತ್ಮಕ ಪ್ರತಿನಿಧಿಯಾಗಲಿದ್ದು, ಪರಿಹಾರ ಪಡೆಯಲು ಅರ್ಹನಾಗುತ್ತಾನೆ ಎಂದು ಹೈಕೋರ್ಟ್‌ ಪ್ರಕರಣವೊಂದರಲ್ಲಿ ಆದೇಶಿಸಿದೆ. 


ಬೆಂಗಳೂರು (ಡಿ.22): ಅಕ್ರಮ ಸಂಬಂಧದಿಂದ ಜನಿಸಿದ ಮಗು ಮೃತನ ಕಾನೂನಾತ್ಮಕ ಪ್ರತಿನಿಧಿಯಾಗಲಿದ್ದು, ಪರಿಹಾರ ಪಡೆಯಲು ಅರ್ಹನಾಗುತ್ತಾನೆ ಎಂದು ಹೈಕೋರ್ಟ್‌ ಪ್ರಕರಣವೊಂದರಲ್ಲಿ ಆದೇಶಿಸಿದೆ. ಬೆಂಗಳೂರಿನ ನಿವಾಸಿ ಮಲ್ಲಿಕಾರ್ಜುನ ಮೋಟಾರು ವಾಹನ ಅಪಘಾತದಿಂದ ಮೃತಪಟ್ಟ ಹಿನ್ನೆಲೆಯಲ್ಲಿ ಪರಿಹಾರ ವಿಚಾರವಾಗಿ ಮೃತನ ಪೋಷಕರು, ಆತನೊಂದಿಗೆ ಅಕ್ರಮ ಸಂಬಂಧ ಹೊಂದಿದ್ದ ಮಹಿಳೆ ಸೌಮ್ಯಾ ಹಾಗೂ ಆಕೆಯ ಅಪ್ರಾಪ್ತ ಪುತ್ರ ರಾಜು (ಇಬ್ಬರ ಹೆಸರು ಬದಲಿಸಲಾಗಿದೆ) ಸಲ್ಲಿಸಿದ್ದ ಪ್ರತ್ಯೇಕ ಮೇಲ್ಮನವಿಗಳ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಚ್‌.ಪಿ. ಸಂದೇಶ್‌ ಅವರ ನ್ಯಾಯಪೀಠ ಈ ಆದೇಶ ಮಾಡಿದೆ.

ಪ್ರಕರಣದಲ್ಲಿ ಅಪ್ರಾಪ್ತ ರಾಜುಗೆ ಪರಿಹಾರ ನೀಡಲು ನಿರಾಕರಿಸಿದ ಮೋಟಾರು ವಾಹನ ಅಪಘಾತ ನ್ಯಾಯಾಧಿಕರಣದ ಆದೇಶವನ್ನು ರದ್ದುಪಡಿಸಿದ ಹೈಕೋರ್ಟ್‌, ರಾಜು ಸಹ ಪರಿಹಾರ ಪಡೆಯಲು ಅರ್ಹನಾಗಿದ್ದಾನೆ ಎಂದು ಆದೇಶಿಸಿದೆ. ಜೊತೆಗೆ, ಮೃತ ಮಲ್ಲಿಕಾರ್ಜುನ ಅವರ ಪೋಷಕರಿಗೆ ಘೋಷಿಸಿದ್ದ 9.86 ಲಕ್ಷ ರು. ಪರಿಹಾರವನ್ನು 13,28,940 ರು.ಗೆ ಹೆಚ್ಚಿಸಿದೆ. ಅದರಲ್ಲಿ ಮೃತನ ಪೋಷಕರಿಗೆ ತಲಾ ಶೇ.30ರಷ್ಟು ಮತ್ತು ಅಪ್ರಾಪ ಮಗ ರಾಜುಗೆ ಶೇ.40ರಷ್ಟು ಪರಿಹಾರ (ದಾವೆ ಆರಂಭವಾದಾಗಿಂದ ಪರಿಹಾರ ಮೊತ್ತ ಪಾವತಿಸುವ ದಿನದವರೆಗೆ ಶೇ.6ರಷ್ಟು ಬಡ್ಡಿ ದರದೊಂದಿಗೆ ) ನೀಡಬೇಕು ಎಂದು ವಿಮಾ ಕಂಪನಿಗೆ ನಿರ್ದೇಶಿಸಿದೆ.

Tap to resize

Latest Videos

ಜಿಪಂ, ತಾಪಂ ಚುನಾವಣೆ ವಿಳಂಬ: ಸರ್ಕಾರಕ್ಕೆ ದಂಡ ವಿಧಿಸಿದ ಹೈಕೋರ್ಟ್‌

ಮೃತನ ಪೋಷಕರು ವೃದ್ಧರಾಗಿರುವುದರಿಂದ ಅವರ ಭಾಗದ ಶೇ.60ರಷ್ಟುಪರಿಹಾರ ಹಣವನ್ನು ಸಂಪೂರ್ಣವಾಗಿ ಪಾವತಿಸಬೇಕು. ಮಗ ಅಪ್ರಾಪ್ತ ಆಗಿರುವುದರಿಂದ ಪ್ರಾಪ್ತನಾಗುವವರೆಗೆ ಅವನ ಭಾಗದ ಹಣವನ್ನು ನಿಶ್ಚಿತ ಠೇವಣಿ ಇಡಬೇಕು. ಮಗನ ಶೈಕ್ಷಣಿಕ ವೆಚ್ಚವನ್ನು ನಿಶ್ಚಿತ ಠೇವಣಿಯಿಂದ ಬರುವ ಬಡ್ಡಿ ಹಣವನ್ನು ಪ್ರತಿ ಮೂರು ತಿಂಗಳಿಗೊಮ್ಮೆ ತಾಯಿ ಪಡೆದುಕೊಳ್ಳಬೇಕು. ವಿಮಾ ಕಂಪನಿಯು ಪರಿಹಾರ ಮೊತ್ತವನ್ನು ಕ್ಲೇಮುದಾರರಿಗೆ ಆರು ವಾರಗಳಲ್ಲಿ ಪಾವತಿಸಬೇಕು ಎಂದು ಆದೇಶಿಸಿದೆ.

ಪ್ರಕರಣವೇನು?: 1996ರಲ್ಲಿ ವ್ಯಕ್ತಿಯೊಬ್ಬರನ್ನು ಸೌಮ್ಯಾ ಮದುವೆಯಾಗಿದ್ದರು. ದಂಪತಿಗೆ ಒಂದು ಹೆಣ್ಣು ಮಗು ಜನಿಸಿತ್ತು. 2006ರಲ್ಲಿ ಪತಿಯಿಂದ ದೂರವಾಗಿದ್ದ ಸೌಮ್ಯಾ, ಮಲ್ಲಿಕಾರ್ಜುನ ಜೊತೆಗೆ ಸಹ ಜೀವನ ನಡೆಸುತ್ತಿದ್ದರು. ಅವರಿಗೆ 2006ರ ಆ.8ರಂದು ರಾಜು ಜನನವಾಗಿತ್ತು. 2010ರಲ್ಲಿ ಸೌಮ್ಯಾ ಮೊದಲ ಪತಿಯಿಂದ ವಿಚ್ಛೇದನ ಪಡೆದುಕೊಂಡಿದ್ದರು. ಮತ್ತೊಂದೆಡೆ 2007ರಲ್ಲಿ ಮಲ್ಲಿಕಾರ್ಜುನ, ಶೈಲಜಾ (ಹೆಸರು ಬದಲಿಸಲಾಗಿದೆ) ಎಂಬಾಕೆಯನ್ನು ಮದುವೆಯಾಗಿದ್ದ. ಇದು ಆತನ ಅಧಿಕೃತ ಮೊದಲ ಮದುವೆ.

ಈ ಮಧ್ಯೆ ಮಲ್ಲಿಕಾರ್ಜುನ 2012ರ ಆ.23ರಂದು ರಸ್ತೆ ಅಪಘಾತದಿಂದ ಸಾವನ್ನಪ್ಪಿದ್ದನು. ಇದರಿಂದ ಮೃತನ ತಂದೆ-ತಾಯಿ ಮತ್ತು ಸೌಮ್ಯ, ಅಪ್ರಾಪ್ತ ಮಗ ಪರಿಹಾರ ಕೋರಿ ನ್ಯಾಯಾಧೀಕರಣಕ್ಕೆ ಪ್ರತ್ಯೇಕ ಅರ್ಜಿ ಸಲ್ಲಿಸಿದ್ದರು. ಸೌಮ್ಯಾ ಮತ್ತು ಮಲ್ಲಿಕಾರ್ಜುನನ ಜೊತೆಗೆ ಕಾನೂನು ರೀತಿಯಲ್ಲಿ ವಿವಾಹವಾಗಿಲ್ಲ ಮತ್ತು ಮಗು ಪಡೆದಿಲ್ಲ ಎಂದು ವಿಮಾ ಕಂಪನಿಯ ವಾದ ಪರಿಗಣಿಸಿದ್ದ ನ್ಯಾಯಾಧೀಕರಣು, ಸೌಮ್ಯ ಮತ್ತವರ ಅಪ್ರಾಪ್ತ ಮಗನ ಅರ್ಜಿಯನ್ನು ತಿರಸ್ಕರಿಸಿತ್ತು. ಮಲ್ಲಿಕಾರ್ಜುನನ ತಂದೆ-ತಾಯಿ ಸಲ್ಲಿಸಿದ್ದ ಅರ್ಜಿಯನ್ನು ಮಾನ್ಯ ಮಾಡಿ ಪರಿಹಾರ ಘೋಷಿಸಿತ್ತು. ಪರಿಹಾರ ನಿರಾಕರಿಸಿದ ನ್ಯಾಯಾಧೀಕರಣದ ಕ್ರಮ ಪ್ರಶ್ನಿಸಿ ಸೌಮ್ಯ ಮತ್ತವರ ಅಪ್ರಾಪ್ತ ಮಗ, ಪರಿಹಾರ ಹೆಚ್ಚಳ ಕೋರಿ ಮೃತನ ಪೋಷಕರು ಹೈಕೋರ್ಟ್‌ಗೆ ಪ್ರತ್ಯೇಕ ಮೇಲ್ಮನವಿ ಸಲ್ಲಿಸಿದ್ದರು.

ಹೈಕೋರ್ಟ್‌ ಆದೇಶವೇನು?: 2010ರಲ್ಲಿ ಮಲ್ಲಿಕಾರ್ಜುನ ಅವರು ಪ್ರಮಾಣಪತ್ರವನ್ನು ಮಾಡಿಸಿದ್ದು, ಸೌಮ್ಯ ತನ್ನ ಪತ್ನಿಯಾಗಿದ್ದು, ರಾಜು ಎಂಬ ಮಗು ಜನನವಾಗಿರುವುದಾಗಿ ಘೋಷಿಸಿಕೊಂಡಿದ್ದರು. ಅಲ್ಲದೆ, 2012ರ ಮೇ 15ರಂದು ವಿತರಣೆಯಾದ ವಂಶವೃಕ್ಷದಲ್ಲಿ ಸೌಮ್ಯ ಜೊತೆಗಿನ ಸಹ ಜೀವನವನ್ನು ಉಲ್ಲೇಖಿಸಿದ್ದರು. ರಾಜುವಿನ ಶಾಲಾ ದಾಖಲಾತಿಯಲ್ಲಿ, ಮಗು 2006ರ ಆ.8ರಂದು ಜನಿಸಿದೆ ಎಂದು ಉಲ್ಲೇಖವಾಗಿದೆ. ಆದರೆ, ಮಲ್ಲಿಕಾರ್ಜುನ ಮತ್ತು ಸೌಮ್ಯಾ ಸಂಬಂಧವು ಅಕ್ರಮವಾಗಿದ್ದು, ಅದರ ಭಾಗವಾಗಿ ರಾಜು ಜನಿಸಿದ್ದಾನೆ ಎಂದು ಹೈಕೋರ್ಟ್‌ ವಿವರಿಸಿದೆ.

Mangaluru: ಹರೇಕಳ-ಅಡ್ಯಾರ್‌ ಕಿಂಡಿ ಅಣೆಕಟ್ಟು ಕಾಮಗಾರಿಗೆ ಹೈಕೋರ್ಟ್‌ ತಡೆ

ಹಾಗೆಯೇ, ಮಲ್ಲಿಕಾರ್ಜುನ ಮತ್ತು ಸೌಮ್ಯಾ ಸಹ ಜೀವನ ಸಂಬಂಧ ಹೊಂದಿದ್ದರು. ಆದರೂ ಮೊದಲ ಪತಿಯೊಂದಿಗೆ ಬಾಳ್ವೆ ಹೊಂದಿದ್ದರು. ಮೊದಲ ಪತಿಯಿಂದ ವಿಚ್ವೇದನ ಪಡೆದ ಬಳಿಕವೂ ಮಲ್ಲಿಕಾರ್ಜುನ ಮತ್ತು ಸೌಮ್ಯಾ ವಿವಾಹವಾಗಿರಲಿಲ್ಲ. ಇತ್ತ ಮಲ್ಲಿಕಾರ್ಜುನ್‌ ಶೈಲಜಾ ಜೊತೆಗೆ ಬಾಳ್ವೆ ಹೊಂದಿದ್ದ. ಹಾಗಾಗಿ, ಸೌಮ್ಯಾ ಪರಿಹಾರಕ್ಕೆ ಅರ್ಹವಾಗಿಲ್ಲ. ಆದರೆ, ಮಲ್ಲಿಕಾರ್ಜುನ ಜೊತೆಗಿನ ಸಂಬಂಧದಿಂದ ರಾಜು ಜನಿಸಿದ್ದಾನೆ. ಆತನನ್ನು ಅವಲಂಬಿಸಿದ್ದ ಮಗು, ಸದ್ಯ ತಾಯಿಯೊಂದಿಗೆ ಜೀವಿಸುತ್ತಿದೆ. ಇದರಿಂದ ಮಲ್ಲಿಕಾರ್ಜುನಗೆ ಕಾನೂನು ರೀತಿಯಲ್ಲಿ ಪ್ರತಿನಿಧಿಯಾಗಿರುವ ಅಕ್ರಮ ಸಂಬಂಧದಿಂದ ಜನಿಸಿದ ಮಗುವು ಪರಿಹಾರಕ್ಕೆ ಅರ್ಹವಾಗಿದೆ ಎಂದು ನ್ಯಾಯಪೀಠ ಆದೇಶಿಸಿದೆ.

click me!