
ಮುಂಬೈ(ಅ.25): ಲಂಡನ್ ಒಲಿಂಪಿಕ್‌ನಲ್ಲಿ ತಾನು ಗೆದ್ದ ಕಂಚಿನ ಪದಕ ಬೆಳ್ಳಿ ಪದಕವಾಗಿ ಮಾರ್ಪಡಲಿದೆ ಎಂಬ ಸುದ್ದಿ ಕೇಳಿ ಮೊದಮೊದಲು ಸಂತಸಗೊಂಡಿದ್ದ ಭಾರತದ ಕುಸ್ತಿಪಟು ಯೋಗೇಶ್ವರ್ ದತ್ ಇದೀಗ ತಾನು ಗೆದ್ದ ಪದಕಕ್ಕೇ ತೃಪ್ತಿಪಡುವಂತಾಗಿದೆ.
60 ಕೆ.ಜಿ. ಪುರುಷರ ಫ್ರೀಸ್ಟೈಲ್ ವಿಭಾಗದಲ್ಲಿ ಬೆಳ್ಳಿ ಪದಕ ಗೆದ್ದಿದ್ದ ರಷ್ಯಾ ಕುಸ್ತಿಮಲ್ಲ ಬೆಸಿಕ್ ಕುಡುಖೋವ್ ನಿಷೇಧಿತ ಸ್ಟಿರಾಯಿಡ್ ಉದ್ದೀಪನಾ ಮದ್ದು ಸೇವಿಸಿದ್ದು ಪರೀಕ್ಷೆಯ ವೇಳೆ ಪತ್ತೆಯಾಗಿದ್ದರಿಂದ ಕಂಚು ಗೆದ್ದಿದ್ದ ಯೋಗೇಶ್ವರ್ ಬೆಳ್ಳಿ ಪದಕಕ್ಕೆ ಬಡ್ತಿ ಪಡೆಯಲಿದ್ದಾರೆ ಎಂದು ಆಗಸ್ಟ್‌ನಲ್ಲಿ ವರದಿಯಾಗಿತ್ತು. ಆದರೆ, ಈಗಾಗಲೇ 2013ರಲ್ಲಿ ಸಂಭವಿಸಿದ ಕಾರು ಅಪಘಾತದಲ್ಲಿ ದುರಂತ ಸಾವಿಗೀಡಾಗಿರುವ ಕುಡುಖೋವ್ ವಿರುದ್ಧ ತನಿಖೆ ನಡೆಸದಿರಲು ಅಂತಾರಾಷ್ಟ್ರೀಯ ಒಲಿಂಪಿಕ್ ಸಮಿತಿ (ಐಒಸಿ) ತೀರ್ಮಾನಿಸಿದೆ.
‘‘ಅಂತಾರಾಷ್ಟ್ರೀಯ ಒಲಿಂಪಿಕ್ ಸಮಿತಿ ರಷ್ಯಾ ರೆಸ್ಲರ್ ಬೆಸಿಕ್ ಕುಡುಖೋವ್ ಗೆದ್ದಿರುವ ಬೆಳ್ಳಿ ಪದಕವನ್ನು ಹಿಂಪಡೆಯುವುದಿಲ್ಲ’’ ಎಂದು ರಷ್ಯಾ ರೆಸ್ಲಿಂಗ್ ಫೆಡರೇಷನ್‌ನ ಉಪಾಧ್ಯಕ್ಷ ಹಾಗೂ ಯುನೈಟೆಡ್ ವರ್ಲ್ಡ್ ರೆಸ್ಲಿಂಗ್ ಉಪಾಧ್ಯಕ್ಷರೂ ಆಗಿರುವ ಗ್ರೆಗೋರಿ ಬ್ರಿಯೊಸೊವ್ ಎಂದು ಅಕ್ಟೋಬರ್ 19ರ ಪ್ರಕಟಣೆಯಲ್ಲಿ ತಿಳಿಸಿದ್ದರು.
ಅಂದಹಾಗೆ 2012ರ ಲಂಡನ್ ಒಲಿಂಪಿಕ್ ವೇಳೆ ಕುಡುಖೋವ್ ನೀಡಿದ್ದ ರಕ್ತದ ಮಾದರಿಯಲ್ಲಿ ಅವರು ಉದ್ದೀಪನಾ ಮದ್ದು ಸೇವಿಸಿರುವುದು ದೃಢಪಟ್ಟಿದ್ದು ಇದರಿಂದ ಅವರು ಗೆದ್ದ ಬೆಳ್ಳಿ ಪದಕವನ್ನು ಅವರಿಂದ ಕಸಿದುಕೊಂಡು ಭಾರತದ ಯೋಗೇಶ್ವರ್ ದತ್‌ಗೆ ನೀಡುವ ಸಂಭವವಿದೆ ಎಂಬ ಸುದ್ದಿ ಹೊರಬಿದ್ದಾಗ ಪ್ರತಿಕ್ರಿಯಿಸಿದ್ದ ದತ್, ‘‘ಕುಡುಖೋವ್ ಕೂಡ ಪ್ರತಿಭಾನ್ವಿತ ಕುಸ್ತಿಪಟುವಾಗಿದ್ದು, ಅವರು ಈಗಾಗಲೇ ಮೃತರಾಗಿರುವ ಕಾರಣ ಅವರು ಗೆದ್ದ ಪದಕವನ್ನು ಅವರ ಮನೆಯವರೇ ಇಟ್ಟುಕೊಳ್ಳಲಿ’’ ಎಂದು ಟ್ವಿಟರ್‌ನಲ್ಲಿ ತಿಳಿಸಿದ್ದರು.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.