ಸಾಧಿಸಬೇಕು ಅನ್ನೋ ಛಲ ಇದ್ದರೆ, ಅದೆಷ್ಟೇ ಅಡೆತಡೆಗಳಿದ್ದರೂ ಗುರಿ ಮುಟ್ಟಬಹುದು ಅನ್ನೋದಕ್ಕೆ ಅತ್ಯುತ್ತಮ ಉದಾಹರಣೆ ಇಲ್ಲಿದೆ. ಟೆಂಟ್‌ನಲ್ಲಿ ಮಲಗಿ, ಪಾನಿಪೂರಿ ಮಾರಾಟ ಮಾಡಿ ಇದೀಗ ಭಾರತಕ್ಕೆ ಅಂಡರ್ 19 ಏಷ್ಯಾಕಪ್ ಗೆಲ್ಲಿಸಿಕೊಟ್ಟ ಪ್ರತಿಭಾನ್ವಿತ ಯುವಕನ ಕತೆ ಎಲ್ಲರಿಗೂ ಸ್ಪೂರ್ತಿ.
ನವದೆಹಲಿ(ಅ.09) : ಛಲವೊಂದಿದ್ದರೆ ಏನನ್ನು ಬೇಕಾದರೂ ಸಾಧಿಸಬಲ್ಲೆ ಎಂಬ ಮಾತನ್ನು ಯುವ ಕ್ರಿಕೆಟಿಗ ಯಶಸ್ವಿ ಜೈಸ್ವಾಲ್ ಮತ್ತೊಮ್ಮೆ ನಿಜ ಮಾಡಿದ್ದಾರೆ. ಹೌದು ಕಳೆದ ಭಾನುವಾರವಷ್ಟೇ ಅಂಡರ್-19 ಏಷ್ಯಾಕಪ್‌ನಲ್ಲಿ ಭಾರತ ಚಾಂಪಿಯನ್ ಆಗಲು ಜೈಸ್ವಾಲ್ ಮಹತ್ವದ ಪಾತ್ರ ವಹಿಸಿದ್ದರು. ಏಷ್ಯಾಕಪ್ ಟೂರ್ನಿಯುದ್ದಕ್ಕೂ ಅದ್ಭುತ ಬ್ಯಾಟಿಂಗ್ ನಿಂದ ಮಿಂಚಿದ ಯುವ ಬ್ಯಾಟ್ಸ್‌ಮನ್ ಜೈಸ್ವಾಲ್ ಕಡು ಬಡತನದಲ್ಲೇ ಬೆಳೆದವರು. ಕ್ರಿಕೆಟಿಗನಾಗಬೇಕೆಂಬ
ಛಲದಿಂದ ಮನೆಬಿಟ್ಟು ಮುಂಬೈಗೆ ಬಂದು ಅನುಭವಿಸಿದ ಕಷ್ಟ ಅಷ್ಟಿಷ್ಟಲ್ಲ.
ಕ್ರಿಕೆಟ್ ಕನಸಿನೊಂದಿಗೆ ಮುಂಬೈನಲ್ಲಿ ವಸತಿ ನಿಲಯದಲ್ಲಿ ವಾಸವಾಗಿದ್ದ ಜೈಸ್ವಾಲ್‌ರನ್ನು, ಹೊರ ಹಾಕಲಾಯಿತು. ಈ ವೇಳೆ ಜೈಸ್ವಾಲ್‌ಗೆ ದೇವರಂತ
ಸಿಕ್ಕಿದ್ದು ಮುಸ್ಲಿಂ ಯುನೈಟೆಡ್ ಕ್ಲಬ್‌ನ ಇಮ್ರಾನ್, ಕ್ರಿಕೆಟ್‌ನ ಕಸನು ಹೊತ್ತುಕೊಂಡು ಮುಂಬೈಗೆ ಬಂದಿದ್ದ ಜೈಸ್ವಾಲ್‌ಗೆ ಅಜಾದ್ ಮೈದಾನದ ಸಮೀಪದಲ್ಲಿ ವಾಸಕ್ಕಾಗಿ ಗುಡಿಸಲು ನಿರ್ಮಿಸಿಕೊಟ್ಟರು.
ಜೈಸ್ವಾಲ್ ಗುಡಿಸಲಿನಲ್ಲಿದ್ದ ಎನ್ನುವ ಕಾರಣಕ್ಕೆ ಅಲ್ಲಿನ ಗ್ರೌಂಡ್ಸ್ ಮನ್‌ಗಳು ಕೀಳಾಗಿ ನೋಡುತ್ತಿದ್ದರಂತೆ. ಆ ವೇಳೆ ಹೊಟ್ಟೆಪಾಡಿಗಾಗಿ ಜೈಸ್ವಾಲ್ ತಳ್ಳುವ ಗಾಡಿಯಲ್ಲಿ ಆಹಾರದ ಪೊಟ್ಟಣಗಳನ್ನು ಮಾರಾಟ ಮಾಡಿ ಬದುಕಿದ್ದಾರಂತೆ. ಆಗಲೂ ಜೈಸ್ವಾಲ್ ಕ್ರಿಕೆಟ್ ಕನಸನ್ನು ಮಾತ್ರ ಕೈಚೆಲ್ಲಿರಲಿಲ್ಲ.
ಮಂಬೈ ತಂಡದಲ್ಲಿ ರನ್ ಹೊಳೆ: ಶಾಲಾ ಮಟ್ಟದಲ್ಲಿ ಜೈಸ್ವಾಲ್ ಮಿಂಚಿನ ಪ್ರದರ್ಶನ ತೋರಿದ್ದಾರೆ. ಜೈಸ್ವಾಲ್ ಪ್ರತಿಷ್ಟಿತ ಹ್ಯಾರೀಸ್ ಶೀಲ್ಡ್ ಕ್ರಿಕೆಟ್ ಟೂರ್ನಿಯಲ್ಲಿ ಗಮನಾರ್ಹ ಸಾಧನೆ ಮಾಡಿದ್ದರು. ಅಜೇಯ 319 ರನ್ ಮತ್ತು 99 ರನ್‌ಗಳಿಗೆ13 ವಿಕೆಟ್ ಕಿತ್ತು ಲಿಮ್ಕಾ ಬುಕ್ ಆಫ್ ರೆಕಾರ್ಡ್ ಮಾಡಿದ್ದರು.
‘ದೇಶಿಯ ಟೂರ್ನಿಗಳಲ್ಲಿ ಜೈಸ್ವಾಲ್ 52 ಶತಕ ಮತ್ತು 200 ವಿಕೆಟ್ ಪಡೆದಿರುವ ಸಾಧನೆ ಮಾಡಿದ್ದಾರೆ ಎಂದು ನನಗೆ ತಿಳಿದಿರಲಿಲ್ಲ’ ಎಂದು ಅವರ ತಂದೆ ಭೂಪೇಂದ್ರ ಜೈಸ್ವಾಲ್ ಹೇಳಿದ್ದಾರೆ. ‘ಮುಂಬೈನಲ್ಲಿ ಕಷ್ಟ ಅನುಭವಸಿದ್ದು ಸಾಕು ಮನೆಗೆ ಬಾ ಎಂದೆವು. ಆದರೆ ನಾನು ಕ್ರಿಕೆಟಿಗನಾದ ಮೇಲೆಯೇ ವಾಪಸ್ ಬರುತ್ತೇನೆ. ಗುಡಿಸಲಿನಲ್ಲಿದ್ದರೂ ಸಂತೋಷವಾಗಿದ್ದೇನೆ. ಮೈದಾನದಲ್ಲೇ ಇರುವುದರಿಂದ ಎಲ್ಲಾ ಸುಲಭವಾಗುತ್ತದೆ. ಬೆಳಗ್ಗೆ ಏಳುತ್ತಲೇ ನನ್ನ ಎದುರಿಗೆ ಕ್ರಿಕೆಟ್ ಇರುತ್ತದೆ ಎಂದು ಜೈಸ್ವಾಲ್ ಹೇಳಿದ್ದ ಎಂದು ಅವರ ತಾಯಿ ಕಾಂಚನ ಜೈಸ್ವಾಲ್ ಹೇಳಿದ್ದಾರೆ.
ಭಾರತ ಕಿರಿಯರ ತಂಡ, 6ನೇ ಬಾರಿ ಏಷ್ಯಾಕಪ್ ಚಾಂಪಿಯನ್ ಆಗಲು ಜೈಸ್ವಾಲ್ ಮಹತ್ವದ ಪಾತ್ರ ವಹಿಸಿದ್ದಾರೆ. ಫೈನಲ್ ಪಂದ್ಯದಲ್ಲಿ ಶ್ರೀಲಂಕಾ ವಿರುದ್ಧ 85 ರನ್‌ಗಳಿಸಿದ್ದ ಜೈಸ್ವಾಲ್, ತಂಡದ ಬೃಹತ್ ಮೊತ್ತಕ್ಕೆ ಬುನಾದಿ ಹಾಕಿದ್ದರು. ಈ ಟೂರ್ನಿ ಯಲ್ಲಿ ಜೈಸ್ವಾಲ್ ಸರಣಿ ಶ್ರೇಷ್ಠ ಗೌರವಕ್ಕೆ ಪಾತ್ರರಾಗಿದ್ದಾರೆ. ಉತ್ತಮ ಪ್ರದರ್ಶನ ತೋರಿದ್ದ ಜೈಸ್ವಾಲ್ 79.50 ಸರಾಸರಿಯಲ್ಲಿ 318 ರನ್‌ಗಳಿಸಿದ್ದರು.