ಇಂದಿನಿಂದ ಸಿಎಂ ಕಪ್ ದಸರಾ ಕ್ರೀಡಾಕೂಟ

By Web DeskFirst Published Oct 9, 2018, 9:16 AM IST
Highlights

ವಿಶ್ವವಿಖ್ಯಾತ ಮೈಸೂರ ದಸರಾ ಹಬ್ಬದ ಅಂಗವಾಗಿ ರಾಜ್ಯ ದಸರಾ ಕ್ರೀಡಾಕೂಟ ಇಂದಿನಿಂದ ಆರಂಭಗೊಳ್ಳುತ್ತಿದೆ.  24 ಕ್ರೀಡೆಗಳು, ರಾಜ್ಯದ 8 ತಂಡಗಳು ಈ ಕ್ರೀಡಾಕೂಟದಲ್ಲಿ ಪಾಲ್ಗೊಳ್ಳುತ್ತಿದೆ. ಕ್ರೀಡಾಕೂಟದ ಸಂಪೂರ್ಣ ವಿವರ ಇಲ್ಲಿದೆ.
 

ಮೈಸೂರು(ಅ.09): ನಾಡಹಬ್ಬ ದಸರಾ ಮಹೋತ್ಸವ ಹಿನ್ನೆಲೆಯಲ್ಲಿ ರಾಜ್ಯ ದಸರಾ ಕ್ರೀಡಾಕೂಟ ಸಿಎಂ ಕಪ್ ಪಂದ್ಯಾವಳಿಯನ್ನು ಅ 9ರಿಂದ 16 ರವರೆಗೆ  ಯೋಜಿಸಲಾಗಿದೆ. ಕೂಟದಲ್ಲಿ ಒಲಂಪಿಕ್ಸ್‌ನಲ್ಲಿ ಮಾನ್ಯತೆ ಪಡೆದ 24 ಕ್ರೀಡೆಗಳಲ್ಲಿ ಸ್ಪರ್ಧೆಗಳು ನಡೆಯಲಿವೆ. 

ರೈಫಲ್ ಶೂಟಿಂಗ್ ಹೊರತುಪಡಿಸಿ ಉಳಿದ ಎಲ್ಲಾ 23 ಕ್ರೀಡೆಗಳನ್ನು ಮೈಸೂರಿನಲ್ಲಿ ಸಂಘಟಿಸಲಾಗುತ್ತಿದೆ. ಕರ್ನಾಟಕ ಒಲಂಪಿಕ್ ಸಂಸ್ಥೆ ಮತ್ತು ಸಂಬಂಧಪಟ್ಟ ಕರ್ನಾಟಕ ರಾಜ್ಯ ಕ್ರೀಡಾ ಸಂಸ್ಥೆಗಳು ನೀಡಿದ ರಾಜ್ಯದ ಪ್ರತಿಷ್ಠಿತ 8 ತಂಡಗಳು, ಅಥ್ಲೀಟ್ ಗಳು ಸಂಬಂಧಪಟ್ಟ ಕ್ರೀಡೆಗಳಲ್ಲಿ ಭಾಗವಹಿಸುತ್ತಿದ್ದಾರೆ. ಕ್ರೀಡಾ ಜ್ಯೋತಿಯು ಅ.10 ರಂದು ಬೆಳಗ್ಗೆ 10.30ಕ್ಕೆ ಚಾಮುಂಡಿಬೆಟ್ಟದ ಶ್ರೀ ಚಾಮುಂಡೇಶ್ವರಿ ದೇವಸ್ಥಾನದಲ್ಲಿ ಉದ್ಘಾಟನೆಗೊಳ್ಳಲಿದೆ.

ಮುಖ್ಯಮಂತ್ರಿ ಎಚ್ .ಡಿ. ಕುಮಾರಸ್ವಾಮಿ, ಉಪ ಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ್, ಜಿಲ್ಲಾ ಉಸ್ತುವಾರಿ ಸಚಿವಜಿ.ಟಿ. ದೇವೇಗೌಡ, ಖ್ಯಾತ ಅಥ್ಲೀಟ್ ಎಂ.ಪಿ.
ಪೂವಮ್ಮ ಪಾಲ್ಗೊಳ್ಳುವರು. ಅ.16 ರಂದು ಸಂಜೆ 4ಕ್ಕೆ ಸಮಾರೋಪ ಸಮಾರಂಭ ನಡೆಯಲಿದೆ.

ವಸತಿ, ಊಟದ ವ್ಯವಸ್ಥೆ: ಕ್ರೀಡಾಕೂಟದಲ್ಲಿ ಪಾಲ್ಗೊಳ್ಳುವ ರಾಜ್ಯದ ಎಲ್ಲಾ ಜಿಲ್ಲೆಗಳ ಪುರುಷ ಮತ್ತು ಮಹಿಳಾ ಕ್ರೀಡಾಪಟುಗಳಿಗೆ ವಿವಿಧ ಹೊಟೇಲ್‌ಗಳಲ್ಲಿ ವಸತಿ ವ್ಯವಸ್ಥೆ ಕಲ್ಪಿಸಲಾಗಿದೆ. ಅ.9 ರಿಂದ 17 ರಂದು ಬೆಳಗಿನವರೆಗೆ ನಜರಾಜ ಬಹದ್ದೂರ್ ಛತ್ರದಲ್ಲಿ ಊಟೋಪಹಾರ ವ್ಯವಸ್ಥೆ ಕಲ್ಪಿಸಲಾಗಿದೆ. 

ವಸತಿ ಸ್ಥಳದಿಂದ ಕ್ರೀಡಾಂಗಣಕ್ಕೆ ಸಾರಿಗೆ ವ್ಯವಸ್ಥೆ ಕಲ್ಪಿಸಲಾಗಿದೆ. ಜೊತೆಗೆ ವೈದ್ಯಕೀಯ ಸೌಲಭ್ಯ ಕಲ್ಪಿಸಲಾಗಿದೆ. ವಿಜೇತ ತಂಡಕ್ಕೆ ಸಿಎಂ ಕಪ್ ನೀಡಲಾಗುವುದು. ವಿಜೇತರು, ಕೂಟ ದಾಖಲೆ ಮಾಡಿದವರಿಗೆ ನಗದು ಬಹುಮಾನ, ಮೆಡಲ್ ಹಾಗೂ ಟ್ರೋಫಿ ನೀಡಲಾಗುವುದು.
 

click me!