ಬ್ರಿಜ್‌ಭೂಷಣ್ ವಿರುದ್ದ ಮುಂದುವರೆದ ಕುಸ್ತಿಪಟುಗಳ ಪ್ರತಿಭಟನೆ
ಜಂತರ್ ಮಂತರ್ನಲ್ಲಿ ಕಪ್ಪುಪಟ್ಟಿ ಧರಿಸಿ ಕರಾಳ ದಿನ ಆಚರಣೆ
18ನೇ ದಿನ ಪೂರೈಸಿದ ಕುಸ್ತಿಪಟುಗಳ ಪ್ರತಿಭಟನೆ
ನವದೆಹಲಿ(ಮೇ.12): ಭಾರತೀಯ ಕುಸ್ತಿ ಫೆಡರೇಶನ್(ಡಬ್ಲ್ಯುಎಫ್ಐ) ಅಧ್ಯಕ್ಷ ಬ್ರಿಜ್‌ಭೂಷಣ್ ಸಿಂಗ್ ವಿರುದ್ಧ ಜಂತರ್ ಮಂತರ್ನಲ್ಲಿ ಕುಸ್ತಿಪಟುಗಳು ನಡೆಸುತ್ತಿರುವ ಧರಣಿ 18 ದಿನ ಪೂರೈಸಿದೆ. ಗುರುವಾರ ಹೋರಾಟ ನಿರತರು ಕಪ್ಪು ಪಟ್ಟಿಧರಿಸಿ ಕರಾಳ ದಿನ ಆಚರಿಸಿದರು.
ಕುಸ್ತಿಪಟುಗಳಾದ ಭಜರಂಗ್, ಸಾಕ್ಷಿ, ವಿನೇಶ್ ಸೇರಿದಂತೆ ಪ್ರಮುಖರು ಹಣೆಗೆ ಕಪ್ಪು ಪಟ್ಟಿ ಧರಿಸಿದರೆ, ಇತರರು ತೋಳಿಗೆ ಪಟ್ಟಿ ಧರಿಸಿ ಹೋರಾಟಕ್ಕೆ ಬೆಂಬಲ ಸೂಚಿಸಿದರು. ‘ಬ್ರಿಜ್ ವಿರುದ್ಧದ ಹೋರಾಟದ ಭಾಗವಾಗಿ ಕರಾಳ ದಿನ ಆಚರಿಸಿದ್ದೇವೆ. ಈಗ ಇಡೀ ದೇಶವೇ ನಮ್ಮ ಜೊತೆಗಿದ್ದು, ಹೋರಾಟದಲ್ಲಿ ಗೆಲುವು ನಮ್ಮದಾಗಲಿದೆ. ಗೆಲ್ಲುವವರೆಗೂ ಹೋರಾಟ ಕೈಬಿಡುದಿಲ್ಲ’ ಎಂದು ಭಜರಂಗ್ ಹೇಳಿದರು.
Black Day⚫️🔙 pic.twitter.com/SnQPHPB7a6
— Sakshee Malikkh (@SakshiMalik)ಹೇಳಿಕೆ ದಾಖಲಿಸಿದ ಅಪ್ರಾಪ್ತೆ: ಇದೇ ವೇಳೆ ಬ್ರಿಜ್ ವಿರುದ್ಧ ಆರೋಪಗಳಿಗೆ ಸಂಬಂಧಿಸಿ ಅಪ್ರಾಪ್ತ ಕುಸ್ತಿಪಟು ಗುರುವಾರ ಮ್ಯಾಜಿಸ್ಪ್ರೇಟ್ ಮುಂದೆ ಹೇಳಿಕೆ ದಾಖಲಿಸಿದರು. ಉಳಿದ 6 ಮಂದಿಯ ಹೇಳಿಕೆ ಇನ್ನಷ್ಟೇ ದಾಖಲಾಗಬೇಕಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ. ಇತ್ತೀಚೆಗೆ 7 ಮಂದಿ ಡೆಲ್ಲಿ ಪೊಲೀಸರಿಗೆ ಬ್ರಿಜ್ ವಿರುದ್ಧ ದೂರು ನೀಡಿದ್ದರು.
ಬ್ರಿಜ್‌ರ ಮಂಪರು ಪರೀಕ್ಷೆಗೆ ತಾರಾ ಕುಸ್ತಿಪಟುಗಳ ಆಗ್ರಹ!
ನವದೆಹಲಿ: ಲೈಂಗಿಕ ಕಿರುಕುಳ ಸೇರಿದಂತೆ ಕುಸ್ತಿಪಟುಗಳ ಗಂಭೀರ ಆರೋಪಗಳನ್ನು ಭಾರತೀಯ ಕುಸ್ತಿ ಫೆಡರೇಶನ್(ಡಬ್ಲ್ಯುಎಫ್ಐ) ಬ್ರಿಜ್‌ಭೂಷಣ್ ಸಿಂಗ್ ನಿರಾಕರಿಸುತ್ತಿದ್ದು, ಹೀಗಾಗಿ ಅವರನ್ನು ಸುಪ್ರೀಂಕೋರ್ಚ್ ಮೇಲ್ವಿಚಾರಣೆಯಲ್ಲಿ ಮಂಪರು ಪರೀಕ್ಷೆಗೆ ಒಳಪಡಿಸಬೇಕೆಂದು ಕುಸ್ತಿಪಟುಗಳು ಆಗ್ರಹಿಸಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕುಸ್ತಿಪಟು ಸಾಕ್ಷಿ ಮಲಿಕ್, ‘ಜನರು ನಾವು ಸುಳ್ಳು ಆರೋಪ ಹೊರಿಸಿದ್ದೇವೆ ಎಂದು ಹೇಳುತ್ತಿದ್ದಾರೆ. ಹೀಗಾಗಿ ಬ್ರಿಜ್ ಮಂಪರು ಪರೀಕ್ಷೆಗೆ ಒಳಗಾಗಲಿ. ದೂರು ನೀಡಿರುವ 7 ಕುಸ್ತಿಪಟುಗಳೂ ಪರೀಕ್ಷೆಗೆ ಒಳಪಡಲಿ. ಯಾರು ಸುಳ್ಳು ಹೇಳುತ್ತಿದ್ದಾರೆ ಎನ್ನುವುದು ತಿಳಿಯಲಿದೆ. ತಪ್ಪಿತಸ್ಥರನ್ನು ಗಲ್ಲಿಗೇರಿಸಲಿ’ ಎಂದು ಸವಾಲು ಹಾಕಿದ್ದಾರೆ.
ಬಾಸ್ಕೆಟ್‌ಬಾಲ್ ಬಿಟ್ಟು ಶೂಟರ್ ಆದ ದಿವ್ಯಾ; ದೇಶಕ್ಕೆ ಚಿನ್ನ ಗೆದ್ದ ರಾಜ್ಯದ ಪ್ರತಿಭೆ
ಟೂರ್ನಿ ನಡೆಯಲಿ: ಇದೇ ವೇಳೆ ಒಲಿಂಪಿಕ್ಸ್ ಪದಕ ವಿಜೇತ ಭಜರಂಗ್ ಪೂನಿಯಾ ರಾಷ್ಟ್ರೀಯ ಟೂರ್ನಿಗಳನ್ನು ಆಯೋಜಿಸಬೇಕು ಎಂದು ಮನವಿ ಮಾಡಿದ್ದಾರೆ. ‘ನಾವು ಯಾವುದೇ ಟೂರ್ನಿ ಆಯೋಜನೆಯನ್ನು ವಿರೋಧಿಸುತ್ತಿಲ್ಲ. ಭಾರತೀಯ ಒಲಿಂಪಿಕ್ಸ್ ಸಂಸ್ಥೆ(ಐಒಎ) ನೇಮಿಸಿರುವ ತಾತ್ಕಾಲಿಕ ಸಮಿತಿಯು ಟೂರ್ನಿ ನಡೆಸಲಿ. ಆದರೆ ಟೂರ್ನಿ ಆಯೋಜನೆಯಲ್ಲಿ ಬ್ರಿಜ್‌ಭೂಷಣ್‌ರ ಹಸ್ತಕ್ಷೇಪವಿರಬಾರದು’ ಎಂದಿದ್ದಾರೆ.
ಭಾರತದ ಬಾಕ್ಸರ್‌ಗಳಿಗೆ ಫೈನಲ್‌ಗೇರುವ ಗುರಿ
ತಾಷ್ಕೆಂಟ್: ಪುರುಷರ ಬಾಕ್ಸಿಂಗ್ ವಿಶ್ವ ಚಾಂಪಿಯನ್ಶಿಪ್ನಲ್ಲಿ ಭಾರತದ ಮೂವರು ಶುಕ್ರವಾರ ಸೆಮಿಫೈನಲ್ನಲ್ಲಿ ಕಣಕ್ಕಿಳಿಯಲಿದ್ದು, ಫೈನಲ್ ಪ್ರವೇಶಿಸಿ ಐತಿಹಾಸಿಕ ದಾಖಲೆ ಬರೆಯುವ ನಿರೀಕ್ಷೆಯಲ್ಲಿದ್ದಾರೆ. ಈವರೆಗಿನ ಯಾವುದೇ ಕೂಟದಲ್ಲೂ ಭಾರತದ ಮೂವರು ಸೆಮೀಸ್ ಪ್ರವೇಶಿಸಿರಲಿಲ್ಲ. ಭಾರತ ಈವರೆಗೆ ಒಟ್ಟಾರೆ 6 ಕಂಚು ಗೆದ್ದಿದ್ದು, 2019ರಲ್ಲಿ ಏಕೈಕ ಬೆಳ್ಳಿ ಪದಕ ಜಯಿಸಿತ್ತು.
ಶುಕ್ರವಾರ 51 ಕೆ.ಜಿ. ವಿಭಾಗದಲ್ಲಿ ದೀಪಕ್ 2 ಬಾರಿ ವಿಶ್ವ ಚಾಂಪಿಯನ್‌ಶಿಪ್ ಪದಕ ವಿಜೇತ, ಫ್ರಾನ್ಸ್ನ ಬಿಲಾಲಾ ಬೆನ್ನಾಮ ವಿರುದ್ಧ ಆಡಲಿದ್ದು, ಕಳೆದ ಬಾರಿ ಕಂಚು ಗೆದ್ದಿದ್ದ ಹುಸ್ಮುದ್ದೀನ್57 ಕೆ.ಜಿ. ವಿಭಾಗದಲ್ಲಿ ಕ್ಯೂಬಾದ ಹೊರ್ಟಾ ವಿರುದ್ಧ ಸೆಣಸಲಿದ್ದಾರೆ. 71 ಕೆ.ಜಿ. ವಿಭಾಗದಲ್ಲಿ ನಿಶಾಂತ್ ದೇವ್, 2022ರ ಏಷ್ಯನ್ ಚಾಂಪಿಯನ್, ಕಜಕಸ್ತಾನದ ಅಸ್ಲನ್ಬೆಕ್ರನ್ನು ಎದುರಿಸಲಿದ್ದಾರೆ.
ಎಎಫ್‌ಸಿ ಏಷ್ಯನ್ ಕಪ್: ‘ಬಿ’ ಗುಂಪಿನಲ್ಲಿ ಭಾರತ
ನವದೆಹಲಿ: ಕತಾರ್ನಲ್ಲಿ ನಡೆಯಲಿರುವ 2024ರ ಎಎಫ್‌ಸಿ ಏಷ್ಯನ್ ಕಪ್ ಫುಟ್ಬಾಲ್ ಟೂರ್ನಿಯಲ್ಲಿ ಭಾರತ ತಂಡ ‘ಬಿ’ ಗುಂಪಿನಲ್ಲಿ ಜೊತೆ ಸ್ಥಾನ ಗಿಟ್ಟಿಸಿಕೊಂಡಿದೆ. 24 ತಂಡಗಳು ಪಾಲ್ಗೊಳ್ಳುವ ಟೂರ್ನಿಯಲ್ಲಿ ತಲಾ 4 ತಂಡಗಳ 6 ಗುಂಪುಗಳನ್ನಾಗಿ ವಿಂಗಡಿಸಲಾಗಿದೆ. ಭಾರತ ತಂಡವು ಗುಂಪು ಹಂತದಲ್ಲಿ ಬಲಿಷ್ಠ ಆಸ್ಪ್ರೇಲಿಯಾ, ಉಜ್ಬೇಕಿಸ್ತಾನ, ಸಿರಿಯಾ ತಂಡಗಳ ವಿರುದ್ಧ ಸೆಣಸಲಿದೆ. ಈ ಮೂರೂ ತಂಡಗಳು ಫಿಫಾ ವಿಶ್ವ ರ‍್ಯಾಂಕಿಂಗ್‌ನಲ್ಲಿ ಭಾರತಕ್ಕಿಂತ ಮೇಲಿವೆ. 1964ರಲ್ಲಿ ರನ್ನರ್-ಅಪ್ ಆಗಿದ್ದು ಭಾರತದ ಈವರೆಗಿನ ಶ್ರೇಷ್ಠ ಪ್ರದರ್ಶನ ಎನಿಸಿದೆ.