
ನವದೆಹಲಿ(ಮೇ.24): ಭಾರತೀಯ ಕುಸ್ತಿ ಫೆಡರೇಶನ್ ಅಧ್ಯಕ್ಷ ಬ್ರಿಜ್‌ಭೂಷಣ್ ಸಿಂಗ್‌ರ ಬಂಧನಕ್ಕೆ ಆಗ್ರಹಿಸಿ ಕುಸ್ತಿಪಟುಗಳ ಪ್ರತಿಭಟನೆ ಒಂದು ತಿಂಗಳು ಪೂರೈಸಿದ ಹಿನ್ನೆಲೆಯಲ್ಲಿ ತಾರಾ ಕುಸ್ತಿಪಟು ವಿನೇಶ್ ಫೋಗಾಟ್ ರಾಷ್ಟ್ರೀಯ ಮಾಧ್ಯಮವೊಂದರಲ್ಲಿ ಲೇಖನ ಬರೆದಿದ್ದು, ‘ನ್ಯಾಯಕ್ಕಾಗಿ ಇಷ್ಟುದಿನ ಬೀದಿಯಲ್ಲಿ ಕೂರಬೇಕು ಎಂದು ಗೊತ್ತಿರಲಿಲ್ಲ’ ಎಂದಿದ್ದಾರೆ.
‘ಜನವರಿಯಲ್ಲಿ ಬ್ರಿಜ್‌ಭೂಷಣ್ ಸಿಂಗ್ ವಿರುದ್ಧ ಪ್ರತಿಭಟನೆ ಆರಂಭಿಸಿದಾಗ 2-3 ದಿನದಲ್ಲಿ ನಮ್ಮ ಕೂಗು ಸರ್ಕಾರಕ್ಕೆ ಕೇಳಿಸಲಿದೆ, ಸುಲಭವಾಗಿ ನ್ಯಾಯ ಸಿಗಲಿದೆ ಎಂದುಕೊಂಡಿದ್ದೆವು. ಆದರೆ ರಾಜಕೀಯ ನಾಯಕರು ದೇಶಕ್ಕಾಗಿ ಪದಕ ಗೆದ್ದವರನ್ನು ಇಷ್ಟರ ಮಟ್ಟಿಗೆ ಕಡೆಗಣಿಸುತ್ತಾರೆ ಎಂದು ಊಹಿಸಿರಲಿಲ್ಲ’ ಎಂದು ವಿನೇಶ್ ಬೇಸರ ವ್ಯಕ್ತಪಡಿಸಿದ್ದಾರೆ.
ಸಚಿವ ಅನುರಾಗ್ ನಮ್ಮನ್ನು ಅವಮಾನಿಸಿದ್ದಾರೆ: ವಿನೇಶ್
ಕೇಂದ್ರ ಕ್ರೀಡಾ ಸಚಿವ ಅನುರಾಗ್ ಠಾಕೂರ್ ವಿರುದ್ಧ ಮತ್ತೆ ಆಕ್ರೋಶ ವ್ಯಕ್ತಪಡಿಸಿರುವ ವಿನೇಶ್ ಫೋಗಾಟ್, ‘ಅನುರಾಗ್ ನಮ್ಮನ್ನು ಅವಮಾನಿಸಿದ್ದಾರೆ. ನಾನು ಕ್ರೀಡಾ ಸಚಿವ, ನಾನು ಹೇಳಿದ ಹಾಗೆ ನೀವು ಕೇಳಬೇಕು ಎಂಬಂತೆ ನಮ್ಮೊಂದಿಗೆ ಅವರು ನಡೆದುಕೊಳ್ಳುತ್ತಾರೆ. ಲೈಂಗಿಕ ಕಿರುಕುಳದ ಬಗ್ಗೆ ಅವರ ಬಳಿ ನಾವು ಹೇಳಿದಾಗ ಸಾಕ್ಷಿ ಏನಿದೆ ಕೊಡಿ ಎಂದು ಕೇಳಿದರು’ ಎಂದು ವಿನೇಶ್ ತಮ್ಮ ಲೇಖನದಲ್ಲಿ ಬರೆದಿದ್ದಾರೆ.
ಕಿರುಕುಳ ಎಲ್ಲಿ, ಹೇಗಾಯಿತು ಎಂದು ಹೇಳುತ್ತಿಲ್ಲ: ಬ್ರಿಜ್!
ಬ್ರಿಜ್‌ಭೂಷಣ್ ಸಿಂಗ್ ತಮ್ಮ ವಿರುದ್ಧ ಆರೋಪ ಮಾಡುತ್ತಿರುವ ಕುಸ್ತಿಪಟುಗಳನ್ನು ಮತ್ತೊಮ್ಮೆ ಪ್ರಶ್ನಿಸಿದ್ದು, ಅವರ ಆರೋಪಗಳೆಲ್ಲಾ ಸುಳ್ಳು ಎಂದಿದ್ದಾರೆ. ಮಾಧ್ಯಮಗಳೊಂದಿಗೆ ಮಾತನಾಡಿರುವ ಭೂಷಣ್, ‘ಕುಸ್ತಿಪಟುಗಳು ನನ್ನಿಂದ ಲೈಂಗಿಕ ಕಿರುಕುಳ ಆಗಿದೆ ಎಂದಷ್ಟೇ ಹೇಳುತ್ತಿದ್ದಾರೆ, ಎಲ್ಲಿ, ಏನು, ಯಾವಾಗ, ಹೇಗೆ ಕಿರುಕುಳ ಆಯಿತು ಎನ್ನುವುದನ್ನು ಈ ವರೆಗೂ ತಿಳಿಸಿಲ್ಲ’ ಎಂದು ವ್ಯಂಗ್ಯವಾಡಿದ್ದಾರೆ.
ಕುಸ್ತಿಪಟುಗಳಿಗೆ ಸಾವಿರಾರು ಜನರ ಬೆಂಬಲ!
ನವದೆಹಲಿ: ಲೈಂಗಿಕ ಕಿರುಕುಳ ಆರೋಪ ಎದುರಿಸುತ್ತಿರುವ ಭಾರತೀಯ ಕುಸ್ತಿ ಫೆಡರೇಶನ್ ಅಧ್ಯಕ್ಷ ಬ್ರಿಜ್‌ಭೂಷಣ್ ಸಿಂಗ್‌ರನ್ನು ಬಂಧಿಸುವಂತೆ ಆಗ್ರಹಿಸಿ ಕುಸ್ತಿಪಟುಗಳು ನಡೆಸುತ್ತಿರುವ ಪ್ರತಿಭಟನೆಗೆ ವ್ಯಾಪಕ ಬೆಂಬಲ ವ್ಯಕ್ತವಾಗಿದೆ. ಮಂಗಳವಾರ ಪ್ರತಿಭಟನಾ ನಿರತ ಕುಸ್ತಿಪಟುಗಳ ಜೊತೆ ಸಾವಿರಾರು ಮಂದಿ ಜಂತರ್-ಮಂತರ್‌ನಿಂದ ಇಂಡಿಯಾ ಗೇಟ್ ವರೆಗೂ ನಡೆದ ಮೇಣದ ಬತ್ತಿ ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು.
ನೆರೆಹೊರೆಯ ರಾಜ್ಯಗಳಿಂದ ಆಗಮಿಸಿರುವ ಬೆಂಬಲಿಗರು, ತ್ರಿವರ್ಣ ಧ್ವಜವನ್ನು ಹಿಡಿದು ಕುಸ್ತಿಪಟುಗಳ ಪರವಾಗಿ, ಬ್ರಿಜ್‌ಭೂಷಣ್ ವಿರುದ್ಧ ಘೋಷಣೆಗಳನ್ನು ಕೂಗುತ್ತಾ ಸಾಗಿದರು.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.