IPL 2023 ರೋಚಕ ಗೆಲುವಿನೊಂದಿಗೆ ಫೈನಲ್ ಪ್ರವೇಶಿಸಿದ ಸಿಎಸ್‌ಕೆ, ಗುಜರಾತ್‌ಗೆ ಇನ್ನೂ ಇದೆ ಅವಕಾಶ!

By Suvarna News  |  First Published May 23, 2023, 11:27 PM IST

ಐಪಿಎಲ್ ಟೂರ್ನಿಯ ಮೊದಲ ಕ್ವಾಲಿಫೈಯರ್ ಪಂದ್ಯದಲ್ಲಿ ಉತ್ತಮ ಪ್ರದರ್ಶನ ನೀಡಿದ ಚೆನ್ನೈ ಸೂಪರ್ ಕಿಂಗ್ಸ್ ಗೆಲುವಿನ ನಗೆ ಬೀರಿದೆ. ಗುಜರಾತ್ ಟೈಟಾನ್ಸ್ ವಿರುದ್ಧ ರನ್ ಗೆಲುವು ಸಾಧಿಸಿದ ಸಿಎಸ್‌ಕೆ ಐಪಿಎಲ್ 2023 ಟೂರ್ನಿಯ ಫೈನಲ್ ಪ್ರವೇಶಿಸಿದೆ. ಇತ್ತ ಮುಗ್ಗರಿಸಿದ ಗುಜರಾತ್ ತಂಡಕ್ಕೆ ಫೈನಲ್ ಪ್ರವೇಶಕ್ಕೆ ಇನ್ನೂ ಒಂದು ಅವಕಾಶವಿದೆ.


ಚೆನ್ನೈ(ಮೇ.23): ಎಂಎಸ್ ಧೋನಿ ನಾಯಕತ್ವದ ಚೆನ್ನೈ ಸೂಪರ್ ಕಿಂಗ್ಸ್ ಐಪಿಎಲ್ 2023 ಟೂರ್ನಿಯ ಫೈನಲ್ ಪ್ರವೇಶಿಸಿದೆ. ಗುಜರಾತ್ ಟೈಟಾನ್ಸ್ ವಿರುದ್ಧದ ಮೊದಲ ಕ್ವಾಲಿಫೈಯರ್ ಪಂದ್ಯದಲ್ಲಿ ಸಿಎಸ್‌ಕೆ 15 ರನ್ ಗೆಲುವು ದಾಖಲಿಸಿತು. ಈ ಮೂಲಕ ನೇರವಾಗಿ ಫೈನಲ್‌ಗೆ ಲಗ್ಗೆ ಇಟ್ಟಿದೆ. ಈ ಮೂಲಕ 10ನೇ ಬಾರಿ ಐಪಿಎಲ್ ಫೈನಲ್ ಪ್ರವೇಶಿಸಿದ ಹೆಗ್ಗಳಿಕೆಗೆ ಪಾತ್ರವಾಗಿದೆ. ಇತ್ತ ಚೆನ್ನೈ ವಿರುದ್ಧ ಮುಗ್ಗರಿಸಿರುವ ಗುಜರಾತ್ ಟೈಟಾನ್ಸ್ ತಂಡಕ್ಕೆ ಫೈನಲ್ ಪ್ರವೇಶಿಸಲು ಮತ್ತೊಂದು ಅವಕಾಶವಿದೆ. ಮೇ.26 ರಂದು ನಡೆಯಲಿರುವ 2ನೇ ಕ್ವಾಲಿಫೈಯರ್ ಪಂದ್ಯದಲ್ಲಿ ಗೆಲುವು ಸಾಧಿಸಿ ಮತ್ತೆ ಫೈನಲ್ ಎಂಟ್ರಿಕೊಡುವ ಅವಕಾಶವಿದೆ.

173  ರನ್ ಟಾರ್ಗೆಟ್ ಸುಲಭವಾಗಿ ಚೇಸ್ ಮಾಡುವ ಲೆಕ್ಕಾಚಾರ ಗುಜರಾತ್ ಟೈಟಾನ್ಸ್ ಮಾಡಿಕೊಂಡಿತ್ತು. ಆದರೆ ಧೋನಿ ಚಾಣಾಕ್ಷ ನಾಯಕತ್ವ, ಸಿಎಸ್‌ಕೆ ಮಾರಕ ಬೌಲಿಂಗ್ ದಾಳಿಗೆ ಗುಜರಾತ್ ಟೈಟಾನ್ಸ್ ತತ್ತರಿಸಿತು. ಘಟಾನುಘಟಿ ಬ್ಯಾಟ್ಸ್‌ಮನ್‌ಗಳು ಅಬ್ಬರಿಸಲು ವಿಫಲರಾದರು. ಶುಭಮನ್ ಗಿಲ್ ಹೊರತುಪಡಿಸಿದರೆ ಇನ್ನುಳಿದ ಆಟಗಾರರಿಂದ ನಿರೀಕ್ಷಿತ ಹೋರಾಟ ಬರಲಿಲ್ಲ. ಅಂತಿಮ ಹಂತದಲ್ಲಿ ರಶೀದ್ ಖಾನ್ ಹಾಗೂ ವಿಜಯ್ ಶಂಕರ್ ಹೋರಾಟ ಚೆನ್ನೈ ಸೂಪರ್ ಕಿಂಗ್ಸ್ ಆತಂಕ ಹೆಚ್ಚಿಸಿದ್ದು ಸುಳ್ಳಲ್ಲ.

Tap to resize

Latest Videos

ಚೇಸಿಂಗ್ ವೇಳೆ ಗುಜರಾತ್ ಟೈಟಾನ್ಸ್ ಹಲವು ತಪ್ಪುಗಳನ್ನು ಮಾಡಿತು. ವೃದ್ಧಿಮಾನ್ ಸಾಹ 18 ರನ್ ಸಿಡಿಸಿ ನಿರ್ಗಮಿಸಿದರು. ಇತ್ತ ಗಿಲ್ ಹೋರಾಟ ನೀಡಿದರೆ, ಇತರರಿದಂ ಸಾಥ್ ಸಿಗಲಿಲ್ಲ. ನಾಯಕ ಹಾರ್ದಿಕ್ ಪಾಂಡ್ಯ ಕೇವಲ 8 ರನ್ ಸಿಡಿಸಿ ಔಟಾದರು. ದಸೂನ್ ಶನಕ 17 ರನ್ ಸಿಡಿಸಿ ನಿರ್ಗಮಿಸಿದರು. ಇತ್ತ ಡೇವಿಡ್ ಮಿಲ್ಲರ್ ಹಾಗೂ ರಾಹುಲ್ ಟಿವಾಟಿಯಾ ಕೂಡ ಅಬ್ಬರಿಸದೇ ಸೈಲೆಂಟ್ ಆದರು.

ವಿಜಯ್ ಶಂಕರ್ ಹಾಗೂ ರಶೀದ್ ಖಾನ್ ಜೊತೆಯಾಟ ಗುಜರಾತ್ ಟೈಟಾನ್ಸ್ ತಂಡದಲ್ಲಿ ಹೊಸ ಉತ್ಸಾಹ ಚಿಗುರಿಸಿತು. ರಶೀದ್ ಖಾನ್ ಬೌಂಡರಿ ಹಾಗೂ ಸಿಕ್ಸರ್ ಅಬ್ಬರಕ್ಕೆ ಚೆನ್ನೈ ಪಾಳಯದಲ್ಲಿ ಆತಂಕ ಗೆರೆಗಳು ಹೆಚ್ಚಾಯಿತು. ವಿಜಯ್ ಶಂಕರ್ 14 ರನ್ ಸಿಡಿಸಿ ನಿರ್ಗಮಿಸಿದ ಬೆನ್ನಲ್ಲೇ ಚನ್ನೈ ಪಂದ್ಯದ ಮೇಲೆ ಹಿಡಿತ ಸಧಿಸಿತು. ದರ್ಶನ್ ನಾಲ್ಕಂಡೆ ರನೌಟ್‌ಗೆ ಬಲಿಯಾದರು.

ವಿಕೆಟ್ ಪತನಗೊಂಡರೂ, ರಶೀದ್ ಖಾನ್ ಅಬ್ಬರ ಮುಂದುವರಿಯಿತು. ಹೀಗಾಗಿ ಗುಜರಾತ್ ಟೈಟಾನ್ಸ್ ಗೆಲುವಿಗೆ ಅಂತಿಮ 12 ಎಸೆತದಲ್ಲಿ 35 ರನ್ ಅವಶ್ಯಕತೆ ಇತ್ತು. ಮೊದಲ ಎಸೆತದಲ್ಲೇ ಬೌಂಡರಿ ಸಿಡಿಸಿದ ರಶೀದ್ ಖಾನ್ ಸಿಎಸ್‌ಕೆ ತಲೆನೋವು ಹೆಚ್ಚಿಸಿದರು. ಆದರೆ ಮರು ಎಸೆತದಲ್ಲಿ ರಶೀದ್ ಖಾನ್ ವಿಕೆಟ್ ಪತನಗೊಂಡಿತು. ರಶೀದ್ 16 ಎಸೆತದಲ್ಲಿ 30 ರನ್ ಸಿಡಿಸಿದರು. ಗುಜರಾತ್ ಗೆಲುವಿಗೆ 6 ಎಸೆತದಲ್ಲಿ 27ರನ್ ಬೇಕಿತ್ತು. 

ಅಂತಿಮ ಎಸೆತದಲ್ಲಿ ಮೊಹಮ್ಮದ್ ಶಮಿ ವಿಕೆಟ್ ಪತನದೊಂದಿಗೆ ಗುಜರಾತ್ ಟೈಟಾನ್ಸ್ 157 ರನ್‌ಗ ಆಲೌಟ್ ಆಯಿತು. ಸಿಎಸ್‌ಕೆ 15 ರನ್ ಗೆಲುವು ದಾಖಲಿಸಿ ನೇರವಾಗಿ ಫೈನಲ್ ಪ್ರವೇಶಿಸಿದೆ. 

click me!