
ನವದೆಹಲಿ(ಜೂ.03): ಭಾರತೀಯ ಕುಸ್ತಿ ಫೆಡರೇಷನ್(ಡಬ್ಲ್ಯುಎಫ್ಐ) ಅಧ್ಯಕ್ಷ ಬ್ರಿಜ್ಭೂಷಣ್ ಸಿಂಗ್ ವಿರುದ್ಧ ಲೈಂಗಿಕ ಕಿರುಕುಳ ಸೇರಿದಂತೆ ವಿವಿಧ ಆರೋಪಗಳನ್ನು ಹೊರಿಸಿ ಅಪ್ರಾಪ್ತೆ ಸೇರಿ 7 ಕುಸ್ತಿಪಟುಗಳು ನೀಡಿದ್ದ ದೂರಿನ ಸಂಪೂರ್ಣ ವಿವರ ಸದ್ಯ ಬಹಿರಂಗಗೊಂಡಿದೆ. ಏ.28ರಂದು ದೆಹಲಿ ಪೊಲೀಸರು ಬ್ರಿಜ್ ವಿರುದ್ಧ ಪೋಕ್ಸೋ ಸೇರಿ 2 ಪ್ರಕರಣಗಳನ್ನು ದಾಖಲಿಸಿದ್ದರು. ಎಫ್‌ಐಆರ್ ಆದ ಒಂದು ತಿಂಗಳಿಗೂ ಹೆಚ್ಚು ಸಮಯದ ಬಳಿಕ ವಿವರಗಳು ಮಾಧ್ಯಮಗಳಿಗೆ ಲಭ್ಯವಾಗಿವೆ. ದೂರಿನಲ್ಲಿ 7 ಕುಸ್ತಿಪಟುಗಳು ಮಾಡಿದ ಆರೋಪಗಳೇನು ಎಂಬುದರ ವಿವರ ಇಲ್ಲಿದೆ.
ಕುಸ್ತಿಪಟು 1(ಅಪ್ರಾಪ್ತೆ): ಫೋಟೋ ಕ್ಲಿಕ್ಕಿಸುವ ನೆಪದಲ್ಲಿ ಬ್ರಿಜ್ಭೂಷಣ್ ನನ್ನನ್ನು ಗಟ್ಟಿಯಾಗಿ ತಬ್ಬಿಕೊಂಡು, ಭುಜ, ಎದೆಯ ಮೇಲೆ ಕೈಯಾಡಿಸಿದ್ದರು. ಆದರೆ ದೈಹಿಕ ಸಂಬಂಧಗಳನ್ನು ಕಠಿಣವಾಗಿ ವಿರೋಧಿಸಿದ್ದೆ ಮತ್ತು ನನ್ನನ್ನು ಹಿಂಬಾಲಿಸದಂತೆ ಎಚ್ಚರಿಸಿದ್ದೆ.
ಕುಸ್ತಿಪಟು 2: ರೆಸ್ಟೋರೆಂಟ್‌ನಲ್ಲಿ ತಿಂಡಿಗೆ ತೆರಳಿದ್ದಾಗ ಬ್ರಿಜ್ಭೂಷಣ್ ತಮ್ಮ ಹತ್ತಿರಕ್ಕೆ ಕರೆದು ಅಸಭ್ಯವಾಗಿ ವರ್ತಿಸಿದ್ದರು. ಇದನ್ನು ವಿರೋಧಿಸಿದರೂ ಎದೆ ಹಾಗೂ ಹೊಟ್ಟೆಯ ಭಾಗಕ್ಕೆ ಕೈ ಇಟ್ಟರು.
ಕುಸ್ತಿಪಟು 3: ಕೋಚ್ ಇಲ್ಲದಿದ್ದಾಗ ಕುಸ್ತಿ ಮ್ಯಾಟ್‌ಗೆ ಬಂದ ಬ್ರಿಜ್ ನನ್ನ ಎದೆಬಡಿತ ಪರೀಕ್ಷಿಸುವ ನೆಪದಲ್ಲಿ ಟಿ-ಶರ್ಚ್ ಎಳೆದು ಎದೆಯ ಭಾಗದ ಮೇಲೆ ಕೈಯಾಡಿಸಿದರು. ಫೆಡರೇಶನ್ ಕಚೇರಿಗೆ ಹೋದಾಗ ಜೊತೆಗಿದ್ದ ನನ್ನ ಸಹೋದರನನ್ನು ಹೊರಗೆ ಕೂರಿಸಿ ನನ್ನನ್ನು ಮಾತ್ರ ಒಳಕ್ಕೆ ಕರೆದರು. ನಾನು ಒಳಹೋಗುತ್ತಿದ್ದಂತೆ ಅಲ್ಲಿದ್ದವರನ್ನು ಹೊರಕ್ಕೆ ಕಳುಹಿಸಿ ಕೊಠಡಿಯ ಬಾಗಿಲು ಮುಚ್ಚಿ ನನ್ನೊಂದಿಗೆ ಬಲವಂತವಾಗಿ ದೈಹಿಕ ಸಂಪರ್ಕ ಸಾಧಿಸಲು ಯತ್ನಿಸಿದರು.
ಕುಸ್ತಿಪಟು 4: ನನ್ನ ಬಳಿ ಸ್ವಂತ ಮೊಬೈಲ್ ಇಲ್ಲದಿದ್ದಾಗ ಒಮ್ಮೆ ಪೋಷಕರಿಗೆ ಕರೆ ಮಾಡುವಂತೆ ಒತ್ತಾಯಿಸಿ ಬ್ರಿಜ್ ತಮ್ಮ ಮೊಬೈಲ್ ನೀಡಿದ್ದರು. ಮೊಬೈಲ್ ಹಿಂದಿರುಗಿಸಲು ಹೋದಾಗ ಬ್ರಿಜ್ ನನ್ನನ್ನು ಆಲಂಗಿಸಿ, ಲೈಂಗಿಕ ಸಂಪರ್ಕಕ್ಕೆ ಒಪ್ಪಿದರೆ ಕ್ರೀಡೆಗೆ ಅಗತ್ಯವಿರುವ ಪೌಷ್ಟಿಕಾಂಶಗಳನ್ನು ಕೊಡಿಸುವುದಾಗಿ ಆಫರ್ ಕೊಟ್ಟಿದ್ದರು. ಕೂಗಿದಾಗ ನಾನೂ ನಿನ್ನ ತಂದೆಯಂತೆಯೇ ಎಂದು ಹೇಳುತ್ತಿದ್ದರು. ನನ್ನ ತಾಯಿಗೂ ಕರೆ ಮಾಡಿ ಕಿರುಕುಳ ನೀಡಿದ್ದರು.
ಕುಸ್ತಿಪಟು 5: ನಮ್ಮೊಂದಿಗೆ ಬ್ರಿಜ್ ಸದಾ ಕೆಟ್ಟಭಾಷೆ, ಸನ್ನೆಗಳ ಮೂಲಕ ಮಾತನಾಡಲು ಯತ್ನಿಸುತ್ತಿದ್ದರು. ನನ್ನನ್ನೂ ಸೇರಿ ಅನೇಕ ಹುಡುಗಿಯರು ಒಬ್ಬೊಬ್ಬರೆ ಕೊಠಡಿಯಿಂದ ಹೊರಗೆ ಹೋಗುವುದನ್ನು ನಿಲ್ಲಿಸಿದ್ದೆವು. ಊಟಕ್ಕೂ ಎಲ್ಲಾ ಹುಡುಗಿಯರೂ ಒಟ್ಟಾಗಿಯೇ ಹೋಗುತ್ತಿದ್ದೆವು.
ಕುಸ್ತಿಪಟು 6: ತಂಡದೊಂದಿಗೆ ಫೋಟೋಶೂಟ್ ನಡೆಯುತ್ತಿದ್ದ ವೇಳೆ ಬ್ರಿಜ್ ನನ್ನ ಪಕ್ಕಕ್ಕೆ ಬಂದು ನಿಂತರು. ಇದ್ದಕ್ಕಿದ್ದಂತೆ ನನ್ನ ಪುಷ್ಠದ ಮೇಲೆ ಅವರು ಕೈ ಹಾಕಿದರು. ದೂರ ಸರಿಯಲು ಹೋದಾಗ ನನ್ನ ಭುಜವನ್ನು ಗಟ್ಟಿಯಾಗಿ ಹಿಡಿದು ತಮ್ಮತ್ತ ಎಳೆದುಕೊಂಡರು.
ಕುಸ್ತಿಪಟು 7: ಒಮ್ಮೆ ನನ್ನೊಂದಿಗೆ ಫೋಟೋ ಕ್ಲಿಕ್ಕಿಸಿಕೊಳ್ಳಲು ಕರೆದ ಬ್ರಿಜ್ ತೋಳಿನ ಮೇಲೆ ಕೈಹಾಕಿ ಕೆಟ್ಟದಾಗಿ ವರ್ತಿಸಲು ಶುರು ಮಾಡಿದರು. ಅವರನ್ನು ತಳ್ಳಿ ದೂರ ಸರಿಯುವ ಯತ್ನ ನಡೆಸಿದಾಗ ‘ಬಹಳ ಬುದ್ಧಿವಂತಳಂತೆ ಆಡುತ್ತಿದ್ದೀಯಾ?, ಮುಂಬರುವ ಟೂರ್ನಿಗಳಲ್ಲಿ ಆಡಬೇಕೋ ಬೇಡವೋ’ ಎಂದು ಬೆದರಿಕೆ ಹಾಕಿದ್ದರು.
"ಓರ್ವ ಮಹಿಳೆಯಾಗಿ ನಾನು..": ಕುಸ್ತಿಪಟುಗಳ ಪ್ರತಿಭಟನೆ ಬಗ್ಗೆ ತುಟಿಬಿಚ್ಚಿದ ಬಿಜೆಪಿ ಸಂಸದೆ..!
ಬ್ರಿಜ್ ಬಂಧನಕ್ಕೆ ಜೂನ್ 9ರ ಗಡುವು ನೀಡಿದ ರೈತರು
ಕುಸ್ತಿಪಟುಗಳನ್ನು ಬೆಂಬಲಿಸಿ ‘ಮಹಾಪಂಚಾಯತ್’ ನಡೆಸುತ್ತಿರುವ ರೈತ ನಾಯಕರು ಸರ್ಕಾರಕ್ಕೆ ಬ್ರಿಜ್‌ಭೂಷಣ್‌ರನ್ನು ಬಂಧಿಸಲು ಜೂ.9ರ ಗಡುವು ನೀಡಿದ್ದಾರೆ. ‘ಜೂ.9ರ ಮೊದಲು ಬ್ರಿಜ್ರನ್ನು ಬಂಧಿಸಬೇಕು. ಇಲ್ಲದಿದ್ದರೆ ದೇಶದೆಲ್ಲೆಡೆ ಹೋರಾಟ ಆರಂಭಿಸುತ್ತೇವೆ. ಕುಸ್ತಿಪಟುಗಳು ಕೂಡಾ ಜಂತರ್ ಮಂತರ್ಗೆ ಬಂದು ಮತ್ತೆ ಪ್ರತಿಭಟನೆ ಶುರು ಮಾಡಲಿದ್ದಾರೆ’ ಎಂದು ರೈತ ನಾಯಕ ರಾಕೇಶ್ ಟಿಕಾಯತ್ ಎಚ್ಚರಿಸಿದ್ದಾರೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.