ಸಾಕ್ಷಿ ಮಲಿಕ್ vs ಬಬಿತಾ ರಾಜಕೀಯ ಕೆಸರೆರೆಚಾಟ!
ಹೋರಾಟ ದುರ್ಬಲಗೊಳಿಸಲು ಬಬಿತಾ ಯತ್ನ: ಸಾಕ್ಷಿ
ಪ್ರತಿಭಟನಾ ನಿರತ ರೆಸ್ಲರ್ಸ್ ಕಾಂಗ್ರೆಸ್ ಕೈಗೊಂಬೆ: ಬಬಿತಾ
ನವದೆಹಲಿ(ಜೂ.19): ಈಗಾಗಲೇ ರಾಜಕೀಯ ಬಣ್ಣ ಪಡೆದಿದ್ದ ಭಾರತೀಯ ಕುಸ್ತಿ ಫೆಡರೇಶನ್(ಡಬ್ಲ್ಯುಎಫ್ಐ) ನಿರ್ಗಮಿತ ಅಧ್ಯಕ್ಷ ಬ್ರಿಜ್ಭೂಷಣ್ ವಿರುದ್ಧದ ಕುಸ್ತಿಪಟುಗಳ ಹೋರಾಟ ಈಗ ಮತ್ತಷ್ಟು ರಾಜಕೀಯ ವಾಕ್ಸಮರ, ಆರೋಪ-ಪ್ರತ್ಯಾರೋಪಕ್ಕೆ ಸಾಕ್ಷಿಯಾಗಿದೆ. ಶನಿವಾರವಷ್ಟೇ ತಮ್ಮ ಪ್ರತಿಭಟನೆಗೆ ಅವಕಾಶ ಕೋರಿ ಪೊಲೀಸರಿಗೆ ಮನವಿ ಸಲ್ಲಿಸಿದ್ದು ಬಿಜೆಪಿ ನಾಯಕಿ ಬಬಿತಾ ಫೋಗಟ್ ಎಂದು ಅಚ್ಚರಿಯ ಹೇಳಿಕೆ ನೀಡಿದ್ದ ಕುಸ್ತಿಪಟು ಸಾಕ್ಷಿ ಮಲಿಕ್, ತಾವು ಹೇಳಿದ್ದು ವ್ಯಂಗ್ಯವಾಗಿ ಎಂದು ತಿಳಿಸಿ ಬಬಿತಾ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ.
ನಮ್ಮ ಹೋರಾಟವನ್ನು ಬಬಿತಾ ದುರ್ಬಲಗೊಳಿಸಲು ಪ್ರಯತ್ನಿಸಿದರು ಎಂದು ಸಾಕ್ಷಿ ಭಾನುವಾರ ಟ್ವೀಟ್ ಮೂಲಕ ಆರೋಪಿಸಿದ್ದು, ಹೋರಾಟವನ್ನು ಅವರು ಸ್ವಾರ್ಥಕ್ಕೆ ಬಳಸಿದರು ಎಂದಿದ್ದಾರೆ. ‘ತೀರ್ಥ್ ರಾಣಾ ಹಾಗೂ ಬಬಿತಾ ನಮ್ಮ ಪ್ರತಿಭಟನೆಯನ್ನು ಸ್ವಾರ್ಥಕ್ಕೆ ಬಳಸಲು ಯತ್ನಿಸಿದರು. ನಾವು ಸಂಕಷ್ಟದಲ್ಲಿದ್ದಾಗ ಅವರು ಸರ್ಕಾರದ ಪರ ನಿಂತರು. ನಾವು ಬಹಳ ಸಂಕಷ್ಟದಲ್ಲಿದ್ದೇವೆ’ ಎಂದಿದ್ದಾರೆ. ಈ ಮೊದಲು ಕುಸ್ತಿಪಟುಗಳು ಪ್ರತಿಭಟನೆ ಆರಂಭಿಸಿದ್ದಾಗ, ವಿನೇಶ್ ಫೋಗಾಟ್ ತಮ್ಮ ಸೋದರ ಸಂಬಂಧಿ ಬಬಿತಾಗೆ ‘ನಮ್ಮ ಹೋರಾಟ ದುರ್ಬಲಗೊಳಿಸಲು ಪ್ರಯತ್ನಿಸಬೇಡಿ’ ಎಂದು ಮನವಿ ಮಾಡಿದ್ದರು.
undefined
ಸಾಕ್ಷಿಗೆ ಬಬಿತಾ ತಿರುಗೇಟು
ಕುಸ್ತಿಪಟುಗಳ ಎಲ್ಲಾ ಆರೋಪಗಳನ್ನು ಬಬಿತಾ ಫೋಗಟ್ ಅಲ್ಲಗಳೆದಿದ್ದು, ಅವರು ಕಾಂಗ್ರೆಸ್ನ ಕೈಗೊಂಬೆಗಳು ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ಟ್ವೀಟ್ ಮಾಡಿರುವ ಬಬಿತಾ, ‘ನನ್ನ ಸಹೋದರಿ ಸಾಕ್ಷಿ ಹಾಗೂ ಅವರ ಪತಿ ಸತ್ಯವರ್ತ್ ವಿಡಿಯೋ ನೋಡಿ ಬೇಸರವಾಯಿತು. ಪ್ರತಿಭಟನೆಗೆ ಅವಕಾಶ ಕೋರಿ ನಾನು ಪೊಲೀಸರಿಗೆ ಸಲ್ಲಿಸಿದ್ದೆ ಎಂಬ ಪತ್ರದಲ್ಲಿ ನನ್ನ ಹೆಸರು, ಸಹಿ ಇಲ್ಲ. ಅದು ನನ್ನದೆನ್ನಲು ಯಾವ ಸಾಕ್ಷ್ಯವೂ ಇಲ್ಲ. ಆರಂಭದಲ್ಲೇ ಪ್ರಧಾನಿ ನರೇಂದ್ರ ಮೋದಿ ಅಥವಾ ಗೃಹ ಸಚಿವ ಅಮಿತ್ ಶಾರನ್ನು ಭೇಟಿಯಾಗಲು ಅವರಿಗೆ ತಿಳಿಸಿದ್ದೆ. ಅವರಿಂದ ಸಮಸ್ಯೆಗೆ ಪರಿಹಾರ ಸಿಗುತ್ತಿತ್ತು. ಆದರೆ ಕುಸ್ತಿಪಟುಗಳು ಕಾಂಗ್ರೆಸ್ ನಾಯಕರಾದ ಪ್ರಿಯಾಂಕ ಗಾಂಧಿ, ದೀಪೇಂದರ್ ಹೂಡಾ ಮತ್ತು ಅತ್ಯಾಚಾರ ಆರೋಪವಿರುವ ಕೆಲವರನ್ನು ಭೇಟಿಯಾದರು’ ಎಂದು ಟೀಕಿಸಿದ್ದಾರೆ.
Wrestlers Protest: ಪೋಕ್ಸೋ ರದ್ದು ಶಿಫಾರಸಿಗೆ ರೆಸ್ಲರ್ಸ್ ಸಿಟ್ಟು!
ಅಲ್ಲದೇ ನೂತನ ಸಂಸತ್ಗೆ ಮುತ್ತಿಗೆ ಯತ್ನ ಹಾಗೂ ಗಂಗಾ ನದಿಗೆ ಪದಕ ಎಸೆಯಲು ಮುಂದಾಗಿದ್ದರ ಬಗ್ಗೆಯೂ ಬಬಿತಾ ಕಿಡಿಕಾರಿದ್ದಾರೆ. ‘ಇದರಿಂದ ದೇಶಕ್ಕೆ ಅವಮಾನ ಮಾಡಿದ್ದೀರಿ. ಈ ಘಟನೆಗಳಿಂದಲೇ ನಿಮ್ಮ ಉದ್ದೇಶವೇನು ಎಂಬುದು ಗೊತ್ತಾಗಿದೆ. ನೀವು ಕಾಂಗ್ರೆಸ್ ಕೈಗೊಂಬೆಗಳು ಎಂಬುದು ಜನರಿಗೆ ಅರ್ಥವಾಗಿದೆ. ನಿಮ್ಮ ನೈಜ ಉದ್ದೇಶವೇನು ಎಂದು ಈಗಾದರೂ ಹೇಳಿಬಿಡಿ’ ಎಂದು ಬಬಿತಾ ಕುಟುಕಿದ್ದಾರೆ.
ಸಂಸತ್ಗೆ ಮುತ್ತಿಗೆ ನಿರ್ಧಾರ ನಮ್ಮದಲ್ಲ
ನೂತನ ಸಂಸತ್ ಭವನಕ್ಕೆ ಮುತ್ತಿಗೆ ಹಾಕುವ ನಿರ್ಧಾರ ನಮ್ಮದಾಗಿರಲಿಲ್ಲ. ‘ಮಹಿಳಾ ಪಂಚಾಯತ್’ ನಡೆಸಲು ಉದ್ದೇಶಿಸಿದ್ದು ನಾವಲ್ಲ ಎಂದು ಸತ್ಯವರ್ತ್ ಸ್ಪಷ್ಟಪಡಿಸಿದ್ದಾರೆ. ‘ಮಹಿಳಾ ಸಮ್ಮಾನ್ ಮಹಾಪಂಚಾಯತ್ ನಡೆಸಲು ಖಾಪ್ ಪಂಚಾಯತ್(ಕೆಲ ಹಳ್ಳಿಗಳು ಸೇರಿ ರಚಿಸಿಕೊಂಡಿರುವ ಗುಂಪು) ಸದಸ್ಯರು ನಿರ್ಧರಿಸಿದ್ದರು. ನಾವು ಅವರ ನಿರ್ಧಾರದಂತೆ ನಡೆದಿದ್ದೇವೆ. ಆದರೆ ಇದು ಸಂಘರ್ಷಕ್ಕೆ ಕಾರಣವಾಯಿತು. ಅದು ನಮ್ಮನ್ನು ಸಂಪೂರ್ಣವಾಗಿ ಕುಗ್ಗಿಸಿತು’ ಎಂದು ಬೇಸರ ವ್ಯಕ್ತಪಡಿಸಿದರು.