ಜಂತರ್ ಮಂತರ್‌ನಲ್ಲಿ ಮುಂದುವರೆದ ಕುಸ್ತಿಪಟುಗಳ ಪ್ರತಿಭಟನೆ
ಹಲವು ಪಕ್ಷಗಳ ನಾಯಕರಿಂದ ಬೆಂಬಲ
ಬ್ರಿಜ್ ವಿರುದ್ಧ ಕೇಸ್‌ಗೆ ಸುಪ್ರೀಂ ಮೊರೆ
ನವದೆಹಲಿ(ಏ.26): ಭಾರತೀಯ ಕುಸ್ತಿ ಫೆಡರೇಶನ್(ಡಬ್ಲ್ಯುಎಫ್ಐ) ಮಾಜಿ ಅಧ್ಯಕ್ಷ ಬ್ರಿಜ್ಭೂಷಣ್ ವಿರುದ್ಧದ ಕುಸ್ತಿಪಟುಗಳ ಹೋರಾಟ ತೀವ್ರಗೊಂಡಿದ್ದು, ರಾಜಕೀಯ ಬಣ್ಣ ಪಡೆದುಕೊಂಡಿದೆ. ಪ್ರಕರಣ ಈಗಾಗಲೇ ಸುಪ್ರೀಂ ಕೋರ್ಚ್ ಮೆಟ್ಟಿಲೇರಿದ್ದು, ಈ ನಡುವೆ ಜಂತರ್ಮಂತರ್ನಲ್ಲಿ ಪ್ರತಿಭಟನೆ ನಡೆಸುತ್ತಿರುವ ಕುಸ್ತಿ ತಾರೆಗಳನ್ನು ಮಂಗಳವಾರ ಕೆಲ ರಾಜಕೀಯ ನಾಯಕರು ಭೇಟಿ ಮಾಡಿ ಬೆಂಬಲ ಸೂಚಿಸಿದ್ದಾರೆ.
ಹರ್ಯಾಣ ಮಾಜಿ ಸಿಎಂ ಭೂಪಿಂದರ್ ಸಿಂಗ್ ಹೂಡಾ, ಕಾಂಗ್ರೆಸ್ ನಾಯಕ ಉದಿತ್ ರಾಜ್, ಸಿಪಿಐ ನಾಯಕಿ ಬೃಂದಾ ಕಾರಟ್, ಕೃಷಿ ಕಾಯ್ದೆಗಳನ್ನು ವಿರೋಧಿಸಿ ಬೃಹತ್ ಪ್ರತಿಭಟನೆ ಆಯೋಜಿಸಿದ್ದ ಭಾರತೀಯ ಕಿಸಾನ್ ಯೂನಿಯನ್ನ ಪ್ರತಿನಿಧಿಗಳು, ಕಾಂಗ್ರೆಸ್, ಆಪ್‌ನ ಕೆಲ ನಾಯಕರು ಕುಸ್ತಿಪಟುಗಳನ್ನು ಭೇಟಿಯಾಗಿ ಕೆಲ ಕಾಲ ಧರಣಿ ಸ್ಥಳದಲ್ಲಿ ಕಾಣಿಸಿಕೊಂಡರು. ಜೊತೆಗೆ ಭೋಪಾಲ್ನ ಕೆಲ ಮಕ್ಕಳು ತಾವೂ ಕೂಡಿಟ್ಟಿದ್ದ ಹಣವನ್ನು ಕುಸ್ತಿಪಟುಗಳಿಗೆ ನೀಡಿದ್ದಾರೆ. ಜನವರಿಯಲ್ಲಿ ಬ್ರಿಜ್ ವಿರುದ್ಧ ಗಂಭೀರ ಆರೋಪಗಳನ್ನು ಹೊರಿಸಿ ಹೋರಾಟ ಆರಂಭಿಸಿದಾಗ ರಾಜಕೀಯ ನಾಯಕರನ್ನು ದೂರವಿಟ್ಟಿದ್ದ ಕುಸ್ತಿಪಟುಗಳು ಸೋಮವಾರ ರಾಜಕೀಯ ಪಕ್ಷಗಳು ತಮ್ಮ ಹೋರಾಟ ಬೆಂಬಲಿಸುವಂತೆ ಕೋರಿದ್ದರು.
ಐಪಿಎಲ್ ಪಂದ್ಯದಿಂದ 2 ಕೋಟಿ ರೂ ಜಾಕ್‌ಪಾಟ್, ರಾತ್ರೋರಾತ್ರಿ ಕೋಟ್ಯಾಧೀಶನಾದ ಕೂಲಿ ಕಾರ್ಮಿಕ!
ಬಂಧನಕ್ಕೆ ಪಟ್ಟು: ಬ್ರಿಜ್ ವಿರುದ್ಧ ಕೇವಲ ಎಫ್ಐಆರ್ ದಾಖಲಿಸಿದರೆ ಸಾಲದು, ಅವರನ್ನು ಬಂಧಿಸಬೇಕು. ಅಲ್ಲಿ ತನಕ ತಮ್ಮ ಹೋರಾಟ ಮುಂದುವರಿಯಲಿದೆ ಎಂದು ಕುಸ್ತಿಪಟುಗಳು ಎಚ್ಚರಿಸಿದ್ದಾರೆ. ‘ದೂರು ನೀಡಿದವರ ಹೆಸರನ್ನು ಡೆಲ್ಲಿ ಪೊಲೀಸರು ಬ್ರಿಜ್‌ಗೆ ನೀಡಿದ್ದಾರೆ. ದೂರುದಾರನ್ನು ಬೆದರಿಸಲಾಗುತ್ತಿದೆ. ಆದರೆ ಹೋರಾಟ ಕೈಬಿಡಲ್ಲ’ ಎಂದಿದ್ದಾರೆ.
ಸುಪ್ರೀಂಗೆ ಅರ್ಜಿ: ನಾಡಿದ್ದು ವಿಚಾರಣೆ
ಈಗಾಗಲೇ ಪೊಲೀಸರಿಗೆ ದೂರು ನೀಡಲಾಗಿದ್ದರೂ ಎಫ್ಐಆರ್ ದಾಖಲಾಗದ ಹಿನ್ನೆಲೆಯಲ್ಲಿ ಮಂಗಳವಾರ 7 ಕುಸ್ತಿಪಟುಗಳು ಸುಪ್ರೀಂ ಕೋರ್ಚ್‌ಗೆ ಅರ್ಜಿ ಸಲ್ಲಿಸಿದ್ದಾರೆ. ಮಂಗಳವಾರ ಅರ್ಜಿದಾರರ ಪರ ವಾದಿಸಿದ ಹಿರಿಯ ವಕೀಲ ಕಪಿಲ್ ಸಿಬಲ್, ಬ್ರಿಜ್ಭೂಷಣ್ ವಿರುದ್ಧ ಪೊಲೀಸರು ಕೂಡಾ ಯಾವುದೇ ಕ್ರಮಕೈಗೊಳ್ಳುತ್ತಿಲ್ಲ ಎಂದರು. ಇದಕ್ಕೆ ಪ್ರತಿಕ್ರಿಯಿಸಿದ ಮುಖ್ಯ ನ್ಯಾಯಾಧೀಶ ಡಿ.ವೈ.ಚಂದ್ರಚೂಡ್, ಭಾರತವನ್ನು ಪ್ರತಿನಿಧಿಸಿದ ಅಥ್ಲೀಟ್ಗಳು ಈಗ ಹೋರಾಟಕ್ಕಿಳಿದಿದ್ದಾರೆ. ಇದೊಂದು ಗಂಭೀರ ಪ್ರಕರಣ ಎಂದು ಶುಕ್ರವಾರ ಈ ಬಗ್ಗೆ ವಿಚಾರಣೆ ನಡೆಸುವುದಾಗಿ ತಿಳಿಸಿದರು. ಬಳಿಕ ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯಾಲಯ, ಡೆಲ್ಲಿ ಪೊಲೀಸರಿಗೆ ನೋಟಿಸ್ ಜಾರಿ ಮಾಡಿತು.
ಮೋದಿ ಏಕೆ ಮೌನ: ಭಜರಂಗ್ ಆಕ್ರೋಶ
ಇನ್ನು ಪ್ರಕರಣದ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಯಾವುದೇ ಪ್ರತಿಕ್ರಿಯೆ ನೀಡದಕ್ಕೆ ಕುಸ್ತಿಪಟು ಭಜರಂಗ್ ಪೂನಿಯಾ ಆಕ್ರೋಶ ವ್ಯಕ್ತಪಡಿಸಿದ್ದು, ಅಥ್ಲೀಟ್ಗಳು ಪದಕ ಗೆದ್ದಾಗ ನೀವು ಅವರ ಜೊತೆಗಿರುತ್ತೀರಿ. ಆದರೆ ಈಗ ಏಕೆ ಮೌನವಾಗಿದ್ದೀರಿ ಎಂದು ಪ್ರಶ್ನಿಸಿದ್ದಾರೆ. ಅಲ್ಲದೇ, ಈಗ ಕ್ರೀಡಾ ಸಚಿವಾಲಯ, ಭಾರತೀಯ ಒಲಿಂಪಿಕ್ಸ್ ಸಂಸ್ಥೆ ಮೇಲೆ ವಿಶ್ವಾದ ಕಳೆದುಕೊಂಡಿದ್ದೇವೆ. ಆದರೆ ನ್ಯಾಯಾಂಗದ ಮೇಲೆ ನಂಬಿಕೆ ಇದೆ ಎಂದಿದ್ದಾರೆ.
ಡೆಲ್ಲಿ ಪೊಲೀಸರಿಗೆ ಸುಪ್ರೀಂ ನೋಟಿಸ್
ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರಿಗೆ ದೂರು ನೀಡಿದ್ದರೂ ಈವರೆಗೆ ಎಫ್ಐಆರ್ ದಾಖಲಾಗಿಲ್ಲ. ಹೀಗಾಗಿ ಸುಪ್ರೀಂಕೋರ್ಚ್ ಮಧ್ಯಪ್ರವೇಶಿಸಿದ್ದು, ಡೆಲ್ಲಿ ಪೊಲೀಸರಿಗೆ ನೋಟಿಸ್ ನೀಡಿದೆ. ಮಂಗಳವಾರ 7 ಕುಸ್ತಿಪಟುಗಳು ಸುಪ್ರೀಂಗೆ ಅರ್ಜಿ ಸಲ್ಲಿಸಿದ್ದರು. ಅವರ ಪರ ವಾದಿಸಿದ ಹಿರಿಯ ವಕೀಲ ಕಪಿಲ್ ಸಿಬಲ್, ಬ್ರಿಜ್ಭೂಷಣ್ ವಿರುದ್ಧ ಪೊಲೀಸರು ಕೂಡಾ ಯಾವುದೇ ಕ್ರಮಕೈಗೊಳ್ಳುತ್ತಿಲ್ಲ ಎಂದರು. ಇದಕ್ಕೆ ಪ್ರತಿಕ್ರಿಯಿಸಿದ ಮುಖ್ಯ ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್, ಭಾರತವನ್ನು ಪ್ರತಿನಿಧಿಸಿದ ಅಥ್ಲೀಟ್ಗಳು ಈಗ ಹೋರಾಟಕ್ಕಿಳಿದಿದ್ದಾರೆ. ಇದೊಂದು ಗಂಭೀರ ಪ್ರಕರಣ ಎಂದು ಶುಕ್ರವಾರ ಈ ಬಗ್ಗೆ ವಿಚಾರಣೆ ನಡೆಸುವುದಾಗಿ ತಿಳಿಸಿದರು.