ಜಂತರ್ ಮಂತರ್‌ನಲ್ಲಿ ಹೈಡ್ರಾಮಾ
ಬ್ರಿಜ್‌ಭೂಷಣ್ ಬಂಧನಕ್ಕೆ ಪಟ್ಟು
ಸಂಜೆ ಮಹಿಳಾ ರೆಸ್ಲರ್‌ಗಳ ಬಿಡುಗಡೆ
ನವದೆಹಲಿ(ಮೇ.29): ಲೈಂಗಿಕ ಕಿರುಕುಳ ಪ್ರಕರಣದಲ್ಲಿ 2 ಎಫ್ಐಆರ್ ದಾಖಲಾದರೂ ಭಾರತೀಯ ಕುಸ್ತಿ ಫೆಡರೇಶನ್ (ಡಬ್ಲ್ಯುಎಫ್ಐ) ಅಧ್ಯಕ್ಷ ಬ್ರಿಜ್‌ಭೂಷಣ್ ಸಿಂಗ್‌ರನ್ನು ಇನ್ನೂ ಬಂಧಿಸದಿರುವುದನ್ನು ಪ್ರಶ್ನಿಸಿ ಭಾನುವಾರ ನೂತನ ಸಂಸತ್ ಭವನಕ್ಕೆ ಮುತ್ತಿಗೆ ಹಾಕುವ ಕುಸ್ತಿಪಟುಗಳ ಪ್ರಯತ್ನ ಭಾರೀ ಹೈಡ್ರಾಮಾಕ್ಕೆ ಕಾರಣವಾಗಿದೆ. ಪ್ರಧಾನಿ ನರೇಂದ್ರ ಮೋದಿ ನೂತನ ಸಂಸತ್ ಭವನ ಉದ್ಘಾಟಿಸಿದ ದಿನವೇ ಒಲಿಂಪಿಕ್ ಸಾಧಕರನ್ನು ನಡು ರಸ್ತೆಯಲ್ಲೇ ಬಂಧಿಸಿದ ಘಟನೆಗೆ ತೀವ್ರ ಆಕ್ರೋಶ ಕೂಡಾ ವ್ಯಕ್ತವಾಗಿದೆ.
ಬ್ರಿಜ್‌ಭೂಷಣ್ ಬಂಧನಕ್ಕಾಗಿ ಪಾರ್ಲಿಮೆಂಟ್ ಮುಂಭಾಗ ‘ಮಹಾ ಪಂಚಾಯತ್’ ಹೆಸರಿನಲ್ಲಿ ಬೃಹತ್ ಹೋರಾಟ ಸಂಘಟಿಸಲು ನಿರ್ಧರಿಸಿ ಭಾನುವಾರ ಮುಂಜಾನೆ ಜಂತರ್ ಮಂತರ್ನಿಂದ ಮೆರವಣಿಗೆ ಆರಂಭಿಸಿದ ಕುಸ್ತಿಪಟುಗಳನ್ನು ಮಾರ್ಗ ಮಧ್ಯೆಯೇ ಪೊಲೀಸರು ತಡೆದಿದ್ದಾರೆ. ಈ ವೇಳೆ ಕುಸ್ತಿಪಟುಗಳು ಹಾಗೂ ಪೊಲೀಸರ ನಡುವೆ ಸಂಘರ್ಷ ಏರ್ಪಟ್ಟಿದ್ದು, ಭಜರಂಗ್ ಪೂನಿಯಾ, ಸಾಕ್ಷಿ ಮಲಿಕ್, ವಿನೇಶ್ ಫೋಗಾಟ್ ಸೇರಿದಂತೆ ಹಲವರನ್ನು ಪೊಲೀಸರು ತಮ್ಮ ವಾಹನಗಳಲ್ಲಿ ಕರೆದೊಯ್ದಿದ್ದಾರೆ. ಬಳಿಕ ಜಂತರ್ ಮಂತರ್ನ ಪ್ರತಿಭಟನಾ ಸ್ಥಳವನ್ನೂ ಪೊಲೀಸರು ತೆರವುಗೊಳಿಸಿದ್ದು, ಅಲ್ಲಿದ್ದ ಬೆಡ್, ಕೂಲರ್ ಸೇರಿದಂತೆ ಇತರ ವಸ್ತುಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಸಂಜೆಯ ವೇಳೆಗೆ ಮಹಿಳಾ ಕುಸ್ತಿಪಟುಗಳನ್ನು ಪೊಲೀಸರು ಬಿಡುಗಡೆ ಮಾಡಿದ್ದಾರೆ.
undefined
ಬಂಧನಕ್ಕೆ ತೀವ್ರ ಖಂಡನೆ:
ಪ್ರತಿಭಟನಾನಿರತರು ರಸ್ತೆಗೆ ಬಿದ್ದಿರುವ, ಅವರನ್ನು ಪೊಲೀಸರು ಎಳೆದಾಡುತ್ತಿರುವ ಫೋಟೋ, ವಿಡಿಯೋಗಳು ಭಾರೀ ವೈರಲ್ ಆಗಿವೆ. ಅದಕ್ಕೆ ವಿವಿಧ ರಾಜಕೀಯ ಪಕ್ಷಗಳ ನಾಯಕರು ತೀವ್ರ ಖಂಡನೆ ವ್ಯಕ್ತಪಡಿಸಿದ್ದಾರೆ. ‘ಪಟ್ಟಾಭಿಷೇಕ ಮುಗಿದಿದೆ. ದುರಹಂಕಾರಿ ರಾಜ ಪ್ರಜೆಗಳ ಧ್ವನಿ ಅಡಗಿಸುತ್ತಿದ್ದಾನೆ’ ಎಂದು ರಾಹುಲ್ ಗಾಂಧಿ ಟ್ವೀಟ್ ಮಾಡಿದ್ದು, ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಕೂಡಾ ಕಿಡಿಕಾರಿದ್ದಾರೆ. ಒಲಿಂಪಿಕ್ಸ್ ಚಾಂಪಿಯನ್ ನೀರಜ್ ಚೋಪ್ರಾ, ‘ಘಟನೆಯಿಂದ ನೋವಾಗಿದೆ. ಕುಸ್ತಿಪಟುಗಳನ್ನು ಚೆನ್ನಾಗಿ ನಡೆಸಿಕೊಳ್ಳಬಹುದಿತ್ತು’ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ದೇಶ ವಿರೋಧಿ ಕೃತ್ಯ:
ಘಟನೆ ಬಗ್ಗೆ ಪ್ರತಿಕ್ರಿಯಿಸಿರುವ ದೆಹಲಿ ಪೊಲೀಸ್ ಅಧಿಕಾರಿ ದೀಪೇಂದ್ರ ಪಾಠಕ್, ‘ಉದ್ಘಾಟನೆ ದಿನವೇ ಸಂಸತ್ ಭವನಕ್ಕೆ ಮಾಚ್‌ರ್ ನಡೆಸುವುದು ದೇಶ ವಿರೋಧಿ ಕೃತ್ಯ. ಹೀಗಾಗಿ ಕುಸ್ತಿಪಟುಗಳ ಮೆರವಣಿಗೆಗೆ ಅವಕಾಶವಿಲ್ಲ. ನಿಯಮ ಉಲ್ಲಂಘಿಸಿದ್ದಕ್ಕೆ ಅವರನ್ನು ಬಂಧಿಸಿದ್ದೇವೆ. ತನಿಖೆ ನಡೆಸಿ ಕ್ರಮ ಕೈಗೊಳ್ಳುತ್ತೇವೆ’ ಎಂದಿದ್ದಾರೆ.
ನಾವು ಮಾಡಿದ ತಪ್ಪೇನು?:
ಪೊಲೀಸರು ತಮ್ಮನ್ನು ಬಂಧಿಸಿದ್ದಕ್ಕೆ ಕಿಡಿಕಾರಿದ ವಿನೇಶ್, ‘ನವ ಭಾರತಕ್ಕೆ ಸ್ವಾಗತ. ಇಲ್ಲಿ ಅಪರಾಧಿಗಳು ಮುಕ್ತವಾಗಿ ಓಡಾಡುತ್ತಿದ್ದಾರೆ. ದೇಶಕ್ಕಾಗಿ ಪದಕ ಗೆದ್ದವರನ್ನು ನ್ಯಾಯ ಕೇಳಿದ್ದಕ್ಕೆ ಬಂಧಿಸಿ ಜೈಲಲ್ಲಿ ಇಡುತ್ತಿದ್ದಾರೆ. ಯಾವುದಾದರೂ ಸರ್ಕಾರ ಚಾಂಪಿಯನ್ ಅಥ್ಲೀಟ್ಗಳ ಜೊತೆ ಈ ರೀತಿ ವರ್ತಿಸಿದೆಯೇ? ನಾವು ಮಾಡಿದ ಅಪರಾಧವಾದರೂ ಏನು? ಲೈಂಗಿಕ ಕಿರುಕುಳ ಆರೋಪಿ ಬ್ರಿಜ್‌ಭೂಷಣ್ ಪಾರ್ಲಿಮೆಂಟ್ನಲ್ಲಿದ್ದರೆ, ನಮ್ಮನ್ನು ರಸ್ತೆಯಲ್ಲಿ ಎಳೆದೊಯ್ಯುತ್ತಿದ್ದಾರೆ. ವಿಶ್ವವೇ ನಮ್ಮನ್ನು ನೋಡುತ್ತಿದೆ. ಇದು ಭಾರತೀಯ ಕ್ರೀಡೆಯ ಕರಾಳ ದಿನ’ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅಲ್ಲದೆ ಸರ್ಕಾರದ ಇಂಥ ಕ್ರಮದ ಹೊರತಾಗಿಯೂ ತಾವು ಜಂತರ್ ಮಂತರ್‌ನಲ್ಲೇ ಪ್ರತಿಭಟನೆ ಮುಂದುವರೆಸುವುದಾಗಿ ಘೋಷಿಸಿದ್ದಾರೆ.