ವಿಶ್ವ ಕುಸ್ತಿ ಚಾಂಪಿಯನ್‌ಶಿಪ್‌ನಲ್ಲಿ ಚಿನ್ನ ಗೆಲ್ಲುವ ಅವಕಾಶವನ್ನು ದೀಪಕ್ ಪೂನಿಯಾ ಕಳೆದುಕೊಂಡಿದ್ದಾರೆ. ಗಾಯದ ಸಮಸ್ಯೆಯಿಂದಾಗಿ ಫೈನಲ್‌ನಲ್ಲಿ ಸ್ಪರ್ಧಿಸದಿರಲು ತೀರ್ಮಾನಿಸಿದ್ದರಿಂದ ಬೆಳ್ಳಿ ಪದಕಕ್ಕೆ ತೃಪ್ತಿಪಡಬೇಕಾಯಿತು. ಈ ಕುರಿತಾದ ವರದಿ ಇಲ್ಲಿದೆ ನೋಡಿ...
ಕಜಕಸ್ತಾನ(ಸೆ.23): 2019ರ ವಿಶ್ವ ಕುಸ್ತಿ ಚಾಂಪಿಯನ್‌ಶಿಪ್‌ನಲ್ಲಿ ಫೈನಲ್ ಪ್ರವೇಶಿಸಿದ ಭಾರತದ ಏಕೈಕ ಕುಸ್ತಿಪಟು ಎನ್ನುವ ಹಿರಿಮೆಗೆ ಪಾತ್ರರಾಗಿದ್ದ ದೀಪಕ್ ಪೂನಿಯಾ, ಗಾಯದ ಕಾರಣ ಫೈನಲ್‌ನಲ್ಲಿ ಸ್ಪರ್ಧಿಸದಿರಲು ನಿರ್ಧರಿಸಿದರು. ಇದರಿಂದಾಗಿ ಅವರು ಬೆಳ್ಳಿ ಪದಕಕ್ಕೆ ತೃಪ್ತಿಪಡಬೇಕಾಯಿತು.
ಸೆಮಿಫೈನಲ್ ಪಂದ್ಯದ ವೇಳೆ ಮೊಣಕಾಲಿನ ಗಾಯಕ್ಕೆ ತುತ್ತಾಗಿದ್ದ ದೀಪಕ್, ಕೈ ಹೆಬ್ಬೆರಳಿನ ನೋವಿನಿಂದಲೂ ಬಳಲುತ್ತಿದ್ದರು ಎಂದು ತಂಡದ ವೈದ್ಯರು ತಿಳಿಸಿದ್ದಾರೆ. ಫೈನಲ್‌ನಲ್ಲಿ ಹಾಲಿ ಒಲಿಂಪಿಕ್ ಚಾಂಪಿಯನ್ ಇರಾನ್‌ನ ಹಸ್ಸಾನ್ ಯಾಜ್ದಾನಿ ವಿರುದ್ಧ ದೀಪಕ್ ಸೆಣಸಬೇಕಿತ್ತು.
ವಿಶ್ವ ಕುಸ್ತಿ ಚಾಂಪಿಯನ್‌ಶಿಪ್: ಫೈನಲ್‌ಗೇರಿ ಇತಿಹಾಸ ಬರೆದ ದೀಪಕ್!
ಚಿನ್ನ ಗೆಲ್ಲುವ ಅವಕಾಶದಿಂದ ದೀಪಕ್ ವಂಚಿತಗೊಂಡ ಕಾರಣ, ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಚಿನ್ನ ಗೆದ್ದ ಭಾರತದ ಏಕೈಕ ಕುಸ್ತಿಪಟುವಾಗಿ ಸುಶೀಲ್ ಕುಮಾರ್ ಉಳಿದುಕೊಂಡಿದ್ದಾರೆ. 2010ರ ಮಾಸ್ಕೋ ವಿಶ್ವ ಚಾಂಪಿಯನ್ಶಿಪ್ನ 66 ಕೆ.ಜಿ ವಿಭಾಗದಲ್ಲಿ ಸುಶೀಲ್ ಚಿನ್ನದ ಪದಕಕ್ಕೆ ಕೊರಳೊಡ್ಡಿದ್ದರು.
ರಾಹುಲ್ ಅವಾರೆಗೆ ಕಂಚು
ಭಾರತದ ರಾಹುಲ್ ಅವಾರೆ ಒಲಿಂಪಿಕ್ ವಿಭಾಗವಲ್ಲದ 61 ಕೆ.ಜಿ ಸ್ಪರ್ಧೆಯಲ್ಲಿ ಕಂಚಿನ ಪದಕ ಗಳಿಸಿದರು. ಭಾನುವಾರ ನಡೆದ ಪಂದ್ಯದಲ್ಲಿ 2017ರ ಪ್ಯಾನ್ ಅಮೆರಿಕನ್ ಚಾಂಪಿಯನ್ ಟೈಲರ್ ಲೀ ಗ್ರಾಫ್‌ರನ್ನು ಮಣಿಸಿದರು. 2018ರ ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ರಾಹುಲ್ ಚಿನ್ನ ಜಯಿಸಿದ್ದರು.
ಭಾರತ ಒಟ್ಟು 5 ಪದಕ ಜಯಿಸುವ ಮೂಲಕ, ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಶ್ರೇಷ್ಠ ಸಾಧನೆ ಮಾಡಿತು. 2013ರ ಆವೃತ್ತಿಯಲ್ಲಿ 3 ಪದಕ ಗೆದ್ದಿದ್ದು ಭಾರತದ ಈ ವರೆಗಿನ ಶ್ರೇಷ್ಠ ಸಾಧನೆಯಾಗಿತ್ತು.