ವಿಶ್ವ ಕುಸ್ತಿ ಚಾಂಪಿಯನ್‌ಶಿಪ್‌ನಲ್ಲಿ ಭಾರತದ ಕುಸ್ತಿಪಟುಗಳಾದ ಭಜರಂಗ್ ಪೂನಿಯಾ ಹಾಗೂ ರವಿ ದಹಿಯಾ ಕಂಚಿನ ಪದಕ ಜಯಿಸಿದ್ದಾರೆ. ಆದರೆ ಒಲಿಂಪಿಕ್ ಪದಕ ವಿಜೇತ ಸುಶೀಲ್ ಕುಮಾರ್ ಆಘಾತಕಾರಿ ಸೋಲು ಕಂಡಿದ್ದಾರೆ. ಈ ಕುರಿತಾದ ವರದಿ ಇಲ್ಲಿದೆ ನೋಡಿ...
ಕಜಕಸ್ತಾನ(ಸೆ.21): ವಿಶ್ವ ಕುಸ್ತಿ ಚಾಂಪಿಯನ್‌ಶಿಪ್‌ನಲ್ಲಿ ಭಾರತದ ತಾರಾ ಕುಸ್ತಿಪಟುಗಳಾದ ಭಜರಂಗ್ ಪೂನಿಯಾ ಹಾಗೂ ರವಿ ದಹಿಯಾ ಕಂಚಿನ ಪದಕ ಜಯಿಸಿದ್ದಾರೆ.
ವಿಶ್ವ ಬಾಕ್ಸಿಂಗ್ ಚಾಂಪಿಯನ್‌ಶಿಪ್ ಫೈನಲ್; ದಾಖಲೆ ಬರೆದ ಅಮಿತ್ ಪಂಘಲ್!
ಪುರುಷರ 65 ಕೆ.ಜಿ ಕಂಚಿನ ಪದಕದ ಪಂದ್ಯದಲ್ಲಿ ಮಂಗೋಲಿಯಾದ ಟುಮುರ್ ಒಚಿರ್ ವಿರುದ್ಧ ಭಜರಂಗ್ 8-7ರಲ್ಲಿ ಮಣಿಸಿ ಪದಕ ಗೆದ್ದರು. ಆರಂಭದಲ್ಲಿ 0-6 ರಿಂದ ಹಿಂದೆ ಬಿದ್ದಿದ್ದ ಭಜರಂಗ್, ಬಳಿಕ ಅದ್ಭುತ ಪ್ರದರ್ಶನ ತೋರುವ ಮೂಲಕ ಕಂಚಿನ ಪದಕ ಜಯಿಸಿದರು. ಇದು ಭಜರಂಗ್‌ಗೆ ಸತತ 2ನೇ ಪದಕವಾಗಿದೆ. ಕಳೆದ ಆವೃತ್ತಿಯಲ್ಲಿ ಬೆಳ್ಳಿ ಪದಕ ಗೆದ್ದಿದ್ದರು. ಒಟ್ಟಾರೆ ಭಜರಂಗ್, ವಿಶ್ವ ಕೂಟದಲ್ಲಿ 3ನೇ ಪದಕ ಗೆದ್ದಂತಾಗಿದೆ.
ವಿಶ್ವ ಕುಸ್ತಿ ಚಾಂಪಿಯನ್‌ಶಿಪ್ 2020ರ ಒಲಿಂಪಿಕ್ಸ್‌ಗೆ ಭಜರಂಗ್, ರವಿ
57 ಕೆ.ಜಿ ವಿಭಾಗದ ಮತ್ತೊಂದು ಕಂಚಿನ ಪದಕದ ಪಂದ್ಯದಲ್ಲಿ ರವಿ ದಹಿಯಾ, ಹಾಲಿ ಏಷ್ಯನ್ ಚಾಂಪಿಯನ್ ಇರಾನ್ನ ರೇಜಾ ಅಟ್ರಿ ವಿರುದ್ಧ 6-3ರಲ್ಲಿ ಜಯಿಸಿದರು. ತಮ್ಮ ಚೊಚ್ಚಲ ವಿಶ್ವ ಕುಸ್ತಿಯಲ್ಲಿ ರವಿ ಪದಕ ಗೆದ್ದರು.
ಸುಶೀಲ್ಗೆ ದೊಡ್ಡ ಆಘಾತ!
2 ಬಾರಿ ಒಲಿಂಪಿಕ್ ಪದಕ ವಿಜೇತ ಭಾರತದ ತಾರಾ ಕುಸ್ತಿಪಟು ಸುಶೀಲ್ ಕುಮಾರ್, ವಿಶ್ವ ಕುಸ್ತಿಯ ಅರ್ಹತಾ ಸುತ್ತಿನಲ್ಲಿ ಆಘಾತ ಅನುಭವಿಸಿದರು. 8 ವರ್ಷಗಳ ಬಳಿಕ ವಿಶ್ವ ಕುಸ್ತಿ ಚಾಂಪಿಯನ್ಶಿಪ್ಗೆ ಮರಳಿದ ಸುಶೀಲ್ 74 ಕೆ.ಜಿ ವಿಭಾಗದಲ್ಲಿ ಸ್ಪರ್ಧಿಸಿದ್ದರು. ಶುಕ್ರವಾರ ನಡೆದ ಮೊದಲ ಸುತ್ತಿನಲ್ಲೇ ಸುಶೀಲ್ ಸೋಲುಂಡು ಆಘಾತಕ್ಕೊಳಗಾದರು. ಅಜರ್ಬೈಜಾನ್ ಕುಸ್ತಿಪಟು ಖಾಡ್ಚಿಮುರಾದ್ ಘಾಡ್ಚಿಯೇವ್ ವಿರುದ್ಧ ಸುಶೀಲ್ 9-11ರಲ್ಲಿ ಸೋಲುಂಡರು. ಪಂದ್ಯಾವಳಿಯಿಂದ ಹೊರಬಿದ್ದ ಸುಶೀಲ್ ಟೋಕಿಯೋ ಒಲಿಂಪಿಕ್ಸ್ ಅರ್ಹತೆ ಸಂಪಾದಿಸುವಲ್ಲಿ ವೈಫಲ್ಯ ಅನುಭವಿಸಿದರು.