ವಿಶ್ವಕಪ್ ಟೂರ್ನಿ ಅಭ್ಯಾಸ ಪಂದ್ಯ ಟೀಂ ಇಂಡಿಯಾ ಅಭಿಮಾನಿಗಳಿಗೆ ನಿರಾಸೆ ತಂದಿದೆ. ನ್ಯೂಜಿಲೆಂಡ್ ವಿರುದ್ಧ ಮೊದಲ ಅಭ್ಯಾಸ ಪಂದ್ಯ ಆಡಿದ ಕೊಹ್ಲಿ ಬಾಯ್ಸ್ ನಿರೀಕ್ಷಿತ ಪ್ರದರ್ಶನ ನೀಡಲು ವಿಫಲರಾಗಿದ್ದಾರೆ. ಇಲ್ಲಿದೆ ಪಂದ್ಯದ ಹೈಲೈಟ್ಸ್
ಓವಲ್(ಮೇ.25): ವಿಶ್ವಕಪ್ ಟೂರ್ನಿಯ ಮೊದಲ ಅಭ್ಯಾಸ ಪಂದ್ಯದಲ್ಲಿ ಟೀಂ ಇಂಡಿಯಾ ಮುಗ್ಗರಿಸಿದೆ. ಈ ಮೂಲಕ ವಿಶ್ವಕಪ್ ಅಭಿಯಾನವನ್ನು ಸೋಲಿನೊಂದಿಗೆ ಆರಂಭಿಸಿದೆ. ನ್ಯೂಜಿಲೆಂಡ್ ವಿರುದ್ಧ ನಡೆದ ಪ್ರಾಕ್ಟೀಸ್ ಮ್ಯಾಚ್‌ನಲ್ಲಿ ಕಳಪೆ ಬ್ಯಾಟಿಂಗ್ ಪ್ರದರ್ಶನ ನೀಡಿದ ಕೊಹ್ಲಿ ಬಾಯ್ಸ್ ಸೋಲೊಪ್ಪಿಕೊಳ್ಳಬೇಕಾಯಿತು.
ಗೆಲುವಿಗೆ 180 ರನ್ ಸುಲಭ ಟಾರ್ಗೆಟ್ ಪಡೆದ ನ್ಯೂಜಿಲೆಂಡ್ ಯಾವ ಹಂತದಲ್ಲೂ ಒತ್ತಡಕ್ಕೆ ಸಿಲುಕಲಿಲ್ಲ. ಕಡಿಮೆ ಮೊತ್ತದಲ್ಲೂ ಟೀಂ ಇಂಡಿಯಾ ಬೌಲರ್‌ಗಳು ಉತ್ತಮ ಪ್ರದರ್ಶನ ನೀಡಿದರು. ಆದರೆ ಡಿಫೆಂಡ್ ಮಾಡಿಕೊಳ್ಳಲು ಸಾಧ್ಯವಾಗಿಲ್ಲ. ಆರಂಭದಲ್ಲಿ ಕೊಲಿನ್ ಮುನ್ರೋ ವಿಕೆಟ್ ಕಬಳಿಸಿ ಯಶಸ್ಸು ಸಾಧಿಸಿದ್ದರೂ, ಬಳಿಕ ಕಿವೀಸ್ ಆಟಗಾರರ ಜೊತೆಯಾಟ ಭಾರತಕ್ಕೆ ಮುಳುವಾಯಿತು.
ಮಾರ್ಟಿನ್ ಗಪ್ಟಿಲ್ 22, ನಾಯಕ ಕೇನ್ ವಿಲಿಯಮ್ಸ್ 67, ರಾಸ್ ಟೇಲರ್ 71 ರನ್ ಸಿಡಿಸಿದರು. ಹೆನ್ರಿ ನಿಕೋಲಸ್ ಅಜೇಯ 15 ರನ್ ಸಿಡಿಸೋ ಮೂಲಕ ನ್ಯೂಜಿಲೆಂಡ್ 37.1 ಓವರ್‌ಗಳಲ್ಲಿ 4 ವಿಕೆಟ್ ಕಳೆದುಕೊಂಡು ಗೆಲುವು ಸಾಧಿಸಿತು. ಭರ್ಜರಿ 6 ವಿಕೆಟ್ ಗೆಲುವು ಸಾಧಿಸಿ ನ್ಯೂಜಿಲೆಂಡ್ ಅಭ್ಯಾಸ ಪಂದ್ಯದಲ್ಲಿ ಶುಭಾರಂಭ ಮಾಡಿದೆ.