ವಿಶ್ವಕಪ್ 2019: ಟೀಂ ಇಂಡಿಯಾ ಮುಂದಿರುವ 3 ಚಾಲೆಂಜ್!

By Web DeskFirst Published Feb 2, 2019, 5:57 PM IST
Highlights

2019ರ ವಿಶ್ವಕಪ್ ಟೂರ್ನಿಗೂ ಮುನ್ನ ಟೀಂ ಇಂಡಿಯಾಗೆ 3 ಸವಾಲುಗಳು ಎದುರಾಗಿದೆ. ಪ್ರತಿಷ್ಠಿತ ಟೂರ್ನಿ ಗೆಲುವಿನ ವಿಶ್ವಾಸದಲ್ಲಿರುವ ಕೊಹ್ಲಿ ಬಾಯ್ಸ್ ಮುಂದಿರುವ ಸವಾಲುಗಳೇನು? ಇಲ್ಲಿದೆ ವಿವರ.

ಬೆಂಗಳೂರು(ಫೆ.02): ವಿಶ್ವದ ಬಲಿಷ್ಠ ತಂಡ ಎಂದು ಗುರುತಿಸಿಕೊಂಡಿರುವ ಟೀಂ ಇಂಡಿಯಾ 2019ರ ವಿಶ್ವಕಪ್ ಗೆಲುವಿನ ವಿಶ್ವಾಸದಲ್ಲಿದೆ. ಕಳೆದೊಂದು ವರ್ಷದಲ್ಲಿ ಭಾರತ ಬಲಿಷ್ಠ ತಂಡಗಳನ್ನ ಬಗ್ಗು ಬಡಿದು ಸರಣಿ ವಶಪಡಿಸಿಕೊಂಡಿದೆ. ಸೌತ್ಆಫ್ರಿಕಾ, ಆಸ್ಟ್ರೇಲಿಯಾ, ನ್ಯೂಜಿಲೆಂಡ್ ವಿರುದ್ದದ ಏಕದಿನ ಸರಣಿ ಗೆದ್ದು ಇತಿಹಾಸ ರಚಿಸಿದೆ. ಆದರೆ ವಿಶ್ವಕಪ್ ಟೂರ್ನಿಗೂ ಮುನ್ನ ಟೀಂ ಇಂಡಿಯಾ ಮುಂದೆ 3 ಸವಾಲುಗಳಿವೆ.

ಇದನ್ನೂ ಓದಿ: ಐಪಿಎಲ್ ತಂಡದ ಆಟಗಾರರ ಒಟ್ಟು ವೇತನ-ಯಾವ ತಂಡಕ್ಕೆ ಮೊದಲ ಸ್ಥಾನ?

ಮಿಡ್ಲ್ ಆರ್ಡರ್ ಆಯ್ಕೆ
ಸದ್ಯ ಟೀಂ ಇಂಡಿಯಾದಲ್ಲಿ ಮಧ್ಯಮ ಕ್ರಮಾಂಕದಲ್ಲಿ ಹಲವಾರು ಆಯ್ಕೆಗಳಿವೆ. ಆದರೆ ಯಾರನ್ನೂ ಅಂತಿಮಗೊಳಿಸಬೇಕು ಅನ್ನೋ ಗೊಂದಲ ಮಾತ್ರ ಇನ್ನೂ ಪರಿಹಾರವಾಗಿಲ್ಲ. ಎಂ.ಎಸ್.ಧೋನಿಗೆ ಬ್ಯಾಕ್ ಅಪ್ ವಿಕೆಟ್ ಕೀಪರ್ ಆಗಿ ಮಧ್ಯಮ ಕ್ರಮಾಂಕಕ್ಕೆ ಆಯ್ಕೆ ನಡೆಯಲಿದೆ. ಹೀಗಾಗಿ ಸದ್ಯ ಒಂದು  ಸ್ಥಾನಕ್ಕೆ ರಿಷಬ್ ಪಂತ್, ಕೆಎಲ್ ರಾಹುಲ್, ಅಂಬಾಟಿ ರಾಯುಡು, ಕೇದಾರ್ ಜಾಧವ್, ದಿನೇಶ್ ಕಾರ್ತಿಕ್ ಪೈಪೋಟಿ ನಡೆಸುತ್ತಿದ್ದಾರೆ. ಹೀಗಾಗಿ ಇಲ್ಲಿ ಅತ್ಯುತ್ತಮ ಆಯ್ಕೆ ಮಾಡಬೇಕಾಗಿದೆ.

ಇದನ್ನೂ ಓದಿ: ವಿಶ್ವಕಪ್ 2019: ಸೆಮಿಫೈನಲ್‌ ಪ್ರವೇಶಿಸಬಲ್ಲ ಬಲಿಷ್ಠ 4 ತಂಡಗಳು ಯಾವುವು?

ಆಲ್ರೌಂಡರ್ ಗೊಂದಲ
2019ರ ವಿಶ್ವಕಪ್ ಇಂಗ್ಲೆಂಡ್‌ನಲ್ಲಿ ನಡೆಯಲಿದೆ. ಹೀಗಾಗಿ ಫಾಸ್ಟ್ ಆಲ್ರೌಂಡರ್ ಹೆಚ್ಚು ಉಪಯುಕ್ತ. ಆದರೆ ಇಂಗ್ಲೆಂಡ್ ನೆಲದಲ್ಲಿ ರವೀಂದ್ರ ಜಡೇಜಾ ಉತ್ತಮ ಪ್ರದರ್ಶನ ನೀಡಿದ್ದಾರೆ. ಇದೀಗ ಹಾರ್ದಿಕ್ ಪಾಂಡ್ಯ ಕೂಡ ಪೈಪೋಟಿ ನಡೆಸುತ್ತಿದ್ದಾರೆ. ಹೀಗಾಗಿ ಪ್ಲೇಯಿಂಗ್ ಇಲೆವೆನ್ ಆಯ್ಕೆಯಲ್ಲಿ ಸಾಕಷ್ಟು ಎಚ್ಚರ ವಹಿಸಬೇಕು.

ಇದನ್ನೂ ಓದಿ: ಟೂರ್ನಿ ಗೆಲ್ಲಲು ಆಸಿಸ್ ಅಂಡರ್ ಆರ್ಮ್ ಎಸೆತ - ವಿವಾದಕ್ಕೆ 38 ವರ್ಷ!

ನಾಲ್ಕನೇ ವೇಗಿ
ಟೀಂ ಇಂಡಿಯಾ ಅತ್ಯುತ್ತಮ ವೇಗದ ವಿಭಾಗ ಹೊಂದಿದೆ. ಜಸ್‌ಪ್ರೀತ್ ಬುಮ್ರಾ, ಭುವನೇಶ್ವರ್ ಕುಮಾರ್ ಹಾಗು ಮೊಹಮ್ಮದ್ ಶಮಿ ಟೀಂ ಇಂಡಿಯಾ ಫ್ರಂಟ್ ಲೈನ್ ವೇಗಿಗಳು. ನಾಲ್ಕನೇ ವೇಗಿಗಾಗಿ ಹಲವು ಪ್ರತಿಭೆಗಳು ಹೋರಾಟ ನಡೆಸುತ್ತಿದೆ. ಉಮೇಶ್ ಯಾದವ್, ಖಲೀಲ್ ಅಹಮ್ಮದ್, ದೀಪಕ್ ಚಹಾರ್, ಮೊಹಮ್ಮದ್ ಸಿರಾಜ್ ಸೇರಿದಂತೆ ಯುವ ವೇಗಿಗಳು ಪೈಪೋಟಿ ಆರಂಭಿಸಿದ್ದಾರೆ. ಹೀಗಾಗಿ ಈ ಮೂರು ಸವಾಲುಗಳನ್ನ ಭಾರತ ಯಶಸ್ವಿಯಾಗಿ ನಿರ್ವಹಿಸಬೇಕಿದೆ.

click me!