
ಬರ್ಲಿನ್(ಆ.06): ವಿಶ್ವ ಚಾಂಪಿಯನ್ ಪಟ್ಟಕ್ಕೇರಿದ ಅತಿಕಿರಿಯ ಆರ್ಚರಿ ಪಟು ಎನ್ನುವ ದಾಖಲೆಯನ್ನು ಭಾರತದ 17 ವರ್ಷದ ಅದಿತಿ ಸ್ವಾಮಿ ಬರೆದಿದ್ದಾರೆ. ಶನಿವಾರ ನಡೆದ ವಿಶ್ವ ಆರ್ಚರಿ ಚಾಂಪಿಯನ್‌ಶಿಪ್‌ನ ಮಹಿಳೆಯರ ಕಾಂಪೌಂಡ್ ವಿಭಾಗದ ಫೈನಲ್‌ನಲ್ಲಿ ಮೆಕ್ಸಿಕೋದ ಆಂಡ್ರೆಯಾ ಬೆಸ್ಸೆರಾ 149-147 ಅಂಕಗಳ ಅಂತರದಲ್ಲಿ ಗೆದ್ದರು. ಈ ಮೂಲಕ ವಿಶ್ವ ಚಾಂಪಿಯನ್‌ಶಿಪ್‌ನ ವೈಯುಕ್ತಿಕ ವಿಭಾಗದಲ್ಲಿ ಚಿನ್ನ ಗೆದ್ದ ದೇಶದ ಮೊದಲ ಆರ್ಚರಿ ಪಟು ಎನ್ನುವ ದಾಖಲೆಯನ್ನೂ ಮಹಾರಾಷ್ಟ್ರದ ಸತಾರಾ ಮೂಲದ ಅದಿರಿ ಬರೆದರು.
ಕ್ವಾರ್ಟರ್ ಫೈನಲ್‌ನಲ್ಲಿ ನೆದರ್‌ಲೆಂಡ್ಸ್‌ನ ಸಾನ್ನೆ ಡೆ ಲಾತ್ ವಿರುದ್ದ ಶೂಟ್ ಆಫ್‌ನಲ್ಲಿ ಗೆದ್ದಿದ್ದ ಅದಿತಿ, ಸೆಮಿಫೈನಲ್‌ನಲ್ಲಿ ಭಾರತದ ಜ್ಯೋತಿ ಸುರೇಖಾ ಅವರನ್ನು ಮಣಿಸಿದರು.ಜ್ಯೋತಿ ಮೂರನೇ ಸ್ಥಾನಕ್ಕಾಗಿ ನಡೆದ ಪಂದ್ಯದಲ್ಲಿ ಗೆದ್ದು ಕಂಚಿನ ಪದಕಕ್ಕೆ ತೃಪ್ತಿಪಟ್ಟುಕೊಂಡರು.
ಕಳೆದ ತಿಂಗಳಲ್ಲಷ್ಟೇ ನಡೆದ ಕಿರಿಯರ ಮಹಿಳಾ ವಿಭಾಗದಲ್ಲಿ ವಿಶ್ವ ಚಾಂಪಿಯನ್ ಆಗಿದ್ದ ಅದಿತಿ, ಶುಕ್ರವಾರ ಮಹಿಳೆಯರ ಕಾಂಪೌಂಡ್ ತಂಡ ವಿಭಾಗದಲ್ಲಿ ಜ್ಯೋತಿ, ಪರ್ನೀತ್ ಜೊತೆ ಸೇರಿ ಐತಿಹಾಸಿಕ ಚಿನ್ನ ಗೆದ್ದಿದ್ದರು.
ಓಜಸ್ ದಿಯೋತಲೆ ದಾಖಲೆ!
ಕಾಂಪೌಂಡ್ ವಿಭಾಗದ ವೈಯುಕ್ತಿಕ ಸ್ಪರ್ಧೆಯಲ್ಲಿ ಚಾಂಪಿಯನ್ ಆಗುವ ಮೂಲಕ 21 ವರ್ಷದ ಓಜಸ್ ದಿಯೋತಲೆ, ಚಿನ್ನ ಗೆದ್ದ ಭಾರತದ ಮೊದಲ ಪುರುಷ ಆರ್ಚರಿ ಪಟು ಎನ್ನುವ ದಾಖಲೆ ಬರೆದಿದ್ದಾರೆ. ಫೈನಲ್‌ನಲ್ಲಿ ಓಜಸ್, ಪೋಲೆಂಡ್‌ನ ಲುಕಾಸ್ ಪ್ರೈಬ್ಲೈಸ್ಕಿ ವಿರುದ್ದ 150-149 ಅಂತರದಲ್ಲಿ ಗೆದ್ದರು. ಸತತ 15 ಯತ್ನಗಳಲ್ಲಿ 10 ಅಂಕ ಪಡೆದು ಭರ್ತಿ 150 ಅಂಕ ಕಲೆಹಾಕಿದ ಮಹಾರಾಷ್ಟ್ರದ ನಾಗ್ಪುರದ ಓಜಸ್ ರೋಚಕ ಗೆಲುವು ಪಡೆದರು. ಭಾರತ ಈ ಕೂಟದಲ್ಲಿ 3 ಚಿನ್ನ, 1 ಕಂಚಿನ ಪದಕ ಜಯಿಸಿತು. ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಇದು ಭಾರತದ ಶ್ರೇಷ್ಠ ಪ್ರದರ್ಶನ ಎನಿಸಿದೆ.
ಅಮೆರಿಕನ್ ಓಪನ್: ಫೈನಲ್‌ಗೆ ಪ್ರಣಯ್ ಲಗ್ಗೆ
ಸಿಡ್ನಿ: ಭಾರತದ ಅಗ್ರ ಶಟ್ಲರ್ ಎಚ್.ಎಸ್.ಪ್ರಣಯ್ ಆಸ್ಟ್ರೇಲಿಯನ್ ಓಪನ್ ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ಫೈನಲ್‌ಗೆ ಲಗ್ಗೆ ಇಟ್ಟಿದ್ದಾರೆ. ಮೇ ತಿಂಗಳಲ್ಲಿ ಮಲೇಷ್ಯಾ ಮಾಸ್ಟರ್ಸ್ ಗೆದ್ದಿದ್ದ ಪ್ರಣಯ್, ಈ ಋತುವಿನ 2ನೇ ಸೂಪರ್ 500 ಫೈನಲ್ ಪ್ರವೇಶಿಸಿದರು.
ಶನಿವಾರ ನಡೆದ ಸೆಮಿಫೈನಲ್ ಕಾದಾಟದಲ್ಲಿ ವಿಶ್ವ ನಂ.9 ಪ್ರಣಯ್, ಭಾರತದ ಯುವ ಶಟ್ಲರ್ ಪ್ರಿಯಾನ್ಶು ರಾಜಾವತ್ ವಿರುದ್ಧ 21-18, 21-12 ಅಂತರದಲ್ಲಿ ಜಯಭೇರಿ ಬಾರಿಸಿದರು. ಇದರೊಂದಿಗೆ ಕಳೆದ ಏಪ್ರಿಲ್‌ನಲ್ಲಿ ಆರ್ಲಿಯಾನ್ಸ್ ಮಾಸ್ಟರ್ಸ್ ಚಾಂಪಿಯನ್ ಆಗಿದ್ದ 21 ವರ್ಷದ ಪ್ರಿಯಾನ್ಶು ಅವರ ಚೊಚ್ಚಲ ಸೂಪರ್ 500 ಫೈನಲ್ ಪ್ರವೇಶ ಕನಸು ಭಗ್ನಗೊಂಡಿತು. ಭಾನುವಾರ ನಡೆಯಲಿರುವ ಫೈನಲ್‌ನಲ್ಲಿ ಪ್ರಣಯ್ ವಿಶ್ವ ನಂ.24, ಚೀನಾದ ವೆಂಗ್ ಹೊಂಗ್ ಯಾಂಗ್ ವಿರುದ್ದ ಪ್ರಶಸ್ತಿಗಾಗಿ ಸೆಣಸಾಡಲಿದ್ದಾರೆ.
Ind vs WI ಟೀಂ ಇಂಡಿಯಾ ಸೋಲಿಸಿದ ಕ್ಯಾಪ್ಟನ್ ಹಾರ್ದಿಕ್ ಪಾಂಡ್ಯ.! ಮಾಡಿದ ಎಡವಟ್ಟು ಒಂದೆರಡಲ್ಲ..!
ಆಸಕ್ತಿದಾಯಕ ವಿಷಯವೆಂದರೆ ವೆಂಗ್ ಹೊಂಗ್ ವಿರುದ್ಧವೇ ಮಲೇಷ್ಯಾ ಮಾಸ್ಟರ್ಸ್ ಫೈನಲ್‌ನಲ್ಲಿ ಗೆದ್ದು ಪ್ರಣಯ್ 6 ವರ್ಷಗಳಲ್ಲಿ ಮೊದಲ ಪ್ರಶಸ್ತಿ ಜಯಿಸಿದ್ದರು.
ಭಾರತಕ್ಕೆ 4ನೇ ಪ್ರಶಸ್ತಿ?: ಭಾರತೀಯರು ಈವರೆಗೆ ಆಸ್ಟ್ರೇಲಿಯನ್ ಓಪನ್‌ನಲ್ಲಿ 3 ಬಾರಿ ಚಾಂಪಿಯನ್ ಆಗಿದ್ದಾರೆ. 2014, 2016ರಲ್ಲಿ ಸೈನಾ ನೆಹ್ವಾಲ್, 2017ರಲ್ಲಿ ಕಿದಂಬಿ ಶ್ರೀಕಾಂತ್ ಪ್ರಶಸ್ತಿ ಗೆದ್ದಿದ್ದರು. ಈ ಬಾರಿ ಪ್ರಣಯ್ ಗೆದ್ದರೆ ಭಾರತಕ್ಕೆ 4ನೇ ಪ್ರಶಸ್ತಿ ದೊರೆಯಲಿದೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.