ಮಹಿಳಾ ಟಿ20 ವಿಶ್ವಕಪ್: ಸೆಮೀಸ್’ಗೆ ಲಗ್ಗೆಯಿಟ್ಟ ಭಾರತ

By Web DeskFirst Published Nov 16, 2018, 9:55 AM IST
Highlights

ಲ್ಲಿನ ಪ್ರಾವಿಡೆನ್ಸ್ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಭಾರತ ನಿಗದಿತ ಓವರ್‌ಗಳಲ್ಲಿ 6 ವಿಕೆಟ್ ನಷ್ಟಕ್ಕೆ 145 ರನ್ ಗಳಿಸಿತು. ಸ್ಪರ್ಧಾತ್ಮಕ ಗುರಿ ಬೆನ್ನಟ್ಟಿದ ಐರ್ಲೆಂಡ್ 20 ಓವರ್‌ಗಳಲ್ಲಿ 8 ವಿಕೆಟ್‌ಗೆ 93 ರನ್ ಗಳಿಸಲಷ್ಟೇ ಶಕ್ತವಾಗಿ ಸೋಲನುಭವಿಸಿತು. 

ಗಯಾನ[ನ.16]: ಐಸಿಸಿ ಮಹಿಳಾ ವಿಶ್ವಕಪ್ ಟೂರ್ನಿಯಲ್ಲಿ ಭಾರತ ತಂಡ ಸೆಮಿಫೈನಲ್ ಸ್ಥಾನ ಖಚಿತ ಪಡಿಸಿಕೊಂಡಿತು. ಗುರುವಾರ ನಡೆದ ‘ಬಿ’ ಗುಂಪಿನ ಪಂದ್ಯದಲ್ಲಿ ಭಾರತ, ಐರ್ಲೆಂಡ್ ವಿರುದ್ಧ 52 ರನ್‌ಗಳ ಗೆಲುವು ಸಾಧಿಸಿತು. ಲೀಗ್ ಹಂತದಲ್ಲಿ ಆಡಿರುವ 3 ಪಂದ್ಯಗಳಲ್ಲೂ ಜಯಿಸಿರುವ ಭಾರತ ತಂಡ ಸದ್ಯ 6 ಅಂಕಗಳೊಂದಿಗೆ ಗುಂಪಿನಲ್ಲಿ 2ನೇ ಸ್ಥಾನದಲ್ಲಿದೆ.

ಭಾರತ, ಶನಿವಾರ ಆಸ್ಟ್ರೇಲಿಯಾ ವಿರುದ್ಧ ಲೀಗ್ ಹಂತದ ಕೊನೆ ಪಂದ್ಯವನ್ನಾಡಲಿದ್ದು, ಈ ಪಂದ್ಯದಲ್ಲಿ ಗೆದ್ದರೆ ಭಾರತ ಅಗ್ರ ಸ್ಥಾನಕ್ಕೇರಲಿದೆ. ಇಲ್ಲಿನ ಪ್ರಾವಿಡೆನ್ಸ್ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಭಾರತ ನಿಗದಿತ ಓವರ್‌ಗಳಲ್ಲಿ 6 ವಿಕೆಟ್ ನಷ್ಟಕ್ಕೆ 145 ರನ್ ಗಳಿಸಿತು. ಸ್ಪರ್ಧಾತ್ಮಕ ಗುರಿ ಬೆನ್ನಟ್ಟಿದ ಐರ್ಲೆಂಡ್ 20 ಓವರ್‌ಗಳಲ್ಲಿ 8 ವಿಕೆಟ್‌ಗೆ 93 ರನ್ ಗಳಿಸಲಷ್ಟೇ
ಶಕ್ತವಾಗಿ ಸೋಲನುಭವಿಸಿತು. ಈ ಮೂಲಕ ಲೀಗ್ ಹಂತದ 3 ಪಂದ್ಯಗಳನ್ನು ಸೋತ ಐರ್ಲೆಂಡ್ ಟೂರ್ನಿಯಿಂದ ಹೊರಬಿದ್ದಿತು.

ಸತತ 3ನೇ ಸೋಲು: ಭಾರತ ವಿರುದ್ಧ ಸೋಲಿನ ಮೂಲಕ ಐರ್ಲೆಂಡ್ ಸತತ 3 ಪಂದ್ಯಗಳಲ್ಲಿ ಸೋಲು ಕಂಡಿದೆ. ಸವಾಲಿನ ಗುರಿ ಬೆನ್ನಟ್ಟಿದ ಐರ್ಲೆಂಡ್ ಮೊದಲ ವಿಕೆಟ್‌ಗೆ 27 ರನ್‌ಗಳಿಸಿತು. ಆರಂಭಿಕ ಕ್ಲಾರೆ ಶಿಲ್ಲಿಂಗ್ಟನ್ (23), ಇಸೊಬೆಲ್ ಜೊಯ್ಸೆ (33) ರನ್ ಗಳಿಸಿದ್ದು ಹೊರತುಪಡಿಸಿದರೆ, ಇನ್ನುಳಿದ ಆಟಗಾರ್ತಿಯರು ಭಾರತದ ಬೌಲರ್‌ಗಳ ಎದುರು ರನ್‌ಗಳಿಸಲು ಪರದಾಡಿದರು. ಉಳಿದ ಆಟಗಾರ್ತಿಯರು ಒಂದಂಕಿ ಮೊತ್ತ ದಾಟಲಿಲ್ಲ.

ಇದಕ್ಕೂ ಮುನ್ನ ಇನ್ನಿಂಗ್ಸ್ ಆರಂಭಿಸಿದ ಮಿಥಾಲಿ, 56 ಎಸೆತಗಳಲ್ಲಿ 4 ಬೌಂಡರಿ, 1 ಸಿಕ್ಸರ್‌ನೊಂದಿಗೆ 51 ರನ್ ಗಳಿಸಿದರು. ಈ ವರ್ಷ ಭಾರತದ ಮಾಜಿ ನಾಯಕಿಗೆ 7ನೇ ಅರ್ಧಶತಕ. ಕ್ಯಾಲೆಂಡರ್ ವರ್ಷದಲ್ಲಿ ಅತಿಹೆಚ್ಚು ಅರ್ಧಶತಕ ಬಾರಿಸಿದ ಆಟಗಾರ್ತಿಯರ ಪಟ್ಟಿಯಲ್ಲಿ ಮಿಥಾಲಿ ಅಗ್ರಸ್ಥಾನಕ್ಕೇರಿದರು. 2018ರಲ್ಲಿ 19 ಟಿ20 ಇನ್ನಿಂಗ್ಸ್ ಗಳನ್ನು ಆಡಿರುವ ಮಿಥಾಲಿ 7 ಬಾರಿ 50ಕ್ಕಿಂತ ಹೆಚ್ಚು ಮೊತ್ತ ದಾಖಲಿಸಿದ್ದಾರೆ. 2018ರಲ್ಲೇ ಆಸ್ಟ್ರೇಲಿಯಾದ ಅಲಿಸಾ ಹೀಲಿ ಹಾಗೂ ನ್ಯೂಜಿಲೆಂಡ್‌ನ ಸೂಜಿ ಬೇಟ್ಸ್ ತಲಾ 6 ಅರ್ಧಶತಕ ಬಾರಿಸಿದ್ದಾರೆ. ಈ ಇಬ್ಬರೂ ಆಟಗಾರ್ತಿಯರು ವಿಶ್ವಕಪ್‌ನಲ್ಲಿ ಆಡುತ್ತಿದ್ದು, ಸದ್ಯದಲ್ಲೇ ಮಿಥಾಲಿಯ 7 ಅರ್ಧಶತಕಗಳ ದಾಖಲೆಯನ್ನು ಸರಿಗಟ್ಟಿದರೆ ಅಚ್ಚರಿಯಿಲ್ಲ.

17ನೇ ಅರ್ಧಶತಕ: ಅಂತಾರಾಷ್ಟ್ರೀಯ ಟಿ20ಯಲ್ಲಿ ಮಿಥಾಲಿಗಿದು 17ನೇ ಅರ್ಧಶತಕ. ಜತೆಗೆ ಸತತ 2ನೇ ಅರ್ಧಶತಕ ಕೂಡ ಹೌದು. ಪಾಕಿಸ್ತಾನ ವಿರುದ್ಧ ನ.11ರಂದು ನಡೆದಿದ್ದ ಪಂದ್ಯದಲ್ಲೂ ಮಿಥಾಲಿ ಅರ್ಧಶತಕ ಚಚ್ಚಿದ್ದರು. ಟಿ20ಯಲ್ಲಿ ಗರಿಷ್ಠ ಅರ್ಧಶತಕ ಬಾರಿಸಿದ ಆಟಗಾರ್ತಿಯರ ಪಟ್ಟಿಯಲ್ಲಿ ಇಂಗ್ಲೆಂಡ್‌ನ ಸಾರಾ ಟೇಲರ್ (16)ರನ್ನು ಹಿಂದಿಕ್ಕಿ, ಮಿಥಾಲಿ 3ನೇ ಸ್ಥಾನಕ್ಕೇರಿದ್ದಾರೆ.

ಭರ್ಜರಿ ಆರಂಭ: ಮಳೆಯಿಂದಾಗಿ ಟಾಸ್ ಕೆಲ ನಿಮಿಷಗಳ ಕಾಲ ವಿಳಂಬಗೊಂಡಿತು. ಮಿಥಾಲಿ ಹಾಗೂ ಸ್ಮತಿ ಮಂಧನಾ (33) ಭಾರತಕ್ಕೆ ಭರ್ಜರಿ ಆರಂಭ ನೀಡಿದರು. ಮೊದಲ ವಿಕೆಟ್‌ಗೆ ಇವರಿಬ್ಬರು 67 ರನ್ ಸೇರಿಸಿದರು. ಬಳಿಕ ದಿಢೀರ್ ಕುಸಿತ ಕಂಡಿದ್ದರಿಂದ ತಂಡ 150 ರನ್‌ಗಳನ್ನು ದಾಟಲು ಸಾಧ್ಯವಾಗಲಿಲ್ಲ.

ಟೀಂ ಹ್ಯಾಟ್ರಿಕ್: ಪಂದ್ಯದ 19ನೇ ಓವರ್‌ನಲ್ಲಿ ಭಾರತ ತಂಡ ಹ್ಯಾಟ್ರಿಕ್ ವಿಕೆಟ್ ಸಾಧಿಸಿತು. ರಾಧಾ ಎಸೆದ 19ನೇ ಓವರ್‌ನ 4ನೇ ಎಸೆತದಲ್ಲಿ ಗತ್’ರನ್ನು, 5ನೇ ಎಸೆತದಲ್ಲಿ ರಿಚರ್ಡ್ಸ್‌ನ್ ರನೌಟ್‌ಗೆ ಬಲಿಯಾದರು. 6ನೇ ಎಸೆತದಲ್ಲಿ ಮಾರಿಟ್ಜ್‌ರನ್ನು ಭಾಟಿಯಾ ಸ್ಟಂಪ್ ಮಾಡುವ ಮೂಲಕ ಭಾರತಕ್ಕೆ ಹ್ಯಾಟ್ರಿಕ್ ವಿಕೆಟ್ ತಂದುಕೊಟ್ಟರು.

ಸಂಕ್ಷಿಪ್ತ ಸ್ಕೋರ್: ಭಾರತ 145/6, ಐರ್ಲೆಂಡ್ 93/8

click me!
Last Updated Nov 16, 2018, 9:55 AM IST
click me!