ಐಸಿಸಿ ಮಹಿಳಾ ಟಿ20 ವಿಶ್ವಕಪ್‌: ಸೆಮಿಫೈನಲ್‌ ಮೇಲೆ ಭಾರತ ಕಣ್ಣು!

Published : Nov 15, 2018, 10:38 AM IST
ಐಸಿಸಿ ಮಹಿಳಾ ಟಿ20 ವಿಶ್ವಕಪ್‌: ಸೆಮಿಫೈನಲ್‌ ಮೇಲೆ ಭಾರತ ಕಣ್ಣು!

ಸಾರಾಂಶ

ಮೊದಲ ಪಂದ್ಯದಲ್ಲಿ ನ್ಯೂಜಿಲೆಂಡ್‌ ವಿರುದ್ಧ ಗೆದ್ದಿದ್ದ ಭಾರತ, 2ನೇ ಪಂದ್ಯದಲ್ಲಿ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನವನ್ನು ಮಣಿಸಿತ್ತು. ಇಲ್ಲಿನ ಪ್ರಾವಿಡೆನ್ಸ್‌ ಕ್ರೀಡಾಂಗಣದಲ್ಲಿ ನಾಯಕಿ ಹರ್ಮನ್‌ಪ್ರೀತ್‌ ಕೌರ್‌, ಕಿವೀಸ್‌ ವಿರುದ್ಧ ಅಮೋಘ ಶತಕ ಸಿಡಿಸಿ ಭಾರತ ಶುಭಾರಂಭ ಮಾಡಲು ನೆರವಾಗಿದ್ದರು. ಅದೇ ಕ್ರೀಡಾಂಗಣದಲ್ಲಿ ಭಾರತ ತಂಡ ಐರ್ಲೆಂಡ್‌ ವಿರುದ್ಧ ಮುಖಾಮುಖಿಯಾಗಲಿದೆ.

ಗಯಾನ[ನ.15]: ಐಸಿಸಿ ಮಹಿಳಾ ಟಿ20 ವಿಶ್ವಕಪ್‌ನ ಸೆಮಿಫೈನಲ್‌ ಮೇಲೆ ಕಣ್ಣಿಟ್ಟಿರುವ ಭಾರತ ತಂಡ, ಇಂದು ಐರ್ಲೆಂಡ್‌ ಸವಾಲನ್ನು ಎದುರಿಸಲಿದೆ. ‘ಬಿ’ ಗುಂಪಿನಲ್ಲಿ ಆಡಿರುವ 2 ಪಂದ್ಯಗಳಲ್ಲಿ 2ರಲ್ಲೂ ಗೆಲುವು ಸಾಧಿಸಿರುವ ಭಾರತ, 2ನೇ ಸ್ಥಾನದಲ್ಲಿದೆ. ಈ ಪಂದ್ಯದಲ್ಲಿ ತಂಡ ಜಯಿಸಿದರೆ, ಸೆಮಿಫೈನಲ್‌ನಲ್ಲಿ ಸ್ಥಾನ ಖಚಿತವಾಗಲಿದೆ.

ಮೊದಲ ಪಂದ್ಯದಲ್ಲಿ ನ್ಯೂಜಿಲೆಂಡ್‌ ವಿರುದ್ಧ ಗೆದ್ದಿದ್ದ ಭಾರತ, 2ನೇ ಪಂದ್ಯದಲ್ಲಿ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನವನ್ನು ಮಣಿಸಿತ್ತು. ಇಲ್ಲಿನ ಪ್ರಾವಿಡೆನ್ಸ್‌ ಕ್ರೀಡಾಂಗಣದಲ್ಲಿ ನಾಯಕಿ ಹರ್ಮನ್‌ಪ್ರೀತ್‌ ಕೌರ್‌, ಕಿವೀಸ್‌ ವಿರುದ್ಧ ಅಮೋಘ ಶತಕ ಸಿಡಿಸಿ ಭಾರತ ಶುಭಾರಂಭ ಮಾಡಲು ನೆರವಾಗಿದ್ದರು. ಅದೇ ಕ್ರೀಡಾಂಗಣದಲ್ಲಿ ಭಾರತ ತಂಡ ಐರ್ಲೆಂಡ್‌ ವಿರುದ್ಧ ಮುಖಾಮುಖಿಯಾಗಲಿದೆ.

ಮತ್ತೊಂದೆಡೆ ಐರ್ಲೆಂಡ್‌ ತಾನಾಡಿರುವ ಎರಡೂ ಪಂದ್ಯಗಳಲ್ಲಿ ಸೋಲುಂಡಿದೆ. ಆಸ್ಪ್ರೇಲಿಯಾ ಹಾಗೂ ಪಾಕಿಸ್ತಾನ ವಿರುದ್ಧ ಪರಾಭವಗೊಂಡಿರುವ ಐರ್ಲೆಂಡ್‌, ಸೆಮೀಸ್‌ ರೇಸ್‌ನಿಂದ ಬಹುತೇಕ ಹೊರಬಿದ್ದಿದೆ. ಭಾರತ ಗೆಲ್ಲುವ ನೆಚ್ಚಿನ ತಂಡವಾಗಿ ಪಂದ್ಯಕ್ಕೆ ಪ್ರವೇಶಿಸಲಿದೆಯಾದರೂ, ಐರ್ಲೆಂಡ್‌ ತಂಡವನ್ನು ಲಘುವಾಗಿ ಪರಿಗಣಿಸಲು ಸಾಧ್ಯವಿಲ್ಲ. ಐರ್ಲೆಂಡ್‌ ತನ್ನ ಹೋರಾಟ ಸಾಮರ್ಥ್ಯಕ್ಕೆ ಹೆಸರುವಾಸಿಯಾಗಿದ್ದು, ಭಾರತ ಸ್ವಲ್ಪ ಮೈಮರೆತರೂ ಸೋಲು ಎದುರಾಗಬಹುದು. ಅದರಲ್ಲೂ ಸೆಮಿಫೈನಲ್‌ ಸ್ಥಾನ ಕೈಗೆಟುಕುವ ಸನಿಹದಲ್ಲಿದ್ದಾಗ ಭಾರತ, ಸಂಪೂರ್ಣ ಪರಿಶ್ರಮ ವಹಿಸಿ ಪಂದ್ಯ ಗೆಲ್ಲಲು ಎದುರು ನೋಡುತ್ತಿದೆ. ಗುಂಪು ಹಂತದ ಅಂತಿಮ ಪಂದ್ಯದಲ್ಲಿ ಭಾರತಕ್ಕೆ ಬಲಿಷ್ಠ ಆಸ್ಪ್ರೇಲಿಯಾ ಎದುರಾಗಲಿದ್ದು, ಆ ಪಂದ್ಯ ‘ಬಿ’ ಗುಂಪಿನಲ್ಲಿ ಅಗ್ರಸ್ಥಾನ ಪಡೆಯುವ ತಂಡವನ್ನು ನಿರ್ಧರಿಸುವ ಸಾಧ್ಯತೆ ದಟ್ಟವಾಗಿದೆ. ಆಸ್ಪ್ರೇಲಿಯಾ ಈಗಾಗಲೇ ಆಡಿರುವ 3 ಪಂದ್ಯಗಳಲ್ಲಿ 3ರಲ್ಲೂ ಜಯಿಸಿ, ಅಗ್ರಸ್ಥಾನ ಕಾಯ್ದುಕೊಂಡಿದೆ.

ಭಾರತಕ್ಕೆ ಮೊದಲೆರಡು ಪಂದ್ಯಗಳಲ್ಲಿ ತಂಡದ ತಾರಾ ಹಾಗೂ ಅನುಭವಿ ಆಟಗಾರ್ತಿಯರು ನೆರವಾಗಿದ್ದಾರೆ. ಮೊದಲ ಪಂದ್ಯದಲ್ಲಿ ಹರ್ಮನ್‌ಪ್ರೀತ್‌ ಸಿಡಿದರೆ, ಪಾಕಿಸ್ತಾನ ವಿರುದ್ಧ ಪಂದ್ಯದಲ್ಲಿ ಮಿಥಾಲಿ ರಾಜ್‌ ಆಕರ್ಷಕ ಅರ್ಧಶತಕ ಭಾರತದ ಗೆಲುವಿಗೆ ನೆರವಾಗಿತ್ತು. ಇಬ್ಬರು ದಿಗ್ಗಜ ಆಟಗಾರ್ತಿಯರ ಜತೆ ಮುಂಬೈನ 18 ವರ್ಷದ ಜೆಮಿಮಾ ರೋಡ್ರಿಗಾಸ್‌ ಸಹ ಮಿಂಚುತ್ತಿದ್ದಾರೆ. ಸ್ಮೃತಿ ಮಂಧನಾ ಹಾಗೂ ವೇದಾ ಕೃಷ್ಣಮೂರ್ತಿ ತಮ್ಮ ಸಾಮರ್ಥ್ಯಕ್ಕೆ ತಕ್ಕ ಆಟವಾಡಬೇಕಿದೆ. ಆಲ್ರೌಂಡರ್‌ ದೀಪ್ತಿ ಶರ್ಮಾಗಿನ್ನೂ ಸರಿಯಾಗಿ ಬ್ಯಾಟಿಂಗ್‌ ಅವಕಾಶ ದೊರೆತಿಲ್ಲ. ಬೌಲಿಂಗ್‌ ವಿಭಾಗದಲ್ಲಿ ಸ್ಪಿನ್ನರ್‌ಗಳಾದ ದಯಾಳನ್‌ ಹೇಮಲತಾ ಹಾಗೂ ಪೂನಮ್‌ ಯಾದವ್‌ ಭಾರತದ ಟ್ರಂಪ್‌ ಕಾರ್ಡ್‌ಗಳೆನಿಸಿದ್ದಾರೆ. ಈ ಇಬ್ಬರು ಸೇರಿ ಒಟ್ಟು 10 ವಿಕೆಟ್‌ ಕಿತ್ತಿದ್ದು, ತಮ್ಮ ಲಯ ಮುಂದುವರಿಸುವ ವಿಶ್ವಾಸದಲ್ಲಿದ್ದಾರೆ. ಈ ಪಂದ್ಯದಲ್ಲೂ ಭಾರತ ನಾಲ್ವರು ತಜ್ಞ ಸ್ಪಿನ್ನರ್‌ಗಳೊಂದಿಗೆ ಮುಂದುವರಿಯುವ ಸಾಧ್ಯತೆ ಇದೆ.

ಸಂಭವನೀಯ ತಂಡ

ಭಾರತ: ಮಿಥಾಲಿ ರಾಜ್‌, ಸ್ಮೃತಿ ಮಂಧನಾ, ಜೆಮಿಮಾ ರೋಡ್ರಿಗಾಸ್‌, ಹರ್ಮನ್‌ಪ್ರೀತ್‌ ಕೌರ್‌ (ನಾಯಕಿ), ವೇದಾ, ತಾನಿಯಾ ಭಾಟಿಯಾ, ಡಿ.ಹೇಮಲತಾ, ರಾಧಾ ಯಾದವ್‌, ದೀಪ್ತಿ ಶರ್ಮಾ, ಅರುಂಧತಿ ರೆಡ್ಡಿ, ಪೂನಮ್‌ ಯಾದವ್‌.

ಐರ್ಲೆಂಡ್‌: ಕ್ಲಾರಿ ಶಿಲ್ಲಿಂಗ್ಟನ್‌, ಗಾಬಿ ಲೆವೀಸ್‌, ಸೆಸಿಲಿಯಾ ಜಾಯ್ಸ್, ಎಲಿಮೇರ್‌ ರಿಚರ್ಡ್‌ಸನ್‌, ಕಿಮ್‌ ಗಾಥ್‌ರ್‍, ಲಾರಾ ಡೆಲಾನಿ(ನಾಯಕಿ), ಶೌನಾ ಕವನಾಘ್‌, ಮೇರಿ ವಾಲ್ಡೊ್ರನ್‌, ಲೂಸಿ ಒರಿಲೆ, ಸೆಲೆಸ್ಟೆರಾಕ್‌, ಸಿಯಾರ ಮೆಟ್ಕಾಫ್‌.
 

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಹೃತಿಕ್‌ ರೋಶನ್‌ 'ಕ್ರಿಶ್‌' ಸಿನಿಮಾದಲ್ಲಿ ಬಾಲನಟಿಯಾಗಿದ್ರಾ ಧೋನಿ ಪತ್ನಿ ಸಾಕ್ಷಿ?
T20I ನೂರು ಸಿಕ್ಸರ್ ಕ್ಲಬ್ ಸೇರಿದ ಹಾರ್ದಿಕ್ ಪಾಂಡ್ಯ; ರೋಹಿತ್ ರೆಕಾರ್ಡ್ ಮುರಿತಾರಾ ಈ ಆಲ್ರೌಂಡರ್?