
ನವದೆಹಲಿ[ಮೇ.25]: ಮುಂಬೈನಲ್ಲಿ ನಡೆದ ಐಪಿಎಲ್ ಮಹಿಳಾ ಪ್ರದರ್ಶನ ಪಂದ್ಯದಿಂದ ಪ್ರಭಾವಿತವಾಗಿರುವ ಬಿಸಿಸಿಐ, 2019ರಲ್ಲಿಯೇ 3-4 ತಂಡಗಳಿರುವ ಮಹಿಳಾ ಮಿನಿ ಐಪಿಎಲ್ ಆರಂಭಿಸಲು ಚಿಂತನೆ
ನಡೆಸಿದೆ ಎಂದು ರಾಷ್ಟ್ರೀಯ ಮಾಧ್ಯಮವೊಂದು ವರದಿ ಮಾಡಿದೆ.
‘ಪ್ರದರ್ಶನ ಪಂದ್ಯ ಮಹಿಳಾ ಐಪಿಎಲ್‌ಗೆ ಒಂದು ಆರಂಭವಷ್ಟೇ ಆಗಿದ್ದು, ಅದನ್ನು ನಿರಂತರವಾಗಿ ಉಳಿಸಿಕೊಳ್ಳುವುದು ಮಹತ್ವದ್ದಾಗಿದೆ. ಮುಂದಿನ ಋತುವಿನಲ್ಲಿಯೇ ಉತ್ತಮ ಯೋಜನೆಗಳೊಂದಿಗೆ ಮಹಿಳಾ ಐಪಿಎಲ್ ಆರಂಭಿಸಲಿದ್ದೇವೆ’ ಎಂದು ಬಿಸಿಸಿಐ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
3ರಿಂದ 4 ತಂಡಗಳು: ಸದ್ಯದ ಸ್ಥಿತಿಯಲ್ಲಿ 8 ತಂಡಗಳ ಲೀಗ್ ಆರಂಭಿಸಲು ಕಷ್ಟವೆನಿಸಿರುವ ಕಾರಣ, ಮಿನಿ ಲೀಗ್ ಆಯೋಜನೆಗೆ ಬಿಸಿಸಿಐ ಚಿಂತನೆ ನಡೆಸುತ್ತಿದೆ. ‘ಕ್ರೀಡಾಂಗಣಗಳು ಖಾಲಿ ಉಳಿಯಲು ಹಲವು ಕಾರಣಗಳಿವೆ. ಆದರೆ ಜನಪ್ರಿಯತೆ ನಿಧಾನಕ್ಕೆ ಹೆಚ್ಚಾಗಲಿದೆ ಎನ್ನುವ ವಿಶ್ವಾಸವಿದೆ. ಇದರಿಂದಾಗಿಯೇ ಆರಂಭದಲ್ಲಿ 3-4 ತಂಡಗಳೊಂದಿಗೆ ಲೀಗ್ ಆರಂಭಿಸಲು ಯೋಚಿಸುತ್ತಿದ್ದೇವೆ. ಜತೆಗೆ ಬರೋಡಾದಂತಹ ಸಣ್ಣ ನಗರಗಳಲ್ಲಿ ಪಂದ್ಯಗಳನ್ನು ಆಯೋಜಿಸಲು ಸಹ ಚಿಂತಿಸಲಾಗುತ್ತಿದೆ’ ಬಿಸಿಸಿಐ ಅಧಿಕಾರಿ ತಿಳಿಸಿದ್ದಾರೆ.
ಕಳೆದ ವಾರವಷ್ಟೇ ಸುಪ್ರೀಂ ಕೋರ್ಟ್ ನೇಮಿತ ಬಿಸಿಸಿಐ ಆಡಳಿತ ಸಮಿತಿ ಮುಖ್ಯಸ್ಥ ವಿನೋದ್ ರಾಯ್, ಮುಂದಿನ 3 ವರ್ಷಗಳಲ್ಲಿ ಮಹಿಳಾ ಐಪಿಎಲ್ ಆರಂಭಿಸುವುದಾಗಿ ಹೇಳಿದ್ದರು. ಮೊದಲ ಕ್ವಾಲಿಫೈಯರ್ ಪಂದ್ಯಕ್ಕೂ ಮುನ್ನ ನಡೆದ ಮಹಿಳೆಯರ ಪ್ರದರ್ಶನ ಐಪಿಎಲ್ ಪಂದ್ಯ, ಕ್ರೀಡಾಂಗಣಕ್ಕೆ ಪ್ರೇಕ್ಷಕರನ್ನು ಸೆಳೆಯಲು ಸಾಧ್ಯವಾಗದಿದ್ದರೂ ಎಲ್ಲೆಡೆಯಿಂದ ಉತ್ತಮ ಪ್ರತಿಕ್ರಿಯೆ ಪಡೆದುಕೊಂಡಿತು. ಸದ್ಯದಲ್ಲೇ ವಿವಿಧ ರಾಜ್ಯಗಳ ಆಟಗಾರ್ತಿಯರ ಪೈಕಿ ಐಪಿಎಲ್‌ನಲ್ಲಿ ಆಡಬಲ್ಲ ಆಟಗಾರ್ತಿಯರನ್ನು ಗುರುತಿಸುವ ಕಾರ್ಯವನ್ನು ಬಿಸಿಸಿಐ ಆರಂಭಿಸಲಿದೆ ಎನ್ನಲಾಗಿದೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.