ಐಸಿಸಿ ಮಹಿಳಾ ಟಿ20 ವಿಶ್ವಕಪ್‌: ಇಂಡೋ-ಪಾಕ್ ಕದನಕ್ಕೆ ವೇದಿಕೆ ಸಜ್ಜು

By Web DeskFirst Published Nov 11, 2018, 10:27 AM IST
Highlights

ಟಿ20 ಮಾದರಿಯಲ್ಲಿ ಅಗ್ರ ತಂಡ ಎಂದು ಕರೆಸಿಕೊಳ್ಳದಿದ್ದರೂ, ಭಾರತ ತನ್ನ ಆರಂಭಿಕ ಪಂದ್ಯದಲ್ಲಿ ಬಲಿಷ್ಠ ನ್ಯೂಜಿಲೆಂಡ್‌ ವಿರುದ್ಧ ಅಮೋಘ ಪ್ರದರ್ಶನ ತೋರಿತು. ನಾಯಕಿ ಹರ್ಮನ್‌ಪ್ರೀತ್‌ ಕೌರ್‌ ಶತಕದಿಂದ ಸ್ಫೂರ್ತಿ ಪಡೆದ ಭಾರತ, ಅತ್ಯುತ್ತಮ ಬೌಲಿಂಗ್‌ ಪ್ರದರ್ಶನವನ್ನು ತೋರಿತು.

ಗಯಾನ[ನ.11]: ಐಸಿಸಿ ಟಿ20 ವಿಶ್ವಕಪ್‌ನಲ್ಲಿ ಅತ್ಯುತ್ತಮ ಆರಂಭ ಪಡೆದುಕೊಂಡಿರುವ ಭಾರತ ಮಹಿಳಾ ತಂಡ, ಇಂದು ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನವನ್ನು ಎದುರಿಸಲಿದ್ದು ಸತತ 2ನೇ ಗೆಲುವು ಸಾಧಿಸಿ ಸೆಮಿಫೈನಲ್‌ ಹಾದಿಯನ್ನು ಸುಗಮಗೊಳಿಸಿಕೊಳ್ಳಲು ಎದುರು ನೋಡುತ್ತಿದೆ. ‘ಬಿ’ ಗುಂಪಿನಲ್ಲಿ 2ನೇ ಸ್ಥಾನದಲ್ಲಿರುವ ಭಾರತ, ಅಗ್ರ 2ರಲ್ಲೇ ಉಳಿದುಕೊಂಡು ಉಪಾಂತ್ಯಕ್ಕೆ ಪ್ರವೇಶ ಪಡೆಯುವ ಗುರಿ ಹೊಂದಿದೆ.

ಟಿ20 ಮಾದರಿಯಲ್ಲಿ ಅಗ್ರ ತಂಡ ಎಂದು ಕರೆಸಿಕೊಳ್ಳದಿದ್ದರೂ, ಭಾರತ ತನ್ನ ಆರಂಭಿಕ ಪಂದ್ಯದಲ್ಲಿ ಬಲಿಷ್ಠ ನ್ಯೂಜಿಲೆಂಡ್‌ ವಿರುದ್ಧ ಅಮೋಘ ಪ್ರದರ್ಶನ ತೋರಿತು. ನಾಯಕಿ ಹರ್ಮನ್‌ಪ್ರೀತ್‌ ಕೌರ್‌ ಶತಕದಿಂದ ಸ್ಫೂರ್ತಿ ಪಡೆದ ಭಾರತ, ಅತ್ಯುತ್ತಮ ಬೌಲಿಂಗ್‌ ಪ್ರದರ್ಶನವನ್ನು ತೋರಿತು. 2016ರಲ್ಲಿ ತವರಿನಲ್ಲಿ ನಡೆದಿದ್ದ ಟಿ20 ವಿಶ್ವಕಪ್‌ನಲ್ಲಿ ಭಾರತ, ಪಾಕಿಸ್ತಾನ ವಿರುದ್ಧ ಸೋಲುಂಡಿತ್ತು. ಆ ಸೋಲಿನ ಸೇಡು ತೀರಿಸಿಕೊಳ್ಳಲು ಭಾರತ ಕಾಯುತ್ತಿದೆ. ಆದರೆ ವಿಶ್ವಕಪ್‌ ಬಳಿಕ 2 ಆವೃತ್ತಿಗಳ ಏಷ್ಯಾಕಪ್‌ನಲ್ಲಿ 3 ಬಾರಿ ಪಾಕಿಸ್ತಾನವನ್ನು ಎದುರಿಸಿದ ಭಾರತ, ಮೂರರಲ್ಲೂ ಗೆಲುವು ಪಡೆದಿತ್ತು.

ಮೊದಲ ಪಂದ್ಯದಲ್ಲಿ ಆಸ್ಪ್ರೇಲಿಯಾ ವಿರುದ್ಧ ಸೋಲುಂಡಿದ್ದ ಪಾಕಿಸ್ತಾನಕ್ಕೆ, ಭಾರತವನ್ನು ಎದುರಿಸುವುದು ಕಠಿಣ ಸವಾಲಾಗಿ ಪರಿಣಮಿಸಲಿದೆ. 18 ವರ್ಷದ ಮುಂಬೈ ಆಟಗಾರ್ತಿ ಜೆಮಿಮಾ ರೋಡ್ರಿಗಾಸ್‌, ಕಿವೀಸ್‌ ವಿರುದ್ಧ ತೋರಿದ ಆಕರ್ಷಕ ಪ್ರದರ್ಶನ ತಂಡದ ಆತ್ಮವಿಶ್ವಾಸ ಹೆಚ್ಚಿಸಿದೆ. ಮೊದಲ ಪಂದ್ಯದಲ್ಲಿ ಹರ್ಮನ್‌ಪ್ರೀತ್‌ ಹಾಗೂ ಜೆಮಿಮಾ ಪ್ರಾಬಲ್ಯ ಎಷ್ಟರ ಮಟ್ಟಿಗಿತ್ತು ಎಂದರೆ, ಹಿರಿಯ ಆಟಗಾರ್ತಿ ಮಿಥಾಲಿ ರಾಜ್‌ ಸೇವೆ ಭಾರತಕ್ಕೆ ಅವಶ್ಯ ಎನಿಸಲಿಲ್ಲ.

ಇಲ್ಲಿನ ಪ್ರಾವಿಡೆನ್ಸ್‌ ಕ್ರೀಡಾಂಗಣದ ಪಿಚ್‌ ನಿಧಾನಗತಿಯ ಬೌಲಿಂಗ್‌ಗೆ ಹೆಚ್ಚು ಸಹಕಾರ ನೀಡಲಿದ್ದು, ಭಾರತ ಮೊದಲ ಪಂದ್ಯದಲ್ಲಿ ನಾಲ್ವರು ಸ್ಪಿನ್ನರ್‌ಗಳನ್ನು ಕಣಕ್ಕಿಳಿಸಿತ್ತು. ಆದರೆ ಪಾಕಿಸ್ತಾನ ತಂಡದಲ್ಲಿ ಜಾವೇರಿಯಾ ಖಾನ್‌, ಸನಾ ಮಿರ್‌, ಬಿಸ್ಮಾ ಮರೂಫ್‌ ಸ್ಪಿನ್‌ ಬೌಲಿಂಗನ್ನು ಸಮರ್ಥವಾಗಿ ಎದುರಿಸಬಲ್ಲರು. ಹೀಗಾಗಿ ಭಾರತ ವೇಗಿ ಅರುಂಧತಿ ರೆಡ್ಡಿ ಜತೆ ಮಾನ್ಸಿ ಜೋಶಿ ಇಲ್ಲವೇ ಪೂಜಾ ವಸ್ತ್ರಾಕರ್‌ರನ್ನು ಆಡಿಸುವ ಸಾಧ್ಯತೆ ಇದೆ. ಕಿವೀಸ್‌ ವಿರುದ್ಧ ಪಡೆದ 9 ವಿಕೆಟ್‌ಗಳ ಪೈಕಿ 8 ಸ್ಪಿನ್ನರ್‌ಗಳ ಪಾಲಾಗಿತ್ತು. ವಿಕೆಟ್‌ ಕಬಳಿಕೆಯಲ್ಲಿ ಸ್ಪಿನ್ನರ್‌ಗಳು ಮುಂದಿದ್ದರೂ, ಕಿವೀಸ್‌ ಆಟಗಾರ್ತಿಯರು ಸ್ವೀಪ್‌ ಶಾಟ್‌ ಹೆಚ್ಚಾಗಿ ಪ್ರಯೋಗಿಸಿ ರನ್‌ ಕಲೆಹಾಕಿದ್ದರು. ಇದು ಭಾರತೀಯರ ದೌರ್ಬಲ್ಯವೆನಿಸಿದ್ದು, ಪರಿಹಾರ ಕಂಡುಕೊಳ್ಳಬೇಕಿದೆ.

ಮತ್ತೊಂದೆಡೆ ಪಾಕಿಸ್ತಾನದ ಯಾವ ಆಟಗಾರ್ತಿ ಸಹ ಆಸೀಸ್‌ ವಿರುದ್ಧದ ಪಂದ್ಯದಲ್ಲಿ 30 ರನ್‌ ಸಹ ಗಳಿಸಲಿಲ್ಲ. ತಂಡದ ಬೌಲಿಂಗ್‌ ದಾಳಿ ಸಹ ಸಪ್ಪೆ ಎನಿಸಿತ್ತು. ಲಯದ ಆಧಾರದ ಮೇಲೆ ಭಾರತ ಪಂದ್ಯ ಗೆಲ್ಲುವ ನೆಚ್ಚಿನ ತಂಡ ಎನಿಸಿದೆ. ಉತ್ತಮ ಅಂತರದಲ್ಲಿ ಗೆದ್ದು ನೆಟ್‌ ರನ್‌ರೇಟ್‌ ಹೆಚ್ಚಿಸಿಕೊಳ್ಳುವುದರತ್ತ ಗಮನ ಹರಿಸಬೇಕಿದೆ.

ತಂಡಗಳು

ಭಾರತ: ಹರ್ಮನ್‌ಪ್ರೀತ್‌ ಕೌರ್‌ (ನಾಯಕಿ), ಜೆಮಿಮಾ ರೋಡ್ರಿಗಾಸ್‌, ಸ್ಮೃತಿ ಮಂಧನಾ, ತಾನಿಯಾ ಭಾಟಿಯಾ, ಮಿಥಾಲಿ ರಾಜ್‌, ವೇದಾ ಕೃಷ್ಣಮೂರ್ತಿ, ದೀಪ್ತಿ ಶರ್ಮಾ, ಅನುಜಾ ಪಾಟೀಲ್‌, ಪೂಜಾ ವಸ್ತ್ರಾಕರ್‌, ಮಾನ್ಸಿ ಜೋಶಿ, ಅರುಂಧತಿ ರೆಡ್ಡಿ, ಏಕ್ತಾ ಬಿಶ್‌್ತ, ರಾಧಾ ಯಾದವ್‌, ಪೂನಮ್‌ ಯಾದವ್‌.

ಪಾಕಿಸ್ತಾನ: ಜವೇರಿಯಾ ಖಾನ್‌ (ನಾಯಕಿ), ಐಮಾನ್‌ ಅನ್ವರ್‌, ಆಲಿಯಾ ರಿಯಾಜ್‌, ಅನಮ್‌ ಅಮಿನ್‌, ಆಯೇಷಾ ಜಫರ್‌, ಬಿಸ್ಮಾ ಮರೂಫ್‌, ಡಯಾನ ಬೇಗ್‌, ಮುನೀಬಾ ಅಲಿ, ನಹೀದಾ ಖಾನ್‌, ಸನಾ ಮಿರ್‌, ನಿದಾ ದರ್‌, ಸಶ್ರ ಸಂಧು, ನತಾಲಿಯಾ ಪರ್ವೇಜ್‌, ಸಿದ್ರಾ ನವಾಜ್‌, ಉಮೈಮಾ ಸೋಹೆಲ್‌.

ಪಂದ್ಯ ಆರಂಭ: ರಾತ್ರಿ 8.30ಕ್ಕೆ, ನೇರ ಪ್ರಸಾರ: ಸ್ಟಾರ್‌ ಸ್ಪೋರ್ಟ್ಸ್ 1
 

click me!