ಸರಣಿ ಕ್ಲೀನ್‌ ಸ್ವೀಪ್‌ ಮೇಲೆ ಟೀಂ ಇಂಡಿಯಾ ಚಿತ್ತ

Published : Nov 11, 2018, 09:41 AM IST
ಸರಣಿ ಕ್ಲೀನ್‌ ಸ್ವೀಪ್‌ ಮೇಲೆ ಟೀಂ ಇಂಡಿಯಾ ಚಿತ್ತ

ಸಾರಾಂಶ

ಚೆನ್ನೈನ ಕ್ರಿಕೆಟ್‌ ಅಭಿಮಾನಿಗಳು ಟಿ20 ತಂಡದಲ್ಲಿ ಸ್ಥಾನ ಪಡೆಯದ ತಮ್ಮ ನೆಚ್ಚಿನ ನಾಯಕ ಎಂ.ಎಸ್‌.ಧೋನಿಯ ಆಟವನ್ನು ನೋಡುವ ಅವಕಾಶದಿಂದ ವಂಚಿತರಾಗಲಿದ್ದಾರೆ. ಆದರೆ ಪ್ರಚಂಡ ಲಯದಲ್ಲಿರುವ ನಾಯಕ ರೋಹಿತ್‌ ಶರ್ಮಾ ಅಬ್ಬರವನ್ನು ಕಣ್ತುಂಬಿಕೊಳ್ಳಲು ಸ್ಥಳೀಯ ಅಭಿಮಾನಿಗಳು ಕಾಯುತ್ತಿದ್ದಾರೆ.

ಚೆನ್ನೈ[ನ.11]: ವಿಂಡೀಸ್‌ ತಂಡದ ಭಾರತ ಪ್ರವಾಸ ಇಂದು ಅಂತ್ಯಗೊಳ್ಳಲಿದ್ದು, ಇಲ್ಲಿನ ಚಿದಂಬರಂ ಕ್ರೀಡಾಂಗಣದಲ್ಲಿ 3ನೇ ಟಿ20 ಪಂದ್ಯ ನಡೆಯಲಿದೆ. ಈಗಾಗಲೇ 2-0 ಅಂತರದಲ್ಲಿ ಸರಣಿ ಕೈವಶ ಮಾಡಿಕೊಂಡಿರುವ ಭಾರತ, 3ನೇ ಪಂದ್ಯವನ್ನೂ ಗೆದ್ದು ಸರಣಿ ಕ್ಲೀನ್‌ ಸ್ವೀಪ್‌ ಮಾಡುವ ಗುರಿ ಹೊಂದಿದೆ.

ಚೆನ್ನೈನ ಕ್ರಿಕೆಟ್‌ ಅಭಿಮಾನಿಗಳು ಟಿ20 ತಂಡದಲ್ಲಿ ಸ್ಥಾನ ಪಡೆಯದ ತಮ್ಮ ನೆಚ್ಚಿನ ನಾಯಕ ಎಂ.ಎಸ್‌.ಧೋನಿಯ ಆಟವನ್ನು ನೋಡುವ ಅವಕಾಶದಿಂದ ವಂಚಿತರಾಗಲಿದ್ದಾರೆ. ಆದರೆ ಪ್ರಚಂಡ ಲಯದಲ್ಲಿರುವ ನಾಯಕ ರೋಹಿತ್‌ ಶರ್ಮಾ ಅಬ್ಬರವನ್ನು ಕಣ್ತುಂಬಿಕೊಳ್ಳಲು ಸ್ಥಳೀಯ ಅಭಿಮಾನಿಗಳು ಕಾಯುತ್ತಿದ್ದಾರೆ.

ಈಗಾಗಲೇ ಸರಣಿ ಗೆದ್ದಿರುವ ಕಾರಣ, ಭಾನುವಾರದ ಪಂದ್ಯಕ್ಕೆ ಪ್ರಮುಖ ಬೌಲರ್‌ಗಳಾದ ಜಸ್ಪ್ರೀತ್‌ ಬುಮ್ರಾ ಹಾಗೂ ಕುಲ್ದೀಪ್‌ ಯಾದವ್‌ಗೆ ವಿಶ್ರಾಂತಿ ನೀಡಲಾಗಿದೆ. ಉಮೇಶ್‌ ಯಾದವ್‌ ಸಹ ತಂಡದಲ್ಲಿಲ್ಲ. ಹೀಗಾಗಿ, ಬೆಂಚ್‌ ಕಾಯುತ್ತಿರುವ ಶ್ರೇಯಸ್‌ ಅಯ್ಯರ್‌, ವಾಷಿಂಗ್ಟನ್‌ ಸುಂದರ್‌ ಹಾಗೂ ಶಾಬಾಜ್‌ ನದೀಮ್‌ ಅವಕಾಶದ ನಿರೀಕ್ಷೆಯಲ್ಲಿದ್ದಾರೆ. ಆಸ್ಪ್ರೇಲಿಯಾ ಪ್ರವಾಸಕ್ಕೂ ಮುನ್ನ ಬೆಂಚ್‌ ಬಲ ಪರೀಕ್ಷಿಸಲು ತಂಡಕ್ಕಿದು ಉತ್ತಮ ಅವಕಾಶವಾಗಿದೆ. ಸಿದ್ಧಾರ್ಥ್ ಕೌಲ್‌ರನ್ನು ತಂಡಕ್ಕೆ ಕರೆಸಿಕೊಂಡಿದ್ದರೂ ಚೆಪಾಕ್‌ ಕ್ರೀಡಾಂಗಣದ ಪಿಚ್‌ ನಿಧಾನಗತಿಯ ಪಿಚ್‌ ಆಗಿರುವುದರಿಂದ ಭಾರತ ಮೂವರು ಸ್ಪಿನ್ನರ್‌ಗಳೊಂದಿಗೆ ಆಡುವ ಸಾಧ್ಯತೆ ಹೆಚ್ಚು.

ಭುವನೇಶ್ವರ್‌ ಕುಮಾರ್‌ ಹಾಗೂ ಖಲೀಲ್‌ ಅಹ್ಮದ್‌ ವೇಗಿಗಳಾಗಿ ಕಣಕ್ಕಿಳಿದರೆ, ಕುಲ್ದೀಪ್‌ ಅನುಪಸ್ಥಿತಿಯಲ್ಲಿ ಯಜುವೇಂದ್ರ ಚಹಲ್‌ ತಂಡಕ್ಕೆ ವಾಪಸಾಗುವ ಸಾಧ್ಯತೆ ಇದೆ. ಕೃನಾಲ್‌ ಪಾಂಡ್ಯ 2ನೇ ಸ್ಪಿನ್ನರ್‌ ಆಗಿ ಆಡಲಿದ್ದು, ಸ್ಥಳೀಯ ಆಟಗಾರ ವಾಷಿಂಗ್ಟನ್‌ ಸುಂದರ್‌ಗೆ ಸ್ಥಾನ ಸಿಗಬಹುದು ಎನ್ನಲಾಗಿದೆ. ರೋಹಿತ್‌ ಹೊರತುಪಡಿಸಿ ಉಳಿದ್ಯಾವ ಬ್ಯಾಟ್ಸ್‌ಮನ್‌ಗಳು ನಿರೀಕ್ಷಿತ ಲಯದಲ್ಲಿಲ್ಲ. ಆಸ್ಪ್ರೇಲಿಯಾ ಪ್ರವಾಸಕ್ಕೂ ಮುನ್ನ ಶಿಖರ್‌ ಧವನ್‌, ಕೆ.ಎಲ್‌.ರಾಹುಲ್‌, ರಿಷಭ್‌ ಪಂತ್‌ ಲಯ ಕಂಡುಕೊಳ್ಳಲು ಎದುರು ನೋಡುತ್ತಿದ್ದಾರೆ.

ಮತ್ತೊಂದೆಡೆ ಪ್ರವಾಸಿ ತಂಡಕ್ಕೆ, ಈ ಸರಣಿಯಲ್ಲಿ ಭಾರೀ ಮುಖಭಂಗವಾಗಿದೆ. ಹಾಲಿ ವಿಶ್ವ ಚಾಂಪಿಯನ್‌ ವಿಂಡೀಸ್‌ ತನ್ನ ಪ್ರಮುಖ ಆಟಗಾರರಿಲ್ಲದೆ ಆಗಮಿಸಿದ್ದರೂ, ಪ್ರತಿಭಾವಂತರಿಗೆ ಕೊರತೆ ಇಲ್ಲ. ಏಕದಿನ ಸರಣಿಯಲ್ಲಿ ತಕ್ಕ ಪೈಪೋಟಿ ನೀಡಿದ ವಿಂಡೀಸ್‌, ಅಂತಿಮ ಪಂದ್ಯದಲ್ಲಾದರೂ ಗೆದ್ದು ಪ್ರತಿಷ್ಠೆ ಉಳಿಸಿಕೊಳ್ಳಲು ತಹತಹಿಸುತ್ತಿದೆ.

ಸಂಭವನೀಯ ತಂಡ

ಭಾರತ: ರೋಹಿತ್‌ ಶರ್ಮಾ (ನಾಯಕ), ಶಿಖರ್‌ ಧವನ್‌, ಕೆ.ಎಲ್‌.ರಾಹುಲ್‌, ದಿನೇಶ್‌ ಕಾರ್ತಿಕ್‌, ರಿಷಭ್‌ ಪಂತ್‌, ಮನೀಶ್‌ ಪಾಂಡೆ, ಕೃನಾಲ್‌ ಪಾಂಡ್ಯ, ವಾಷಿಂಗ್ಟನ್‌ ಸುಂದರ್‌, ಯಜುವೇಂದ್ರ ಚಹಲ್‌, ಭುವನೇಶ್ವರ್‌ ಕುಮಾರ್‌, ಖಲೀಲ್‌ ಅಹ್ಮದ್‌.

ವಿಂಡೀಸ್‌: ಶೈ ಹೋಪ್‌, ನಿಕೋಲಸ್‌ ಪೂರನ್‌, ಹೆಟ್ಮೇಯರ್‌, ಡರೆನ್‌ ಬ್ರಾವೋ, ಕೀರನ್‌ ಪೊಲ್ಲಾರ್ಡ್‌, ಕಾರ್ಲೊಸ್‌ ಬ್ರಾಥ್‌ವೇಟ್‌ (ನಾಯಕ), ರೋವ್ಮನ್‌ ಪೋವೆಲ್‌, ಕೀಮೋ ಪೌಲ್‌, ಫ್ಯಾಬಿಯನ್‌ ಆಲನ್‌, ಖಾರಿ ಪೇರ್‌, ಒಶಾನೆ ಥಾಮಸ್‌.

ಪಂದ್ಯ ಆರಂಭ: ಸಂಜೆ 7ಕ್ಕೆ, ನೇರ ಪ್ರಸಾರ: ಸ್ಟಾರ್‌ ಸ್ಪೋರ್ಟ್ಸ್ 1

ಪಿಚ್‌ ರಿಪೋರ್ಟ್‌

ಚೆಪಾಕ್‌ ಪಿಚ್‌ ನಿಧಾನಗತಿಯ ಪಿಚ್‌ ಆಗಿದ್ದು, ಬ್ಯಾಟ್ಸ್‌ಮನ್‌ಗಳಿಗೆ ಹೆಚ್ಚು ನೆರವು ನೀಡುವ ನಿರೀಕ್ಷೆ ಇದೆ. ಸ್ಪಿನ್ನರ್‌ಗಳು ಪ್ರಮುಖ ಪಾತ್ರ ವಹಿಸಲಿದ್ದು, ಭಾರತ ಮೂವರು ತಜ್ಞ ಸ್ಪಿನ್ನರ್‌ಗಳು ಆಡಿಸುವ ಸಾಧ್ಯತೆ ಹೆಚ್ಚು. ಟಾಸ್‌ ಗೆಲ್ಲುವ ತಂಡ ಮೊದಲು ಬ್ಯಾಟ್‌ ಮಾಡಿದರೆ ಅಚ್ಚರಿಯಿಲ್ಲ.

ರೋಹಿತ್‌ ಗರಿಷ್ಠ ರನ್‌ ದಾಖಲೆ?

ಭಾರತ ತಂಡದ ನಾಯಕ ರೋಹಿತ್‌ ಶರ್ಮಾ ಭಾನುವಾರದ ಪಂದ್ಯದಲ್ಲಿ 69 ರನ್‌ ಗಳಿಸಿದರೆ, ಅಂ.ರಾ.ಟಿ20ಯಲ್ಲಿ ಗರಿಷ್ಠ ರನ್‌ ಕಲೆಹಾಕಿದ ಬ್ಯಾಟ್ಸ್‌ಮನ್‌ಗಳ ಪಟ್ಟಿಯಲ್ಲಿ ಮೊದಲ ಸ್ಥಾನಕ್ಕೇರಿದ್ದಾರೆ. 86 ಪಂದ್ಯಗಳಿಂದ ರೋಹಿತ್‌ 2,203 ರನ್‌ ಗಳಿಸಿದ್ದಾರೆ. 75 ಪಂದ್ಯಗಳಲ್ಲಿ ನ್ಯೂಜಿಲೆಂಡ್‌ನ ಮಾರ್ಟಿನ್‌ ಗಪ್ಟಿಲ್‌ 2,271 ರನ್‌ ಗಳಿಸಿ ಅಗ್ರಸ್ಥಾನದಲ್ಲಿದ್ದಾರೆ.
 

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ದೇಶದ ಅಗ್ರ ಟಿ20 ಟೂರ್ನಿಯಲ್ಲೇ ಮ್ಯಾಚ್‌ ಫಿಕ್ಸಿಂಗ್‌, ನಾಲ್ವರು ಕ್ರಿಕೆಟಿಗರ ಸಸ್ಪೆಂಡ್‌ ಮಾಡಿ ತನಿಖೆಗೆ ಆದೇಶಿಸಿದ ಬಿಸಿಸಿಐ!
ಹೃತಿಕ್‌ ರೋಶನ್‌ 'ಕ್ರಿಶ್‌' ಸಿನಿಮಾದಲ್ಲಿ ಬಾಲನಟಿಯಾಗಿದ್ರಾ ಧೋನಿ ಪತ್ನಿ ಸಾಕ್ಷಿ?