
ಲಂಡನ್: ಟೆನಿಸ್ ಲೋಕದ ಹೊಸ ಸೂಪರ್ ಸ್ಟಾರ್ ಕಾರ್ಲೋಸ್ ಆಲ್ಕರಜ್ ಮತ್ತೊಮ್ಮೆ ವಿಂಬಲ್ಡನ್ ಗ್ರ್ಯಾನ್‌ಸ್ಲಾಂ ಟೆನಿಸ್ ಕಿರೀಟ ಗೆದ್ದಿದ್ದಾರೆ. ಸರಿಸಾಟಿಯಿಲ್ಲದ ಟೆನಿಸಿಗ ಎಂದೇ ಕರೆಸಿಕೊಳ್ಳುವ ದಿಗ್ಗಜ ನೋವಾಕ್ ಜೋಕೋವಿಚ್‌ಗೆ ಮತ್ತೊಮ್ಮೆ ಆಘಾತ ನೀಡುವ ಮೂಲಕ ಪ್ರಶಸ್ತಿ ಮುಡಿಗೇರಿಸಿಕೊಂಡ ಆಲ್ಕರಜ್, ಟೆನಿಸ್ ಲೋಕವನ್ನು ಇನ್ನಷ್ಟು ವರ್ಷಗಳ ಕಾಲ ಆಳುವ ಸ್ಪಷ್ಟ ಸಂದೇಶ ರವಾನಿಸಿದ್ದಾರೆ. ಇದರೊಂದಿಗೆ ಜೋಕೋವಿಚ್ ತಮ್ಮ 25ನೇ ಗ್ರ್ಯಾನ್‌ಸ್ಲಾಂ ಟ್ರೋಫಿಗೆ ಇನ್ನಷ್ಟು ಸಮಯ ಕಾಯುವಂತಾಗಿದೆ.
ಭಾನುವಾರ ನಡೆದ ಪುರುಷರ ಸಿಂಗಲ್ಸ್ ಫೈನಲ್‌ನಲ್ಲಿ ಸ್ಪೇನ್‌ನ 21 ವರ್ಷದ ಆಲ್ಕರಜ್, 24 ಗ್ರ್ಯಾನ್‌ಸ್ಲಾಂ ಪ್ರಶಸ್ತಿಗಳ ಒಡೆಯ, 7 ಬಾರಿ ವಿಂಬಲ್ಡನ್ ಚಾಂಪಿಯನ್ ಜೋಕೋವಿಚ್ ವಿರುದ್ಧ 6-2, 6-2, 7-6(7/4) ನೇರ ಸೆಟ್‌ಗಳಲ್ಲಿ ಗೆಲುವು ಸಾಧಿಸಿದರು.
ವಿಂಬಲ್ಡನ್ ಗ್ರ್ಯಾನ್‌ಸ್ಲಾಂ: ಆಲ್ಕರಜ್ vs ಜೋಕೋ ಫೈನಲ್ ಕದನ ಇಂದು..!
ವಿಶ್ವ ನಂ.2 ಜೋಕೋವಿಚ್‌ರ ಮೇಲೆ ಆಲ್ಕರಜ್ ಎಷ್ಟರ ಮಟ್ಟಿಗೆ ಪ್ರಾಬಲ್ಯ ಸಾಧಿಸಿದರು ಎಂದರೆ ಪಂದ್ಯ ಕೇವಲ ಎರಡೂವರೆ ಗಂಟೆಗಳಲ್ಲೇ ಮುಕ್ತಾಯಗೊಂಡಿತು. ಫೈನಲ್ ಕದನ ಒನ್ ಮ್ಯಾನ್ ಶೋಗೆ ಸಾಕ್ಷಿಯಾಯಿತು.
ಆಲ್ಕರಜ್ ಮೊದಲ ಸೆಟ್‌ನಲ್ಲಿ 6-2 ಸುಲಭ ಗೆಲುವು ತಮ್ಮದಾಗಿಸಿಕೊಂಡಾಗ 2ನೇ ಸೆಟ್‌ನಲ್ಲಿ ಜೋಕೋ ತಿರುಗೇಟು ನೀಡಬಹುದು ಎನ್ನುವ ನಿರೀಕ್ಷೆಯಿತ್ತು. ಆದರೆ ವೇಗದ ಸರ್ವ್, ಬಲಿಷ್ಠ ಹೊಡೆತ, ರಾಕೆಟ್‌ನಂತೆ ಬರುತ್ತಿದ್ದ ಚೆಂಡನ್ನು ಅಷ್ಟೇ ವೇಗದಲ್ಲಿ ಹಿಂದಿರುಗಿಸುತ್ತಿದ್ದ ಆಲ್ಕರಜ್‌ರ ಕೌಶಲ್ಯದ ಎದುರು ಜೋಕೋವಿಚ್‌ರ ಆಟ ನಗಣ್ಯವಾಗಿ ತೋರಿತು.
ಜೋಕೋವಿಚ್ ತಮ್ಮ 2 ದಶಕಗಳ ವೃತ್ತಿಬದುಕಿನಲ್ಲಿ ಇಷ್ಟೊಂದು ರಕ್ಷಣಾತ್ಮಕವಾಗಿ ಆಡಿ ಪಂದ್ಯ ಉಳಿಸಿಕೊಳ್ಳಲು ಹೋರಾಡಿದ್ದನ್ನು ಅಭಿಮಾನಿಗಳು ನೋಡಿಯೇ ಇರಲಿಲ್ಲ. ಜೋಕೋವಿಚ್‌ರನ್ನು ಇಷ್ಟರ ಮಟ್ಟಿಗೆ ಕಾಡಿದ ಮತ್ತೋರ್ವ ಆಟಗಾರ ಇಲ್ಲ ಎಂಬಂತಿತ್ತು ಆಲ್ಕರಜ್‌ರ ಆಟ.
ಪ್ಯಾರಿಸ್ ಒಲಿಂಪಿಕ್ಸ್ : ಭಾರತದ ಬ್ಯಾಡ್ಮಿಂಟನ್ ತಾರೆ ಸಿಂಧುಗೆ ಸುಲಭ ಸವಾಲು
3ನೇ ಸೆಟ್‌ನಲ್ಲಿ 5-4ರ ಮುನ್ನಡೆ ಹೊಂದಿದ್ದ ಆಲ್ಕರಜ್, ಪ್ರಶಸ್ತಿಗಾಗಿ ಸರ್ವ್ ಮಾಡಿದರು. 3 ಚಾಂಪಿಯನ್‌ಶಿಪ್ ಪಾಯಿಂಟ್‌ಗಳನ್ನು ರಕ್ಷಿಸಿಕೊಂಡ ಜೋಕೋ, 6-6 ಗೇಮ್‌ಗಳಲ್ಲಿ ಸಮಬಲ ಸಾಧಿಸಿ, ಸೆಟ್ ಟೈ ಬ್ರೇಕರ್‌ಗೆ ಹೋಗುವಂತೆ ಮಾಡಿದರು. ಟೈ ಬ್ರೇಕರ್‌ನಲ್ಲಿ ಆಲ್ಕರಜ್‌ಗೆ ಹೊಡೆತಗಳಿಗೆ ಜೋಕೋ ಬಳಿ ಉತ್ತರಗಳಿರಲಿಲ್ಲ.
ಫೆಡರರ್ ಸಾಲಿಗೆ ಆಲ್ಕರಜ್!
ಆಲ್ಕರಜ್ 4 ಬಾರಿ ಗ್ರ್ಯಾನ್‌ಸ್ಲಾಂ ಫೈನಲ್‌ನಲ್ಲೂ ಗೆಲ್ಲುವ ಮೂಲಕ ದಿಗ್ಗಜ ಆಟಗಾರ ರೋಜರ್ ಫೆಡರರ್ ಸಾಲಿಗೆ ಸೇರ್ಪಡೆಗೊಂಡಿದ್ದಾರೆ. ಫೆಡರರ್ ತಮ್ಮ ಮೊದಲ 7 ಗ್ರ್ಯಾನ್‌ಸ್ಲಾಂ ಫೈನಲ್‌ಗಳಲ್ಲೂ ಗೆದ್ದಿದ್ದರು.
ನೋವಾಕ್ ಜೋಕೋವಿಚ್
₹28 ಕೋಟಿ: ಪ್ರಶಸ್ತಿ ಗೆದ್ದ ಕಾರ್ಲೋಸ್ ಆಲ್ಕರಜ್‌ಗೆ ಸಿಕ್ಕ ಬಹುಮಾನ ಮೊತ್ತ.
₹14 ಕೋಟಿ: ರನ್ನರ್-ಅಪ್ ನೋವಾಕ್ ಜೋಕೋವಿಚ್‌ಗೆ ಸಿಕ್ಕ ಬಹುಮಾನ ಮೊತ್ತ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.