Wimbledon 2023 ಗೆಲುವಿನಾರಂಭ ಪಡೆದ ಜೋಕೋವಿಚ್ ಇಗಾ ಸ್ವಿಯಾಟೆಕ್

By Kannadaprabha News  |  First Published Jul 4, 2023, 9:12 AM IST

ಶುಭಾರಂಭ ಮಾಡಿದ ಜೋಕೋವಿಚ್


ಲಂಡನ್‌(ಜು.04): ವಿಂಬಲ್ಡನ್‌ ಗ್ರ್ಯಾನ್‌ಸ್ಲಾಂ ಟೆನಿಸ್‌ ಟೂರ್ನಿಯಲ್ಲಿ 7 ಬಾರಿ ಚಾಂಪಿಯನ್‌ ನೋವಾಕ್‌ ಜೋಕೋವಿಚ್‌, ವಿಶ್ವ ನಂ.1 ಇಗಾ ಸ್ವಿಯಾಟೆಕ್‌ ಶುಭಾರಂಭ ಮಾಡಿದ್ದಾರೆ. ಚೊಚ್ಚಲ ವಿಂಬಲ್ಡನ್‌ ಮೇಲೆ ಕಣ್ಣಿಟ್ಟಿರುವ ಇಗಾ ಸೋಮವಾರ ಮಹಿಳಾ ಸಿಂಗಲ್ಸ್‌ ಮೊದಲ ಸುತ್ತಲ್ಲಿ ಚೀನಾದ ಝು ಲಿನ್‌ ವಿರುದ್ಧ 6-1, 6-3ರಲ್ಲಿ ಜಯಗಳಿಸಿದರು. 4ನೇ ಶ್ರೇಯಾಂಕಿತೆ ಜೆಸ್ಸಿಕಾ ಪೆಗುಲಾ ಕೂಡಾ 2ನೇ ಸುತ್ತಿಗೇರಿದರು.

ಇನ್ನು ಇದೇ ವೇಳೆ ಪುರುಷರ ಸಿಂಗಲ್ಸ್‌ನಲ್ಲಿ ಜೋಕೋ ಅರ್ಜೆಂಟೀನಾದ ಪೆಡ್ರೊ ಕ್ಯಾಚಿನ್‌ರನ್ನು 6-3, 6-3, 7-6(7/4) ಸೆಟ್‌ಗಳಿಂದ ಮಣಿಸಿದರು. ಮೊದಲೆರಡು ಸೆಟ್‌ಗಳನ್ನು ನಿರಾಯಾಸವಾಗಿ ಗೆದ್ದ ಜೋಕೋವಿಚ್, 3ನೇ ಸೆಟ್‌ನಲ್ಲಿ ಪ್ರಬಲ ಪೈಪೋಟಿ ಎದುರಾಯಿತು. 3-5 ಗೇಮ್‌ಗಳಿಂದ ಹಿಂದಿದ್ದ ಕ್ಯಾಟಿಚ್ 6-6ರಲ್ಲಿ ಸಮಬಲ ಸಾಧಿಸಿದರು. ಹೀಗಾಗಿ ಟೈ ಬ್ರೇಕರ್‌ ಮೊರೆ ಹೋಗಲಾಯಿತು. ಟೈ ಬ್ರೇಕರ್‌ನಲ್ಲಿ ಜೋಕೋವಿಚ್‌ 7-4 ಅಂಕಗಳಲ್ಲಿ ಮುನ್ನಡೆ ಪಡೆದು ಸೆಟ್ ತಮ್ಮದಾಗಿಸಿಕೊಂಡರು. ಇದರೊಂದಿಗೆ ವಿಂಬಲ್ಡನ್‌ನಲ್ಲಿ ಸತತ 29ನೇ ಪಂದ್ಯ ಗೆದ್ದ ದಾಖಲೆಯನ್ನು ಜೋಕೋವಿಚ್ ಬರೆದರು. ಇನ್ನು 7ನೇ ಶ್ರೇಯಾಂಕಿಯ ರಷ್ಯಾದ ಆ್ಯಂಡ್ರೆ ರುಬ್ಲೆವ್‌ ಕೂಡಾ 2ನೇ ಸುತ್ತು ತಲುಪಿದರು. ಆ್ಯಂಡ್ರೆ ರುಬ್ಲೆವ್‌ ಆಸ್ಟ್ರೇಲಿಯಾದ ಮ್ಯಾಕ್ಸ್ ಪುರ್ಸೆಲ್ ವಿರುದ್ದ 6-3, 7-5, 6-4 ಅಂತರದಲ್ಲಿ ಜಯಿಸಿದರು.

Latest Videos

undefined

ರಾಜ್ಯದ ಸತ್ಯನಾರಾಯಣ ಎಐಎಫ್‌ಎಫ್‌ ಉಪ ಕಾರ್ಯದರ್ಶಿ

ಬೆಂಗಳೂರು: ಅಖಿಲ ಭಾರತ ಫುಟ್ಬಾಲ್‌ ಫೆಡರೇಶನ್‌(ಎಐಎಫ್‌ಎಫ್‌)ನ ಉಪ ಪ್ರಧಾನ ಕಾರ್ಯದರ್ಶಿಯಾಗಿ ಕರ್ನಾಟಕ ರಾಜ್ಯ ಫುಟ್ಬಾಲ್‌ ಸಂಸ್ಥೆ(ಕೆಎಸ್‌ಎಫ್‌ಎ) ಕಾರ್ಯದರ್ಶಿ ಎಂ.ಸತ್ಯನಾರಾಯಣ ನೇಮಕಗೊಂಡಿದ್ದಾರೆ. ಸೋಮವಾರ ಇಲ್ಲಿ ನಡೆದ ಎಐಎಫ್‌ಎಫ್‌ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಅಧ್ಯಕ್ಷ ಕಲ್ಯಾಣ್‌ ಚೌಬೆ , ಸತ್ಯನಾರಾಯಣ ಅವರ ನೇಮಕವನ್ನು ಘೋಷಿಸಿದರು.

ಈಜು: ಹಾಶಿಕಾ ರಾಷ್ಟ್ರೀಯ ದಾಖಲೆ

ಹೈದರಾಬಾದ್‌: 76ನೇ ರಾಷ್ಟ್ರೀಯ ಈಜು ಚಾಂಪಿಯನ್‌ಶಿಪ್‌ನಲ್ಲಿ ಕರ್ನಾಟಕ ಮತ್ತೆ 5 ಚಿನ್ನ ಸೇರಿ 9 ಪದಕ ಬಾಚಿಕೊಂಡಿದೆ. ಈ ಪೈಕಿ ಹಾಶಿಕಾ ರಾಮಚಂದ್ರ ರಾಷ್ಟ್ರೀಯ ದಾಖಲೆ ಬರೆದಿದ್ದಾರೆ. ಸೋಮವಾರ ಮಹಿಳೆಯರ 200 ಮೀ. ಮೆಡ್ಲೆಯಲ್ಲಿ ಹಾಶಿಕಾ 2:21.15 ನಿಮಿಷಗಳಲ್ಲಿ ಕ್ರಮಿಸಿ ರಾಷ್ಟ್ರೀಯ ದಾಖಲೆಯೊಂದಿಗೆ ಚಿನ್ನ ಗೆದ್ದರು. 

ಪುರುಷರ ವಿಭಾಗದಲ್ಲಿ ಶಿವ ಶ್ರೀಧರ್‌ ಚಿನ್ನ, ಶೋನ್‌ ಗಂಗೂಲಿ ಬೆಳ್ಳಿ ಪಡೆದರು. ಪುರುಷರ 100 ಮೀ. ಫ್ರಿಸ್ಟೈಲ್‌ನಲ್ಲಿ ತನಿಶ್‌ ಜಾರ್ಜ್‌ ಮ್ಯಾಥ್ಯೂ ಚಿನ್ನ, ಮಹಿಳೆಯರ 50 ಮೀ. ಬ್ರೆಸ್ಟ್‌ಸ್ಟ್ರೋಕ್‌ನಲ್ಲಿ ಮಾನವಿ ವರ್ಮಾ ಚಿನ್ನ, ಲಿನೈಶಾ ಬೆಳ್ಳಿ ಜಯಿಸಿದರು. 4*100 ಫ್ರಿಸ್ಟೈಲ್‌ನಲ್ಲೂ ರಾಜ್ಯದ ಪುರುಷರ ತಂಡ ಚಿನ್ನಕ್ಕೆ ಮುತ್ತಿಟ್ಟಿತು. ಮಹಿಳೆಯರ 100 ಮೀ. ಫ್ರೀಸ್ಟೈಲ್‌ನಲ್ಲಿ ಧಿನಿದಿ ದೇಸಿಂಘು, ಪುರುಷರ 800 ಮೀ. ಫ್ರೀಸ್ಟೈಲ್‌ನಲ್ಲಿ ಅನೀಶ್‌ ಗೌಡ ಕಂಚು ಜಯಿಸಿದರು. ಮೊದಲ ದಿನವೂ ಕರ್ನಾಟಕ 9 ಪದಕ ಗೆದ್ದಿತ್ತು.

ಇಂದಿನಿಂದ ಕೆನಡಾ ಓಪನ್‌: ಸಿಂಧು, ಸೇನ್‌ ಮೇಲೆ ನಿರೀಕ್ಷೆ

ಕ್ಯಾಲ್ಗರಿ(ಕೆನಡಾ): ಕೆಲ ಸಮಯದಿಂದ ಪದಕ ಬರ ಎದುರಿಸುತ್ತಿರುವ ಭಾರತದ ಅಗ್ರ ಶಟ್ಲರ್‌ಗಳಾದ ಪಿ.ವಿ.ಸಿಂಧು ಹಾಗೂ ಲಕ್ಷ್ಯ ಸೇನ್‌ ಮಂಗಳವಾರದಿಂದ ಕೆನಡಾ ಓಪನ್‌ ಸೂಪರ್‌ 500 ಟೂರ್ನಿಯಲ್ಲಿ ಕಣಕ್ಕಿಳಿಯಲಿದ್ದು, ಸುಧಾರಿತ ಪ್ರದರ್ಶನ ನೀಡುವ ತವಕದಲ್ಲಿದ್ದಾರೆ. 

ಮ್ಯಾಡ್ರಿಡ್‌ ಮಾಸ್ಟರ್ಸ್‌ನಲ್ಲಿ ಬೆಳ್ಳಿ ಗೆದ್ದಿದ್ದು ಸಿಂಧು ಅವರ ಈ ವರ್ಷದ ಶ್ರೇಷ್ಠ ಪ್ರದರ್ಶನ ಎನಿಸಿಕೊಂಡಿದ್ದು, ಈ ಬಾರಿ ಚಿನ್ನಕ್ಕೆ ಗುರಿ ಇಟ್ಟಿದ್ದಾರೆ. ತಸ್ನೀಂ ಮೀರ್‌, ರುತ್ವಿಕಾ ಶಿವಾನಿ ಕೂಡಾ ಮಹಿಳಾ ಸಿಂಗಲ್ಸ್‌ನಲ್ಲಿ ಕಣಕ್ಕಿಳಿಯಲಿದ್ದಾರೆ. ಸೇನ್‌ ಪುರುಷರ ಸಿಂಗಲ್ಸ್‌ ಪ್ರಧಾನ ಸುತ್ತಿನಲ್ಲಿರುವ ಏಕೈಕ ಭಾರತೀಯ ಎನಿಸಿಕೊಂಡಿದ್ದು, ಡಬಲ್ಸ್‌ನಲ್ಲಿ ಕೃಷ್ಣ ಪ್ರಸಾದ್‌-ವಿಷ್ಣುವರ್ಧನ್‌ ಆಡಲಿದ್ದಾರೆ.

click me!