ಇಂದಿನಿಂದ ಪ್ರತಿಷ್ಟಿತ ವಿಂಬಲ್ಡನ್ ಗ್ರ್ಯಾನ್ ಸ್ಲಾಂ ಆರಂಭ
ಸತತ 5ನೇ ವಿಂಬಲ್ಡನ್ ಗ್ರ್ಯಾನ್ ಸ್ಲಾಂ ಗೆಲ್ಲುವ ವಿಶ್ವಾಸದಲ್ಲಿ ನೋವಾಕ್ ಜೋಕೋವಿಚ್
ವಿಶ್ವ ನಂ.1 ಇಗಾ ಸ್ವಿಯಾಟೆಕ್‌ಗೆ ಚೊಚ್ಚಲ ವಿಂಬಲ್ಡನ್ ಗೆಲ್ಲುವ ಕನಸು
ಲಂಡನ್(ಜು.03): ವರ್ಷದ 3ನೇ ಗ್ರ್ಯಾನ್‌ಸ್ಲಾಂ, ಪ್ರತಿಷ್ಠಿತ ವಿಂಬಲ್ಡನ್ ಟೆನಿಸ್ ಟೂರ್ನಿ ಸೋಮವಾರದಿಂದ ಆರಂಭಗೊಳ್ಳಲಿದ್ದು, 23 ಗ್ರ್ಯಾನ್‌ಸ್ಲಾಂಗಳ ಒಡೆಯ ನೋವಾಕ್ ಜೋಕೋವಿಚ್, ವಿಶ್ವ ನಂ.1 ಟೆನಿಸಿಗರಾದ ಇಗಾ ಸ್ವಿಯಾಟೆಕ್, ಕಾರ್ಲೊಸ್ ಆಲ್ಕರಜ್ ಪ್ರಮುಖ ಆಕರ್ಷಣೆಯಾಗಿದ್ದಾರೆ.
ಸತತ 5ನೇ ಹಾಗೂ ಒಟ್ಟಾರೆ 8ನೇ ಪ್ರಶಸ್ತಿ ಮೇಲೆ ಕಣ್ಣಿಟ್ಟಿರುವ ಸರ್ಬಿಯಾದ ಜೋಕೋ, ಅರ್ಜೆಂಟೀನಾದ ಪೆಡ್ರೊ ಕ್ಯಾಚಿನ್ ವಿರುದ್ಧ ಆಡುವ ಮೂಲಕ ಅಭಿಯಾನ ಆರಂಭಿಸಲಿದ್ದಾರೆ. ರಾಫೆಲ್ ನಡಾಲ್, ರೋಜರ್ ಫೆಡರರ್ ಅನುಪಸ್ಥಿತಿಯಲ್ಲಿ ತಮ್ಮ ಗ್ರ್ಯಾನ್‌ಸ್ಲಾಂ ಗಳಿಕೆಯನ್ನು 24ಕ್ಕೆ ಹೆಚ್ಚಿಸಿಕೊಳ್ಳಲು ಜೋಕೋ ಕಾಯುತ್ತಿದ್ದಾರೆ. ಈಗಾಗಲೇ ಈ ವರ್ಷದ ಆಸ್ಟ್ರೇಲಿಯನ್ ಓಪನ್, ಫ್ರೆಂಚ್ ಓಪನ್ ಗೆದ್ದಿರುವ ಜೋಕೋವಿಚ್ ವರ್ಷದ 3ನೇ ಪ್ರಶಸ್ತಿ ಮೇಲೆ ಕಣ್ಣಿಟ್ಟಿದ್ದಾರೆ.
undefined
ಇನ್ನು, ಕಳೆದ ಬಾರಿ ಯುಎಸ್ ಓಪನ್ ಚಾಂಪಿಯನ್, 20ರ ಆಲ್ಕರಜ್ ತಮ್ಮ 3ನೇ ಪ್ರಯತ್ನದಲ್ಲಿ ಚೊಚ್ಚಲ ವಿಂಬಲ್ಡನ್ ಗೆಲ್ಲುವ ನಿರೀಕ್ಷೆಯಲ್ಲಿದ್ದಾರೆ. 2 ಬಾರಿ ಚಾಂಪಿಯನ್, ಬ್ರಿಟನ್‌ನ ಆ್ಯಂಡಿ ಮರ್ರೆ, 2021ರ ಯುಎಸ್ ಓಪನ್ ವಿಜೇತ ಡ್ಯಾನಿಲ್ ಮೆಡ್ವೆಡೆವ್ ಕೂಡಾ ಕಣದಲ್ಲಿದ್ದು, ನಾರ್ವೆಯ ಕ್ಯಾಸ್ಪೆರ್ ರುಡ್, ರಷ್ಯಾದ ಆ್ಯಂಡ್ರೆ ರುಬ್ಲೆವ್, ಜರ್ಮನಿಯ ಅಲೆಕ್ಸಾಂಡೆರ್ ಜ್ವೆರೆವ್, ಡೆನ್ಮಾರ್ಕ್‌ನ ಹೋಲ್ಗರ್ ರ್‍ಯುನೆ, ಗ್ರೀಸ್‌ನ ಸ್ಟೆಫಾನೋಸ್ ಸಿಟ್ಸಿಪಾಸ್ ಚೊಚ್ಚಲ ಗ್ರ್ಯಾನ್‌ಸ್ಲಾಂ ಗೆಲ್ಲುವ ಮಹದಾಸೆಯೊಂದಿಗೆ ಕಣಕ್ಕಿಳಿಯಲಿದ್ದಾರೆ.
ಇಗಾ ಫೇವರಿಟ್: ವಿಂಬಲ್ಡನ್‌ನಲ್ಲಿ 3 ಬಾರಿ ಕಣಕ್ಕಿಳಿದರೂ ಈವರೆಗೆ 4ನೇ ಸುತ್ತು ದಾಟದ ಪೋಲೆಂಡ್‌ನ ಇಗಾ ಸ್ವಿಯಾಟೆಕ್ ಚೊಚ್ಚಲ ಪ್ರಶಸ್ತಿ ಗೆಲ್ಲಲು ಎದುರು ನೋಡುತ್ತಿದ್ದಾರೆ. ಕಳೆದ ಒಂದೂವರೆ ವರ್ಷದಲ್ಲಿ 4 ಗ್ರ್ಯಾನ್‌ಸ್ಲಾಂ ಗೆದ್ದಿರುವ ಇಗಾ ಈ ಬಾರಿ ಪ್ರಶಸ್ತಿ ಜಯಿಸುವ ಫೇವರಿಟ್ ಎನಿಸಿದ್ದಾರೆ. ವಿಂಬಲ್ಡನ್‌ನ ಮಹಿಳಾ ಸಿಂಗಲ್ಸ್‌ನಲ್ಲಿ ಕಳೆದ 5 ಆವೃತ್ತಿಗಳಲ್ಲಿ ಐವರು ಬೇರೆ ಬೇರೆ ಆಟಗಾರ್ತಿಯರು ಚಾಂಪಿಯನ್ ಆಗಿದ್ದು, ಈ ವರ್ಷವೂ ಹೊಸ ಚಾಂಪಿಯನ್‌ನ ಉದಯಕ್ಕೆ ಸಾಕ್ಷಿಯಾಗಬಹುದು. ಹಾಲಿ ಚಾಂಪಿಯನ್ ಕಜಕಸ್ತಾನದ ಎಲೆನಾ ರಬೈಕೆನಾ, ಕಳೆದ ಬಾರಿ ರನ್ನರ್-ಅಪ್ ಟ್ಯುನೀಶಿಯಾದ ಒನ್ಸ್ ಜಬುರ್, 2023ರ ಆಸ್ಟ್ರೇಲಿಯನ್ ಓಪನ್ ವಿಜೇತೆ ಬೆಲಾರಸ್‌ನ ಅರೈನಾ ಸಬಲೆಂಕಾ, ಈ ಬಾರಿ ಫ್ರೆಂಚ್ ಓಪನ್ ರನ್ನರ್-ಅಪ್ ಚೆಕ್ ಗಣರಾಜ್ಯದ ಕ್ಯಾರೊಲಿನಾ ಮುಕೋವಾ, ಅಮೆರಿಕದ ಕೊಕೊ ಗಾಫ್, ಜೆಸ್ಸಿಕಾ ಪೆಗುಲಾ ಮೇಲೂ ನಿರೀಕ್ಷೆ ಇದೆ.
ಬೋಪಣ್ಣ ಏಕೈಕ ಭಾರತೀಯ
ಈ ಬಾರಿ ಟೂರ್ನಿಯಲ್ಲಿ ಭಾರತದಿಂದ ರೋಹಣ್ ಬೋಪಣ್ಣ ಮಾತ್ರ ಕಣಕ್ಕಳಿಯಲಿದ್ದಾರೆ. 43 ವರ್ಷದ ಬೋಪಣ್ಣ ಪುರುಷರ ಡಬಲ್ಸ್‌ನಲ್ಲಿ ಆಸ್ಟ್ರೇಲಿಯಾದ ಮ್ಯಾಥ್ಯೂ ಎಬ್ಡೆನ್ ಜೊತೆ ಆಡಲಿದ್ದಾರೆ. ಬೋಪಣ್ಣ ಪುರುಷರ ಡಬಲ್ಸ್‌ನಲ್ಲಿ 2 ಬಾರಿ ಸೆಮಿಫೈನಲ್‌ಗೇರಿದ್ದು, ಈ ಬಾರಿ ಚೊಚ್ಚಲ ಪ್ರಶಸ್ತಿ ನಿರೀಕ್ಷೆಯಲ್ಲಿದ್ದಾರೆ. ಇತ್ತೀಚೆಗಷ್ಟೇ ವೃತ್ತಿಪರ ಟೆನಿಸ್‌ಗೆ ನಿವೃತ್ತಿ ಘೋಷಿಸಿದ್ದ ಸಾನಿಯಾ ಮಿರ್ಜಾ ಆಹ್ವಾನಿತ ಲೆಜೆಂಡ್ಸ್ ಮಹಿಳಾ ಡಬಲ್ಸ್‌ನಲ್ಲಿ ಆಸ್ಟ್ರೇಲಿಯಾದ ಜೊಹಾನ್ನ ಕೊಂಟಾ ಜೊತೆ ಕಣಕ್ಕಿಳಿಯಲಿದ್ದಾರೆ. ಇದು ಪ್ರಧಾನ ಸುತ್ತಿಗೆ ಪರಿಗಣಿಸಲ್ಪಡುವುದಿಲ್ಲ.
24 ಕೋಟಿ ರುಪಾಯಿ ಬಹುಮಾನ
ಪುರುಷ ಹಾಗೂ ಮಹಿಳಾ ಸಿಂಗಲ್ಸ್ ವಿಭಾಗಗಳಲ್ಲಿ ಚಾಂಪಿಯನ್ ಆಗುವ ಟೆನಿಸಿಗರಿಗೆ ಬರೋಬ್ಬರಿ 2.35 ಮಿಲಿಯನ್ ಪೌಂಡ್(ಅಂದಾಜು 24.51 ಕೋಟಿ ರು.) ಬಹುಮಾನ ಮೊತ್ತ ಸಿಗಲಿದೆ. ರನ್ನರ್-ಅಪ್ ಆಗುವವರಿಗೆ 1.175 ಮಿಲಿಯನ್ ಪೌಂಡ್ (ಅಂದಾಜು 12.25 ಕೋಟಿ ರು.) ಸಿಗಲಿದೆ.