
ಲಂಡನ್(ಜು.04): ಅಗ್ರ ಶ್ರೇಯಾಂಕಿತ ಸ್ಪೇನ್‌ನ ರಾಫೆಲ್ ನಡಾಲ್ (Rafael Nadal) ವಿಂಬಲ್ಡನ್ ಗ್ರ್ಯಾನ್ ಸ್ಲಾಂ ಟೆನಿಸ್ ಟೂರ್ನಿಯ 4ನೇ ಸುತ್ತಿಗೆ ಪ್ರವೇಶಿಸಿದ್ದಾರೆ. ಶನಿವಾರ ನಡೆದ ಪುರುಷರ ಸಿಂಗಲ್ಸ್ 3ನೇ ಸುತ್ತಿನಲ್ಲಿ 22 ಗ್ರ್ಯಾನ್‌ಸ್ಲಾಂಗಳ ಒಡೆಯ ನಡಾಲ್, ಇಟಲಿಯ ಲೊರೆಂಜೊ ಸೊನೆಗೊ ವಿರುದ್ಧ 6-1, 6-2, 6-4 ನೇರ ಸೆಟ್‌ಗಳಲ್ಲಿ ಜಯ ಸಾಧಿಸಿದರು. ಈ ವರ್ಷ ಆಸ್ಪ್ರೇಲಿಯನ್ ಓಪನ್ (Australian Open) ಮತ್ತು ಫ್ರೆಂಚ್ ಓಪನ್ (French Open) ಗೆದ್ದಿರುವ ವಿಶ್ವ ನಂ.5 ನಡಾಲ್ ಮತ್ತೊಂದು ಗ್ರ್ಯಾನ್ ಸ್ಲಾಂ ಮೇಲೆ ಕಣ್ಣಿಟ್ಟಿದ್ದು, ಅಂತಿಮ 16ರ ಸುತ್ತಿನಲ್ಲಿ ನೆದರ್ಲೆಂಡ್‌್ಸನ ಬೊಟಿಕ್ ಜಾಂಡ್‌ಶುಪ್ ವಿರುದ್ಧ ಸೆಣಸಲಿದ್ದಾರೆ.
ಇದೇ ವೇಳೆ ಮಹಿಳಾ ಸಿಂಗಲ್ಸ್‌ನಲ್ಲಿ 4ನೇ ಶ್ರೇಯಾಂಕಿತ ಸ್ಪೇನ್‌ನ ಪಾಲಾ ಬಡೋಸಾ 7-5, 7-6(7-4) ನೇರ ಸೆಟ್‌ಗಳಿಂದ ಚೆಕ್ ಗಣರಾಜ್ಯದ ಪೆಟ್ರಾ ಕ್ವಿಟೋವಾ ಅವರನ್ನು ಮಣಿಸಿ 4ನೇ ಸುತ್ತಿಗೆ ಮುನ್ನಡೆದರು. ಆದರೆ 2021ರ ಫ್ರೆಂಚ್ ಓಪನ್ ರನ್ನರ್-ಅಪ್ ಗ್ರೀಸ್‌ನ ಸ್ಟೆಫಾನೋಸ್ ಸಿಟ್ಸಿಪಾಸ್ 3ನೇ ಸುತ್ತಿನ ಹಣಾಹಣಿಯಲ್ಲಿ ಆಸ್ಪ್ರೇಲಿಯಾದ ನಿಕ್ ಕಿರಿಯೋಸ್ ವಿರುದ್ಧ 7-6(2), 4-6, 3-6, 6-7 ಸೆಟ್‌ಗಳಿಂದ ಸೋತು ಟೂರ್ನಿಯಿಂದ ಹೊರಬಿದ್ದರು. ಇತ್ತೀಚೆಗಷ್ಟೇ ಫ್ರೆಂಚ್ ಓಪನ್ ಮಹಿಳಾ ಸಿಂಗಲ್ಸ್ ರನ್ನರ್-ಅಪ್ ಆಗಿದ್ದ ಅಮೆರಿಕದ 18ರ ಕೊಕೊ ಗಾಫ್ ತಮ್ಮದೇ ದೇಶದ ಅಮಂಡಾ ಅನಿಸಿಮೋವಾ ವಿರುದ್ಧ ಪರಾಭವಗೊಂಡರು.
ಸಾನಿಯಾ ಮಿಶ್ರ ಡಬಲ್ಸ್ ಕ್ವಾರ್ಟರ್‌ಗೆ
ಲಂಡನ್: ಭಾರತದ ಸಾನಿಯಾ ಮಿರ್ಜಾ (Sania Mirza)-ಕ್ರೊವೇಷಿಯಾದ ಮೇಟ್ ಪಾವಿಚ್ ಜೋಡಿ ಮಿಶ್ರ ಡಬಲ್ಸ್‌ನಲ್ಲಿ ಕ್ವಾರ್ಟರ್ ಫೈನಲ್ ಪ್ರವೇಶಿಸಿದೆ. ಭಾನುವಾರ ಕ್ರೊವೇಷಿಯಾದ ಇವಾನ್ ಡೊಡಿಗ್-ತೈವಾನ್‌ನ ಲತೀಶಾ ಚಾನ್ ವಿರುದ್ಧ 2ನೇ ಸುತ್ತಿನಲ್ಲಿ ಭಾರತ-ಕ್ರೊವೇಷಿಯಾದ ಜೋಡಿ ವಾಕ್‌ಓವರ್ ಮೂಲಕ ಅಂತಿಮ 8ರ ಸುತ್ತು ತಲುಪಿತು. ಈ ಜೋಡಿ ಮೊದಲ ಸುತ್ತಲ್ಲಿ ಸ್ಪೇನ್‌ನ ಡೇವಿಡ್ ಹೆರ್ನಾಂಡೆಜ್-ಜಾರ್ಜಿಯಾದ ನಟೇಲಾ ಜೋಡಿ ವಿರುದ್ಧ ಗೆಲುವು ಸಾಧಿಸಿತ್ತು.
44ನೇ ಚೆಸ್ ಒಲಿಂಪಿಯಾಡ್: ಭಾರತದ 3ನೇ ತಂಡ ಕಣಕ್ಕೆ
ಚೆನ್ನೈ: ಜುಲೈ 29ರಿಂದ ಆ.10ರ ವರೆಗೆ ಚೆನ್ನೈನಲ್ಲಿ ನಿಗದಿಯಾಗಿರುವ 44ನೇ ಚೆಸ್ ಒಲಿಂಪಿಯಾಡ್‌ನಲ್ಲಿ ಭಾರತ ಮುಕ್ತ ವಿಭಾಗದಲ್ಲಿ 3ನೇ ತಂಡ ಕಣಕ್ಕಿಳಿಸಲಿದೆ. ಆತಿಥೇಯ ದೇಶಕ್ಕೆ ಕನಿಷ್ಠ 2 ಮತ್ತು ಗರಿಷ್ಠ 3 ತಂಡಗಳನ್ನು ಆಡಿಸುವ ಅವಕಾಶವಿದ್ದು, ಅದನ್ನು ಭಾರತ ಕೊನೆ ಕ್ಷಣದಲ್ಲಿ ಬಳಸಿಕೊಂಡಿದೆ. ಮಹಿಳಾ ವಿಭಾಗದಲ್ಲಿ ಭಾರತ 2 ತಂಡಗಳನ್ನು ಆಡಿಸಲಿದೆ. ಈ ಬಾರಿ ಈಗಾಗಲೇ ಮುಕ್ತ ವಿಭಾಗದಲ್ಲಿ 187 ತಂಡಗಳು ಮತ್ತು ಮಹಿಳಾ ವಿಭಾಗದಲ್ಲಿ 162 ತಂಡಗಳು ನೋಂದಣಿ ಮಾಡಿಕೊಂಡಿದ್ದು, ದಾಖಲೆ ಎನಿಸಿಕೊಂಡಿದೆ. 2018ರಲ್ಲಿ ಜಾರ್ಜಿಯಾದಲ್ಲಿ ನಡೆದಿದ್ದ ಒಲಿಂಪಿಯಾಡ್‌ನಲ್ಲಿ 179 ದೇಶಗಳು ಸ್ಪರ್ಧೆ ನಡೆಸಿದ್ದು ಈವರೆಗಿನ ದಾಖಲೆಯಾಗಿತ್ತು.
3,000 ಮೀ. ಓಟ: ಹೊಸ ದಾಖಲೆ ಬರೆದ ಪಾರುಲ್
ನವದೆಹಲಿ: ಭಾರತದ ಪಾರುಲ್ ಚೌಧರಿ ಅಮೆರಿಕದ ಲಾಸ್ ಏಂಜಲೀಸ್‌ನಲ್ಲಿ ನಡೆದ ಸೌಂಡ್ ರನ್ನಿಂಗ್ ಕೂಟದ 3000 ಮೀ. ಓಟದ ಸ್ಪರ್ಧೆಯಲ್ಲಿ ರಾಷ್ಟ್ರೀಯ ದಾಖಲೆ ಬರೆದಿದ್ದಾರೆ. 9 ನಿಮಿಷಗಳೊಳಗೆ ಓಟ ಪೂರ್ಣಗೊಳಿಸಿದ ಭಾರತದ ಮೊದಲ ಓಟಗಾರ್ತಿ ಎನ್ನುವ ಹಿರಿಮೆಗೂ ಪಾತ್ರರಾಗಿದ್ದಾರೆ. 8 ನಿಮಿಷ 57.19 ಸೆಕೆಂಡ್‌ಗಳಲ್ಲಿ ಗುರಿ ತಲುಪಿದ ಪಾರುಲ್, 6 ವರ್ಷಗಳ ಹಿಂದೆ ದೆಹಲಿಯಲ್ಲಿ ಸೂರಿಯಾ ಲೋಕನಾಥನ್ 9 ನಿಮಿಷ 04.5 ಸೆಕೆಂಡ್‌ಗಳಲ್ಲಿ ಓಟ ಮುಗಿಸಿ ಬರೆದಿದ್ದ ದಾಖಲೆಯನ್ನು ಮುರಿದರು. 3000 ಮೀ. ಓಟ ಒಲಿಂಪಿಕ್ ಸ್ಪರ್ಧೆಯಲ್ಲ. ಪಾರುಲ್ ಇದೇ ತಿಂಗಳು ಅಮೆರಿಕದಲ್ಲೇ ನಡೆಯಲಿರುವ ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ 3000 ಮೀ. ಸ್ಟೀಪಲ್‌ಚೇಸ್ ಸ್ಪರ್ಧೆಯಲ್ಲಿ ಭಾಗವಹಿಸಲಿದ್ದಾರೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.