Commonwealth Games 2022: ವೇಟ್‌ಲಿಫ್ಟಿಂಗ್‌ನಲ್ಲಿ ಭಾರತ ಹೆಚ್ಚು ಪದಕ ಗೆಲ್ಲಲಿದೆ: ಕೋಚ್ ವಿಜಯ್‌ ಶರ್ಮಾ

By Naveen KodaseFirst Published Jul 30, 2022, 1:45 PM IST
Highlights

ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಹೆಚ್ಚು ಪದಕ ಗೆಲ್ಲುವ ಭರವಸೆ ಮೂಡಿಸಿರುವ ವೇಟ್‌ಲಿಫ್ಟರ್‌ಗಳು
15 ಭಾರತೀಯ ವೇಟ್‌ಲಿಫ್ಟರ್‌ಗಳು ಈ ಬಾರಿಯ ಕಾಮನ್‌ವೆಲ್ತ್‌ ಗೇಮ್ಸ್‌ನಲ್ಲಿ ಭಾಗಿ
ಒಲಿಂಪಿಕ್ಸ್‌ ಪದಕ ವಿಜೇತೆ ಮೀರಾಬಾಯಿ ಚಾನು ಮೇಲೆ ಎಲ್ಲರ ಚಿತ್ತ

ಬರ್ಮಿಂಗ್‌ಹ್ಯಾಮ್‌(ಜು.30): ಬಹುನಿರೀಕ್ಷಿತ ಬರ್ಮಿಂಗ್‌ಹ್ಯಾಮ್‌ ಕಾಮನ್‌ವೆಲ್ತ್‌ ಗೇಮ್ಸ್ ಕ್ರೀಡಾಕೂಟಕ್ಕೆ ಅಧಿಕೃತ ಚಾಲನೆ ಸಿಕ್ಕಿದ್ದು, ಭಾರತದ ವೇಟ್‌ಲಿಫ್ಟರ್‌ಗಳ ಮೇಲೆ ಇದೀಗ ಎಲ್ಲರ ಚಿತ್ತ ನೆಟ್ಟಿದೆ. ಈ ಬಾರಿಯ ಕಾಮನ್‌ವೆಲ್ತ್‌ ಗೇಮ್ಸ್‌ ಕ್ರೀಡಾಕೂಟದಲ್ಲಿ ಭಾರತೀಯ ವೇಟ್‌ಲಿಫ್ಟರ್‌ಗಳು ಅತ್ಯುತ್ತಮ ಪ್ರದರ್ಶನ ತೋರುವ ವಿಶ್ವಾಸವಿದೆ ಎಂದು ರಾಷ್ಟ್ರೀಯ ವೇಟ್‌ಲಿಫ್ಟಿಂಗ್ ಕೋಚ್ ವಿಜಯ್ ಶರ್ಮಾ ಆತ್ಮವಿಶ್ವಾಸ ವ್ಯಕ್ತಪಡಿಸಿದ್ದಾರೆ. ಒಲಿಂಪಿಕ್ಸ್‌ ಪದಕ ವಿಜೇತೆ ಮೀರಾಬಾಯಿ ಚಾನು, ಕನ್ನಡಿಗ ಗುರುರಾಜ್ ಪೂಜಾರಿ ಸೇರಿದಂತೆ ಹಲವು ವೇಟ್‌ಲಿಫ್ಟರ್‌ಗಳು ಈ ಬಾರಿಯ ಕೂಟದಲ್ಲಿ ಪದಕ ಗೆಲ್ಲುವ ಭರವಸೆ ಮೂಡಿಸಿದ್ದಾರೆ.

ಈ ಬಾರಿಯ ಕಾಮನ್‌ವೆಲ್ತ್‌ ಗೇಮ್ಸ್‌ ಕ್ರೀಡಾಕೂಟದಲ್ಲಿ ಭಾರತದ 15 ವೇಟ್‌ಲಿಫ್ಟರ್‌ಗಳು ಪಾಲ್ಗೊಂಡಿದ್ದಾರೆ. ದ್ರೋಣಾಚಾರ್ಯ ಪ್ರಶಸ್ತಿ ವಿಜೇತರಾಗಿರುವ ಕೋಚ್ ವಿಜಯ್‌ ಶರ್ಮಾ, ತಮ್ಮ ವೇಟ್‌ಲಿಫ್ಟಿಂಗ್ ಸ್ಪರ್ಧಿಗಳ ಬಗ್ಗೆ ಆತ್ಮವಿಶ್ವಾಸ ವ್ಯಕ್ತಪಡಿಸಿದ್ದಾರೆ. ಈ ಬಾರಿ ಸಾಕಷ್ಟು ಹೊಸ ಮುಖಗಳು ಕಾಮನ್‌ವೆಲ್ತ್‌ ಗೇಮ್ಸ್‌ನಲ್ಲಿ ಪಾಲ್ಗೊಂಡಿವೆ. ಭಾರತ ವೇಟ್‌ಲಿಫ್ಟರ್‌ಗಳ ಪೈಕಿ ಸಂಕೇತ್ ಸಾಗರ್, ಜೆರೆಮಿ, ಅಚಿಂತಾ, ಲವ್ಪ್ರೀತ್, ಗುರುದೀಪ್ ಸಿಂಗ್, ಬಿಂದ್ಯಾರಾಣಿ, ಪೊಪ್ಪಿ ಮತ್ತು ಪೂರ್ಣಿಮಾ ಪಾಂಡೆ ಸಾಕಷ್ಟು ಪ್ರತಿಭಾನ್ವಿತ ವೇಟ್‌ಲಿಫ್ಟರ್‌ಗಳಾಗಿದ್ದಾರೆ ಎಂದು ವಿಜಯ್ ಶರ್ಮಾ ಹೇಳಿದ್ದಾರೆ.

ಇವರೆಲ್ಲರೂ ಭಾರತದ ಭವಿಷ್ಯದ ತಾರೆಗಳು. ಮುಂದೊಂದು ದಿನ ಇವರೆಲ್ಲರೂ ಒಲಿಂಪಿಕ್ಸ್‌ ಕ್ರೀಡಾಕೂಟದಲ್ಲಿ ಭಾರತವನ್ನು ಪ್ರತಿನಿಧಿಸಲಿದ್ದಾರೆ. ನನ್ನ ಗುರಿಯೇನಿದ್ದರೂ ಭವಿಷ್ಯತ್ತಿನಲ್ಲಿ ನಾವು ಬಲಿಷ್ಠ ವೇಟ್‌ಲಿಫ್ಟಿಂಗ್ ತಂಡವನ್ನು ಕಟ್ಟುವುದಾಗಿದೆ. ಬರ್ಮಿಂಗ್‌ಹ್ಯಾಮ್‌ ಕಾಮನ್‌ವೆಲ್ತ್ ಗೇಮ್ಸ್‌ ಇದು ಕೇವಲ ಆರಂಭವಷ್ಟೇ. ಈ ಎಲ್ಲಾ ವೇಟ್‌ಲಿಫ್ಟರ್‌ಗಳು ಈ ಬಾರಿಯ ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಉತ್ತಮ ಪ್ರದರ್ಶನ ತೋರುವ ವಿಶ್ವಾಸವಿದೆ ಎಂದು ಟೈಮ್ಸ್‌ ಆಫ್‌ ಇಂಡಿಯಾಗೆ ಪ್ರತಿಕ್ರಿಯೆ ನೀಡಿದೆ.

ಕಾಮನ್‌ವೆಲ್ತ್‌ ಗೇಮ್ಸ್‌: ಮೊದಲ ದಿನ ಪದಕ ಗೆಲ್ಲದ ಭಾರತ

ಪ್ಯಾರಿಸ್ ಒಲಿಂಪಿಕ್ಸ್‌ ಕ್ರೀಡಾಕೂಟಕ್ಕೆ ಅರ್ಹತೆ ಪಡೆಯುವ ಸಿದ್ದತೆಗಳು ಈ ವರ್ಷಾಂತ್ಯದಲ್ಲಿ ಡಿಸೆಂಬರ್‌ನಲ್ಲಿ ನಡೆಯಲಿರುವ ವಿಶ್ವ ವೇಟ್‌ಲಿಫ್ಟಿಂಗ್‌ ಚಾಂಪಿಯನ್‌ಶಿಪ್‌ನಿಂದಲೇ ಆರಂಭವಾಗಲಿದೆ. ಇದಾದ ಬಳಿಕ ಪ್ರತಿ ಮೂರು ತಿಂಗಳಿಗೊಮ್ಮೆ ಸ್ಪರ್ಧೆಗಳಲ್ಲಿ ಪಾಲ್ಗೊಳ್ಳಬೇಕಿದೆ. ಕೆಲವೊಮ್ಮೆ ಎರಡೆರಡು ಸ್ಪರ್ಧೆಗಳಲ್ಲಿ ಪಾಲ್ಗೊಳ್ಳಬೇಕಾದ ಸಂದರ್ಭವೂ ಇದೆ. ಪ್ಯಾರಿಸ್ ಒಲಿಂಪಿಕ್ಸ್‌ಗೆ ಪಾಲ್ಗೊಳ್ಳಲು 6 ಅರ್ಹತಾ ಸುತ್ತಿನಲ್ಲಿ ಪಾಲ್ಗೊಳ್ಳುವುದು ಕಡ್ಡಾಯ ಎನಿಸಿದೆ. ಇದಾದ ಬಳಿಕ ಆರು ಅರ್ಹತಾ ಸುತ್ತಿನ ಸ್ಪರ್ಧೆಯಲ್ಲಿ ವೇಟ್‌ಲಿಫ್ಟರ್‌ಗಳು ತೋರಿದ ಪ್ರದರ್ಶನವನ್ನು ಗಮನದಲ್ಲಿಟ್ಟುಕೊಂಡು ರ‍್ಯಾಂಕಿಂಗ್‌ ನೀಡಲಾಗುತ್ತದೆ. ಹೀಗಾಗಿ ನಮ್ಮ ಪ್ರಯತ್ನವೇನಿದ್ದರೂ ಪ್ಯಾರಿಸ್ ಒಲಿಂಪಿಕ್ಸ್‌ ಕ್ರೀಡಾಕೂಟಕ್ಕೆ ಬಲಿಷ್ಠ ತಂಡವನ್ನು ಕಟ್ಟುವುದಾಗಿದೆ ಎಂದು ವಿಜಯ್ ಶರ್ಮಾ ತಿಳಿಸಿದ್ದಾರೆ.

ಇದೇ ವೇಳೆ ವಿಜಯ್‌ ಶರ್ಮಾ, ಈ ಹಿಂದೆ ಆಸ್ಟ್ರೇಲಿಯಾದ ಗೋಲ್ಡ್‌ಕೋಸ್ಟ್‌ನಲ್ಲಿ ನಡೆದ ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಭಾರತೀಯ ವೇಟ್‌ಲಿಫ್ಟರ್‌ಗಳು ತೋರಿದ ಪ್ರದರ್ಶನಕ್ಕಿಂತ ಉತ್ತಮ ಪ್ರದರ್ಶನ ಈ ಬಾರಿ ಮೂಡಿ ಬರಲಿದೆ ಎಂದು ವಿಜಯ್ ಶರ್ಮಾ ಅಭಿಪ್ರಾಯಪಟ್ಟಿದ್ದಾರೆ. ಕಳೆದ ಬಾರಿಯ ಕಾಮನ್‌ವೆಲ್ತ್ ಗೇಮ್ಸ್ ಕ್ರೀಡಾಕೂಟದಲ್ಲಿ ಭಾರತದ ವೇಟ್‌ಲಿಫ್ಟರ್‌ಗಳು ಒಟ್ಟು 9 ಪದಕಗಳನ್ನು ಜಯಿಸಿದ್ದರು.

click me!