
ತರೌಬಾ(ಜು.30): ಭಾರತ ಹಾಗೂ ವೆಸ್ಟ್ ಇಂಡೀಸ್ ತಂಡಗಳ ನಡುವಿನ 5 ಪಂದ್ಯಗಳ ಟಿ20 ಸರಣಿಯ ಮೊದಲ ಪಂದ್ಯದಲ್ಲಿ ರೋಹಿತ್ ಶರ್ಮಾ ನೇತೃತ್ವದ ಟೀಂ ಇಂಡಿಯಾ 68 ರನ್‌ಗಳ ಅಂತರದ ಭರ್ಜರಿ ಗೆಲುವು ಸಾಧಿಸಿದೆ. ಈ ಪಂದ್ಯದ ಗೆಲುವಿನ ಕುರಿತಂತೆ ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ ಮನಬಿಚ್ಚಿ ಮಾತನಾಡಿದ್ದಾರೆ. ತಂಡದ ಬ್ಯಾಟರ್‌ಗಳು ತಮಗೆ ಸಿಕ್ಕ ಉತ್ತಮ ಆರಂಭವನ್ನು ದೊಡ್ಡ ಮೊತ್ತವನ್ನಾಗಿ ಪರಿವರ್ತಿಸಬೇಕು ಎಂದು ಅಭಿಪ್ರಾಯಪಟ್ಟಿದ್ದಾರೆ.
ಇಲ್ಲಿನ ಬ್ರಿಯನ್ ಲಾರಾ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ಭಾರತ ತಂಡವು ಒಂದು ಹಂತದಲ್ಲಿ 16 ಓವರ್ ಅಂತ್ಯದ ವೇಳೆಗೆ 6 ವಿಕೆಟ್ ಕಳೆದುಕೊಂಡು 138 ರನ್ ಗಳಿಸಿತ್ತು. ಆದರೆ ಕೊನೆಯಲ್ಲಿ ದಿನೇಶ್ ಕಾರ್ತಿಕ್ ಸ್ಪೋಟಕ ಬ್ಯಾಟಿಂಗ್ ನಡೆಸುವ ಮೂಲಕ ಸ್ಪರ್ಧಾತ್ಮಕ ಮೊತ್ತ ಕಲೆಹಾಕಲು ನೆರವಾದರು. ಇನ್ನು 190 ರನ್‌ಗಳ ಕಠಿಣ ಗುರಿ ಬೆನ್ನತ್ತಿದ ವೆಸ್ಟ್ ಇಂಡೀಸ್ ತಂಡವು 8 ವಿಕೆಟ್ ಕಳೆದುಕೊಂಡು 122 ರನ್ ಗಳಿಸಲಷ್ಟೇ ಶಕ್ತವಾಯಿತು. ಈ ಮೂಲಕ ಟೀಂ ಇಂಡಿಯಾ ಮೊದಲ ಪಂದ್ಯದಲ್ಲಿ 68 ರನ್‌ಗಳ ಗೆಲುವು ದಾಖಲಿಸಿತು. ಆರಂಭದಲ್ಲಿ ರೋಹಿತ್ ಶರ್ಮಾ 44 ಎಸೆತಗಳಲ್ಲಿ 64 ರನ್ ಬಾರಿಸಿದರೇ, ಕೊನೆಯಲ್ಲಿ ಮ್ಯಾಚ್ ಫಿನಿಶರ್ ಪಾತ್ರ ನಿಭಾಯಿಸಿದ ದಿನೇಶ್ ಕಾರ್ತಿಕ್, 19 ಎಸೆತಗಳಲ್ಲಿ ಅಜೇಯ 41 ರನ್ ಗಳಿಸಿದರು.
ಈ ಗುರಿ ತಲುಪುವುದು ಅಷ್ಟು ಸುಲಭವಲ್ಲ ಎಂದು ನನಗೂ ಅನಿಸಿತ್ತು. ಯಾಕೆಂದರೇ ಆರಂಭದಲ್ಲೇ ಶಾಟ್ ಮಾಡುವುದು ಅಷ್ಟು ಸುಲಭವಾಗಿರಲಿಲ್ಲ. ನಮ್ಮ ಬ್ಯಾಟರ್‌ಗಳು ತಮಗೆ ಸಿಕ್ಕ ಉತ್ತಮ ಆರಂಭವನ್ನು ಸಾಕಷ್ಟು ಸಮಯದವರೆಗೂ ಮುಂದುವರೆಸಬೇಕು. ನಮ್ಮ ಮುಗಿಸಿದ ರೀತಿ ಅಧ್ಭತವಾಗಿತ್ತು ಎಂದು ಪ್ರಶಸ್ತಿ ಪ್ರಧಾನ ಸಮಾರಂಭದ ವೇಳೆ ರೋಹಿತ್ ಶರ್ಮಾ ಹೇಳಿದ್ದಾರೆ.
ನಾವು ಮೊದಲ 10 ಓವರ್ ಆಡಿದ ರೀತಿಯನ್ನು ಗಮನಿಸಿದರೇ, ನಾವು 190 ರನ್ ಗಳಿಸಬಹುದು ಎಂದುಕೊಂಡಿರಲಿಲ್ಲ. ಆದರೆ ನಮ್ಮ ಹುಡುಗರು ಒಳ್ಳೆಯ ರೀತಿಯಲ್ಲಿ ಆಡಿದರು ಹಾಗೂ ಅತ್ಯುತ್ತಮವಾಗಿ ಮ್ಯಾಚ್ ಫಿನಿಶ್ ಮಾಡಿದರು. ನಾವು ಈ ಪಂದ್ಯದಲ್ಲಿ ಮೂರು ಮುಖಗಳನ್ನು ಸುಧಾರಣೆ ಮಾಡಿಕೊಳ್ಳುವತ್ತ ಗಮನ ಹರಿಸಬೇಕು ಎಂದು ರೋಹಿತ್ ಶರ್ಮಾ ಹೇಳಿದ್ದಾರೆ.
WI vs IND ಮೊದಲ ಟಿ20ಯಲ್ಲಿ ಭಾರತ ಶುಭಾರಂಭ, ವಿಂಡೀಸ್ ವಿರುದ್ಧ 68 ರನ್ ಗೆಲುವು
ಬ್ಯಾಟಿಂಗ್‌ನಲ್ಲಿ ಒಂದಷ್ಟು ಪ್ರಯೋಗ ನಡೆಸುವ ಮೂಲಕ ಒಂದಷ್ಟು ತಂತ್ರಗಾರಿಕೆ ಹೆಣೆಯುತ್ತಿದ್ದೇವೆ. ಈ ವಿಚಾರಗಳಲ್ಲಿ ನಾವು ಕೆಲವೊಂದು ಪ್ರಯೋಗ ನಡೆಸುತ್ತಿದ್ದೇವೆ. ಒಟ್ಟಾರೆ ಹೇಳಬೇಕೆಂದರೇ ಇದೊಂದು ಒಳ್ಳೆಯ ಪ್ರಯತ್ನ ಎಂದು ರೋಹಿತ್ ಶರ್ಮಾ ಹೇಳಿದ್ದಾರೆ. ಆಸ್ಟ್ರೇಲಿಯಾದಲ್ಲಿ ನಡೆಯಲಿರುವ ಐಸಿಸಿ ಟಿ20 ವಿಶ್ವಕಪ್ ಟೂರ್ನಿಗೆ ಟೀಂ ಇಂಡಿಯಾ ಸಿದ್ದತೆಗಳನ್ನು ಆರಂಭಿಸಿದೆ.
ವೆಸ್ಟ್ ಇಂಡೀಸ್ ಎದುರಿನ ಮೊದಲ ಟಿ20 ಪಂದ್ಯದಲ್ಲಿ ಸೂರ್ಯಕುಮಾರ್ ಯಾದವ್ ಆರಂಭಿಕನಾಗಿ ಕಣಕ್ಕಿಳಿದಿದ್ದು ಸಾಕಷ್ಟು ಅಚ್ಚರಿಗೆ ಕಾರಣವಾಗಿದೆ. ಇನ್ನು ಆರ್ಶದೀಪ್ ಸಿಂಗ್ ಕೂಡಾ ಗಮನಾರ್ಹ ಪ್ರದರ್ಶನ ತೋರುವ ಮಿಂಚಿದ್ದಾರೆ. ಕೆಲವೊಂದು ಪಿಚ್‌ಗಳಲ್ಲಿ ನೀವು ಎಲ್ಲಾ ರೀತಿಯ ಪ್ರಯೋಗ ಮಾಡಲು ಸಾಧ್ಯವಿಲ್ಲ. ನಮ್ಮ ಶಕ್ತಿ ಹಾಗೂ ಸಾಮರ್ಥ್ಯ ನೆರವಿನೊಂದಿಗೆ ಪ್ರದರ್ಶನ ತೋರಬೇಕು ಎಂದು ರೋಹಿತ್ ಶರ್ಮಾ ಹೇಳಿದ್ದಾರೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.