ಗೆಲ್ಲೋಕೆ ಮೊದಲೇ ಮೊಬೈಲ್ ವಾಲ್‌ಪೇಪರ್‌ಗೆ ಚಿನ್ನದ ಪದಕ ಹಾಕ್ಕೊಂಡಿದ್ದೆ..! ಜೆರೆಮಿ ಲಾಲ್ರಿನುಂಗ ಮನದ ಮಾತು

By Kannadaprabha News  |  First Published Aug 5, 2022, 2:58 PM IST

ಕಾಮನ್‌ವೆಲ್ತ್ ಗೇಮ್ಸ್‌ ಕ್ರೀಡಾಕೂಟದಲ್ಲಿ ಚಿನ್ನದ ಬೇಟೆಯಾಡದ ಜೆರೆಮಿ ಲಾಲ್ರಿನುಂಗ
ಕಾಮನ್‌ವೆಲ್ತ್‌ ಗೇಮ್ಸ್‌ನಲ್ಲಿ ಚಿನ್ನದ ಪದಕ ಗೆಲ್ಲಲು ಕಠಿಣ ಪರಿಶ್ರಮಪಟ್ಟಿದ್ದ ಲಾಲ್ರಿನುಂಗ
‘ಏಷ್ಯಾನೆಟ್‌ ನ್ಯೂಸ್‌’ ಜೊತೆ ಸಂದರ್ಶನದಲ್ಲಿ ಮನದಾಳದ ಮಾತು ಹಂಚಿಕೊಂಡ ಯುವ ವೇಟ್‌ಲಿಫ್ಟರ್


ಬರ್ಮಿಂಗ್‌ಹ್ಯಾಮ್‌(ಆ.05): ಕಾಮನ್‌ವೆಲ್ತ್‌ ಗೇಮ್ಸ್‌ನ ವೇಟ್‌ಲಿಫ್ಟಿಂಗ್‌ನಲ್ಲಿ ಚಿನ್ನದ ಪದಕ ಗೆದ್ದು ಗಮನ ಸೆಳೆದಿರುವ ಭಾರತದ ಜೆರೆಮಿ ಲಾಲ್ರಿನುಂಗ, ಕ್ರೀಡಾಕೂಟಕ್ಕೂ ಮುನ್ನ ಕಾಮನ್‌ವೆಲ್ತ್‌ನ ಚಿನ್ನದ ಪದಕದ ಫೋಟೋವನ್ನು ತಮ್ಮ ಮೊಬೈಲ್‌ ವಾಲ್‌ಪೇಪರ್‌ ಆಗಿ ಹಾಕಿಕೊಂಡಿದ್ದರು ಎಂಬುದನ್ನು ಬಹಿರಂಗಪಡಿಸಿದ್ದಾರೆ. ಈ ಬಗ್ಗೆ ‘ಕನ್ನಡಪ್ರಭ’ 'ಏಷ್ಯಾನೆಟ್ ಸುವರ್ಣ ನ್ಯೂಸ್' ಸೋದರ ಸಂಸ್ಥೆ ‘ಏಷ್ಯಾನೆಟ್‌ ನ್ಯೂಸ್‌’ ಜೊತೆ ಸಂದರ್ಶನದಲ್ಲಿ ಮಾತನಾಡಿದ ಅವರು, ‘ಚಿನ್ನದ ಪದಕದ ಫೋಟೋ ಮೊಬೈನಲ್ಲಿಟ್ಟುಕೊಂಡು ಅದನ್ನು ಗೆಲ್ಲುವುದಕ್ಕಾಗಿಯೇ ನಾನು ಗೇಮ್ಸ್‌ಗೆ ತೆರಳಿದ್ದೆ. ಕಠಿಣ ಅಭ್ಯಾಸ ನಡೆಸಿ ನನಗೆ ಬೇಕಿದ್ದ ಚಿನ್ನವನ್ನು ಗೆದ್ದಿದ್ದೇನೆ’ ಎಂದು ತಮ್ಮ ಕನಸು ಈಡೇರಿದ ಬಗ್ಗೆ ಮನಬಿಚ್ಚಿ ಮಾತನಾಡಿದ್ದಾರೆ.

‘ಸ್ಪರ್ಧೆಗೂ ಮುನ್ನ ತೊಡೆಯ ನೋವಿನಿಂದಾಗಿ ನಡೆದಾಡಲೂ ಆಗುತ್ತಿರಲಿಲ್ಲ. ಹೀಗಾಗಿ ಕಷ್ಟದಿಂದಲೇ ತರಬೇತಿ ನಡೆಸಿದ್ದೆ. ಆದರೆ ಗಾಯ ನನ್ನ ಪ್ರದರ್ಶನದ ಮೇಲೆ ಪರಿಣಾಮ ಬೀರದಂತೆ ನೋಡಿಕೊಂಡಿದ್ದೆ’ ಎಂದು ಮಿಜೋರಾಂನ 19 ವರ್ಷದ ಜೆರಿಮಿ ಹೇಳಿದ್ದಾರೆ. ‘ನಾನು ಭಾರತೀಯ ಸೇನೆಯಿಂದ ತುಂಬಾ ಕಲಿತಿದ್ದೇನೆ. ಅಲ್ಲಿಯೇ ತರಬೇತಿ ಪಡೆಯುತ್ತಿರುವ ನನಗೆ ತ್ರಿವರ್ಣ ಧ್ವಜ ಕಂಡರೆ ಸೆಲ್ಯೂಟ್‌ ಹೊಡೆದೇ ಅಭ್ಯಾಸ. ಹೀಗಾಗಿ ಪದಕ ಗೆದ್ದ ಬಳಿಕ ಭಾರತದ ಧ್ಜಜ ಮೇಲೇರುವುದನ್ನು ಕಂಡು ತನ್ನಿಂತಾನೇ ಸೆಲ್ಯೂಟ್‌ ಹೊಡೆದೆ’ ಎಂದು 2012ರಿಂದ ಆರ್ಮಿ ಕ್ರೀಡಾ ಸಂಸ್ಥೆಯಲ್ಲಿ ತರಬೇತಿಯಲ್ಲಿ ತೊಡಗಿಸಿಕೊಂಡಿರುವ ಜೆರೆಮಿ ಹೇಳಿದ್ದಾರೆ.

Tap to resize

Latest Videos

ಮೊಬೈಲ್ ವಾಲ್‌ ಪೇಪರ್‌ನಿಂದ ಚಿನ್ನದ ಪದಕದವರೆಗಿನ ಜರ್ನಿ: ಜರೆಮಿ ಲಾಲ್ರಿನುಂಗರ ಇಂಟ್ರೆಸ್ಟಿಂಗ್ ಫ್ಯಾಕ್ಟ್ಸ್‌

‘ನಾನು ಅಭ್ಯಾಸ ನಡೆಸುತ್ತಿದ್ದಾಗಲೆಲ್ಲಾ ಮೀರಾಬಾಯಿ ಚಾನು ನನಗೆ ಸಲಹೆಗಳನ್ನು ನೀಡುತ್ತಿದ್ದರು. ತಪ್ಪುಗಳನ್ನು ತಿದ್ದಿ ಅವರ ಅನುಭವಗಳನ್ನು ಹಂಚಿಕೊಳ್ಳುತ್ತಿದ್ದರು. ಅವರಿಂದಲೇ ನಾನು ಸ್ಫೂರ್ತಿ ಪಡೆದಿದ್ದೇನೆ ಎಂದಿರುವ ಜೆರೆಮಿ, ಪೋರ್ಚುಗಲ್‌ನ ಖ್ಯಾತ ಫುಟ್ಬಾಲ್‌ ತಾರೆ ಕ್ರಿಸ್ಟಿಯಾನೊ ರೊನಾಲ್ಡೊ ತಮ್ಮ ರೋಲ್‌ ಮಾಡೆಲ್‌ ಎಂದು ಹೇಳುತ್ತಾರೆ.

‘ಕಿರಿಯರ ವಿಭಾಗಕ್ಕಿಂತ ಹಿರಿಯರ ವಿಭಾಗ ಭಿನ್ನ. ಯುವ ಒಲಿಂಪಿಕ್ಸ್‌ನಲ್ಲಿ 62 ಕೆ.ಜಿ. ವಿಭಾಗದಲ್ಲಿ ಸ್ಪರ್ಧಿಸಿದರೂ ಹಿರಿಯರ ಕ್ರೀಡಾಕೂಟದಲ್ಲಿ 67 ಕೆ.ಜಿ. ವಿಭಾಗದಲ್ಲಿ ಸ್ಪರ್ಧಿಸುತ್ತಿದ್ದೇನೆ. ಇದಕ್ಕಾಗಿ ದೇಹದ ತೂಕ ಕೂಡಾ ಹೆಚ್ಚಿಸಬೇಕು. ಆದರೆ ಒಲಿಂಪಿಕ್ಸ್‌ನಲ್ಲಿ 67 ಕೆ.ಜಿ. ಬದಲು 73 ಕೆ.ಜಿ. ವಿಭಾಗದಲ್ಲಿ ಸ್ಪರ್ಧೆ ನಡೆಯುತ್ತದೆ. ಹೀಗಾಗಿ ಮತ್ತಷ್ಟುಕಠಿಣ ಅಭ್ಯಾಸ ಅನಿವಾರ್ಯ. ಇದು ನನ್ನ ಆರಂಭ ಮಾತ್ರ. ಭವಿಷ್ಯದಲ್ಲಿ ಮತ್ತಷ್ಟುಕಷ್ಟಪಡಬೇಕು ಮತ್ತು ಹಲವು ಪದಕಗಳನ್ನು ಗೆಲ್ಲಬೇಕಿದೆ. ನಾನೇನು ಮಾಡಬಲ್ಲೆ ಎಂಬುದನ್ನು ಜನ ಮುಂದೆ ನೋಡಲಿದ್ದಾರೆ’ ಎಂದು 2018ರಲ್ಲಿ ಕಿರಿಯರ ಒಲಿಂಪಿಕ್ಸ್‌ನಲ್ಲಿ ಐತಿಹಾಸಿಕ ಚಿನ್ನದ ಪದಕ ಗೆದ್ದಿದ್ದ ಜೆರೆಮಿ ಹೇಳಿದ್ದಾರೆ.

click me!