ಮೊಬೈಲ್ ವಾಲ್‌ ಪೇಪರ್‌ನಿಂದ ಚಿನ್ನದ ಪದಕದವರೆಗಿನ ಜರ್ನಿ: ಜರೆಮಿ ಲಾಲ್ರಿನುಂಗರ ಇಂಟ್ರೆಸ್ಟಿಂಗ್ ಫ್ಯಾಕ್ಟ್ಸ್‌

ಗಾಯದ ಜತೆಗೆ ಸೆಣಸಾಡುತ್ತಲೇ ಪದಕ ಗೆದ್ದ ಕುರಿತಂತೆ ಮಾತನಾಡಿರುವ ಜರೆಮಿ ಲಾಲ್ರಿನುಂಗ, ನಾನು ವಾರ್ಮ್‌ ಅಪ್‌ ಮಾಡುತ್ತಿರುವಾಗಲೇ ನನ್ನ ತೊಡೆಯ ಭಾಗದಲ್ಲಿ ಸೆಳೆತ ಕಾಣಿಸಿಕೊಂಡಿತು. ತೊಡೆ ಸೆಳೆತ ಜೋರಾದರೇ ನಡೆದಾಡಲು ಸಾಧ್ಯವಾಗುವುದಿಲ್ಲ. ಈ ರೀತಿಯ ನೋವನ್ನು ಅನುಭವಿಸಿದ್ದೇನೆ. ಹೀಗಾಗಿ ನಾನು ಸರಿಯಾಗಿ ವಾರ್ಮ್‌ ಅಪ್‌ ಕೂಡಾ ಪೂರ್ಣಗೊಳಿಸಲಿಲ್ಲ.

First Published Aug 3, 2022, 6:30 PM IST | Last Updated Aug 3, 2022, 6:32 PM IST

ಮಿಜರೋಂನ ವೇಟ್‌ಲಿಫ್ಟರ್ ಜರೆಮಿ ಲಾಲ್ರಿನುಂಗ ಭಾನುವಾರ(ಜು.31)ರಂದು ನಡೆದ ಬರ್ಮಿಂಗ್‌ಹ್ಯಾಮ್‌ ಕಾಮನ್‌ವೆಲ್ತ್‌ ಗೇಮ್ಸ್‌ನಲ್ಲಿ ಚಿನ್ನದ ಪದಕ ಗೆಲ್ಲುವ ಮೂಲಕ ಇಡೀ ದೇಶವೇ ಹೆಮ್ಮೆಪಡುವಂತಹ ಸಾಧನೆ ಮಾಡಿದ್ದರು. ಇದೀಗ 19 ವರ್ಷದ ಜರೆಮಿ ಲಾಲ್ರಿನುಂಗ ದೇಶದ ಮನೆ ಮಾತಾಗಿದ್ದಾರೆ. ಗಾಯದ ಸಂಕಟದ ಹೊರತಾಗಿಯೂ ಎರಡು ಗೇಮ್‌ ರೆಕಾರ್ಡ್‌ನೊಂದಿಗೆ ಚಿನ್ನದ ಪದಕ ಗೆಲ್ಲುವ ಮೂಲಕ ಜರೆಮಿ ಲಾಲ್ರಿನುಂಗ ನಗುನಗುತ್ತಲೇ ಅಂತರರಾಷ್ಟ್ರೀಯ ಮಟ್ಟದಲ್ಲಿ ದೇಶದ ಕೀರ್ತಿ ಪತಾಕೆಯನ್ನು ಹಾರಿಸಿದ್ದಾರೆ.

ಇದೀಗ ಜರೆಮಿ ಲಾಲ್ರಿನುಂಗ ಏಷ್ಯಾನೆಟ್‌ ನ್ಯೂಸ್‌ ನೆಟ್‌ವರ್ಕ್‌ ಜತೆ ಎಕ್ಸ್‌ಕ್ಲೂಸಿವ್ ಆಗಿ ಮಾತುಕತೆ ನಡೆಸಿದ್ದಾರೆ. ಈ ವೇಳೆ ತಾವು ಕಾಮನ್‌ವೆಲ್ತ್‌ ಗೇಮ್ಸ್‌ನಲ್ಲಿ ಚಿನ್ನದ ಪದಕ ಗೆಲ್ಲುವ ಕನಸು ಕಂಡು ನನಸು ಮಾಡಿದ್ದು ಹೇಗೆ ಎನ್ನುವ ಗುಟ್ಟನ್ನು ಬಿಚ್ಚಿಟ್ಟಿದ್ದಾರೆ. ಬರ್ಮಿಂಗ್‌ಹ್ಯಾಮ್‌ನಲ್ಲಿ ನಡೆಯಲಿರುವ ಕಾಮನ್‌ವೆಲ್ತ್‌ ಗೇಮ್ಸ್‌ ವೇಳಾಪಟ್ಟಿ ಘೋಷಣೆಯಾದ ದಿನವೇ ತಾವು ಬಂಗಾರದ ಪದಕದ ಫೋಟೋವನ್ನು ಡೌನ್‌ಲೋಡ್‌ ಮಾಡಿ ತಮ್ಮ ಫೋನಿನ ವಾಲ್‌ ಪೇಪರ್ ಮಾಡಿಟ್ಟುಕೊಂಡಿದ್ದರಂತೆ.

ನಾನು ಆ ಫೋಟೋವನ್ನು ನೋಡಿಕೊಂಡು ಪದೇ ಪದೇ ನಾನು ಈ ಪದಕವನ್ನು ಗೆಲ್ಲಬೇಕು ಎಂದುಕೊಳ್ಳುತ್ತಿದ್ದೆ. ಈ ಪದಕಕ್ಕಾಗಿ ಸಾಕಷ್ಟು ಕಠಿಣ ಪರಿಶ್ರಮ ಹಾಕಬೇಕು ಎಂದುಕೊಳ್ಳುತ್ತಿದ್ದೆ. ಈಗ ನಾನೇನು ಸಾಧಿಸಬೇಕು ಅಂದುಕೊಂಡಿದ್ದೆನೋ ಅದನ್ನು ಸಾಧಿಸಿದ್ದೇನೆ ಎಂದು ಜರೆಮಿ ಲಾಲ್ರಿನುಂಗ ಕಾಮನ್‌ವೆಲ್ತ್‌ ಗೇಮ್ಸ್‌ ಚಿನ್ನದ ಪದಕದ ಹಾದಿಯನ್ನು ವಿವರಿಸಿದ್ದಾರೆ. 

ಯೂತ್ ಒಲಿಂಪಿಕ್ ಚಾಂಪಿಯನ್ ಆಗಿರುವ 19 ವರ್ಷದ ಜರೆಮಿ ಲಾಲ್ರಿನುಂಗ, ತಾವು ಕಣಕ್ಕಿಳಿದ ಮೊದಲ ಕಾಮನ್‌ವೆಲ್ತ್‌ ಗೇಮ್ಸ್‌ನಲ್ಲಿ ದಾಖಲೆಯ ಚಿನ್ನದ ಪದಕ ಗೆಲ್ಲುವಲ್ಲಿ ಯಶಸ್ವಿಯಾಗಿದ್ದಾರೆ. ಪುರುಷರ 67 ಕೆಜಿ ವಿಭಾಗದ ಸ್ಪರ್ಧೆಯಲ್ಲಿ ಭಾಗವಹಿಸಿದ್ದ ಜರೆಮಿ ಲಾಲ್ರಿನುಂಗ, ಎರಡು ರಾಷ್ಟ್ರೀಯ ದಾಖಲೆಯೊಂದಿಗೆ ಚಿನ್ನದ ಪದಕಕ್ಕೆ ಕೊರಳೊಡ್ಡುವಲ್ಲಿ ಯಶಸ್ವಿಯಾಗಿದ್ದಾರೆ.

ಐಜ್ವಾಲ್‌ ನಿವಾಸಿಯಾಗಿರುವ ಜರೆಮಿ ಲಾಲ್ರಿನುಂಗ, ಸ್ನ್ಯಾಚ್‌(140 ಕೆಜಿ) ಹಾಗೂ ಕ್ಲೀನ್ ಅಂಡ್ ಜರ್ಕ್‌ ವಿಭಾಗದಲ್ಲಿ 160 ಕೆಜಿ, ಹೀಗೆ ಒಟ್ಟಾರೆ 300 ಕೆಜಿ ಭಾರತ ಎತ್ತುವ ಮೂಲಕ ತಮ್ಮ ಸಮೀಪ ಸ್ಪರ್ಧಿಗಿಂತ 10 ಕೆಜಿ ಭಾರ ಹೆಚ್ಚಿಗೆ ಎತ್ತುವಲ್ಲಿ ಜರೆಮಿ ಲಾಲ್ರಿನುಂಗ ಯಶಸ್ವಿಯಾದರು. 

ನಾನು ಎಷ್ಟು ಭಾರವನ್ನು ಎತ್ತಬಲ್ಲೇ ಎನ್ನುವುದನ್ನು ತೋರಿಸಬೇಕೆಂದಿದ್ದೆ, ಆದರೆ ಕ್ರೀಡೆಯಲ್ಲಿ ಸಮಸ್ಯೆಗಳು ಎದುರಾಗುತ್ತವೆ

ಗಾಯದ ಜತೆಗೆ ಸೆಣಸಾಡುತ್ತಲೇ ಪದಕ ಗೆದ್ದ ಕುರಿತಂತೆ ಮಾತನಾಡಿರುವ ಜರೆಮಿ ಲಾಲ್ರಿನುಂಗ, ನಾನು ವಾರ್ಮ್‌ ಅಪ್‌ ಮಾಡುತ್ತಿರುವಾಗಲೇ ನನ್ನ ತೊಡೆಯ ಭಾಗದಲ್ಲಿ ಸೆಳೆತ ಕಾಣಿಸಿಕೊಂಡಿತು. ತೊಡೆ ಸೆಳೆತ ಜೋರಾದರೇ ನಡೆದಾಡಲು ಸಾಧ್ಯವಾಗುವುದಿಲ್ಲ. ಈ ರೀತಿಯ ನೋವನ್ನು ಅನುಭವಿಸಿದ್ದೇನೆ. ಹೀಗಾಗಿ ನಾನು ಸರಿಯಾಗಿ ವಾರ್ಮ್‌ ಅಪ್‌ ಕೂಡಾ ಪೂರ್ಣಗೊಳಿಸಲಿಲ್ಲ.

ವಾರ್ಮ್‌ ಅಪ್ ವೇಳೆಯಲ್ಲಿ ನಾನು ಕಷ್ಟಪಟ್ಟು 120 ಕೆಜಿ ಭಾರ ಎತ್ತಿದೆ. ನನ್ನ ತೊಡೆಯ ಭಾಗದಲ್ಲಿನ ಸೆಳೆತ ನನ್ನನ್ನು ಬಾಧಿಸುತ್ತಿತ್ತು. ಹೀಗಾಗಿ ಸರಿಯಾಗಿ ಭಾರ ಎತ್ತಲು ಸಾಧ್ಯವಾಗಲಿಲ್ಲ. ನನಗೆ ಕೊಂಚ ಸಮಯಾವಕಾಶ ಸಿಕ್ಕಿತು. ಯಾಕೆಂದರೇ ನನ್ನ ಎದುರಾಳಿಗಳು 140 ರಿಂದ 150 ಕೆಜಿ ವರೆಗಿನ ಭಾರವನ್ನು ಎತ್ತುತ್ತಿದ್ದರು. ಹೀಗಾಗಿ ನಾನು ಕೊಂಚ ಸುಧಾರಿಸಿಕೊಳ್ಳಲು ಅವಕಾಶ ಸಿಕ್ಕಿತು. ಈ ಸಂದರ್ಭದಲ್ಲಿ ನನ್ನ ಕೋಚ್ ಮಹತ್ತರ ಪಾತ್ರವನ್ನು ನಿಭಾಯಿಸಿದರು. ಅವರು ತಂತ್ರಗಾರಿಕೆಯಿಂದ ಮೊದಲ ಯತ್ನವನ್ನು 154 ಕೆಜಿಯಿಂದ ಆರಂಭಿಸಿದರು. ನಾನೆಷ್ಟು ಭಾರ ಎತ್ತಬಲ್ಲೆ ಎನ್ನುವುದನ್ನು ತೋರಿಸಬೇಕಿತ್ತು. ನನ್ನ ಸಂಪೂರ್ಣ ಸಾಮರ್ಥ್ಯವನ್ನು ಅನಾವರಣ ಮಾಡಲು ಈ ಸೆಳೆತ ಅವಕಾಶ ಮಾಡಿಕೊಡಲಿಲ್ಲ. ಕ್ರೀಡೆಯಲ್ಲಿ  ಈ ರೀತಿಯ ಸಮಸ್ಯೆಗಳು ಎದುರಾಗುತ್ತವೆ ಎಂದು ಮಿಜೊರಾಂ ಮೂಲದ ಯುವ ವೇಟ್‌ಲಿಫ್ಟರ್ ಹೇಳಿದ್ದಾರೆ.

ಭಾರತೀಯ ಸೇನೆಯಿಂದ ನಾನು ಸಾಕಷ್ಟು ಕಲಿತಿದ್ದೇನೆ

ಜರೆಮಿ ಲಾಲ್ರಿನುಂಗ 2011ರ ಡಿಸೆಂಬರ್‌ನಲ್ಲಿ ಅಂದರೆ ತಾವು 8-9 ವರ್ಷದವರಾಗಿದ್ದಾಗಿನಿಂದಲೇ ವೇಟ್‌ಲಿಫ್ಟಿಂಗ್ ಮಾಡುವುದನ್ನು ಆರಂಭಿಸಿದರು. ಇದಾದ ಬಳಿಕ 2012ರಲ್ಲಿ ಭಾರತೀಯ ಸೇನೆಯ ಆರ್ಮಿ ಸ್ಪೋರ್ಟ್ಸ್‌ ಇನ್ಸಿಟಿಟ್ಯೂಟ್ ಸೇರಿ ಅಭ್ಯಾಸ ನಡೆಸಿದರು. ಒಬ್ಬ ಅಥ್ಲೀಟ್‌ ಬಲಿಷ್ಠವಾಗಿ ಬೆಳೆಯಲು ಸೇನೆ ಹೇಗೆ ನೆರವಾಯಿತು ಎನ್ನುವುದನ್ನು ಜರೆಮಿ ಲಾಲ್ರಿನುಂಗ ವಿವರಿಸಿದ್ದಾರೆ. ನಾನು ಭಾರತೀಯ ಸೇನೆಯಿಂದ ಸಾಕಷ್ಟು ಕಲಿತಿದ್ದೇನೆ ಎಂದು ಜರೆಮಿ ಲಾಲ್ರಿನುಂಗ ಹೇಳಿದ್ದಾರೆ.

ಭಾರತೀಯ ಸೇನೆಯ ಭಾಗವಾಗಿರುವ ನನಗೆ ತ್ರಿವರ್ಣ ಧ್ವಜ ಆಗಸದಲ್ಲಿ ಹಾರಾಡುತ್ತಿರುವುದನ್ನು ನೋಡಿದಾಕ್ಷಣ ಸಹಜವಾಗಿಯೇ ಸೆಲ್ಯೂಟ್ ಮಾಡಬೇಕೆನಿಸುತ್ತದೆ ಎಂದು ಜರೆಮಿ ಲಾಲ್ರಿನುಂಗ ಹೇಳಿದ್ದಾರೆ.