
ಬೆಂಗಳೂರು (ಡಿ.28): 2018 ರಲ್ಲಿ ನಡೆಯಬೇಕಿರುವ 11 ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಟಿ20 ಕ್ರಿಕೆಟ್ ಪಂದ್ಯಾವಳಿ ಆರಂಭಕ್ಕೆ ಇನ್ನು ನಾಲ್ಕು ತಿಂಗಳು ಬಾಕಿ ಇದ್ದರೂ, ಅದರ ಪೂರ್ವಸಿದ್ಧತೆಗಳು ತೆರೆಮರೆಯಲ್ಲಿ ಭರದಿಂದ ಸಾಗಿದೆ. ವಿವಿಧ ತಂಡಗಳ ಆಟಗಾರರು ಹೊಸದಾಗಿ ಹರಾಜಾಗಬೇಕಿದ್ದು, ಯಾವ ಆಟಗಾರ ಯಾವ ತಂಡ ಸೇರಲಿದ್ದಾರೆ ಎಂಬ ಬಗ್ಗೆ ಅಭಿಮಾನಿಗಳಲ್ಲಿ ಕುತೂಹಲ ಗರಿಗೆದರಿದೆ.
ಏತನ್ಮಧ್ಯೆ, ತಂಡಗಳು ತಾವು ಉಳಿಸಿಕೊಳ್ಳಲು ಇಚ್ಛಿಸುವ ಆಟಗಾರರ ಪಟ್ಟಿಯನ್ನು ಸಲ್ಲಿಸಲು ಜ.4 ಕೊನೆ ದಿನವಾಗಿದ್ದು, 3 ವರ್ಷಗಳ ಅವಧಿಗೆ ಆಟ ಗಾರರ ಹರಾಜು ಜನವರಿ ಅಂತ್ಯದಲ್ಲಿ ನಡೆಯಲಿದೆ. ಯಾವ ತಂಡ ಯಾರನ್ನು ಉಳಿಸಿಕೊಳ್ಳಲು ನಿರ್ಧರಿಸಲಿದೆ ಎನ್ನುವ ಬಗ್ಗೆ ಈಗಾಗಲೇ ಚರ್ಚೆ ಆರಂಭ– ವಾಗಿದ್ದು, ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ತನ್ನ ಅಭಿಮಾನಿಗಳಿಗೆ ಆಘಾತ ನೀಡುವ ಕುರಿತು ಭಾರೀ ವದಂತಿಗಳೆದ್ದಿವೆ. ಸ್ವತಃ ನಾಯಕ ವಿರಾಟ್ ಕೊಹ್ಲಿ ಹಾಗೂ ದಕ್ಷಿಣ ಆಫ್ರಿಕಾದ ಸ್ಫೋಟಕ ಬ್ಯಾಟ್ಸ್‌ಮನ್ ಎಬಿಡಿ’ವಿಲಿಯರ್ಸ್ ಮತ್ತು ಉದಯೋನ್ಮುಖ ಲೆಗ್ ಸ್ಪಿನ್ನರ್ ಯಜುವೇಂದ್ರ ಚಹಲ್ ಅವರನ್ನು ತಂಡದಲ್ಲಿ ಉಳಿಸಿಕೊಳ್ಳುವುದು ಖಚಿತ ಎಂಬುದು ಅಭಿಮಾನಿಗಳ ನಿರೀಕ್ಷೆ ಆಗಿದ್ದರೆ, ಅವರನ್ನೇ ಕೈಬಿಡುವ ಬಗ್ಗೆ ತಂಡದ ಆಡಳಿತ ಮಂಡಳಿಯೊಳಗೆ ಚರ್ಚೆ ನಡೆಯುತ್ತಿದೆ ಎಂಬ ಸ್ಫೋಟಕ ವದಂತಿ ಹರಿದಾಡುತ್ತಿದೆ.
ಯಾಕೆ ಈ ಚರ್ಚೆ?: ಪ್ರತಿ ತಂಡ ಹರಾಜಿಗೂ ಮುನ್ನ ಗರಿಷ್ಠ 3 ಆಟಗಾರರನ್ನು ಉಳಿಸಿಕೊಳ್ಳಬಹುದು. ಹರಾಜಿನಲ್ಲಿ ‘ರೈಟ್ ಟು ಮ್ಯಾಚ್ ಕಾರ್ಡ್’ ಬಳಸಿ ಇಬ್ಬರು ಆಟಗಾರರನ್ನು ಆಯ್ಕೆ ಮಾಡಿಕೊಳ್ಳುವ ಅವಕಾಶವಿದೆ. ಆದರೆ ಬಿಸಿಸಿಐನ ನೂತನ ನಿಯಮ ಫ್ರಾಂಚೈಸಿಗಳ ತಲೆನೋವಿಗೆ ಕಾರಣವಾಗಿದೆ.
ಏನಿದು ನೂತನ ನಿಯಮ?: ಈ ಹಿಂದಿನ ಆವೃತ್ತಿ– ಗಳಲ್ಲಿ ತಂಡಗಳು ಉಳಿಸಿಕೊಳ್ಳುವ ಆಟಗಾರರಿಗೆ ನಿಗದಿತ ಮೊತ್ತಕ್ಕಿಂತ ಹೆಚ್ಚು ನೀಡುತ್ತಿದ್ದವು. ನಿಯಮದಂತೆ ಮೊದಲು ಉಳಿಸಿಕೊಳ್ಳುವ ಆಟಗಾರನಿಗೆ ₹ 12 ಕೋಟಿ ನೀಡಬೇಕಿತ್ತು. ಆದರೆ ಆಟಗಾರರ ಬೇಡಿಕೆ ಹೆಚ್ಚಿದ್ದರಿಂದ ಹೆಚ್ಚು ಮೊತ್ತ ನೀಡಲಾಗುತ್ತಿತ್ತು. ಉದಾಹರಣೆಗೆ ಆರ್‌ಸಿಬಿ, ವಿರಾಟ್ ಕೊಹ್ಲಿಯನ್ನು 12 ಕೋಟಿ ಕೊಟ್ಟು ಉಳಿಸಿಕೊಂಡರೂ, ತಂಡ ಅವರಿಗೆ 15 ಕೋಟಿ ಸಂಭಾವನೆ ನೀಡುತ್ತಿತ್ತು. ಆದರೆ, ಆಟಗಾರರನ್ನು ಖರೀದಿಸಲು ಮೀಸಲಿದ್ದ ಒಟ್ಟು ಮೊತ್ತದಿಂದ 12 ಕೋಟಿ ಮಾತ್ರ ಕಡಿತಗೊಳ್ಳುತ್ತಿತ್ತು. ಈ ಬಾರಿ ನಿಯಮ ಬದಲಿಸಿರುವ ಬಿಸಿಸಿಐ, ಆಟಗಾರರಿಗೆ ಸಂಭಾವನೆಯಾಗಿ ನೀಡುವ ನಿಜವಾದ ಮೊತ್ತವನ್ನು ಒಟ್ಟು ಮೊತ್ತದಿಂದ ಕಡಿತಗೊಳಿಸುವುದಾಗಿ ತಿಳಿಸಿದೆ.
ಮೂವರನ್ನೂ ಉಳಿಸಿಕೊಂಡರೆ ಆಗುವ ಖರ್ಚೆಷ್ಟು?: ಈ ಬಾರಿ ಪ್ರತಿ ತಂಡ ಹರಾಜಿನಲ್ಲಿ ಆಟಗಾರರ ಖರೀದಿಗೆಂದು ಗರಿಷ್ಠ ರೂ.80 ಕೋಟಿವೆಚ್ಚ ಮಾಡಬಹುದಾಗಿದೆ. ಅಗ್ರ ಮೂವರು ಆಟಗಾರರನ್ನು ತಂಡ ಉಳಿಸಿಕೊಂಡರೆ, ಒಟ್ಟು ಮೊತ್ತದಿಂದ ರೂ.33 ಕೋಟಿ ಕಡಿತಗೊಳ್ಳಲಿದೆ.
ಆಟಗಾರರಿಗೆ ಬಿಟ್ಟಿದ್ದು!: ತಂಡದ ಮಾಲೀಕರು ತಮ್ಮ ಮುಂದಿಡುವ ಪ್ರಸ್ತಾಪ ಒಪ್ಪಿಗೆಯಾದರೆ ಮಾತ್ರ ಆಟಗಾರರು ಉಳಿದುಕೊಳ್ಳಬಹುದಾಗಿದೆ. ಇಲ್ಲವಾದರೆ ಹರಾಜಿನಲ್ಲಿ ಭಾಗವಹಿಸುವ ಸ್ವತಂತ್ರ ಆಟಗಾರರಿಗಿದೆ. ಉದಾಹರಣೆಗೆ, ಕೊಹ್ಲಿಗೆ ಆರ್ ಸಿಬಿ ರೂ.15 ಕೋಟಿ ನೀಡಿ ಉಳಿಸಿಕೊಳ್ಳಲು ನಿರ್ಧರಿಸಿದ ಮಾತ್ರಕ್ಕೆ ಕೊಹ್ಲಿ ತಂಡದಲ್ಲೇ ಉಳಿದುಕೊಳ್ಳಬೇಕು ಎನ್ನುವ ನಿಯಮವಿಲ್ಲ. ಹರಾಜಿನಲ್ಲಿ ತಮಗೆ ಹೆಚ್ಚಿನ ಮೊತ್ತ ದೊರೆಯಲಿದೆ ಎನ್ನುವ ವಿಶ್ವಾಸವಿದ್ದರೆ ಕೊಹ್ಲಿ, ಪ್ರಸ್ತಾಪವನ್ನು ತಿರಸ್ಕರಿಸಬಹುದು. ಸದ್ಯ ವಿಶ್ವದ ಶ್ರೇಷ್ಠ ಬ್ಯಾಟ್ಸ್'ಮನ್ ಹಾಗೂ ನಾಯಕರಲ್ಲಿ ಒಬ್ಬರಾಗಿರುವ ವಿರಾಟ್‌ಗೆ ಹೆಚ್ಚಿನ ಬೇಡಿಕೆಯಿದೆ. ಅವರ ಬ್ರ್ಯಾಂಡ್ ಮೌಲ್ಯವನ್ನು ಗಮನದಲ್ಲಿಟ್ಟುಕೊಂಡು ಹೇಳುವುದಾದರೆ, ಹರಾಜಿನಲ್ಲಿ ಅವರ ಸಂಭಾವನೆ ರೂ.25 ಕೋಟಿವರೆಗೂ ಹೊಗಬಹುದು ಎಂದು ಕೆಲವರು ಅಭಿಪ್ರಾಯಪಟ್ಟಿದ್ದಾರೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.