
ನವದೆಹಲಿ(ಮಾ.10): ಭಾರತೀಯ ಕ್ರಿಕೆಟಿಗರ ಕೇಂದ್ರ ಗುತ್ತಿಗೆಯಲ್ಲಿ ಈ ಬಾರಿ ಹೊಸದಾಗಿ ‘ಎ+’ ದರ್ಜೆ ಪರಿಚಯಿಸಿರುವುದು ಭಾರೀ ಚರ್ಚೆಗೆ ಕಾರಣವಾಗಿದೆ. ಅದರಲ್ಲೂ ಯುವ ಆಟಗಾರರಿಗೆ ವಾರ್ಷಿಕ ₹7 ಕೋಟಿ ನೀಡುವುದಾಗಿ ಬಿಸಿಸಿಐ ಘೋಷಿಸಿರುವುದು ಅಚ್ಚರಿ ಮೂಡಿಸಿದೆ.
ಸುಪ್ರೀಂ ಕೋರ್ಟ್ ನೇಮಿತ ಬಿಸಿಸಿಐ ಆಡಳಿತ ಸಮಿತಿ ಮುಖ್ಯಸ್ಥ ವಿನೋದ್ ರಾಯ್ ಹೇಳಿರುವ ಪ್ರಕಾರ, ‘ಎ+’ ದರ್ಜೆ ಪರಿಚಯಿಸುವಂತೆ ಕೇಳಿಕೊಂಡಿದ್ದು ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ. ನಾಯಕ ವಿರಾಟ್ ಕೊಹ್ಲಿಯೊಂದಿಗೆ ವೇತನ ಹೆಚ್ಚಳ ವಿಚಾರವಾಗಿ ಆಡಳಿತ ಸಮಿತಿ ಭೇಟಿಯಾಗಿದ್ದ ಧೋನಿ, ಎಲ್ಲಾ ಮೂರು ಮಾದರಿಯಲ್ಲಿ ಭಾರತವನ್ನು ಪ್ರತಿನಿಧಿಸುವವರು ಹಾಗೂ ಸ್ಥಿರ ಪ್ರದರ್ಶನ ತೋರುವ, ಐಸಿಸಿ ಶ್ರೇಯಾಂಕ ಪಟ್ಟಿಯಲ್ಲಿ ಅಗ್ರ 10ರಲ್ಲಿ ಸ್ಥಾನ ಪಡೆದಿರುವ ಆಟಗಾರರಿಗೆ ಅತಿಹೆಚ್ಚು ವೇತನ ಸಿಗಬೇಕು ಎಂದು ಕೇಳಿಕೊಂಡಿದ್ದರು ಎಂದು ವಿನೋದ್ ರಾಯ್ ಹೇಳಿದ್ದಾರೆ.
ಇದೇ ವೇಳೆ ಕೇವಲ ಒಂದು ಮಾದರಿಯಲ್ಲಿ ಆಡುವ ಆಟಗಾರರಿಗೂ (ಉದಾ. ಪೂಜಾರ, ಸಾಹಾ) ಉತ್ತಮ ಮೊತ್ತ ದೊರೆಯಬೇಕು. ವೇತನ ಹೆಚ್ಚಳದಲ್ಲಿ ಅವರಿಗೆ ತಾರತಾಮ್ಯವಾಗಬಾರದು ಎಂದು ಕೊಹ್ಲಿ ಹಾಗೂ ಧೋನಿ ಆಡಳಿತ ಸಮಿತಿ ಬಳಿ ಮನವಿ ಮಾಡಿದ್ದರು. ಧೋನಿಯ ಈ ನಿಸ್ವಾರ್ಥ ಸಲಹೆಗೆ ಸಾಮಾಜಿಕ ತಾಣಗಳಲ್ಲಿ ಅಭಿಮಾನಿ ಗಳಿಂದ ಭಾರೀ ಮೆಚ್ಚುಗೆ ವ್ಯಕ್ತವಾಗಿದೆ.
ಮಾಜಿ ಕೋಚ್ ಕುಂಬ್ಳೆಗೂ ಸೇರಬೇಕು ಶ್ರೇಯ
ಭಾರತೀಯ ಕ್ರಿಕೆಟಿಗರ ವೇತನವನ್ನು ಶೇ.150ರಷ್ಟು ಹೆಚ್ಚಿಸಬೇಕು ಎಂದು ಮೊದಲು ಆಡಳಿತ ಸಮಿತಿ ಮುಂದೆ ಪ್ರಸ್ತಾಪವಿಟ್ಟಿದ್ದು ಮಾಜಿ ಕೋಚ್ ಅನಿಲ್ ಕುಂಬ್ಳೆ. ಹೀಗಾಗಿ, ವೇತನ ಹೆಚ್ಚಳ ವಿಚಾರದಲ್ಲಿ ಕೊಹ್ಲಿ, ಧೋನಿಯಷ್ಟೇ ಪಾತ್ರವನ್ನು ಕುಂಬ್ಳೆ ಸಹ ನಿರ್ವಹಿಸಿದ್ದಾರೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.