ಚಿಕ್ಕಮಗಳೂರಿನ ಕ್ರೀಡಾಪಟು ರಕ್ಷಿತಾ ಇಂಡಿಯನ್ ಸ್ಪೋರ್ಟ್ಸ್ ಹಾನರ್ ಅವಾರ್ಡ್ ಪ್ರಶಸ್ತಿ ಸ್ವೀಕರಿಸಿದ್ದಾರೆ. ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಪ್ರಶಸ್ತಿ ನೀಡಿ ಗೌರವ ನೀಡಿದ್ದಾರೆ. ಕರುನಾಡಿನ ಹೆಮ್ಮೆಯ ಕುವರಿಯ ಸಾಧನೆ ಹಾಗೂ ಪ್ರಶಸ್ತಿ ವಿವರ ಇಲ್ಲಿದೆ.
ಚಿಕ್ಕಮಗಳೂರು(ಸೆ.29): ಕಾಫಿನಾಡಿನ ಯುವತಿ ರಕ್ಷಿತಾ ಅವರು ಹೆಮ್ಮೆಯ ಇಂಡಿಯನ್ ಸ್ಪೋರ್ಟ್ಸ್ ಹಾನರ್ ಅವಾರ್ಡ್ ಗೌರವಕ್ಕೆ ಪಾತ್ರರಾಗಿದ್ದಾರೆ. 2018ರಲ್ಲಿ ನಡೆದ ಏಷ್ಯಾ ಪ್ಯಾರಾ ಗೇಮ್ಸ್‌ನಲ್ಲಿ ರಕ್ಷಿತಾ 1500 ಮೀಟರ್ ಓಟದಲ್ಲಿ ಚಿನ್ನದ ಪದಕ ಪಡೆದ ಹಿನ್ನೆಲೆ ಈ ಗೌರವ ಪ್ರಾಪ್ತವಾಗಿದೆ.
ಭಾರತ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿ ಫೌಂಡೇಷನ್ ಪ್ರತಿವರ್ಷ ಚಿತ್ರೋದ್ಯಮ, ಕ್ರಿಕೆಟ್, ಅಥ್ಲೆಟಿಕ್ಸ್‌ನಲ್ಲಿ ಸಾಧನೆಗೈದವರಿಗೆ ನೀಡುವ ಅವಾರ್ಡ್ ಇದಾಗಿದೆ. ರಕ್ಷಿತಾ ಅವರಿಗೆ ವಿರಾಟ್ ಕೊಹ್ಲಿ ಅವರು ಮುಂಬೈನಲ್ಲಿ ಶುಕ್ರವಾರ ನಡೆದ ಸಮಾರಂಭದಲ್ಲಿ ಪ್ರಶಸ್ತಿ ನೀಡಿ ಗೌರವಿಸಿದರು.
ಇದನ್ನೂ ಓದಿ: ವಿರಾಟ್ ಕೊಹ್ಲಿ ಆಟೋಗ್ರಾಫ್‌ಗೆ ಮುಗಿಬಿದ್ದ ಬೆಂಗಳೂರು ಫ್ಯಾನ್ಸ್!
ಅಮಿತಾ ಬಚ್ಚನ್, ವಿರಾಟ್ ಕೊಹ್ಲಿ, ಯುವರಾಜ್ ಸಿಂಗ್, ಪ್ರಿಯಾಂಕ ಚೋಪ್ರಾ ಸೇರಿ ಹಲವು ಗಣ್ಯರು ಭಾಗವಹಿಸಿದ್ದ ಹಾಲಿವುಡ್, ಬಾಲಿವುಡ್ ದಿಗ್ಗಜರು ಜತೆ ಗೌರವ ಪಡೆದ ರಕ್ಷಿತಾ, ಕನ್ನಡದಲ್ಲೇ ಮಾತನಾಡಿ ಗೌರವದ ಸಂತಸ ಹಂಚಿಕೊಂಡರು.
ಜಿಲ್ಲೆಯ ಮೂಡಿಗೆರೆ ತಾಲೂಕಿನ ಬಾಳೂರು ಹೋಬಳಿಯ ಕುಡ್ನಹಳ್ಳಿ ಗ್ರಾಮದ ರಕ್ಷಿತಾ ಚಿಕ್ಕಮಗಳೂರಿನ ಆಶಾಕಿರಣ ಅಂಧ ಮಕ್ಕಳ ಶಾಲೆಯಲ್ಲಿ 10ನೇ ತರಗತಿಯಲ್ಲಿ ಓದುತ್ತಿದ್ದಾರೆ. 2018ರಲ್ಲಿ ನಡೆದ ಏಷ್ಯಾ ಪ್ಯಾರಾ ಗೇಮ್ಸ್‌ನಲ್ಲಿ ರಕ್ಷಿತಾ 1500 ಮೀಟರ್ ಓಟದಲ್ಲಿ ಚಿನ್ನದ ಪದಕ ಪಡೆದಿದ್ದರು. ಈ ಸಾಧನೆಗೆ ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ಕಚೇರಿಗೆ ಕರೆಸಿ ಮೆಚ್ಚುಗೆ ವ್ಯಕ್ತಪಡಿಸಿ ಗೌರವ ಸಲ್ಲಿಸಿದ್ದರು. ಈ ಸಾಧನೆಗೆ ವರ್ಷದ ವಿಶೇಷ ಚೇತನ ಮಹಿಳಾ ಕ್ರೀಡಾಪಟು ಪ್ರಶಸ್ತಿಗೆ ಅವರು ಭಾಜನರಾಗಿದ್ದಾರೆ.
ಇದನ್ನೂ ಓದಿ: ಸೆಕೆಂಡ್‌ಗಳಲ್ಲಿ ದಾಖಲೆಯ ಹಿಟ್ಸ್; ವಿರುಷ್ಕಾ ಫೋಟೋಗೆ ಫಿದಾ ಆದ ಫ್ಯಾನ್ಸ್!
ಇತ್ತೀಚೆಗೆ ಸ್ವಿಜರ್‌ಲ್ಯಾಂಡ್‌ನಲ್ಲಿ ನಡೆದ ಜ್ಯೂನಿಯರ್ ವಲ್ಡ್‌ರ್ ಚಾಂಪಿಯನ್ ಶಿಪ್‌ನಲ್ಲಿ ರಕ್ಷಿತಾ ಚಿನ್ನದ ಪದಕ ಪಡೆದಿದ್ದಾರೆ. 2020ರಲ್ಲಿ ಟೋಕಿಯೋದಲ್ಲಿ ನಡೆಯಲಿರುವ ಪ್ಯಾರಾ ಒಲಂಪಿಕ್‌ಗೆ ಆಯ್ಕೆಯಾಗಿ ದೇಶದ ಗಮನ ಸೆಳೆದಿದ್ದಾರೆ.
ರಕ್ಷಿತಾ ಅವರಿಗೆ ಕಳೆದ ಒಂದೂವರೆ ವರ್ಷದಿಂದ ಕೋಲಾರದ ರಾಹುಲ್ ತರಬೇತಿ ನೀಡುತ್ತಿದ್ದಾರೆ. ರಕ್ಷಿತಾ ಸಾಧನೆ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ ರಾಹುಲ್, ರಕ್ಷಿತಾ, 2018ರಲ್ಲಿ ನಡೆದ ಏಷ್ಯಾ ಪ್ಯಾರಾ ಗೇಮ್ಸ್‌ನಲ್ಲಿ ಚಿನ್ನದ ಪದಕ ಪಡೆದುಕೊಂಡಿದ್ದರಿಂದ ಪ್ರಧಾನಿ ಅವರು ಕರೆಸಿ ಗೌರವಿಸಿದ್ದರು. ಆದರೆ, ನಮ್ಮ ರಾಜ್ಯ ಸರ್ಕಾರ ಗೌರವಿಸಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ಇದನ್ನೂ ಓದಿ: 16ರ ಪೋರ; ಕೊಹ್ಲಿ ಪೋಟೋ ಹೇಳುತ್ತಿದೆ ನೆನಪು ಸಾವಿರ!
ನೆರೆ ರಾಜ್ಯಗಳಲ್ಲಿ ಕ್ರೀಡಾಪಟುಗಳಿಗೆ ಗೌರವಿಸುವ, ಅವರಿಗೆ ಆರ್ಥಿಕ ನೆರವು ನೀಡುತ್ತವೆ. ಆದರೆ, ಕರ್ನಾಟಕ ರಾಜ್ಯದಲ್ಲಿ ಈ ಸಂಪ್ರದಾಯ ಇಲ್ಲದಿರುವಂತೆ ಕಾಣುತ್ತಿದೆ ಎಂದು ರಾಹುಲ್ ಹೇಳಿದ್ದಾರೆ.