
ಬೆಂಗಳೂರು[ಸೆ.20] ಹಾಲಿ ಚಾಂಪಿಯನ್ ಕರ್ನಾಟಕ 2018-19ರ ದೇಸಿ ಕ್ರಿಕೆಟ್ ಋತುವನ್ನು ಭರ್ಜರಿಯಾಗಿ ಆರಂಭಿಸಲು ಕಾತರಿಸುತ್ತಿದೆ. ಬುಧವಾರದಿಂದ ವಿಜಯ್ ಹಜಾರೆ ಏಕದಿನ ಟೂರ್ನಿ ಆರಂಭಗೊಂಡಿದ್ದು, ‘ಎ’ ಗುಂಪಿನಲ್ಲಿರುವ ಕರ್ನಾಟಕ ಇಂದಿನಿಂದ ತನ್ನ ಅಭಿಯಾನ ಆರಂಭಿಸಲಿದೆ.
ಇಲ್ಲಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯಲಿರುವ ಪಂದ್ಯದಲ್ಲಿ ಮಹಾರಾಷ್ಟ್ರ ವಿರುದ್ಧ ಕಣಕ್ಕಿಳಿಯಲಿದೆ. ಕಳೆದ ಋತುವಿನಲ್ಲಿ ಗಾಯದ ಸಮಸ್ಯೆಯಿಂದಾಗಿ ಬಹುತೇಕ ಪಂದ್ಯಗಳನ್ನು ತಪ್ಪಿಸಿಕೊಂಡಿದ್ದ ವಿನಯ್ ಕುಮಾರ್, ನಾಯಕತ್ವಕ್ಕೆ ಮರಳಿದ್ದಾರೆ. ರನ್ ಮಷಿನ್ ಮಯಾಂಕ್ ಅಗರ್‌ವಾಲ್ ತಮ್ಮ ಪ್ರಚಂಡ ಲಯವನ್ನು ಮುಂದುವರಿಸಿ, ಬಿಸಿಸಿಐ ಆಯ್ಕೆಗಾರರ ಮೇಲೆ ಮತ್ತಷ್ಟು ಒತ್ತಡ ಹೇರಲು ಕಾಯುತ್ತಿದ್ದರೆ, ಆರ್.ಸಮರ್ಥ್, ಪವನ್ ದೇಶಪಾಂಡೆ, ಕರುಣ್ ನಾಯರ್, ಸಿ.ಎಂ.ಗೌತಮ್‌ರಂತಹ ಬಲಿಷ್ಠ ಬ್ಯಾಟ್ಸ್‌ಮನ್‌ಗಳನ್ನು ಕರ್ನಾಟಕ ಹೊಂದಿದೆ. ಸ್ಟುವರ್ಟ್ ಬಿನ್ನಿ, ಕೆ.ಗೌತಮ್, ಶ್ರೇಯಸ್ ಗೋಪಾಲ್ ರಂತಹ ಗುಣಮಟ್ಟದ ಆಲ್ರೌಂಡರ್‌ಗಳ ಬಲ ತಂಡಕ್ಕಿದೆ. ವಿನಯ್, ಅಭಿಮನ್ಯು ಮಿಥುನ್, ಪ್ರಸಿದ್ಧ್ ಕೃಷ್ಣ ವೇಗದ ಬೌಲಿಂಗ್ ಹೊಣೆ ಹೊರಲಿದ್ದಾರೆ. ಕರ್ನಾಟಕ ತಂಡ ಭಾರೀ ಬಲಿಷ್ಠವಾಗಿದೆ.
ಮತ್ತೊಂದೆಡೆ ಮಹಾರಾಷ್ಟ್ರ ತಂಡ ಸಹ ಕರ್ನಾಟಕದಷ್ಟೇ ಪ್ರತಿಭಾನ್ವಿತರನ್ನು ಹೊಂದಿದೆ. ರಾಹುಲ್ ತ್ರಿಪಾಠಿ ತಂಡವನ್ನು ಮುನ್ನಡೆಸಲಿದ್ದು ಅಂಕಿತ್ ಬಾವ್ನೆ, ರೋಹಿತ್ ಮೋಟವಾನಿ, ಋತುರಾಜ್ ಗಾಯಕ್ವಾಡ್, ಸಮದ್ ಫಲ್ಹಾ, ಶ್ರೀಕಾಂತ್ ಮುಂಢೆಯಂತಹ ಅನುಭವಿಗಳ ದಂಡೇ ಇದೆ. ಹಾಲಿ ಚಾಂಪಿಯನ್‌ಗೆ ಮೊದಲ ಪಂದ್ಯದಲ್ಲೇ ಪ್ರಬಲ ಪೈಪೋಟಿ ಎದುರಾಗುವ ನಿರೀಕ್ಷೆ ಇದೆ.
ನೂತನ ಕೋಚ್‌ಗಳಿಗೆ ಸವಾಲು: ಈ ಋತುವಿಗೆ ಕರ್ನಾಟಕ ತಂಡಕ್ಕೆ ನೂತನ ಕೋಚ್‌ಗಳ ನೇಮಕವಾಗಿದ್ದು, ಪ್ರಧಾನ ಕೋಚ್ ಯರ್ರೆ ಗೌಡ್ ಹಾಗೂ ಬೌಲಿಂಗ್ ಕೋಚ್ ಎಸ್.ಅರವಿಂದ್ ಮುಂದೆ ದೊಡ್ಡ ಸವಾಲಿದೆ. ತಂಡ ಅತ್ಯುತ್ತಮವಾಗಿದ್ದರೂ, ನಾಕೌಟ್ ಹಂತದಲ್ಲಿ ಈ ಹಿಂದೆ ಎಡವಿದ ಉದಾಹರಣೆಗಳಿವೆ. ಕಳೆದ ವರ್ಷ ಉತ್ತಮ ಪ್ರದರ್ಶನ ತೋರಿದ ಹೊರತಾಗಿಯೂ ಕೋಚ್‌ಗಳನ್ನು ಬದಲಿಸಲಾಗಿತ್ತು. ಹೀಗಾಗಿ, ಹೊಸ ಕೋಚ್‌ಗಳು ಕೆಲಸ ಅಂದುಕೊಂಡಷ್ಟು ಸುಲಭವಲ್ಲ ಎನಿಸಿದೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.