
ನ್ಯೂಯಾರ್ಕ್: ಯುಎಸ್ ಓಪನ್ ಗ್ರ್ಯಾನ್‌ಸ್ಲಾಂ ಟೆನಿಸ್ ಟೂರ್ನಿಯಲ್ಲಿ ದಿಗ್ಗಜ ಆಟಗಾರ ನೋವಾಕ್ ಜೋಕೋವಿಚ್, ಯುವ ಸೂಪರ್‌ಸ್ಟಾರ್ ಕಾರ್ಲೊಸ್ ಆಲ್ಕರಜ್, ಹಾಲಿ ಚಾಂಪಿಯನ್ ಅರೈನಾ ಸಬಲೆಂಕಾ 3ನೇ ಸುತ್ತು ಪ್ರವೇಶಿಸಿದ್ದಾರೆ.
ಬುಧವಾರ ನಡೆದ ಪುರುಷರ ಸಿಂಗಲ್ಸ್ 2ನೇ ಸುತ್ತಿನ ಪಂದ್ಯದಲ್ಲಿ ಮಾಜಿ ನಂ.1, ಸರ್ಬಿಯಾದ ಜೋಕೋವಿಚ್ ಅವರು ಅಮೆರಿಕದ ಜಕಾರಿ ಸ್ವಜ್ದಾ ವಿರುದ್ಧ 6-7(5/7), 6-3, 6-3, 6-1 ಸೆಟ್‌ಗಳಲ್ಲಿ ಜಯಗಳಿಸಿದರು. 2ನೇ ಶ್ರೇಯಾಂಕಿತ ಆಲ್ಕರಜ್ ಬುಧವಾರ ರಾತ್ರಿ 2ನೇ ಸುತ್ತಿನಲ್ಲಿ ಇಟಲಿಯ ಮಟಿಯಾ ಬೆಲುಚ್ಚಿ ವಿರುದ್ಧ 6-1, 6-0, 6-3 ನೇರ ಸೆಟ್‌ಗಳಲ್ಲಿ ಭರ್ಜರಿ ಗೆಲುವು ಸಾಧಿಸಿದರು. ಆದರೆ 12ನೇ ಶ್ರೇಯಾಂಕಿತ ಕ್ಯಾಸ್ಪೆರ್ ರುಡ್ ಸೋತು ಹೊರಬಿದ್ದರು.
ಸಬಲೆಂಕಾಗೆ ಮುನ್ನಡೆ:
ಮಹಿಳಾ ಸಿಂಗಲ್ಸ್ 2ನೇ ಸುತ್ತಿನಲ್ಲಿ ವಿಶ್ವ ನಂ.1 ಅರೈನಾ ಸಬಲೆಂಕಾ, ರಷ್ಯಾದ ಪೋಲಿನಾ ಕುಡೆರ್‌ಮೆಟೋವಾ ವಿರುದ್ಧ 7-6(7/4), 6-2 ಸೆಟ್‌ಗಳಲ್ಲಿ ಜಯಭೇರಿ ಬಾರಿಸಿದರು. 2021ರ ಚಾಂಪಿಯನ್ ಬ್ರಿಟನ್‌ನ ಎಮ್ಮಾ ರಾಡುಕಾನು, ಮಾಜಿ ವಿಂಬಲ್ಡನ್ ಚಾಂಪಿಯನ್‌ಗಳಾದ ಕಜಕಸ್ತಾನದ ಎಲೆನಾ ರಬೈಕೆನಾ, ಚೆಕ್ ಗಣರಾಜ್ಯದ ಮಾರ್ಕೆಟಾ ವೊಂಡ್ರೊಸೋವಾ ಕೂಡಾ 3ನೇ ಸುತ್ತು ತಲುಪಿದರು.
ಡ್ಯಾನಿಲ್‌ಗೆ 37 ಲಕ್ಷ ದಂಡ
ಯುಎಸ್ ಓಪನ್ ಟೂರ್ನಿಯ ಮೊದಲ ಸುತ್ತಿನ ವೇಳೆ ರಾಕೆಟ್ ಮುರಿದು ಹಾಕಿದ 2021ರ ಚಾಂಪಿಯನ್, ರಷ್ಯಾದ ಡ್ಯಾನಿಲ್ ಮೆಡ್ವೆಡೆವ್‌ಗೆ ₹37 ಲಕ್ಷ ದಂಡ ವಿಧಿಸಲಾಗಿದೆ. ಬೆಂಜಮಿನ್ ಬೊನ್ಜಿ ವಿರುದ್ಧ ಪಂದ್ಯದ ವೇಳೆ ಫೋಟೋಗ್ರಾಫರ್ ಒಬ್ಬರು ಬದಿಯಲ್ಲಿ ನಡೆದುಕೊಂಡು ಹೋಗಿದ್ದಾರೆ. ಹೀಗಾಗಿ ಮೊದಲ ಸರ್ವ್ ಮಾಡಲು ಬೊನ್ಜಿಗೆ ಮತ್ತೊಂದು ಅವಕಾಶ ನೀಡಲಾಗಿದೆ. ಇದರಿಂದ ಕೋಪಗೊಂಡ ಮೆಡ್ವೆಡೆವ್, ರೆಫ್ರಿ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು, ಕೆಲ ಕಾಲ ಪಂದ್ಯ ಸ್ಥಗಿತಗೊಂಡಿದೆ. ಸೋಲಿನ ಬಳಿಕ ರಾಕೆಟ್ ಕೂಡಾ ಮುರಿದುಹಾಕಿದ್ದಾರೆ. ಹೀಗಾಗಿ ದಂಡ ಹೇರಲಾಗಿದೆ.
ಸಿಂಧು ಕ್ವಾರ್ಟರ್ ಫೈನಲ್‌ಗೆ
ಪ್ಯಾರಿಸ್: ವಿಶ್ವ ಬ್ಯಾಡ್ಮಿಂಟನ್ ಚಾಂಪಿಯನ್‌ಶಿಪ್‌ನಲ್ಲಿ ಮಾಜಿ ವಿಶ್ವ ಚಾಂಪಿಯನ್, ಭಾರತದ ತಾರಾ ಶಟ್ಲರ್ ಪಿ.ವಿ.ಸಿಂಧು ಕ್ವಾರ್ಟರ್ ಫೈನಲ್ ಪ್ರವೇಶಿಸಿದ್ದಾರೆ.
ಗುರುವಾರ ಮಹಿಳಾ ಸಿಂಗಲ್ಸ್ 2ನೇ ಸುತ್ತಿನಲ್ಲಿ ಸಿಂಧು, ವಿಶ್ವ ನಂ.2 ಚೀನಾದ ವಾಂಗ್ ಝಿ ಯಿ ವಿರುದ್ಧ 21-19, 21-15ರಲ್ಲಿ ಗೆಲುವು ಸಾಧಿಸಿದರು. ಈ ಮೂಲಕ ವಾಂಗ್ ವಿರುದ್ಧ ಗೆಲುವಿನ ದಾಖಲೆಯನ್ನು 3-2ಕ್ಕೆ ಹೆಚ್ಚಿಸಿದರು. ಇದೇ ವೇಳೆ ಮಿಶ್ರ ಡಬಲ್ಸ್‌ನಲ್ಲಿ ಧ್ರುವ್ ಕಪಿಲಾ-ತನಿಶಾ ಕ್ರಾಸ್ಟೊ ಜೋಡಿ ವಿಶ್ವ ನಂ.5, ಹಾಂಕಾಂಗ್‌ನ ಟಾಂಗ್ ಚುನ್ ಮಾನ್-ಟ್ಸೆ ಯಿಂಗ್ ಸ್ಯುಟ್ ಜೋಡಿಯನ್ನು 19-21, 21-12, 21-15ರಲ್ಲಿ ಸೋಲಿಸಿ, ಕ್ವಾರ್ಟರ್ ಫೈನಲ್‌ಗೇರಿತು.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.