ಯುಎಸ್ ಓಪನ್: ಮೊದಲ ಸುತ್ತಿನಲ್ಲೇ ಹ್ಯಾಲೆಪ್’ಗೆ ಆಘಾತ

By Web DeskFirst Published Aug 28, 2018, 9:28 AM IST
Highlights

ಸೋಮವಾರ ಇಲ್ಲಿನ ಲೂಯಿಸ್ ಆರ್ಮಸ್ಟ್ರಾಂಗ್ ಸ್ಟೇಡಿಯಂನಲ್ಲಿ ನಡೆದ ಮಹಿಳಾ ಸಿಂಗಲ್ಸ್‌ನಲ್ಲಿ ಹಾಲೆಪ್, ಈಸ್ಟೋನಿಯಾದ ಕಯಿಯಾ ಕನೆಪಿ ವಿರುದ್ಧ 2-6, 4-6 ನೇರ ಸೆಟ್‌ಗಳಲ್ಲಿ ಸೋಲು ಕಂಡರು. 2018ರಲ್ಲಿ ಕ್ಲೇ ಕೋರ್ಟ್‌ನಲ್ಲಿ ಫ್ರೆಂಚ್ ಓಪನ್ ಮುಡಿಗೇರಿಸಿಕೊಂಡಿದ್ದ ಹಾಲೆಪ್, ಯುಎಸ್ ಓಪನ್ ಗೆಲ್ಲುವ ಉತ್ಸಾಹದಲ್ಲಿ ಕಣಕ್ಕಿಳಿದಿದ್ದರು. ಆದರೆ ಮೊದಲ ಸುತ್ತಿನಲ್ಲೇ ಶ್ರೇಯಾಂಕ ರಹಿತ ಆಟಗಾರ್ತಿ ಈಸ್ಟೋನಿಯಾದ ಕನೆಪಿ ವಿರುದ್ಧ ನಿರಾಸೆ ಅನುಭವಿಸಿದರು. 

ನ್ಯೂಯಾರ್ಕ್[ಆ.28]: ವರ್ಷಾಂತ್ಯದ ಪ್ರತಿಷ್ಠಿತ ಗ್ರ್ಯಾಂಡ್ ಸ್ಲಾಮ್ ಯುಎಸ್ ಓಪನ್ ಟೆನಿಸ್ ಟೂರ್ನಿಯ ಮೊದಲ ಸುತ್ತಿನಲ್ಲೇ ವಿಶ್ವ ನಂ.4 ರೋಮೇನಿಯಾದ ಸಿಮೊನಾ ಹಾಲೆಪ್ ಸೋಲಿನ ಆಘಾತ ಅನುಭವಿಸಿರೆ, ಉಕ್ರೇನ್'ನ ಎಲಿನಾ ಸ್ವಿಟೋಲಿನಾ ಹಾಗೂ ಸ್ವಿಜರ್ಲೆಂಡ್‌ನ ಸ್ಟಾನ್ ವಾವ್ರಿಂಕ ಗೆಲುವಿನ ಶುಭಾರಂಭ ಮಾಡಿದ್ದಾರೆ.

ಸೋಮವಾರ ಇಲ್ಲಿನ ಲೂಯಿಸ್ ಆರ್ಮಸ್ಟ್ರಾಂಗ್ ಸ್ಟೇಡಿಯಂನಲ್ಲಿ ನಡೆದ ಮಹಿಳಾ ಸಿಂಗಲ್ಸ್‌ನಲ್ಲಿ ಹಾಲೆಪ್, ಈಸ್ಟೋನಿಯಾದ ಕಯಿಯಾ ಕನೆಪಿ ವಿರುದ್ಧ 2-6, 4-6 ನೇರ ಸೆಟ್‌ಗಳಲ್ಲಿ ಸೋಲು ಕಂಡರು. 2018ರಲ್ಲಿ ಕ್ಲೇ ಕೋರ್ಟ್‌ನಲ್ಲಿ ಫ್ರೆಂಚ್ ಓಪನ್ ಮುಡಿಗೇರಿಸಿಕೊಂಡಿದ್ದ ಹಾಲೆಪ್, ಯುಎಸ್ ಓಪನ್ ಗೆಲ್ಲುವ ಉತ್ಸಾಹದಲ್ಲಿ ಕಣಕ್ಕಿಳಿದಿದ್ದರು. ಆದರೆ ಮೊದಲ ಸುತ್ತಿನಲ್ಲೇ ಶ್ರೇಯಾಂಕ ರಹಿತ ಆಟಗಾರ್ತಿ ಈಸ್ಟೋನಿಯಾದ ಕನೆಪಿ ವಿರುದ್ಧ ನಿರಾಸೆ ಅನುಭವಿಸಿದರು. ಸಿಮೊನಾ 2015ರ ಯುಎಸ್ ಓಪನ್‌ನಲ್ಲಿ ಸೆಮಿಫೈನಲ್‌ಗೇರಿದ್ದರು. ಆ ಬಳಿಕ ಅಂತಹ ಸಾಧನೆ ಸಿಮೊನಾ ಅವರಿಂದ ಹೊರ ಹೊಮ್ಮಿಲ್ಲ. ಸದ್ಯ ಸಿಮೊನಾ ನಂ.1 ಶ್ರೇಯಾಂಕವನ್ನು ಕಾಯ್ದುಕೊಂಡಿದ್ದರು. ಈ ಸೋಲಿನಿಂದಾಗಿ ರ‍್ಯಾಂಕಿಂಗ್‌ನಲ್ಲಿ ಕುಸಿಯುವ ಸಾಧ್ಯತೆಯಿದೆ.

ವಾವ್ರಿಂಕಗೆ ಜಯ: ಪುರುಷರ ಸಿಂಗಲ್ಸ್’ನಲ್ಲಿ ನಡೆದ ಆರಂಭಿಕ ಪಂದ್ಯದಲ್ಲಿ ಸ್ವಿಟ್ಜರ್’ಲ್ಯಾಂಡ್’ನ ಸ್ಟಾನ್ ವಾವ್ರಿಂಕ, ಬಲ್ಗೇರಿಯಾದ ಗ್ರಿಗೋರ್ ಡಿಮಿತ್ರೋವ್ ವಿರುದ್ಧ 6-2, 6-3, 7-5ರಿಂದ ಗೆಲುವು ಸಾಧಿಸಿ ಎರಡನೇ ಸುತ್ತಿಗೆ ಲಗ್ಗೆಯಿಟ್ಟಿದ್ದಾರೆ. ಇನ್ನೊಂದು ಪಂದ್ಯದಲ್ಲಿ ಮಿಲೋಸ್ ರೊನಿಕ್, ಕಾರ್ಲೋಸ್ ಬೆರ್ಲಾಕ್ ವಿರುದ್ಧ ಜಯ ಸಾಧಿಸಿದರು. 

ಸ್ವಿಟೋಲಿನಾ ಶುಭಾರಂಭ: ಇನ್ನೊಂದು ಪಂದ್ಯದಲ್ಲಿ ವಿಶ್ವ ನಂ.7 ಶ್ರೇಯಾಂಕಿತೆ ಉಕ್ರೇನ್‌ನ ಸ್ವಿಟೋಲಿನಾ, ಅಮೆರಿಕದ ಸಚಿಯಾ ವಿಕರಿ ವಿರುದ್ಧ 6-3, 1-6, 6-1 ಸೆಟ್‌ಗಳಿಂದ ಗೆಲುವು ಸಾಧಿಸಿದರು. ಸ್ವಿಜರ್ಲೆಂಡ್‌ನ ಜಿಲ್ ಟಿಚ್‌ಮನ್, ಸ್ಲೋವೇನಿಯಾದ ದಲಿಲಾ ಜಕುಪೊವಿಕ್ ಎದುರು 6-3, 6-0 ಸೆಟ್‌ಗಳಲ್ಲಿ ಗೆಲುವು ಪಡೆದು ಶುಭಾರಂಭ ಮಾಡಿದರು. ಮತ್ತೊಂದು ಸಿಂಗಲ್ಸ್‌ನಲ್ಲಿ ಬೇಲಾರಸ್‌ನ ಲಪ್ಕೊ 6-3, 6-3 ಸೆಟ್‌ಗಳಲ್ಲಿ ಉಕ್ರೇನ್‌ನ ಕಟ್ರೇನಾ ಬೊಂಡಾರೆಂಕೊ ವಿರುದ್ಧ ಗೆದ್ದು, 2ನೇ ಸುತ್ತು ಪ್ರವೇಶಿಸಿದರು. ಇನ್ನೊಂದು ಸಿಂಗಲ್ಸ್ ಪಂದ್ಯದಲ್ಲಿ ಚೀನಾದ ವಾಂಗ್ ಕಿಯಂಗ್, ಸ್ಲೋವಕಿಯಾದ ಮಗ್ದಾಲೆನಾ ರೈಬರಿಕೊವಾ ಎದುರು 6-2, 6-2 ಸೆಟ್‌ಗಳಲ್ಲಿ ಜಯ ಪಡೆದು ಮುಂದಿನ ಸುತ್ತು ಪ್ರವೇಶಿಸಿದರು.

click me!