ಇಂದಿನಿಂದ ಯುಎಸ್ ಓಪನ್ ಆರಂಭ

By Web DeskFirst Published Aug 27, 2018, 12:29 PM IST
Highlights

ಪುರುಷರ ವಿಭಾಗದಲ್ಲಿ ಪ್ರಮುಖವಾಗಿ ಸ್ಪೇನ್‌ನ ರಾಫೆಲ್ ನಡಾಲ್, ಸ್ವಿಜರ್‌ಲೆಂಡ್‌ನ ರೋಜರ್ ಫೆಡರರ್, ಸರ್ಬಿಯಾದ ನೊವಾಕ್ ಜೋಕೋವಿಚ್ ಮತ್ತು ಬ್ರಿಟನ್‌ನ ಆ್ಯಂಡಿ ಮರ್ರೆ ಮೇಲೆ ಎಲ್ಲರ ಕಣ್ಣು ನೆಟ್ಟಿದೆ. ಈ ನಾಲ್ವರು ಆಟಗಾರರು ಈ ವರ್ಷದ ಪ್ರಮುಖ ಟೆನಿಸ್ ಟೂರ್ನಿಯೊಂದರಲ್ಲಿ ಒಟ್ಟಾಗಿ ಕಾಣಿಸಿಕೊಳ್ಳುತ್ತಿರುವುದು ಇದೇ ಮೊದಲಾಗಿದೆ.

ನ್ಯೂಯಾರ್ಕ್[ಆ.27]: ವರ್ಷಾಂತ್ಯದ ಪ್ರತಿಷ್ಟಿತ ಯುಎಸ್ ಓಪನ್ ಗ್ರ್ಯಾಂಡ್’ಸ್ಲಾಂ ಟೆನಿಸ್ ಟೂರ್ನಿ ಇಂದಿನಿಂದ (ಆ.27) ಇಲ್ಲಿನ ಬಿಲ್ಲಿಜೀನ್ ಕಿಂಗ್ ರಾಷ್ಟ್ರೀಯ ಟೆನಿಸ್ ಸೆಂಟರ್‌ನಲ್ಲಿ ಆರಂಭವಾಗಲಿದೆ. 138ನೇ ಯುಎಸ್ ಓಪನ್ ಟೆನಿಸ್ ಟೂರ್ನಿ ಇದಾಗಿದ್ದು, ಸೆ.9ರಂದು ಮುಕ್ತಾಯವಾಗಲಿದೆ. ಪುರುಷ ಮತ್ತು ಮಹಿಳಾ ವಿಭಾಗದಲ್ಲಿ 128 ಟೆನಿಸಿಗರು ಅದೃಷ್ಟ ಪರೀಕ್ಷೆಗೆ ಇಳಿದಿದ್ದಾರೆ.

ಪುರುಷರ ವಿಭಾಗದಲ್ಲಿ ಪ್ರಮುಖವಾಗಿ ಸ್ಪೇನ್‌ನ ರಾಫೆಲ್ ನಡಾಲ್, ಸ್ವಿಜರ್‌ಲೆಂಡ್‌ನ ರೋಜರ್ ಫೆಡರರ್, ಸರ್ಬಿಯಾದ ನೊವಾಕ್ ಜೋಕೋವಿಚ್ ಮತ್ತು ಬ್ರಿಟನ್‌ನ ಆ್ಯಂಡಿ ಮರ್ರೆ ಮೇಲೆ ಎಲ್ಲರ ಕಣ್ಣು ನೆಟ್ಟಿದೆ. ಈ ನಾಲ್ವರು ಆಟಗಾರರು ಈ ವರ್ಷದ ಪ್ರಮುಖ ಟೆನಿಸ್ ಟೂರ್ನಿಯೊಂದರಲ್ಲಿ ಒಟ್ಟಾಗಿ ಕಾಣಿಸಿಕೊಳ್ಳುತ್ತಿರುವುದು ಇದೇ ಮೊದಲಾಗಿದೆ.

ಅದರಲ್ಲೂ ಜೋಕೋವಿಚ್ ಗಾಯದಿಂದ ಚೇತರಿಸಿಕೊಂಡ ಬಳಿಕ ಅಕ್ಷರಶಃ ಅದ್ಭುತ ಆಟದಿಂದ ಗಮನ ಸೆಳೆಯುತ್ತಿದ್ದಾರೆ. ಇತ್ತೀಚೆಗಷ್ಟೆ ಮುಕ್ತಾಯವಾದ ಸಿನ್ಸಿನಾಟಿ ಮಾಸ್ಟರ್ಸ್‌ನಲ್ಲಿ ಜೋಕೋ, ದಾಖಲೆ ಗ್ರ್ಯಾಂಡ್ ಸ್ಲಾಮ್ ವಿಜೇತ ಫೆಡರರ್ ಅವರನ್ನು ಸೋಲಿಸಿ ಪ್ರಶಸ್ತಿ ಗೆದ್ದಿದ್ದರು. ಜೋಕೋ ಅವರ ಆಟ ನೋಡುತ್ತಿದ್ದರೆ ಮತ್ತೆ ನಂ.1 ಪಟ್ಟಕ್ಕೇರುವ ಎಲ್ಲ ಲಕ್ಷಣಗಳು ಗೋಚರಿಸುತ್ತಿವೆ ಎಂದು ಅರ್ಜೆಂಟೀನಾದ ಜುವಾನ್ ಮಾರ್ಟಿನ್ ಡೆಲ್ ಪೊಟ್ರೊ ಹೇಳಿದ್ದಾರೆ.

ಹ್ಯಾಟ್ರಿಕ್ ಯುಎಸ್ ಓಪನ್ ಮೇಲೆ ಕಣ್ಣಿರಿಸಿರುವ ಜೋಕೋ, ಮಂಗಳವಾರ ನಡೆಯಲಿರುವ ಮೊದಲ ಸುತ್ತಿನಲ್ಲಿ ಹಂಗೇರಿಯ ಮ್ಯಾಟ್ರನ್ ಫುಕ್ಸೊವಿಕ್ಸ್ ಎದುರು ಸೆಣಸಲಿದ್ದಾರೆ. ಈ ವರ್ಷದ 2ನೇ ಗ್ರ್ಯಾಂಡ್ ಸ್ಲಾಮ್‌ಗಾಗಿ ಜೋಕೋ ಎದುರು ನೋಡುತ್ತಿದ್ದಾರೆ. ವಿಂಬಲ್ಡನ್‌ನಲ್ಲಿ ದ.ಆಫ್ರಿಕಾದ ಮ್ಯಾರಾಥಾನ್ ಟೆನಿಸಿಗ ಕೆವಿನ ಆ್ಯಂಡರ್‌ಸನ್‌ರನ್ನು ಮಣಿಸಿ ಟ್ರೋಫಿ ಗೆದ್ದಿದ್ದರು.
ನಂ.1 ಟೆನಿಸಿಗ ಸ್ಪೇನ್‌ನ ರಾಫೆಲ್ ನಡಾಲ್, ಜೋಕೋವಿಚ್‌ಗೆ ಪ್ರಬಲ ಎದುರಾಳಿ ಎನಿಸಿದ್ದಾರೆ. ಹಾಲಿ ಚಾಂಪಿಯನ್ ಎನಿಸಿರುವ ನಡಾಲ್, 4ನೇ ಯುಎಸ್ ಓಪನ್ ಮತ್ತು 18ನೇ ಗ್ರ್ಯಾಂಡ್ ಸ್ಲಾಮ್ ಟ್ರೋಫಿ ಜಯಿಸುವ ವಿಶ್ವಾಸದಲ್ಲಿದ್ದಾರೆ. ಕ್ಲೇ ಕೋರ್ಟ್ ಕಿಂಗ್ ಎನಿಸಿರುವ ನಡಾಲ್ ಈ ವರ್ಷದ 2 ನೇ ಗ್ರ್ಯಾಂಡ್ ಸ್ಲಾಮ್ ಗೆದ್ದು ವರ್ಷಾಂತ್ಯದಲ್ಲೂ ನಂ.1 ಆಗಿಯೇ ಉಳಿಯುವ ಇರಾದೆ ಹೊಂದಿದ್ದಾರೆ.

ಟೀಕಾಕಾರಿಗೆ ಉತ್ತರ ಕೊಡ್ತಾರಾ ಫೆಡರರ್?: ವಿಶ್ವದ ನಂ. 2 ಸ್ವಿಜರ್‌ಲೆಂಡ್‌ನ ರೋಜರ್ ಫೆಡರರ್, 2004 ರಿಂದ 2008ರವರೆಗೆ ಯುಎಸ್ ಓಪನ್‌ನಲ್ಲಿ ಸತತ 5 ವರ್ಷ ಟ್ರೋಫಿ ಗೆದ್ದಿದ್ದರು. ಆ ಬಳಿಕ ಫೆಡರರ್ ಯುಎಸ್ ಓಪನ್ ಗೆದ್ದಿಲ್ಲ. ಸುಮಾರು 10 ವರ್ಷಗಳ ಬಳಿಕ ಮತ್ತೆ ಯುಎಸ್ ಓಪನ್ ಗೆಲ್ಲುವ ತುಡಿತದಲ್ಲಿ ಫೆಡರರ್ ಇದ್ದಾರೆ. ಆದರೆ ಪ್ರತಿಷ್ಠಿತ ಟೂರ್ನಿಗಳಲ್ಲಿ ಪ್ರಮುಖ ಸುತ್ತಿನಲ್ಲಿ ಹಿನ್ನಡೆಯುವ ಫೆಡರರ್‌ಗೆ ಈಗಾಗಲೇ ನಿವೃತ್ತಿ ಪಡೆದರೆ ಒಳಿತು ಎಂದು ಅಭಿಮಾನಿಗಳು ಸಲಹೆ ನೀಡಿದ್ದಾರೆ. 20 ಗ್ರ್ಯಾಂಡ್ ಸ್ಲಾಮ್ ಗೆದ್ದಿರುವ ಫೆಡರರ್, ಬುಧವಾರ ನಡೆಯಲಿರುವ ಮೊದಲ ಸುತ್ತಿನಲ್ಲಿ ಜಪಾನ್‌ನ ಯೊಶಿಹಿಟೊ ನಿಶಿಒಕಾ ಎದುರು ಸೆಣಸಲಿದಾರೆ

click me!