ಡಿಸೆಂಬರ್ 10ರಿಂದ ಚೊಚ್ಚಲ ಖೇಲೋ ಪ್ಯಾರಾ ಗೇಮ್ಸ್‌; ಅನುರಾಗ್ ಠಾಕೂರ್ ಘೋಷಣೆ

By Kannadaprabha NewsFirst Published Nov 23, 2023, 9:30 AM IST
Highlights

ಚೊಚ್ಚಲ ಆವೃತ್ತಿಯು ಡಿ.10ರಿಂದ 17ರ ವರೆಗೂ ನವದೆಹಲಿಯಲ್ಲಿ ನಡೆಯಲಿದ್ದು, 28 ರಾಜ್ಯ ಹಾಗೂ 4 ಕೇಂದ್ರಾಡಳಿತ ಪ್ರದೇಶಗಳ ಒಟ್ಟು 1350ಕ್ಕೂ ಹೆಚ್ಚು ಕ್ರೀಡಾಪಟುಗಳು ಪಾಲ್ಗೊಳ್ಳಲಿದ್ದಾರೆ ಎಂದು ಕೇಂದ್ರ ಕ್ರೀಡಾ ಸಚಿವ ಅನುರಾಗ್‌ ಠಾಕೂರ್‌ ಬುಧವಾರ ಮಾಧ್ಯಮಗಳಿಗೆ ತಿಳಿಸಿದರು.

ನವದೆಹಲಿ(ನ.23): ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷೆಯ ಯೋಜನೆಯಾದ ಖೇಲೋ ಇಂಡಿಯಾ ಕ್ರೀಡಾಕೂಟ ಭಾರಿ ಯಶಸ್ಸು ಕಂಡ ಬಳಿಕ ಇದೀಗ ಖೇಲೋ ಇಂಡಿಯಾ ಪ್ಯಾರಾ ಗೇಮ್ಸ್‌ ಆಯೋಜಿಸಲು ಸರ್ಕಾರ ಸಜ್ಜಾಗಿದೆ.

ಚೊಚ್ಚಲ ಆವೃತ್ತಿಯು ಡಿ.10ರಿಂದ 17ರ ವರೆಗೂ ನವದೆಹಲಿಯಲ್ಲಿ ನಡೆಯಲಿದ್ದು, 28 ರಾಜ್ಯ ಹಾಗೂ 4 ಕೇಂದ್ರಾಡಳಿತ ಪ್ರದೇಶಗಳ ಒಟ್ಟು 1350ಕ್ಕೂ ಹೆಚ್ಚು ಕ್ರೀಡಾಪಟುಗಳು ಪಾಲ್ಗೊಳ್ಳಲಿದ್ದಾರೆ ಎಂದು ಕೇಂದ್ರ ಕ್ರೀಡಾ ಸಚಿವ ಅನುರಾಗ್‌ ಠಾಕೂರ್‌ ಬುಧವಾರ ಮಾಧ್ಯಮಗಳಿಗೆ ತಿಳಿಸಿದರು.

‘ಪ್ಯಾರಾ ಖೇಲೋ ಇಂಡಿಯಾ ಕ್ರೀಡಾಕೂಟ ಆರಂಭಗೊಳ್ಳುತ್ತಿದೆ ಎಂದು ತಿಳಿಸಲು ಬಹಳ ಖುಷಿಯಾಗುತ್ತಿದೆ. ಈ ಕ್ರೀಡಾಕೂಟವು ದೇಶದ ಮೂಲೆ ಮೂಲೆಗಳಿಂದ ಪ್ರತಿಭೆಗಳನ್ನು ಹೆಕ್ಕಿ ತೆಗೆಯಲಿದೆ. ಜಾಗತಿಕ ಮಟ್ಟದಲ್ಲಿ ಭಾರತೀಯರು ಇನ್ನಷ್ಟು ಸಾಧನೆ ಮಾಡಲು ಈ ಕ್ರೀಡಾಕೂಟ ನೆರವಾಗಲಿದೆ’ ಎಂದು ಅನುರಾಗ್‌ ಹೇಳಿದರು. ಇತ್ತೀಚೆಗೆ ನಡೆದ ಪ್ಯಾರಾ ಏಷ್ಯನ್‌ ಗೇಮ್ಸ್‌ನಲ್ಲಿ ಭಾರತ 29 ಚಿನ್ನ, 31 ಬೆಳ್ಳಿ ಹಾಗೂ 51 ಕಂಚಿನ ಪದಕ ಪಡೆದು ಇತಿಹಾಸ ಸೃಷ್ಟಿಸಿತ್ತು.

ಇಂಡಿಯಾ ವಿಶ್ವಕಪ್ ಸೋತಿದ್ದ ಬೇಜಾರು , ಕಂಠಿ ನೀನು ಕುಸ್ತಿ ಗೆದ್ದು ಮರೆಸಿಬಿಟ್ಟೆ!

ಬ್ಯಾಡ್ಮಿಂಟನ್‌: ಲಕ್ಷ್ಯ, ಶ್ರೀಕಾಂತ್‌ಗೆ ಸೋಲು

ಶೆನ್ಝೆನ್‌: ಪ್ಯಾರಿಸ್‌ ಒಲಿಂಪಿಕ್ಸ್‌ಗೆ ಅರ್ಹತೆ ಪಡೆಯುವ ನಿಟ್ಟಿನಲ್ಲಿ ಅಮೂಲ್ಯ ಅಂಕಗಳನ್ನು ಕಲೆಹಾಕಲು ಹೋರಾಡುತ್ತಿರುವ ಭಾರತದ ತಾರಾ ಶಟ್ಲರ್‌ಗಳಾದ ಲಕ್ಷ್ಯ ಸೇನ್‌ ಹಾಗೂ ಕಿದಂಬಿ ಶ್ರೀಕಾಂತ್‌, ಇಲ್ಲಿ ನಡೆಯುತ್ತಿರುವ ಚೀನಾ ಮಾಸ್ಟರ್ಸ್‌ ಸೂಪರ್‌ 750 ಟೂರ್ನಿಯಲ್ಲಿ ಮೊದಲ ಸುತ್ತಿನಲ್ಲೇ ಆಘಾತ ಅನುಭವಿಸಿದ್ದಾರೆ. ಒಲಿಂಪಿಕ್ಸ್‌ಗೆ ಅರ್ಹತೆ ಪಡೆಯಲು 2024ರ ಏಪ್ರಿಲ್ 28ರ ವೇಳೆಗೆ ವಿಶ್ವ ರ್‍ಯಾಂಕಿಂಗ್‌ನಲ್ಲಿ ಅಗ್ರ-16ರಲ್ಲಿ ಸ್ಥಾನ ಪಡೆಯಬೇಕು. ಸದ್ಯ ವಿಶ್ವ ರ್‍ಯಾಂಕಿಂಗ್‌ನಲ್ಲಿ 17ನೇ ಸ್ಥಾನದಲ್ಲಿರುವ ಸೇನ್‌, ಬುಧವಾರ ಚೀನಾದ ಶೀ ಯೂಕಿ ವಿರುದ್ಧ 19-21, 18-21ರಲ್ಲಿ ಸೋತರೆ, ವಿಶ್ವ ನಂ.24 ಶ್ರೀಕಾಂತ್‌ 15-21, 21-14, 13-21ರಲ್ಲಿ ಥಾಯ್ಲೆಂಡ್‌ನ ಕುನ್ಲಾವುಟ್‌ ವಿಟಿಡ್‌ಸರ್ನ್‌ ಎದುರು ಪರಾಭವಗೊಂಡರು.

ಮಹಿಳಾ ಟೆನಿಸ್‌ ಟೂರ್ನಿ: ಋತುಜಾ ಪ್ರಿ ಕ್ವಾರ್ಟರ್‌ಗೆ

ಬೆಂಗಳೂರು: ಏಷ್ಯನ್‌ ಗೇಮ್ಸ್‌ ಮಿಶ್ರ ಡಬಲ್ಸ್‌ನಲ್ಲಿ ಚಿನ್ನದ ಪದಕ ಗೆದ್ದ ಬಳಿಕ ಮೊದಲ ಬಾರಿಗೆ ಕಣಕ್ಕಿಳಿದಿರುವ ಭಾರತದ ಋತುಜಾ ಭೋಸ್ಲೆ, ಇಲ್ಲಿ ನಡೆಯುತ್ತಿರುವ ಐಟಿಎಫ್‌ ಮಹಿಳಾ ವಿಶ್ವ ಟೆನಿಸ್ ಟೂರ್‌ ಟೂರ್ನಿಯ ಸಿಂಗಲ್ಸ್‌ ವಿಭಾಗದಲ್ಲಿ ಪ್ರಿ ಕ್ವಾರ್ಟರ್‌ ಫೈನಲ್‌ ಪ್ರವೇಶಿಸಿದ್ದಾರೆ.

ವಿಶ್ವಕಪ್ ಬೆನ್ನಲ್ಲೇ ಐಸಿಸಿ ರ‍್ಯಾಂಕಿಂಗ್‌ ಪ್ರಕಟ, ವಿರಾಟ್ ಕೊಹ್ಲಿಗೆ ಭಡ್ತಿ, ಮೊದಲ ಸ್ಥಾನದಲ್ಲಿ ಗಿಲ್!

ಬುಧವಾರ ಅನಾರೋಗ್ಯದ ನಡುವೆಯೂ ಮೊದಲ ಸುತ್ತಿನ ಪಂದ್ಯವನ್ನಾಡಿದ ಋತುಜಾ, ಭಾರತದವರೇ ಆದ ಸ್ಮೃತಿ ಭಸಿನ್‌ ವಿರುದ್ಧ 6-4, 7-5 ಸೆಟ್‌ಗಳಲ್ಲಿ ಜಯಗಳಿಸಿದರು. ಆದರೆ ಕರ್ನಾಟಕದ ಶರ್ಮದಾ ಬಾಲು ಥಾಯ್ಲೆಂಡ್‌ನ ಲನ್ಲಾನ ತರರುಡೀ ವಿರುದ್ಧ 0-6, 1-6 ಸೆಟ್‌ಗಳಲ್ಲಿ ಪರಾಭವಗೊಂಡು ನಿರಾಸೆ ಅನುಭವಿಸಿದರು.ಉಜ್ಬೇಕಿಸ್ತಾನದ ನಿಗಿನಾ ಅಬ್ದುರೈಮೊವಾ, ಕಜಕಸ್ತಾನದ ಝಿಬೆಕ್‌ ಕುಲಂಬಯೇವಾ ಸಹ ಪ್ರಿ ಕ್ವಾರ್ಟರ್‌ಗೇರಿದ್ದಾರೆ.

ಫುಟ್ಬಾಲ್‌: ಬೆಂಗ್ಳೂರಲ್ಲಿಂದು ಕರ್ನಾಟಕ-ತ್ರಿಪುರಾ ಪಂದ್ಯ

ಬೆಂಗಳೂರು: 2023-24ರ ರಾಷ್ಟ್ರೀಯ ಮಹಿಳಾ ಫುಟ್ಬಾಲ್‌ ಚಾಂಪಿಯನ್‌ಶಿಪ್‌ನ ‘ಸಿ’ ಗುಂಪಿನ ಪಂದ್ಯಗಳು ಗುರುವಾರದಿಂದ ಇಲ್ಲಿನ ಬೆಂಗಳೂರು ಫುಟ್ಬಾಲ್‌ ಕ್ರೀಡಾಂಗಣ(ಬಿಎಫ್‌ಎಸ್‌)ನಲ್ಲಿ ಆರಂಭಗೊಳ್ಳಲಿದೆ. 30 ತಂಡಗಳು ಸ್ಪರ್ಧಿಸುತ್ತಿರುವ 28ನೇ ಆವೃತ್ತಿಗೆ ನ.12ರಂದೇ ಚಾಲನೆ ದೊರೆತಿದ್ದು, ಕೆಲ ಗುಂಪುಗಳ ಪಂದ್ಯಗಳು ಮುಕ್ತಾಯಗೊಂಡಿವೆ. 

‘ಸಿ’ ಗುಂಪಿನಲ್ಲಿ ಕರ್ನಾಟಕದ ಜೊತೆ ಕೇರಳ, ತ್ರಿಪುರಾ, ಸಿಕ್ಕಿಂ, ಅಸ್ಸಾಂ ಹಾಗೂ ಚಂಡೀಗಢ ಸ್ಥಾನ ಪಡೆದಿವೆ. ಗುರುವಾರ ರಾಜ್ಯ ತಂಡಕ್ಕೆ ತನ್ನ ಮೊದಲ ಪಂದ್ಯದಲ್ಲಿ ತ್ರಿಪುರಾ ಎದುರಾಗಲಿದೆ. ಟೂರ್ನಿಯಲ್ಲಿ ಆಡುತ್ತಿರುವ ತಂಡಗಳನ್ನು ಒಟ್ಟು 6 ಗುಂಪುಗಳನ್ನಾಗಿ ವಿಂಗಡಿಸಲಾಗಿದ್ದು ಗುಂಪಿನಲ್ಲಿ ಅಗ್ರ-6 ಸ್ಥಾನ ಪಡೆವ ತಂಡಗಳ ಜೊತೆ 2ನೇ ಸ್ಥಾನ ಪಡೆದ ತಂಡಗಳ ಪೈಕಿ 3 ಅತ್ಯುತ್ತಮ ತಂಡಗಳು ಫೈನಲ್‌ ಸುತ್ತಿಗೇರಲಿವೆ. ಕಳೆದ ಆವೃತ್ತಿಯ ಚಾಂಪಿಯನ್‌ ತಮಿಳುನಾಡು, ರನ್ನರ್‌-ಅಪ್‌ ಹರ್ಯಾಣ ಹಾಗೂ ಫೈನಲ್‌ ಸುತ್ತಿಗೆ ಆತಿಥ್ಯ ವಹಿಸಲಿರುವ ಪಶ್ಚಿಮ ಬಂಗಾಳ ನೇರ ಪ್ರವೇಶ ಪಡೆದಿವೆ. ಫೈನಲ್‌ ಸುತ್ತು 2024ರ ಏಪ್ರಿಲ್‌ನಲ್ಲಿ ನಡೆಯಲಿದೆ.
 

click me!