U 19 ವಿಶ್ವಕಪ್: ಬಲಿಷ್ಠ ಆಸೀಸ್ ಪಡೆಯನ್ನು ಮಣಿಸಿ ಶುಭಾರಂಭ ಮಾಡಿದ ಕಿರಿಯರ ಬಳಗ

By Suvarna Web DeskFirst Published Jan 14, 2018, 5:45 PM IST
Highlights

ಇಲ್ಲಿನ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಗೆದ್ದ ಭಾರತ 328 ರನ್'ಗಳ ಸವಾಲಿನ ಮೊತ್ತ ಪೇರಿಸಿತ್ತು. ಇದಕ್ಕುತ್ತರವಾಗಿ ಆಸ್ಟ್ರೇಲಿಯಾ ತಂಡ ಕೇವಲ 228 ರನ್'ಗಳಿಗೆ ಸರ್ವಪತನ ಕಂಡು 100 ರನ್'ಗಳ ಬೃಹತ್ ಅಂತರದ ಸೋಲು ಅನುಭವಿಸಿತು.

ಮೌಂಟ್ ಮಗೆನೂಯಿ(ಜ.14): ಪ್ರತಿಭಾನ್ವಿತ ಕ್ರಿಕೆಟಿಗ, ನಾಯಕ ಪೃಥ್ವಿ ಶಾ, ಮಂಜೋತ್ ಕಲ್ರಾ ಹಾಗೂ ಶುಭಂ ಗಿಲ್ ಆಕರ್ಷಕ ಅರ್ಧಶತಕಗಳ ನೆರವಿನಿಂದ ಭಾರತ ಕಿರಿಯರ ತಂಡ ಅಂಡರ್ 19 ವಿಶ್ವಕಪ್ ಟೂರ್ನಿಯಲ್ಲಿ ಆಸ್ಟ್ರೇಲಿಯಾ ವಿರುದ್ಧ ಜಯಭೇರಿ ಬಾರಿಸಿ ಭರ್ಜರಿ ಶುಭಾರಂಭ ಮಾಡಿದೆ.  

ಇಲ್ಲಿನ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಗೆದ್ದ ಭಾರತ 328 ರನ್'ಗಳ ಸವಾಲಿನ ಮೊತ್ತ ಪೇರಿಸಿತ್ತು. ಇದಕ್ಕುತ್ತರವಾಗಿ ಆಸ್ಟ್ರೇಲಿಯಾ ತಂಡ ಕೇವಲ 228 ರನ್'ಗಳಿಗೆ ಸರ್ವಪತನ ಕಂಡು 100 ರನ್'ಗಳ ಬೃಹತ್ ಅಂತರದ ಸೋಲು ಅನುಭವಿಸಿತು.

ಯುವ ವೇಗಿಗಳಾದ ಶಿವಂ ಮಾವಿ ಮತ್ತು ನಾಗರಕೋಟಿ ದಾಳಿಗೆ ತತ್ತರಿಸಿದ ಆಸೀಸ್ ಪಡೆ ನಿರಂತರ ವಿಕೆಟ್ ಕಳೆದುಕೊಳ್ಳುತ್ತಾ ಸಾಗಿತು. ಆರಂಭಿಕ ಎಡ್ವರ್ಡ್ಸ್ (73), ಕೆಳಕ್ರಮಾಂಕದಲ್ಲಿ ಬಿ.ಜೆ. ಹೊಲ್ಟ್ (39) ರನ್‌ಗಳಿಸಿದ್ದು ಹೊರತುಪಡಿಸಿದರೆ ಇನ್ನುಳಿದ ಬ್ಯಾಟ್ಸ್‌'ಮನ್‌'ಗಳು ನಿರೀಕ್ಷಿತ ಬ್ಯಾಟಿಂಗ್ ಪ್ರದರ್ಶಿಸಲಿಲ್ಲ. ಅಂತಿಮವಾಗಿ ಆಸ್ಟ್ರೇಲಿಯಾ 228 ರನ್‌'ಗಳಿಗೆ ಆಲೌಟ್ ಆಯಿತು. ಭಾರತದ ಪರ ಶಿವಂ ಮಾವಿ, ನಾಗರಕೋಟಿ ತಲಾ 3 ವಿಕೆಟ್ ಪಡೆದು ಮಿಂಚಿದರು.

ಇದಕ್ಕೂ ಮುನ್ನ ಆರಂಭಿಕ ಜೋಡಿ ಪೃಥ್ವಿ ಶಾ, ಮಂಜೋತ್ ಕಲ್ರಾ ಭರ್ಜರಿ ಬ್ಯಾಟಿಂಗ್ ನಡೆಸಿತು. ಮೊದಲ ವಿಕೆಟ್'ಗೆ ಈ ಜೋಡಿ 180 ಕೂಡಿಹಾಕುವುದರೊಂದಿಗೆ ತಂಡಕ್ಕೆ ಉತ್ತಮ ಅಡಿಪಾಯ ಹಾಕಿತು. ನಾಯಕ ಪೃಥ್ವಿ ಶಾ (94) ಕೇವಲ 6 ರನ್'ಗಳಿಂದ ಶತಕ ವಂಚಿತರಾದರು. ಶಾ ಗೆ ತಕ್ಕ ಸಾಥ್ ನೀಡಿದ ಕಲ್ರಾ 86 ರನ್ ಸಿಡಿಸಿ ವಿಕೆಟ್ ಒಪ್ಪಿಸಿದರು. ಆನಂತರ ಶುಬ್‌'ಮನ್ ಗಿಲ್ ಕೂಡಾ ಭರ್ಜರಿ ಅರ್ಧ ಶತಕ ಸಿಡಿಸುವ ಮೂಲಕ ತಂಡಕ್ಕೆ ಬೃಹತ್ ಮೊತ್ತ ಕೂಡಿಹಾಕಲು ನೆರವಾದರು.

ಆಸ್ಟ್ರೇಲಿಯಾ ಪರ ಎಡ್ವರ್ಡ್ಸ್ 4 ವಿಕೆಟ್ ಪಡೆದರೆ, ವಿಲ್ ಸೌಥರ್ಲ್ಯಾಂಡ್, ಪರಂ ಉಪ್ಪಾಳ್, ಆಸ್ಟೀನ್ ವಾ ತಲಾ ಒಂದು ವಿಕೆಟ್ ಪಡೆದರು.

 

ಸಂಕ್ಷಿಪ್ತ ಸ್ಕೋರ್

ಭಾರತ 328/7

ಪೃಥ್ವಿ ಶಾ 94

ಮಂಜೋತ್ 86

ಎಡ್ವರ್ಡ್ಸ್ 65/4

ಆಸ್ಟ್ರೇಲಿಯಾ: 228/10

ಎಡ್ವರ್ಡ್ಸ್ 73,

ಹೊಲ್ಟ್ 39

ನಾಗರಕೋಟಿ 29/3

click me!