
ಡುನೆಡಿನ್(ಜ.13): ಕಿವೀಸ್ ಎಡಗೈ ವೇಗಿ ಟ್ರೆಂಟ್ ಬೌಲ್ಟ್ ಮಾರಕ ದಾಳಿಗೆ ತತ್ತರಿಸಿದ ಪಾಕಿಸ್ತಾನ 183 ರನ್'ಗಳ ಹೀನಾಯ ಸೋಲು ಕಂಡಿದೆ. ಇದರೊಂದಿಗೆ ನ್ಯೂಜಿಲೆಂಡ್ 5 ಪಂದ್ಯಗಳ ಏಕದಿನ ಸರಣಿಯಲ್ಲಿ ಇನ್ನೆರಡು ಪಂದ್ಯ ಬಾಕಿ ಇರುವಾಗಲೇ 3-0 ಅಂತರದಲ್ಲಿ ಸರಣಿ ತನ್ನದಾಗಿಸಿಕೊಂಡಿದೆ.
ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ನ್ಯೂಜಿಲೆಂಡ್, ನಾಯಕ ಕೇನ್ ವಿಲಿಯಮ್ಸನ್ (73 ರನ್) ಹಾಗೂ ರಾಸ್ ಟೇಲರ್ (52 ರನ್)ರ ಅರ್ಧಶತಕದ ನೆರವಿನಿಂದ ನಿಗದಿತ 50 ಓವರ್'ಗಳಲ್ಲಿ 257 ರನ್ ಗಳಿಸಿತು.
ಈ ಸವಾಲಿನ ಗುರಿ ಬೆನ್ನತ್ತಿದ ಪಾಕಿಸ್ತಾನಕ್ಕೆ ಬೌಲ್ಟ್ ಮಾರಕವಾಗಿ ಪರಿಣಮಿಸಿದರು. ಬೌಲ್ಟ್ ಎಸೆದ ಮೊದಲ ಓವರ್'ನ ಕೊನೆಯ ಎಸೆತದಲ್ಲೇ ಅಜರ್ ಅಲಿಗೆ ಪೆವಿಲಿಯನ್ ಹಾದಿ ತೋರಿಸುವ ಮೂಲಕ ಬೌಲ್ಟ್ ಪಾಕ್'ಗೆ ಆಘಾತ ನೀಡಿದರು. ಪಾಕಿಸ್ತಾನ ಒಂದು ಹಂತದಲ್ಲಿ 32 ರನ್'ಗಳಿಗೆ 8 ವಿಕೆಟ್ ಕಳೆದುಕೊಂಡು ಹೀನಾಯ ಸ್ಥಿತಿ ತಲುಪಿತ್ತು. ಈ ವೇಳೆ ಬಾಲಂಗೋಚಿಗಳಾದ ಮೊಹಮ್ಮದ್ ಅಮಿರ್ (14) ಹಾಗೂ ರುಮಾನ್ ರಯೀಸ್(16) ಜತೆಯಾಟವಾಡುವ ಮೂಲಕ ತಂಡದ ಮೊತ್ತವನ್ನು 50ರ ಗಡಿ ದಾಟಿಸುವಲ್ಲಿ ಯಶಸ್ವಿಯಾದರು.
ನ್ಯೂಜಿಲೆಂಡ್ ಪರ ಕೇವಲ 17 ರನ್ ನೀಡಿ 5 ವಿಕೆಟ್ ಪಡೆದ ಟ್ರೆಂಟ್ ಬೋಲ್ಟ್ ಗೆಲುವಿನ ರುವಾರಿಯೆನಿಸಿದರು. ಇವರಿಗೆ ಕಾಲಿನ್ ಮನ್ರೋ ಹಾಗೂ ಲೂಕಿ ಫರ್ಗ್ಯುಸನ್ ತಲಾ 2 ವಿಕೆಟ್ ಪಡೆದು ಬೌಲ್ಟ್'ಗೆ ತಕ್ಕ ಸಾಥ್ ನೀಡಿದರು.
ಸಂಕ್ಷಿಪ್ತ ಸ್ಕೋರ್:
ನ್ಯೂಜಿಲೆಂಡ್: 257/10
ವಿಲಿಯಮ್ಸನ್ 73,
ಹಸನ್ ಅಲಿ 59/3
ಪಾಕಿಸ್ತಾನ: 74/10
ಮೊಹಮ್ಮದ್ ಅಮೀರ್ 14
ಬೌಲ್ಟ್ 17/5
ಫಲಿತಾಂಶ: ನ್ಯೂಜಿಲೆಂಡ್'ಗೆ 183 ರನ್'ಗಳ ಜಯ; ಸರಣಿ ಕೈವಶ
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.