ಅಂಗವಿಕಲರ ವಿಶ್ವಕಪ್’ಗೆ ಆಯ್ಕೆಗಾಗಿ ಟೂರ್ನಿ ಶುರು

By Web DeskFirst Published May 7, 2019, 1:32 PM IST
Highlights

ಮುಂಬರುವ ಆಗಸ್ಟ್ ತಿಂಗಳಲ್ಲಿ ಇಂಗ್ಲೆಂಡ್'ನಲ್ಲಿ ನಡೆಯಲಿರುವ ಅಂಗವಿಕಲರ ವಿಶ್ವಕಪ್ ಕ್ರಿಕೆಟ್ ಟೂರ್ನಿಗೆ ಭಾರತ ತಂಡದ ಆಯ್ಕೆ ಪ್ರಕ್ರಿಯೆಯನ್ನು ಇಲ್ಲಿ ಸೋಮವಾರದಿಂದ ಆರಂಭವಾಗಿರುವ ಅಜಿತ್ ವಾಡೇಕರ್ ಮೆಮೋರಿಯಲ್ ಟ್ರೋಫಿ ಕ್ರಿಕೆಟ್ ಟೂರ್ನಿಯಲ್ಲಿ ನಡೆಸಲಾಗುವುದು.

ಹುಬ್ಬಳ್ಳಿ[ಮೇ.07]: ಮುಂಬರುವ ಆಗಸ್ಟ್ ತಿಂಗಳಲ್ಲಿ ಇಂಗ್ಲೆಂಡ್'ನಲ್ಲಿ ನಡೆಯಲಿರುವ ಅಂಗವಿಕಲರ ವಿಶ್ವಕಪ್ ಕ್ರಿಕೆಟ್ ಟೂರ್ನಿಗೆ ಭಾರತ ತಂಡದ ಆಯ್ಕೆ ಪ್ರಕ್ರಿಯೆಯನ್ನು ಇಲ್ಲಿ ಸೋಮವಾರದಿಂದ ಆರಂಭವಾಗಿರುವ ಅಜಿತ್ ವಾಡೇಕರ್ ಮೆಮೋರಿಯಲ್ ಟ್ರೋಫಿ ಕ್ರಿಕೆಟ್ ಟೂರ್ನಿಯಲ್ಲಿ ನಡೆಸಲಾಗುವುದು.

ಈಗಾಗಲೇ ನಾಲ್ಕು ಹಂತದ ಆಯ್ಕೆ ಪ್ರಕ್ರಿಯೆಯಲ್ಲಿ ಉತ್ತಮ ಪ್ರದರ್ಶನ ನೀಡಿದ ಆಟಗಾರರು ಈ ಪಂದ್ಯಾವಳಿಯಲ್ಲಿ ಸಾಮರ್ಥ್ಯ ಪ್ರದರ್ಶಿಸಲಿದ್ದಾರೆ. ಇಲ್ಲಿ ಎಐಸಿಎಪಿಸಿ (ಅಂಗವಿಕಲರ ಅಖಿಲ ಭಾರತ ಕ್ರಿಕೆಟ್ ಒಕ್ಕೂಟ) ಅಂತಿಮ ಹಂತದ ಆಯ್ಕೆ ಪ್ರಕ್ರಿಯೆ ನಡೆಸಲಿದೆ. ಇದೇ ಮೊದಲ ಬಾರಿಗೆ ಅಂಗವಿಕಲರ ವಿಶ್ವಕಪ್‌ನಲ್ಲಿ ಭಾರತವನ್ನು ಪ್ರತಿನಿಧಿಸಲು ಎಐಸಿಎಪಿಸಿಗೆ ಬಿಸಿಸಿಐ ಅನುಮತಿ ನೀಡಿದೆ. ಈಗಾಗಲೇ ಮುಂಬೈ, ವಡೋದರಾ, ಜಮ್ಮು ಕಾಶ್ಮೀರ ಹಾಗೂ ಛತ್ತೀಸ್'ಗಡದಲ್ಲಿ ಆಯ್ಕೆ ಪ್ರಕ್ರಿಯೆ ನಡೆದಿದೆ. 4 ಹಂತದಲ್ಲಿ ಆಯ್ಕೆ ಪ್ರಕ್ರಿಯೆಯಲ್ಲಿ ಆಯ್ಕೆಯಾದ 120 ಆಟಗಾರರು ಇಲ್ಲಿಗೆ ಆಗಮಿಸಿದ್ದಾರೆ.

ಇವರನ್ನು 8 ತಂಡಗಳಾಗಿ ವಿಭಾಗಿಸಿದ್ದು, ಪ್ರತಿದಿನ ನಾಲ್ಕು ಪಂದ್ಯ ಸೇರಿ 5 ದಿನಗಳಲ್ಲಿ ಒಟ್ಟು 20 ಪಂದ್ಯಗಳನ್ನು ಆಡಿಸಲಾಗುತ್ತದೆ. ಡಿಸೆಂಬರ್‌ನಲ್ಲಿ ಅಫ್ಘಾನಿಸ್ತಾನ-ಭಾರತದ ನಡುವೆ ನಡೆದ ಪಂದ್ಯದಲ್ಲಿ ಪಾಲ್ಗೊಂಡಿದ್ದ ಬೆಳಗಾವಿಯ ನರೇಂದ್ರ ಮಂಗೋರೆ, ಗುಜರಾತ್‌ನ ರೋಹನ್ ವಾಘೇಲಾ, ಹರ್ಯಾಣದ ಪವನಕುಮಾರ್ ಸೇರಿ ಅಂತಾರಾಷ್ಟ್ರೀಯ ಪಂದ್ಯವಾಡಿರುವ ಮುಂಬೈ, ಚಂಢಿಗಡ, ಪಂಜಾಬ್, ಕರ್ನಾಟಕ, ಪಶ್ಚಿಮ ಬಂಗಾಳದ ಸಾಕಷ್ಟು ಪ್ರತಿಭೆಗಳು ಆಯ್ಕೆ ಪ್ರಕ್ರಿಯೆಯಲ್ಲಿ ಭಾಗವಹಿಸಿದ್ದು ಭಾರತದ ಜರ್ಸಿ ತೊಡುವ ತವಕದಲ್ಲಿದ್ದಾರೆ. ಆಯ್ಕೆ ಸಮಿತಿಯಲ್ಲಿ ರೋಹನ್ ಜಲಾನಿ, ಪ್ರಸಾದ ದೇಸಾಯಿ, ಬ್ರಿಜೇಶ್ ಸೋಲ್ಕರ್, ದೀಪಕ್ ಜಾದವ್ ಪಾಲ್ಗೊಂಡಿದ್ದಾರೆ. ಇನ್ನು ಇಂಗ್ಲೆಂಡ್ ಕ್ರಿಕೆಟ್ ಬೋರ್ಡ್‌ನ ಮುಖ್ಯಸ್ಥ ಇಯಾನ್ ಮಾರ್ಟಿನ್ ಪಾಲ್ಗೊಳ್ಳಲಿದ್ದಾರೆ. ಜತೆಗೆ ಭಾರತ ಟೆಸ್ಟ್ ಕ್ರಿಕೆಟ್ ಮಾಜಿ ಆಟಗಾರ ಉಮೇಶ ಕುಲಕರ್ಣಿ, ಭಾರತ ಪರ ಏಕದಿನ ಹಾಗೂ ಟೆಸ್ಟ್ ಆಡಿರುವ ಕರ್ಸನ್ ಘಾರ್ವಿ ಆಗಮಿಸಿ ಆಯ್ಕೆ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳುವರು.

20 ಕ್ರೀಡಾಳುಗಳನ್ನು ಆಯ್ಕೆ ಮಾಡಲಾಗುವುದು ಎಂದು ಎಐಸಿಎಪಿಸಿ ದಕ್ಷಿಣ ಭಾರತದ ಪ್ರತಿನಿಧಿ ಶಿವಾನಂದ ಗುಂಜಾಳ ತಿಳಿಸಿದ್ದಾರೆ. ಐದು ದಿನಗಳಲ್ಲಿ ಉತ್ತಮ ಪ್ರದರ್ಶನ ನೀಡುವವರನ್ನು ಆಯ್ಕೆ ಮಾಡಿ ವರದಿ ನೀಡಲಿದ್ದು, ಅಂತಿಮ ತಂಡವನ್ನು ಮುಂದಿನ ದಿನಗಳಲ್ಲಿ ಎಐಸಿಎಪಿಸಿ ಘೋಷಿಸಲಿದೆ ಎಂದು ಆಯ್ಕೆ ಪ್ರಕ್ರಿಯೆಯಲ್ಲಿ ಭಾಗವಹಿಸಿರುವ ಮುಂಬೈನ ಪ್ರಸಾದ ದೇಸಾಯಿ ಅವರು ತಿಳಿಸಿದ್ದಾರೆ.

8 ತಂಡಗಳಿಗೆ ಮಾಜಿ ಕ್ರಿಕೆಟಿಗರ ಹೆಸರು 

ಟೂರ್ನಿಯಲ್ಲಿ ಆಡುವ 8 ತಂಡಗಳಿಗೆ ಭಾರತದ ಮಾಜಿ ಕ್ರಿಕೆಟಿಗರ ಹೆಸರನ್ನು ಇಟ್ಟಿರುವುದು ವಿಶೇಷವಾಗಿದೆ. ಫಾರೂಕ್ ಎಂಜಿನಿಯರ್, ಸಲೀಮ್ ದುರಾನಿ, ವೆಂಕಟರಾಘವನ್, ಸುನೀಲ್ ಗವಾಸ್ಕರ್, ಬಿಶನ್ ಸಿಂಗ್ ಬೇಡಿ, ಚಂದ್ರಶೇಖರ್, ಏಕನಾಥ ಸೋಲ್ಕರ್, ದಿಲೀಪ್ ಸರ್‌ದೇಸಾಯಿ ಎಂಬ ಹೆಸರಿನ ತಂಡಗಳನ್ನು ರಚಿಸಲಾಗಿದೆ.

click me!